ರಾಜ್ಯ

ಕರ್ನಾಟಕದಲ್ಲಿ ಶೇ. 63 ರಷ್ಟು ಭ್ರಷ್ಟಾಚಾರ: ಉಪ ಲೋಕಾಯುಕ್ತ ವರದಿ; ಸರ್ಕಾರದ ವಿರುದ್ಧ ಆರ್ ಅಶೋಕ್ ಕಿಡಿ!

ಶೇ.40 ರಷ್ಟು ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ಆರ್ ಅಶೋಕ್ ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಶೇ. 63 ರಷ್ಟು ಭ್ರಷ್ಟಾಚಾರ: ಉಪ ಲೋಕಾಯುಕ್ತ ವರದಿ; ಸರ್ಕಾರದ ವಿರುದ್ಧ ಆರ್ ಅಶೋಕ್ ಕಿಡಿ!
ಆರ್. ಅಶೋಕ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವರದಿಯೊಂದನ್ನು ಹಂಚಿಕೊಂಡು ಅವರು ಪೋಸ್ಟ್ ಮಾಡಿದ್ದು, ಶೇ.40 ರಷ್ಟು ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ, ಕರ್ನಾಟಕದಲ್ಲಿ ಶೇ. 63% ಭ್ರಷ್ಟಾಚಾರ ಇದೆ ಸ್ವತಃ ಮಾನ್ಯ ಉಪ ಲೋಕಾಯುಕ್ತರೇ ತಮ್ಮ ಘನ ಸರಕಾರಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಈಗೇನು ಹೇಳುತ್ತೀರಿ? ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೀರಾ? ಅಥವಾ ಇದೇ ಭಂಡ ಬಾಳು ಮುಂದುವರೆಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಸುಳ್ಳು, ಅಪಪ್ರಚಾರ, ಕುತಂತ್ರದಿಂದ 136 ಸೀಟು ಪಡೆದ ಕಾಂಗ್ರೆಸ್ ಪಕ್ಷ, ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿದರೆ, 36 ಸೀಟೂ ಬರುವುದಿಲ್ಲ. ಇದು ನನ್ನ ಗ್ಯಾರೆಂಟಿ ಎಂದು ಭವಿಷ್ಯ ನುಡಿದಿದ್ದಾರೆ.

ಕೂಡಲೇ ಭತ್ತ ಖರೀದಿ ಕೇಂದ್ರ ತೆರೆಯಿರಿ:

ಈ ಬಾರಿ ಉತ್ತಮ ಮಳೆಯಿಂದಾಗಿ ಮಂಡ್ಯ, ಮೈಸೂರು ಭಾಗದಲ್ಲಿ ಭತ್ತದ ಬೆಳೆಯಲ್ಲಿ ಉತ್ತಮ ಫಸಲು ಬಂದಿದೆ. ಆದರೆ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸದೆ, ಸೂಕ್ತ ಬೆಲೆ ಕೊಡದೆ, ದಾಸ್ತಾನಿಗೆ ಜಾಗವಿಲ್ಲ, ತೇವಾಂಶ ಜಾಸ್ತಿ ಇದೆ ಎಂದು ಎಂದಿನಂತೆ ಅನ್ನದಾತರನ್ನು ಸತಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಕ್ವಿಂಟಲ್ ಭತ್ತಕ್ಕೆ ₹2,362 ಬೆಂಬಲ ಬೆಲೆ ಘೋಷಿಸಿದೆ. ಕೇರಳ, ಒಡಿಸ್ಸಾ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನೀಡುತ್ತಿರುವಂತೆ ರಾಜ್ಯ ಸರ್ಕಾರದ ವತಿಯಿಂದ ಕ್ವಿಂಟಲ್ ಭತ್ತಕ್ಕೆ ₹500 ಪ್ರೋತ್ಸಾಹ ಧನವಾಗಿ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಗಳ ಮೂಲಕ ಭತ್ತ ಖರೀದಿ ಮಾಡಿ ರೈತರ ನೆರವಿಗೆ ಬನ್ನಿ. ತೇವಾಂಶ ಕಡಿಮೆ ಮಾಡಿಕೊಂಡು ಬನ್ನಿ, ದಾಸ್ತಾನಿಗೆ ಸ್ಥಳವಿಲ್ಲ ಎನ್ನುವ ಕುಂಟು ನೆಪಗಳನ್ನು ಕೊಡುವುದು ಬಿಟ್ಟು, ಪಂಜಾಬ್ ಇನ್ನಿತರ ರಾಜ್ಯಗಳ ಮಾದರಿಯಲ್ಲಿ ಭತ್ತ ಖರೀದಿ ಕೇಂದ್ರಗಳಲ್ಲೇ ಒಣಗಿಸುವ ಯಂತ್ರ ಅಳವಡಿಸಿ ಖರೀದಿ ಪ್ರಕ್ರಿಯೆ ತ್ವರಿತಗೊಳಿಸಿ ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಈ ರೈತ ವಿರೋಧಿ ಧೋರಣೆ ಭತ್ತ ಖರೀದಿಯಲ್ಲೂ ಮುಂದುವರೆದರೆ ಈ ಬಾರಿ ರೈತರ ಕೆಂಗಣ್ಣಿಗೆ ಗುರಿಯಾಗಿ ಸರ್ಕಾರ ಬೀಳುವುದು ಗ್ಯಾರೆಂಟಿ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.