ರಾಜ್ಯ

ಹೈಬ್ರಿಡ್ ಕೌಶಲ’ದ ಬೇಡಿಕೆ ಈಡೇರಿಸಲು ಉನ್ನತ ಶಿಕ್ಷಣದಲ್ಲಿ ಬಹು ಹಂತದ ಶಿಸ್ತು ಅನಿವಾರ್ಯ: ಡಾ.ಕೆ.ಕಸ್ತೂರಿರಂಗನ್

ಮುಂಬರುವ ದಿನಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳು “ಹೈಬ್ರಿಡ್ ಕೌಶಲ”ಗಳನ್ನು ಬೇಡುತ್ತವೆ. ಇದಕ್ಕೆ ಅನುಗುಣವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಬಹು ಹಂತದ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ವಿಜ್ಞಾನಿ ಹಾಗೂ ‘ಇನ್ಸಾ’ ಯೋಜನಾ ಆಯೋಗ ಸದಸ್ಯ ಡಾ ಕೆ. ಕಸ್ತೂರಿರಂಗನ್ ಸಲಹೆ ನೀಡಿದ್ದಾರೆ.

ಹೈಬ್ರಿಡ್ ಕೌಶಲ’ದ ಬೇಡಿಕೆ ಈಡೇರಿಸಲು ಉನ್ನತ ಶಿಕ್ಷಣದಲ್ಲಿ ಬಹು ಹಂತದ ಶಿಸ್ತು ಅನಿವಾರ್ಯ: ಡಾ.ಕೆ.ಕಸ್ತೂರಿರಂಗನ್
ಕಸ್ತೂರಿರಂಗನ್
Published On :

ಬೆಂಗಳೂರು: ಮುಂಬರುವ ದಿನಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳು “ಹೈಬ್ರಿಡ್ ಕೌಶಲ”ಗಳನ್ನು ಬೇಡುತ್ತವೆ. ಇದಕ್ಕೆ ಅನುಗುಣವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಉನ್ನತ ಶಿಕ್ಷಣ ಸಂಸ್ಥೆಗಳು ಬಹು ಹಂತದ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ವಿಜ್ಞಾನಿ ಹಾಗೂ ‘ಇನ್ಸಾ’ ಯೋಜನಾ ಆಯೋಗ ಸದಸ್ಯ ಡಾ ಕೆ. ಕಸ್ತೂರಿರಂಗನ್ ಸಲಹೆ ನೀಡಿದ್ದಾರೆ.

ಬೆಂಗಳೂರು ತಂತ್ರಜ್ಞಾನ ಮೇಳ-2020”ದಲ್ಲಿ “ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿ” ಕುರಿತು ಮಾತನಾಡಿದ ಅವರು, ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಾನವೀಯ ವಿಷಯಗಳನ್ನು ಸರಿಸಮನಾಗಿ ಓದಬೇಕು; ಅದೇ ರೀತಿ ಸಾಹಿತ್ಯ ಮತ್ತು ಮಾನವೀಯ ವಿಷಯಗಳನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನವನ್ನು ಸರಿಸಮನಾಗಿ ಅರಿಯಬೇಕಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಅವರು ಆಪಲ್ ಕಂಪನಿಯ ಯಶಸ್ಸಿಗೆ ಕಾರಣ ಏನೆಂಬುದರ ಬಗ್ಗೆ ದಿವಂಗತ ಸ್ಟೀವ್ ಜಾಬ್ಸ್ ಉಲ್ಲೇಖವೊಂದನ್ನು ನೆನಪಿಸಿ. “ಸೌಂದರ್ಯ ಪರಿಕಲ್ಪನೆಯನ್ನು ಮೇಳೈಸದಿದ್ದರೆ ನಮ್ಮ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇಷ್ಟು ವಿಸ್ತಾರವಾಗಿ ಬೆಳೆಯುತ್ತಿರಲಿಲ್ಲ” ಎಂದು ಅವರು ಹೇಳಿದ್ದರು; ಇಂದು ಯಾವುದೇ ಕ್ಷೇತ್ರದಲ್ಲಿ ಬಹು ಹಂತದ ಶಿಸ್ತಿನ ಅಗತ್ಯಗಳು ಎಷ್ಟಿವೆ ಎಂಬುದಕ್ಕೆ ಈ ಮಾತು ಕನ್ನಡಿಯಾಗಿದೆ ಎಂದರು.

21ನೇ ಶತಮಾನದ ಅಗತ್ಯಗಳನ್ನು ದೃಷ್ಟಿಯಲ್ಲಿಸಿರಿಕೊಂಡು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕೋರ್ಸ್ ಗಳು, ವಿಷಯಗಳು, ಇತ್ಯಾದಿಗಳಲ್ಲಿ ಆಯ್ಕೆಯ ಅವಕಾಶ ಹೆಚ್ಚಿಸಲಾಗಿದೆ. ಔದ್ಯೋಗಿಕ ಶಿಕ್ಷಣವನ್ನು ಕೂಡ ಅಳವಡಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಹೆಚ್ಚಿಸುವ ಉದ್ದೇಶ ಇದೆ. ಇದಕ್ಕಾಗಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಲಾಗುತ್ತದೆ ಎಂದು ಅವರು ಹೇಳಿದರು.

ಅದೇ ರೀತಿ, ಸಂಶೋಧನೆಗಳಿಂದ ದೃಢಪಟ್ಟ ಅಂಶಗಳನ್ನು ಆಧರಿಸಿ ಮಕ್ಕಳಿಗೆ 3ನೇ ವಯಸ್ಸಿನಿಂದಲೇ ಬುನಾದಿ ಶಿಕ್ಷಣಕ್ಕೆ - ಫೌಂಡೇಷನಲ್ ಎಜುಕೇಷನ್ ಒತ್ತು ಕೊಡಲಾಗಿದೆ. ಆ ಹಂತದಲ್ಲೇ ಮಕ್ಕಳಿಗೆ ಅಕ್ಷರ ಪರಿಚಯ ಹಾಗೂ ಸಂಖ್ಯಾ ಪರಿಚಯ ಆಗಬೇಕು ಎಂಬುದಕ್ಕೆ ಆದ್ಯತೆ ಕೊಡಲಾಗಿದೆ. ಶಿಕ್ಷಣವನ್ನು ವಿದ್ಯಾರ್ಥಿ ಕೇಂದ್ರಿತವಾಗಿಸುವ ಜೊತೆಗೆ ಬೋಧಕ ಕೇಂದ್ರೀತವಾಗಿಸುವುದಕ್ಕೂ ಗಮನ ನೀಡಲಾಗಿದೆ ಎಂದರು.

ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯ ಕೊಡಲಾಗಿದೆ. ಶಿಕ್ಷಣವನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯ ಭಾಷೆಯಲ್ಲೇ ಕಲ್ಪಿಸಬೇಕು ಎಂಬ ಆಶಯ ಈ ನೀತಿಯಲ್ಲಿ ಅಡಕವಾಗಿದೆ. ವಿದ್ಯಾರ್ಥಿಗಳು ಗಳಿಸುವ ಜ್ಞಾನವು ಭಾರತದ ಪರಂಪರೆ ಹಾಗೂ ಮೌಲ್ಯಗಳೊಂದಿಗೆ ಬೆಸೆದುಕೊಂಡಿರಬೇಕು ಎಂಬ ಧ್ಯೇಯವನ್ನೂ ಹೊಂದಿದೆ ಎಂದು ಅವರು ಹೇಳಿದರು.

ಭಾರತೀಯ ಪರಂಪರೆಯು ಸಾವಿರಾರು ವರ್ಷಗಳ ಹಿಂದೆಯೇ 64 ವಿದ್ಯೆಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಿದೆ. ಇದು ಬಹುಶಿಸ್ತೀಯತೆ ಅಲ್ಲದೆ ಬೇರೇನೂ ಅಲ್ಲ. ಅದನ್ನು ನಾವು ಈಗ ಪುನರ್ ಸ್ಥಾಪಿಸುವ ಅಗತ್ಯವಿದೆ. ಹೊಸ ಶಿಕ್ಷಣ ನೀತಿಯು “ಸಮತೆಯಿಂದ ಕೂಡಿದ ಸಮಾಜ” ನಿರ್ಮಿಸಲು ಪೂರಕವಾಗಲಿದೆ. ವಿವಿಧ ಜ್ಞಾನಶಾಖೆಗಳ ನಡುವೆ ಅಂತರ ಸಂಪರ್ಕ ಹಾಗೂ ಸಮಷ್ಟಿ ಅಭಿವೃದ್ಧಿ ಬಗ್ಗೆ ಗಮನ ಕೇಂದ್ರೀಕರಿಸಿದೆ ಎಂದು ಕಸ್ತೂರಿ ರಂಗನ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.