ಲಂಚಾತುರಾಣಾಂ ನ ಭಯಂ ನ ಲಜ್ಜಾ! ಕಾಂಗ್ರೆಸ್ ಸರ್ಕಾರದ ಪ್ರಜಾಸೇವಾ ಶುಲ್ಕದ ಹೆಸರು- ಗೌರವಯುತ ಲಂಚ: ಆರ್ ಅಶೋಕ್ ಟೀಕೆ
ತಕ್ಷಣ ರಾಜೀನಾಮೆ ಕೊಡಿ: ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಜವಾಬ್ದಾರಿ ಹೊರಲಿ.

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ನಿಮ್ಮ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಲಜ್ಜೆಗೆಟ್ಟ ಆಡಳಿತಕ್ಕೆ ಇನ್ನೆಷ್ಟು ಸಾಕ್ಷಿ ಬೇಕು? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ತಾಣದಲ್ಲಿ ಕಿಡಿಕಾರಿರುವ ಅವರು, ಲೋಕೋಪಯೋಗಿ ಇಲಾಖೆಯಲ್ಲಿ (PWD) ನಿಯಮಾವಳಿಗಳನ್ನು ಗಾಳಿಗೆ ತೂರಿ, ಕೆಟಿಪಿಪಿ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಬರೋಬ್ಬರಿ ₹1,000 ಕೋಟಿಗೂ ಹೆಚ್ಚು ರಸ್ತೆ ಟೆಂಡರ್ ಅಕ್ರಮ ನಡೆಸಿರುವುದು ಈಗ ಜಗಜ್ಜಾಹೀರಾಗಿದೆ.
ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ಆಕ್ಷೇಪ ಎತ್ತಿ, ಎಲ್1 (L1) ಬಿಡ್ಡರ್ ಅನರ್ಹಗೊಂಡರೆ ಹೊಸ ಟೆಂಡರ್ ಕರೆಯಬೇಕು, ಎಲ್2 (L2) ಬಿಡ್ಡರ್‌ಗೆ ಗುತ್ತಿಗೆ ನೀಡಬಾರದು ಎಂದು ಎಚ್ಚರಿಸಿದ್ದರೂ ಸಚಿವ ಸತೀಶ್ ಜಾರಕಿಹೊಳಿ ಅವರು ನಿಯಮಗಳನ್ನು ಮೀರಿ ಕಂಟ್ರಾಕ್ಟ್ ನೀಡಿದ್ದು ಯಾರ ಹಿತಾಸಕ್ತಿಗಾಗಿ? ಇದು ಸಾರ್ವಜನಿಕರ ತೆರಿಗೆ ಹಣದ ಹಗಲು ದರೋಡೆಯಲ್ಲವೇ?
ನಮ್ಮ ಸ್ಪಷ್ಟ ಆಗ್ರಹಗಳು:
ತಕ್ಷಣ ರಾಜೀನಾಮೆ ಕೊಡಿ: ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಜವಾಬ್ದಾರಿ ಹೊರಲಿ: ನಿಮ್ಮದೇ ಮೂಗಿನ ನೇರಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಲೂಟಿ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದೇಕೆ?
ಸಿದ್ದರಾಮಯ್ಯನವರೇ ನವರೇ, ಚುನಾವಣಾ ವ್ಯವಸ್ಥೆ ಹದಗೆಟ್ಟಿದೆ ಎಂದು ಉಪದೇಶ ಮಾಡುವ ತಾವು ಈಗ ಜನತೆಗೆ ಏನು ಉತ್ತರ ಕೊಡುತ್ತೀರಿ? ಸ್ವತಂತ್ರ ತನಿಖೆಯಾಗಲಿ: ₹1,054 ಕೋಟಿ ಅಕ್ರಮ ಟೆಂಡರ್ ಅನ್ನು ಕೂಡಲೇ ರದ್ದುಗೊಳಿಸಿ, ಇದರ ಹಿಂದೆ ಇರುವ ಕಿಕ್‌ಬ್ಯಾಕ್ ಜಾಲದ ವಿರುದ್ಧ ತನಿಖೆಯಾಗಬೇಕು.
ಕರ್ನಾಟಕದ ಜನತೆ ಈ 'ಲೂಟಿ ಸರ್ಕಾರ'ವನ್ನು ಕ್ಷಮಿಸುವುದಿಲ್ಲ. ಈ ಕಡು ಭ್ರಷ್ಟ ಕಾಂಗ್ರೆಸ್ ಸರ್ಕಾರದಿಂದ ಕರ್ನಾಟಕಕ್ಕೆ ಮುಕ್ತಿ ಸಿಗುವವರೆಗೂ ಬಿಜೆಪಿ ವಿರಮಿಸುವುದಿಲ್ಲ.
ಜನರ ಅಹವಾಲು ಆಲಿಸಲು ಪ್ರಜಾಸೇವೆ ಇಲಾಖೆ ಆರಂಭಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸರ್ಕಾರ, ಈಗ ನಾಚಿಕೆ ಮಾನ ಮರ್ಯಾದೆ ಬದಿಗಿಟ್ಟು ನೇರವಾಗಿ ಜನರ ಬಳಿ ಲಂಚ ಕೊಡಿ ಎಂದು ಅಂಗಲಾಚುತ್ತಿದೆ. ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಅಬಕಾರಿ ಸಚಿವ ಶಿವಲಿಂಗೇಗೌಡರು "ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ನಿಮ್ಮ ಧರ್ಮ" ಎನ್ನುವ ಮೂಲಕ ಲಂಚ ಪಡೆಯುವುದೇ ಕಾಂಗ್ರೆಸ್ ಸರ್ಕಾರದ ಧರ್ಮ ಎಂದು ಹೇಳಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಹಿಂದಿನ ಸಚಿವರ ಅವಧಿಯಲ್ಲೇ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದ್ದು, ಈಗ ಅದನ್ನೇ ಹಾಲಿ ಸಚಿವರು ಮುಂದುವರಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ, ಭ್ರಷ್ಟರನ್ನು ಬಡಿದು ಹಾಕುತ್ತೇನೆ, ಲಂಚ ಕೇಳಿದರೆ ನನಗೆ ಕರೆ ಮಾಡಿ ಎನ್ನುವ ನಾಟಕೀಯ ಮಾತುಗಳನ್ನಾಡುವ ನೀವು, ನಿಮ್ಮದೇ ಸಚಿವರು ಲಂಚಕ್ಕೆ ಬಹಿರಂಗ ಪ್ರೋತ್ಸಾಹ ನೀಡಿದರೂ ಸುಮ್ಮನಿದ್ದೀರಿ. ಜನರ ಕಷ್ಟಗಳನ್ನು ಕೇಳಬೇಕಾದ ಪ್ರಜಾಸೇವೆ ಸಭೆಯಲ್ಲೇ ಲಂಚವನ್ನು ಅಧಿಕೃತಗೊಳಿಸುವ ಪ್ರಯತ್ನ ನಡೆದಿದೆ. ಇನ್ನು 'ಗೌರವದ ಲಂಚ ಶುಲ್ಕ' ಎಂಬ ಹೊಸ ಪ್ರಜಾಸೇವಾ ಶುಲ್ಕಕ್ಕೆ ಆದೇಶವೂ ಹೊರಡಬಹುದು. ಕಾಂಗ್ರೆಸ್ ಹೈಕಮಾಂಡ್ ನ ಕೈಗೊಂಬೆಯಾಗಿರುವ ನೀವು ಹಾಗೂ ನಿಮ್ಮ ಸರ್ಕಾರ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದು, ಈ ನಾಚಿಕೆಗೆಟ್ಟ ಸರ್ಕಾರ ತೊಲಗದೇ ಜನರಿಗೆ ನೆಮ್ಮದಿ ಇಲ್ಲ ಎಂದು ಹರಿಹಾಯ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



