'ರಿಯಲ್ ಎಸ್ಟೇಟ್ ಮುಖ್ಯಮಂತ್ರಿ'ಗೆ ಬರಗಾಲದ ಬಗ್ಗೆ ಏನೂ ಗೊತ್ತಿಲ್ಲ; ಪ್ರತಿ ಎಕರೆಗೆ 50 ಸಾವಿರ ರೂ ಪರಿಹಾರ ನೀಡಿ: ಅಶೋಕ್ ಆಗ್ರಹ
ಕೋಟೆ ಕೊಳ್ಳೆ ಹೊಡೆದು ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ. ಬರಗಾಲ ಬಂದು ತಿಂಗಳುಗಳೇ ಕಳೆದಿವೆ. ರೈತರು ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ನಾವು ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದೇವೆ.

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರೈತರು ಹಾಗೂ ಗ್ರಾಮೀಣ ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಕೇವಲ ಘೋಷಣೆಗಳಲ್ಲೇ ಕಾಲ ಕಳೆಯುತ್ತಿದೆ. ಸೆ.21ರಿಂದ ಆರಂಭವಾಗಲಿರುವ ವಿಶೇಷ ಅಧಿವೇಶನಕ್ಕೂ ಮುನ್ನವೇ ಸರ್ಕಾರ ತನ್ನ ಬದ್ಧತೆಯನ್ನು ಕಾರ್ಯರೂಪದಲ್ಲಿ ತೋರಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದರು.
ಕೋಟೆ ಕೊಳ್ಳೆ ಹೊಡೆದು ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ. ಬರಗಾಲ ಬಂದು ತಿಂಗಳುಗಳೇ ಕಳೆದಿವೆ. ರೈತರು ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದಾರೆ. ನಾವು ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರಗಳಿಗೆ ತಲಾ 10 ಕೋಟಿ ಬಿಡುಗಡೆ ಮಾಡಿ, ತುರ್ತು ಬೋರ್‌ವೆಲ್ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ. ಆದರೆ ಸರ್ಕಾರ ಈವರೆಗೆ ಸಮರ್ಪಕ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಒಂದು ಕಡೆ ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಮತ್ತೊಂದು ಕಡೆ ಬರಪೀಡಿತ ರೈತರಿಗೆ ತಕ್ಷಣದ ಪರಿಹಾರ ನೀಡಲು ಹಣವಿಲ್ಲ. ಇದು ಅಭಿವೃದ್ಧಿಯ ಸರ್ಕಾರವಲ್ಲ, ಘೋಷಣೆಗಳ ಸರ್ಕಾರ. ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಲು ಮುಂದಾಗಿರುವುದನ್ನು ಉಲ್ಲೇಖಿಸಿದ ಅವರು, ಚರ್ಚೆ ಮಾಡುವುದು ಸ್ವಾಗತಾರ್ಹ.
ಆದರೆ ಚರ್ಚೆಗೂ ಮುನ್ನ ರೈತರಿಗೆ ಮತ್ತು ಜನರಿಗೆ ಸರ್ಕಾರದ ಬಳಿ ಹಣವಿದೆ, ಸರ್ಕಾರ ಕೆಲಸ ಮಾಡುತ್ತಿದೆ ಎಂಬ ವಿಶ್ವಾಸ ಮೂಡಬೇಕು. ಕನಿಷ್ಠ ಕುಡಿಯುವ ನೀರಿಗಾಗಿ ತಲಾ 10 ಕೋಟಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ಬರಗಾಲದ ಬಗ್ಗೆ ಸರ್ಕಾರದ ನಿಜವಾದ ಆರ್ಥಿಕ ಬದ್ಧತೆ ಏನು ಎಂಬುದು ಜನರಿಗೆ ತಿಳಿಯಬೇಕು. ರಾಜ್ಯದ ಹಣಕಾಸಿನ ಪರಿಸ್ಥಿತಿ, ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಇರುವ ಬಾಕಿ, ಸರ್ಕಾರದ ಸಾಲದ ಹೊರೆ ಹಾಗೂ ಗ್ಯಾರಂಟಿಗಳ ಹಣಕಾಸಿನ ಪರಿಣಾಮ ಸೇರಿದಂತೆ ಸಂಪೂರ್ಣ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಡೆಫಿಸಿಟ್ ಬಜೆಟ್ ಮಂಡಿಸಿದೆ. ಖಜಾನೆಯ ಸ್ಥಿತಿ ಏನು, ಎಷ್ಟು ಬಾಕಿ ಇದೆ, ಯಾವ ಇಲಾಖೆಗೆ ಎಷ್ಟು ಹಣ ನೀಡಬೇಕಿದೆ ಎಂಬುದನ್ನು ಸರ್ಕಾರವೇ ಜನರ ಮುಂದೆ ಇಡಬೇಕು. ಕೇಂದ್ರ ಸರ್ಕಾರದ ನೆರವು ಕೇಳುವುದರಲ್ಲಿ ತಪ್ಪಿಲ್ಲ. ಆದರೆ ರಾಜ್ಯ ಸರ್ಕಾರ ಮೊದಲು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪರಿಹಾರ ಬಿಡುಗಡೆ ಮಾಡಿ, ನಂತರ ಕೇಂದ್ರದಿಂದ ಹೆಚ್ಚುವರಿ ನೆರವು ಕೇಳಬೇಕು ಎಂದರು. ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾದರೆ, ‘ನಾವು ರಾಜ್ಯದಿಂದ ಇಷ್ಟು ಹಣ ಬಿಡುಗಡೆ ಮಾಡಿದ್ದೇವೆ, NDRF ನಿಯಮಗಳ ಪ್ರಕಾರ ಕೇಂದ್ರದಿಂದ ಇಷ್ಟು ನೆರವು ಬೇಕು’ ಎಂದು ಕೇಳುವ ಸ್ಥಿತಿಯಲ್ಲಿ ಸರ್ಕಾರ ಇರಬೇಕು ಎಂದು ಹೇಳಿದರು.
ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟವಾಗಿ ಮಂಡಿಸಲಿದೆ. ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಅತ್ಯಂತ ಮುಖ್ಯ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಮಲೆನಾಡಿನ ಜನರ ಜೀವನ, ಕೃಷಿ, ಮೂಲಸೌಕರ್ಯ ಮತ್ತು ಬದುಕಿಗೆ ಅತಿಯಾದ ನಿರ್ಬಂಧಗಳು ಬರುವಂತಾಗಬಾರದು. ಸ್ಥಳೀಯ ಜನರ ಬದುಕು ಮತ್ತು ಪರಿಸರ, ಇವೆರಡನ್ನೂ ಸಮತೋಲನದಲ್ಲಿ ನೋಡಬೇಕು ಎಂದರು. ಬರಗಾಲ ಮತ್ತು ಕಸ್ತೂರಿರಂಗನ್ ವರದಿಯಂತಹ ಮಹತ್ವದ ಎರಡು ವಿಚಾರಗಳನ್ನು ಕೇವಲ ಮೂರು ದಿನಗಳಲ್ಲಿ ಸಮಗ್ರವಾಗಿ ಚರ್ಚಿಸಲು ಸಾಧ್ಯವಿಲ್ಲ. ಆದ್ದರಿಂದ ಸೋಮವಾರ ನಡೆಯಲಿರುವ ಬಿಸಿನೆಸ್ ಅಡ್ವೈಸರಿ ಕಮಿಟಿ ಸಭೆಯಲ್ಲಿ ಕನಿಷ್ಠ ಒಂದು ವಾರ ಅಧಿವೇಶನ ನಡೆಸಬೇಕು ಎಂದು ಬಿಜೆಪಿ ಒತ್ತಾಯಿಸಲಿದೆ ಎಂದು ಹೇಳಿದರು.
ರೈತರನ್ನು ನಿರ್ಲಕ್ಷಿಸಿರುವ ಮತ್ತು ಬರ ಪರಿಹಾರ ಒದಗಿಸುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಅಶೋಕ್ ಟೀಕಿಸಿದರು. 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುಮಾರು 2,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಅಶೋಕ್, "ಈ ಸರ್ಕಾರವು ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ; ಇದು ರೈತ ವಿರೋಧಿ ಮತ್ತು ರೈತರ ವಿಷಯದಲ್ಲಿ ವಂಚನೆಯ ಧೋರಣೆ ಹೊಂದಿದೆ," ಎಂದು ಹೇಳಿದರು.
ಸರ್ಕಾರದ ಭೂಸ್ವಾಧೀನ ಮತ್ತು ಅಭಿವೃದ್ಧಿ ಯೋಜನೆ ಕುರಿತು ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, "ಒಂದೆಡೆ ಅವರು ರೈತರ ಭೂಮಿಯನ್ನು ಕಬಳಿಸಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ.
ಈ 'ರಿಯಲ್ ಎಸ್ಟೇಟ್ ಮುಖ್ಯಮಂತ್ರಿ'ಗೆ ಬರಗಾಲದ ಬಗ್ಗೆ ಏನೂ ತಿಳಿದಿಲ್ಲ. ಅವರಿಗೆ ಕೇವಲ ಲೇಔಟ್‌ಗಳನ್ನು ಅಭಿವೃದ್ಧಿಪಡಿಸುವುದು ಮಾತ್ರ ತಿಳಿದಿದೆ," ಎಂದು ಟೀಕಿಸಿದರು.
ಶಿವಕುಮಾರ್ ಅವರ ಧಾರ್ಮಿಕ ಸಂಪರ್ಕ ಪ್ರಯತ್ನಗಳು ಮತ್ತು ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಟೀಕಿಸಿದ ಅಶೋಕ್, "ಕೇವಲ ಮತಗಳಿಗಾಗಿ ಹಣೆಗೆ ತಿಲಕ ಅಥವಾ ವಿಭೂತಿ ಹಚ್ಚಿಕೊಳ್ಳುವುದು ಮತ್ತು ಪವಿತ್ರ ಜಲದಲ್ಲಿ ಸ್ನಾನ ಮಾಡುವುದರ ಬದಲು, ರೈತರ ನೆರವಿಗಾಗಿ 10,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರೆ, ನಮ್ಮ ರೈತರು ಕನಿಷ್ಠಪಕ್ಷ ನೆಮ್ಮದಿಯಿಂದಲಾದರೂ ಬದುಕುತ್ತಿದ್ದರು, ಎಂದು ಹೇಳಿದರು. ಅಲ್ಲದೆ, ಸರ್ಕಾರ ಕೈಗೊಂಡಿರುವ 'ಕ್ಲೌಡ್-ಸೀಡಿಂಗ್' (ಕೃತಕ ಮಳೆ) ಪ್ರಕ್ರಿಯೆಯ ಬಗ್ಗೆಯೂ ಅಶೋಕ್ ಪ್ರಶ್ನೆಗಳನ್ನು ಎತ್ತಿದರು; ಈ ಯೋಜನೆಯ ಗುತ್ತಿಗೆಯನ್ನು ಕಾಂಗ್ರೆಸ್ ಶಾಸಕರೊಬ್ಬರ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




