ಬರಿಗಾಲಲ್ಲಿ ನಡೆವ ಬಡ ಮಕ್ಕಳ ಹೆತ್ತವರ ಶಾಪ ನಿಮ್ಮ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೆ ಇರುತ್ತಾ? ಆರ್. ಅಶೋಕ್
ಲಕ್ಷಾಂತರ ರೂಪಾಯಿಯ ದುಬಾರಿ ಶೋಕಿ, ಕುಮಾರಕೃಪಾ ನವೀಕರಣ, ಹೆಲಿಕಾಪ್ಟರ್ ವೈಭೋಗಕ್ಕೆ ಬೊಕ್ಕಸದಲ್ಲಿ ಬೇಕಾದಷ್ಟು ಹಣವಿದೆ. ಆದರೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಒಂದು ಜೊತೆ ಶೂ, ಒಂದು ಸ್ಕೂಲ್ ಬ್ಯಾಗ್ ಕೊಡಲು, ಪಾಠ ಮಾಡುವ ಶಿಕ್ಷಕರಿಗೆ ಕನಿಷ್ಠ ಸಂಬಳ ನೀಡಲು ನಿಮ್ಮ ಹತ್ತಿರ ಹಣವಿಲ್ಲವೇ?

ಬೆಂಗಳೂರು: ಖಜಾನೆ ಖಾಲಿ ಮಾಡಿದ ಲೂಟಿಕೋರರ ದುರಾಸೆಗೆ ಬಡ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯವೇ ಬಲಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಲಕ್ಷ ಲಕ್ಷ ಬೆಲೆಯ Louis Vuitton ಶಾಲು ಹೊದ್ದು, ಕೋಟಿ ಕೋಟಿ ವೆಚ್ಚದ ಹೆಲಿಕಾಪ್ಟರ್‌ನಲ್ಲಿ ಹಾರಾಡುವ ರಿಯಲ್ ಎಸ್ಟೇಟ್ ಸಿಎಂ ಡಿಕೆ ಶಿವಕುಮಾರ್ ಅವರೇ, ಬಡವರ ಮಕ್ಕಳ ಬರಿಗಾಲು ನಿಮಗೆ ಹೇಗೆ ತಾನೆ ಕಂಡೀತು?ಹರಿದ ಬ್ಯಾಗ್ ಹೆಗಲ ಮೇಲೆ ಹೊತ್ತು, ಬರಿಗಾಲಲ್ಲಿ ಶಾಲೆಗೆ ನಡೆಯುತ್ತಿರುವ 23,000 ಬಡ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರ ಶಾಪ ನಿಮ್ಮ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರುತ್ತದೆಯೇ? ನಿಮ್ಮ ಭ್ರಷ್ಟ, ದರಿದ್ರ ಹಾಗೂ ನಿರ್ದಯಿ ಆಡಳಿತದ ಅಸಲಿ ಮುಖವಾಡ ಇಲ್ಲಿದೆ ನೋಡಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
23,000 ಬಡ ಶಾಲಾ ಮಕ್ಕಳಿಗೆ ಶೂ ಇಲ್ಲ, ಬ್ಯಾಗ್ ಇಲ್ಲ: ಶೈಕ್ಷಣಿಕ ವರ್ಷ ಪ್ರಾರಂಭವಾಗಿ 4 ತಿಂಗಳು ಕಳೆದರೂ ಜಿಬಿಎ (GBA) ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಸ್ವೆಟರ್ ಹಾಗೂ ಬ್ಯಾಗ್ ಕೊಡಲು ನಿಮ್ಮ ಹತ್ತಿರ ದುಡ್ಡಿಲ್ಲ! ಕಮಿಷನ್ ದಂದೆಯಲ್ಲಿ ಖಜಾನೆ ಖಾಲಿ ಮಾಡಿ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದ ಕಾರಣ ಸತತ 3 ಬಾರಿ ಟೆಂಡರ್‌ಗಳೇ ವಿಫಲವಾಗಿವೆ.
48,000 ಅತಿಥಿ ಶಿಕ್ಷಕರ ಹೊಟ್ಟೆಗೆ ಹೊಡೆದಿದ್ದೀರಿ: ಸರ್ಕಾರಿ ಶಾಲೆಗಳ ಬೆನ್ನೆಲುಬಾಗಿರುವ 48,000 ಅತಿಥಿ ಶಿಕ್ಷಕರಿಗೆ ಕಳೆದ 3-4 ತಿಂಗಳಿಂದ ಗೌರವ ಸಂಭಾವನೆಯನ್ನೇ ನೀಡಿಲ್ಲ. ಬಡ ಶಿಕ್ಷಕರು ಹಬ್ಬಗಳನ್ನು ಖಾಲಿ ಜೇಬಿನಲ್ಲಿ ಆಚರಿಸುವಂತೆ ಮಾಡಿ, ಕನಿಷ್ಠ ಸಂಸಾರ ತೂಗಿಸುವುದಕ್ಕೂ ಪರದಾಡುತ್ತಿರುವ ಶಿಕ್ಷಕರ ಕಣ್ಣೀರಿನ ಮೇಲೆ ಅಧಿಕಾರದ ಮೆರವಣಿಗೆ ಮಾಡುತ್ತಿದ್ದೀರಿ.
ನಿಮ್ಮ ಲಕ್ಷಾಂತರ ರೂಪಾಯಿಯ ದುಬಾರಿ ಶೋಕಿ, ಕುಮಾರಕೃಪಾ ನವೀಕರಣ, ಹೆಲಿಕಾಪ್ಟರ್ ವೈಭೋಗಕ್ಕೆ ಬೊಕ್ಕಸದಲ್ಲಿ ಬೇಕಾದಷ್ಟು ಹಣವಿದೆ. ಆದರೆ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಒಂದು ಜೊತೆ ಶೂ, ಒಂದು ಸ್ಕೂಲ್ ಬ್ಯಾಗ್ ಕೊಡಲು, ಪಾಠ ಮಾಡುವ ಶಿಕ್ಷಕರಿಗೆ ಕನಿಷ್ಠ ಸಂಬಳ ನೀಡಲು ನಿಮ್ಮ ಹತ್ತಿರ ಹಣವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಬಡವರ ಹೆಗಲೇರಿ ಅಧಿಕಾರಕ್ಕೆ ಬಂದು, ಈಗ ಅದೇ ಬಡ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನೇ ಕತ್ತಲೆಗೆ ತಳ್ಳುತ್ತಿರುವ ನಿಮ್ಮ ಸರ್ಕಾರಕ್ಕೆ ನಾಚಿಕೆಯಾಗಬೇಕು. ನಿಮ್ಮ ಈ ಲಜ್ಜೆಗೆಟ್ಟ ಆಡಳಿತದ ಅಂತ್ಯದ ದಿನಗಳು ಹತ್ತಿರವಾಗಿವೆ. ಮುಖ್ಯಮಂತ್ರಿಗಳೇ, ತಕ್ಷಣವೇ ಪ್ರತಿಯೊಬ್ಬ ಸರ್ಕಾರಿ ಶಾಲಾ ವಿದ್ಯಾರ್ಥಿಗೆ ಶೂ, ಬ್ಯಾಗ್ ತಲುಪಿಸಿ ಹಾಗೂ ಅತಿಥಿ ಶಿಕ್ಷಕರ ಬಾಕಿ ಗೌರವ ಸಂಭಾವನೆಯನ್ನು ಬಿಡುಗಡೆ ಮಾಡಿ. ಇಲ್ಲದಿದ್ದರೆ ನಿಮ್ಮ ಹೆಲಿಕಾಪ್ಟರ್ ಶೋಕಿಗೆ ಬಡ ವಿದ್ಯಾರ್ಥಿಗಳು ಮತ್ತು ಪೋಷಕರೇ ತಕ್ಕ ಪಾಠ ಕಲಿಸಲಿದ್ದಾರೆ!

ಸದನದಲ್ಲೇ ಕಾಂಗ್ರೆಸ್ ಶಾಸಕರ ನಡುವೆ ಜಟಾಪಟಿ; ಅನಿರೀಕ್ಷಿತ ಹೈಡ್ರಾಮಾ: 'ಸುಮ್ನಿರಮ್ಮಾ, ಹೊಡಿಬೇಡ' ಎಂದ ಆರ್ ಅಶೋಕ್!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


