ರಾಜ್ಯ

ಚಿನ್ನದ ಒಡವೆ ವಿಚಾರಕ್ಕೆ ಜಗಳ: ಹೆತ್ತ ತಾಯಿ ಕೊಂದು ಆಕಸ್ಮಿಕ ಎಂದು ನಾಟಕ, ಪೋಸ್ಟ್‌ಮಾರ್ಟಮ್ ವರದಿಯಲ್ಲಿ ರಹಸ್ಯ ಬಯಲು..!

ಕೊಲೆಯ ನಂತರ ಆರೋಪಿಯು ಇದನ್ನು 'ಆಕಸ್ಮಿಕವಾಗಿ ಕೆಳಗೆ ಬಿದ್ದು ಸಂಭವಿಸಿದ ಸಾವು' ಎಂದು ಬಿಂಬಿಸಲು ಹರಸಾಹಸ ಪಟ್ಟಿದ್ದರೂ, ವೈದ್ಯಕೀಯ ವರದಿಯಿಂದಾಗಿ ಆತನ ಪಾಪದ ಕೃತ್ಯ ಬಯಲಾಗಿದೆ.

ಚಿನ್ನದ ಒಡವೆ ವಿಚಾರಕ್ಕೆ ಜಗಳ: ಹೆತ್ತ ತಾಯಿ ಕೊಂದು ಆಕಸ್ಮಿಕ ಎಂದು ನಾಟಕ, ಪೋಸ್ಟ್‌ಮಾರ್ಟಮ್ ವರದಿಯಲ್ಲಿ ರಹಸ್ಯ ಬಯಲು..!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಚಿನ್ನದ ಒಡವೆ ವಿಚಾರವಾಗಿ ತಾಯಿಯೊಂದಿಗೇ ಜಗಳ ತೆಗೆದು, ಆಕೆಯನ್ನು ಭೀಕರವಾಗಿ ಹೊಡೆದು ಪುತ್ರನೊಬ್ಬ ಹತ್ಯೆ ಮಾಡಿರುವ ಘಟನೆ ಕೊಂದಿರುವ ಘಟನೆ ಬೆಂಗಳೂರಿನ ಕಾಡುಗೋಡಿಯಲ್ಲಿ ನಡೆದಿದೆ.

ಮೃತರನ್ನು ಬೇವಿನ ಮರ ಕಾಲೋನಿಯ ನಿವಾಸಿ ಭಾಗ್ಯಮ್ಮ (60) ಎಂದು ಗುರುತಿಸಲಾಗಿದೆ. ಅವರ ಮೂರನೇ ಮಗ ಬಾಲಾಜಿ (35) ಕೊಲೆ ಆರೋಪದ ಮೇಲೆ ಬಂಧಿತನಾಗಿದ್ದಾನೆ.

ಕೊಲೆಯ ನಂತರ ಆರೋಪಿಯು ಇದನ್ನು 'ಆಕಸ್ಮಿಕವಾಗಿ ಕೆಳಗೆ ಬಿದ್ದು ಸಂಭವಿಸಿದ ಸಾವು' ಎಂದು ಬಿಂಬಿಸಲು ಹರಸಾಹಸ ಪಟ್ಟಿದ್ದರೂ, ವೈದ್ಯಕೀಯ ವರದಿಯಿಂದಾಗಿ ಆತನ ಪಾಪದ ಕೃತ್ಯ ಬಯಲಾಗಿದೆ.

ಬಂಧನದ ಬಳಿಕ ಆರೋಪಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ತಂದೆಯ ಮರಣದ ನಂತರ ತಾಯಿ ಮದ್ಯಪಾನ ಮಾಡಲು ಆರಂಭಿಸಿದ್ದರು. ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಅಲ್ಲದೆ, ಮನೆಯ ಸಮೀಪ ವ್ಯಕ್ತಿಯೊಬ್ಬರು ಆಗಾಗ ಕುಳಿತುಕೊಳ್ಳುತ್ತಿದ್ದ ವಿಚಾರವಾಗಿ ನೆರೆಹೊರೆಯವರು ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂಬ ಕೋಪವೂ ತನಗಿತ್ತು ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ.

ತಾಯಿಯ 32 ಗ್ರಾಂ ಚಿನ್ನಾಭರಣಗಳನ್ನು ಆರೋಪಿ ಅಡವಿಟ್ಟಿದ್ದು, ಅವುಗಳನ್ನು ವಾಪಸ್ ನೀಡುವಂತೆ ಭಾಗ್ಯಮ್ಮ ಒತ್ತಾಯಿಸುತ್ತಿದ್ದಾರೆ. ಈ ವಿಚಾರವಾಗಿ ಸೆಪ್ಟೆಂಬರ್ 24 ರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ ತಾಯಿಯ ಮೇಲೆ ಪದೇಪದೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಭಾಗ್ಯಮ್ಮ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮುಂದೇನು ಮಾಡಬೇಕೆಂದು ತೋಚದೆ, ಮರುದಿನ ಬೆಳಗ್ಗೆ ಸಂಬಂಧಿಕರಿಗೆ ಕರೆ ಮಾಡಿದ ಆರೋಪಿ ಬಾಲಾಜಿ, ತಾಯಿ ಹಾಸಿಗೆಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾನೆ. ಬಳಿಕ ಕುಟುಂಬಸ್ಥರು ಮತ್ತು ಸಂಬಂಧಿಕರು ಮನೆಗೆ ಆಗಮಿಸಿ ಅಂತ್ಯಕ್ರಿಯೆಗೆ ಸಿದ್ಧತೆ ಆರಂಭಿಸಿದ್ದರು.

ಈ ನಡುವೆ, ಭಾಗ್ಯಮ್ಮ ಮೃತಪಟ್ಟಿರುವ ಬಗ್ಗೆ ತುರ್ತು ಸಹಾಯವಾಣಿ 112ರ ಮೂಲಕ ಕಾಡುಗೋಡಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಅಂತ್ಯಕ್ರಿಯೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದಾಗ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಸಾವಿನ ಸನ್ನಿವೇಶಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಪೊಲೀಸರು ಒತ್ತಾಯಿಸಿದಾಗ ಕುಟುಂಬಸ್ಥರು ಹಾಗೂ ಸ್ಥಳೀಯರು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಳಿಕ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪರೀಕ್ಷೆಯ ವರದಿಯಲ್ಲಿ ಭಾಗ್ಯಮ್ಮ ಅವರ ದೇಹದ ಮೇಲೆ 12 ಗಂಭೀರ ಗಾಯಗಳಾಗಿರುವುದು ಪತ್ತೆಯಾಗಿದೆ.

ಇದರಿಂದ ಅನುಮಾನಗೊಂಡ ಪೊಲೀಸರು ಸ್ಥಳೀಯರು ಮತ್ತು ನೆರೆಹೊರೆಯವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸೆಪ್ಟೆಂಬರ್ 24ರಂದು ತಾಯಿ ಮತ್ತು ಮಗನ ನಡುವೆ ಜಗಳ ನಡೆದಿದ್ದ ಸಂಗತಿ ಬೆಳಕಿಗೆ ಬಂದಿದೆ. ಬಳಿಕ ಬಾಲಾಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತಾಯಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.