ಕಲಬೆರಕೆ ಕಾಫಿ ಮಾರಾಟ ಮಾಡಿದ ವ್ಯಾಪಾರಿಗೆ 6 ತಿಂಗಳ ಜೈಲು ಶಿಕ್ಷೆ
ಕಾಫಿ ಪೌಡರ್‌ನಲ್ಲಿ ಕೆಫೇನ್ ಅಂಶ ಮತ್ತು ಜಲೀಯ ಸಾರ ಮಿಶ್ರಣ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಸಕಲೇಶಪುರದ ಎಂ.ಎಸ್.ಕಾಫೀ ವರ್ಕ್ಸ್‌ನ ಮಾಲೀಕ ಸಯ್ಯದ್ ಅಹ್ಮದ್ ಎಂಬುವವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಬೆಂಗಳೂರು: ಕಾಫಿ ಪೌಡರ್‌ನಲ್ಲಿ ಕೆಫೇನ್ ಅಂಶ ಮತ್ತು ಜಲೀಯ ಸಾರ ಮಿಶ್ರಣ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಸಕಲೇಶಪುರದ ಎಂ.ಎಸ್.ಕಾಫೀ ವರ್ಕ್ಸ್‌ನ ಮಾಲೀಕ ಸಯ್ಯದ್ ಅಹ್ಮದ್ ಎಂಬುವವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಸಕಲೇಶಪುರದ ಆಹಾರ ನಿರೀಕ್ಷಕರು 2008 ಜೂನ್ 20ರಂದು ಸಯ್ಯದ್ ಅಹ್ಮದ್ ಮಾಲೀಕತ್ವದ ಎಂ.ಎಸ್.ಕಾಫಿ ವರ್ಕ್ಸ್ ಗೆ ಭೇಟಿ ನೀಡಿ ಮಾರಾಟ ಮಾಡುತ್ತಿದ್ದ ಕಾಫಿ ಬೀಜಗಳು ಮತ್ತು ಅದರ ಪುಡಿಯನ್ನು ಪರಿಶೀಲನೆ ನಡೆಸಿದ್ದರು. ಅಲ್ಲದೆ, 600 ಗ್ರಾಂ ಕಾಫಿ ಪುಡಿಯನ್ನು ಖರೀದಿಸಿ ವೈಜ್ಞಾನಿಕ ಪರೀಕ್ಷೆಗೆ ರವಾನಿಸಿದ್ದರು.
ಈ ಪರೀಕ್ಷೆಯಲ್ಲಿ ಕಾಫಿ ಪುಡಿಯಲ್ಲಿ ಕಲಬೆರೆಕೆ ಮಾಡಿರುವುದು ಮತ್ತು ಮಿಸ್ ಬ್ರ್ಯಾಂಡ್ ಮಾಡಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ, ಶೇ 0.4 ಕೆಫೀನ್ ಮತ್ತು ಶೇ 55.0 ರಷ್ಟು ಜಲೀಯ ಸಾರ (ನೀರಿನ ಆವಿಯಾಗಿ ಉಳಿಯುವ ಘನ ಅಂಶ) ಅಂಶಗಳು ಇರುವುದು ಖಚಿತವಾಗಿತ್ತು.
ಜೊತೆಗೆ ಮಾರಾಟ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಬ್ಯಾಚ್ ಸಂಖ್ಯೆ ನಮೂದಿಸಿರಲಿಲ್ಲ ಮತ್ತು ಎಷ್ಟು ದಿನಗಳವರೆಗೆ ಬಳಕೆಗೆ ಉತ್ತಮವಾಗಿರಲಿದೆ ಎಂಬುದನ್ನು ಮುದ್ರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸಯ್ಯದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಸ್ಥಳವನ್ನು ಪರಿಶೀಲನೆ ಮಾಡಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ಜಿಲ್ಲಾ ಆರೋಗ್ಯಾಧಿಕರಿಗಳಿಗೆ ಮನವಿ ಸಲ್ಲಿಸಿದ್ದರು.
ಸಯ್ಯದ್ ಈ ಆರೋಪವನ್ನು ನಿರಾಕರಿಸಿದ್ದರೂ, ಯಾವುದೇ ರೀತಿಯ ಸಾಕ್ಷ್ಯಾಧಾರಗಳನ್ನು ಒದಗಿಸಿರಲಿಲ್ಲ. ಹೀಗಾಗಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯಾಧಿಕಾರಿಗಳು ಅನುಮತಿ ನೀಡಿದ್ದರು. ಆಹಾರ ನಿರೀಕ್ಷಕರು ಪ್ರಕರಣ ಸಂಬಂಧ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿಗೆ ಶಿಕ್ಷೆಯನ್ನು ವಿಧಿಸಿತ್ತು. ಇದನ್ನು ಅರ್ಜಿದಾರ ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ನ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿ ಶಿಕ್ಷೆ ವಿಧಿಸಿದ್ದ ಜೆಎಂಎಫ್‌ಸಿ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಯ್ಯದ್ ಹೈಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದರಂತೆ ವಾದ ಆಲಿಸಿದ ನ್ಯಾಯಪೀಠ, ಅಪರಾಧಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದಿದೆ. ಅಲ್ಲದೇ, ಆರೋಪಿಯು 45 ದಿನಗಳಲ್ಲಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಕ್ಕೆ ಹಾಜರಾಗಬೇಕು ಎಂದು ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


