'ಕರ್ನಾಟಕವೀಗ ಉಗ್ರರು-ನಕ್ಸಲರ ಫೇವರೆಟ್ ಪ್ಲೇಸ್! ದಿಮಾಗಿ ನಕ್ಸಲರ ಸ್ವರ್ಗ; ಡಿಕೆಶಿ ಬ್ರದರ್ಸ್ ಎಂಬ ಕಾರಣಕ್ಕೆ ಮೃದು ನೀತಿಯೇ?'
ಬೆಂಗಳೂರಿನ ಎರಡು ಶೆಲ್ ಕಂಪನಿಗಳಿಗೆ ಅಮೆರಿಕದ ಕ್ರೈಸ್ತ ಸೇವಾ ಸಂಸ್ಥೆ ₹92 ಕೋಟಿ ವರ್ಗಾವಣೆ ಮಾಡಿರುವುದು ಇ.ಡಿ ತನಿಖೆಯಲ್ಲಿ ಗೊತ್ತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಎಡಪಂಥೀಯ ಉಗ್ರರು ಹಾಗೂ ದಿಮಾಗಿ ನಕ್ಸಲರ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ.

ಬೆಂಗಳೂರು: ಕರ್ನಾಟಕವೀಗ ಉಗ್ರರು-ನಕ್ಸಲರ ಫೇವರೆಟ್ ಪ್ಲೇಸ್! ದಿಮಾಗಿ ನಕ್ಸಲರ ಸ್ವರ್ಗ ಎಂದು ವಿರೋಧ ಪಕ್ಷದ ನಾಯಕ ಆರ್ .ಅಶೋಕ್ ಲೇವಡಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಎಡಪಂಥೀಯ ಉಗ್ರವಾದ ಹರಡಲು ಬೆಂಗಳೂರನ್ನೇ ಕೇಂದ್ರ ಸ್ಥಾನ ಮಾಡಿಕೊಂಡಿರುವ ವಿದೇಶಿ ಶಕ್ತಿಗಳು ಇಲ್ಲಿನ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ಸಹಾಯ ಮಾಡುತ್ತಿವೆ.
ಬೆಂಗಳೂರಿನ ಎರಡು ಶೆಲ್ ಕಂಪನಿಗಳಿಗೆ ಅಮೆರಿಕದ ಕ್ರೈಸ್ತ ಸೇವಾ ಸಂಸ್ಥೆ ₹92 ಕೋಟಿ ವರ್ಗಾವಣೆ ಮಾಡಿರುವುದು ಇ.ಡಿ ತನಿಖೆಯಲ್ಲಿ ಗೊತ್ತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಎಡಪಂಥೀಯ ಉಗ್ರರು ಹಾಗೂ ದಿಮಾಗಿ ನಕ್ಸಲರ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಆರ್ ಎಸ್ಎಸ್ ನೋಂದಣಿ ಬಗ್ಗೆ ಚಿಂತೆ ಮಾಡಿಕೊಂಡು ಮೆದುಳಿಗೆ ಕೈ ಹಾಕಿ ಕೆರೆದುಕೊಂಡು ಕುಳಿತಿರುವ ನಿಮಗೆ, ನಿಮ್ಮದೇ ಆಡಳಿತದಲ್ಲಿ ಎಡಪಂಥೀಯ ಉಗ್ರವಾದ ಬೆಳೆಯುತ್ತಿರುವುದು ಕಾಣುತ್ತಿಲ್ಲ. ಗೃಹ ಇಲಾಖೆ ಮಾಡಬೇಕಾದ ಕೆಲಸವನ್ನು ಇ.ಡಿ ಮೊದಲಾದ ಕೇಂದ್ರೀಯ ತನಿಖಾ ಸಂಸ್ಥೆಗಳು ಮಾಡುತ್ತಿವೆ.
ವಿದೇಶದಿಂದ ಕೋಟ್ಯಂತರ ರೂಪಾಯಿ ಹರಿದುಬಂದು ನಕ್ಸಲರು ಹಾಗೂ ಭಯೋತ್ಪಾದಕರಿಗೆ ಪೂರೈಕೆಯಾಗುತ್ತಿದ್ದರೂ, ಅದು ನಿಮಗೆ ಗೊತ್ತಾಗುವುದಿಲ್ಲ ಎಂದರೆ, ಇವರೆಲ್ಲರ ಹಿಂದೆ ದಿಮಾಗಿ ನಕ್ಸಲರು ನಿಂತುಕೊಂಡು ರಕ್ಷಣೆ ನೀಡುತ್ತಿದ್ದಾರೆಯೇ? ಅಥವಾ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬ್ರದರ್ ಗಳು ಎಂಬ ಕಾರಣಕ್ಕೆ ಮೃದು ನೀತಿ ಅನುಸರಿಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ತಂದ ‘ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ ಇಂತಹ ಹಣದ ಹರಿವನ್ನು ತಡೆದು ವಿದೇಶಿ ಶಕ್ತಿಗಳು ಭಾರತವನ್ನು ಉಗ್ರವಾದದ ಕೇಂದ್ರವಾಗಿಸುವುದನ್ನು ತಪ್ಪಿಸುತ್ತದೆ. ಆದರೆ ಇದಕ್ಕೂ ಕಾಂಗ್ರೆಸ್ ಅಡ್ಡಗಾಲು ಹಾಕಿ ವಿರೋಧ ಮಾಡುತ್ತಿದೆ ಎಂದ ಮೇಲೆ, ಇಂತಹ ರಾಷ್ಟ್ರಭಂಜಕರಿಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುವುದು ಖಾತರಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಂತೆಯೇ ಈಗ ಕರ್ನಾಟಕವನ್ನು ದಿಮಾಗಿ ನಕ್ಸಲರಿಗೆ ಸ್ವರ್ಗ ಮಾಡಿಕೊಡಲು ಅವಕಾಶ ನೀಡಿದೆಯೇ?
ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಬ್ರ್ಯಾಂಡ್ ಬೆಂಗಳೂರು ಈಗ ಉಗ್ರವಾದದಲ್ಲಿ ದೊಡ್ಡ ಬ್ರ್ಯಾಂಡ್ ಆಗುತ್ತಿದೆ. ಬ್ರ್ಯಾಂಡ್ ಯೋಜನೆಗಳಂತೂ ರಸ್ತೆ ಬದಿಯ ಕಸದ ರಾಶಿಯಲ್ಲಿ ಬಿದ್ದು ಹೊರಳಾಡುತ್ತಿದೆ. ಕನಿಷ್ಠ ಬೆಂಗಳೂರನ್ನು ಸುರಕ್ಷಿತ ನಗರವಾಗಿಸಲು ಪ್ರಯತ್ನ ಮಾಡಿ. ಇಲ್ಲವಾದರೆ ತಾವು ದಿಮಾಗಿ ನಕ್ಸಲರ ಋಣಕ್ಕೆ ಬಿದ್ದವರು ಎಂದು ಒಪ್ಪಿಕೊಂಡು ರಾಜೀನಾಮೆ ನೀಡಿ ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



