ರಾಜ್ಯ ಈಗ ಓಮಿಕ್ರಾನ್ ಮುಕ್ತ; ಕೋವಿಡ್-19 ಹೊಸ ರೂಪಾಂತರಿಯಿಂದ 3ನೇ ಸೋಂಕಿತ ಕೂಡ ಗುಣಮುಖ
ಕರ್ನಾಟಕ ಇದೀಗ ಓಮಿಕ್ರಾನ್ ರೂಪಾಂತರ ಸೋಂಕಿನಿಂದ ಮುಕ್ತವಾಗಿದ್ದು, ಸೋಂಕಿಗೆ ತುತ್ತಾಗಿದ್ದ 3ನೇ ಸೋಂಕಿತ ಕೂಡ ಗುಣಮುಖರಾಗಿದ್ದಾರೆ.

ಬೆಂಗಳೂರು: ಕರ್ನಾಟಕ ಇದೀಗ ಓಮಿಕ್ರಾನ್ ರೂಪಾಂತರ ಸೋಂಕಿನಿಂದ ಮುಕ್ತವಾಗಿದ್ದು, ಸೋಂಕಿಗೆ ತುತ್ತಾಗಿದ್ದ 3ನೇ ಸೋಂಕಿತ ಕೂಡ ಗುಣಮುಖರಾಗಿದ್ದಾರೆ.
ಈ ಹಿಂದೆ ಓಮಿಕ್ರಾನ್ ಸೋಂಕಿಗೆ ತುತ್ತಾಗಿದ್ದ ಮೂರನೇ ಸೋಂಕಿತ ವ್ಯಕ್ತಿಯ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಆ ಮೂಲಕ ಕೋವಿಡ್ ಸೋಂಕಿನಿಂದ ಆತ ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ. ಸೋಮವಾರ ಮತ್ತು ಮಂಗಳವಾರ ನಡೆಸಲಾಗಿದ್ದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಮಂಗಳವಾರವೇ ಸೋಂಕಿತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ದಕ್ಷಿಣ ಆಫ್ರಿಕಾದಿಂದ ಡಿಸೆಂಬರ್ 1 ರಂದು ಹಿಂದಿರುಗಿದ್ದ 34 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಮರುದಿನ ಅವರ ಪರೀಕ್ಷಾ ವರದಿ ಪಾಸಿಟಿವ್ ಬಂದಿತ್ತು. ಬಳಿಕ ಅವರನ್ನು ಕ್ವಾರಂಟೈನ್ ಮಾಡಿ ಅವರ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಭಾನುವಾರ ಅದರ ವರದಿ ಬಂದಿದ್ದು, ಓಮಿಕ್ರಾನ್ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರನ್ನು ಚಿಕಿತ್ಸೆಗೊಳಪಡಿಸಲಾಗಿತ್ತು. ಡಿಸೆಂಬರ್ 3 ರಿಂದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಅವರನ್ನು ಪ್ರತ್ಯೇಕಿಸಲಾಗಿತ್ತು.
ಇದೀಗ ಅವರ ಕೋವಿಡ್ ಪರೀಕ್ಷಾ ವರದಿಗಳು ನೆಗೆಟಿವ್ ಬಂದಿದ್ದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ಓಮಿಕ್ರಾನ್ ಮುಕ್ತ
ಇನ್ನು ಓಮಿಕ್ರಾನ್ ಸೋಂಕಿಗೆ ತುತ್ತಾಗಿದ್ದ 3ನೇ ಸೋಂಕಿತ ಗುಣಮುಖರಾಗುವುದರೊಂದಿಗೆ ಕರ್ನಾಟಕ ಓಮಿಕ್ರಾನ್ ಮುಕ್ತವಾದಂತಾಗಿದೆ. ಒಟ್ಟು ಮೂರು ಪ್ರಕರಣಗಳ ಪೈಕಿ ಮೊದಲ ಸೋಂಕಿತ ವ್ಯಕ್ತಿ ನಕಲಿ ವರದಿಯೊಂದಿಗೆ ದೇಶ ತೊರೆದಿದ್ದರೆ, 2ನೇ ಸೋಂಕಿತ ವೈದ್ಯರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಆದರೆ ನಂತರದ ವೈರಲ್ ಬ್ಯಾಕ್ಟೀರಿಯಾದ ಸೋಂಕಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರನೇ ವ್ಯಕ್ತಿ ಇಂದು ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಹೊಸ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


