ಶೀಘ್ರವೇ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಮೆಟ್ರೋ ಸಂಚಾರ; ಎಲಿವೇಟೆಡ್ ಪಿಂಕ್ ಲೈನ್‌ನಲ್ಲಿ ಸುರಕ್ಷತಾ ತಪಾಸಣೆ ಪೂರ್ಣ!
ಈ ಎಲಿವೇಟೆಡ್ ಗುಲಾಬಿ ಮಾರ್ಗವು ಸಾರ್ವಜನಿಕ ಸೇವೆಗೆ ಮುಕ್ತಗೊಂಡ ನಂತರ, ನಮ್ಮ ಮೆಟ್ರೋದ ಸದ್ಯದ ಕಾರ್ಯಾಚರಣೆಯಲ್ಲಿರುವ 96.10 ಕಿಮೀ ಮಾರ್ಗದ ಉದ್ದವು 103.6 ಕಿಮೀಗೆ ವಿಸ್ತರಣೆಯಾಗಲಿದೆ.

ಬೆಂಗಳೂರು: ನಮ್ಮ ಮೆಟ್ರೋದ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಮೀ ಉದ್ದದ ಎಲಿವೇಟೆಡ್ ಗುಲಾಬಿ ಮಾರ್ಗದಲ್ಲಿ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್) ವಿ ವೆಂಕಟಸುಬ್ರಮಣಿಯನ್ ಮೂರು ದಿನಗಳ ಸುರಕ್ಷತಾ ತಪಾಸಣೆಯನ್ನು ಪೂರ್ಣಗೊಳಿಸಿದ್ದಾರೆ.
ಈ ಮಾರ್ಗದಲ್ಲಿ ಪ್ರಯಾಣಿಕರಿಗೆ ಸೇವೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಈ ಸುರಕ್ಷತಾ ತಪಾಸಣೆಯು ಅಕ್ಟೋಬರ್ 6ರಿಂದ 8ರವರೆಗೆ ನಡೆಯಿತು. ಈ ಮಾರ್ಗವು ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆಪಿ ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿದಂತೆ ಒಟ್ಟು ಆರು ನಿಲ್ದಾಣಗಳನ್ನು ಒಳಗೊಂಡಿದೆ.
ಅಕ್ಟೋಬರ್ 6ರಂದು ಸಿಎಂಆರ್‌ಎಸ್ ಮತ್ತು ಅವರ ತಂಡವು ಮುಖ್ಯ ಮಾರ್ಗ ಹಾಗೂ ಸಂಬಂಧಿತ ಮೂಲಸೌಕರ್ಯಗಳನ್ನು ಮೋಟಾರ್ ಟ್ರಾಲಿ ಮೂಲಕ ಪರಿಶೀಲಿಸಿತು. ಅಕ್ಟೋಬರ್ 7ರಂದು ಮೋಟಾರ್ ಟ್ರಾಲಿ ತಪಾಸಣೆ ಜೊತೆಗೆ ಕೋತನೂರು ಡಿಪೋದ ಸೌಲಭ್ಯಗಳನ್ನು ಪರಿಶೀಲಿಸಿ, ಮುಖ್ಯ ಮಾರ್ಗದಲ್ಲಿ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರ ಮತ್ತು ವಿವಿಧ ಪರೀಕ್ಷೆಗಳನ್ನು ನಡೆಸಿತು. ಅಕ್ಟೋಬರ್ 8ರಂದು ಬೈಯಪ್ಪನಹಳ್ಳಿಯಲ್ಲಿರುವ ಕಾರ್ಯಾಚರಣೆ ನಿಯಂತ್ರಣ ಕೇಂದ್ರವನ್ನು ಪರಿಶೀಲಿಸುವ ಮೂಲಕ ಮೂರು ದಿನಗಳ ತಪಾಸಣೆಯನ್ನು ಪೂರ್ಣಗೊಳಿಸಲಾಯಿತು.
ಬಿಎಂಆರ್‌ಸಿಎಲ್ 2026ರ ಆಗಸ್ಟ್‌ನಲ್ಲಿ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆಯಿಂದ ವೇಗ ಪ್ರಮಾಣಪತ್ರವನ್ನು ಪಡೆದಿದೆ. ನಂತರ ರೈಲ್ವೆ ಮಂಡಳಿಯಿಂದ ಮೆಟ್ರೋ ರೈಲು ಬೋಗಿಗಳಿಗೆ ತಾತ್ಕಾಲಿಕ ಅನುಮೋದನೆ ಹಾಗೂ ಸಿಗ್ನಲಿಂಗ್ ವ್ಯವಸ್ಥೆಗೆ ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕರಿಂದ (15ಸಿ) ಸುರಕ್ಷತಾ ಪ್ರಮಾಣೀಕರಣವನ್ನು ಪಡೆಯಲಾಗಿದೆ.
ಸಾರ್ವಜನಿಕರ ಸಂಚಾರಕ್ಕೆ ಈ ಮಾರ್ಗವನ್ನು ಮುಕ್ತಗೊಳಿಸುವ ಮೊದಲು ಸಿಎಂಆರ್‌ಎಸ್ ನಡೆಸುವ ತಪಾಸಣೆಯು ಮುಖ್ಯವಾಗಿದೆ. ತಪಾಸಣೆಯ ಸಂದರ್ಭದಲ್ಲಿ ಸಿಎಂಆರ್‌ಎಸ್ ಸೂಚಿಸಿರುವ ಅಂಶಗಳು ಹಾಗೂ ಷರತ್ತುಗಳನ್ನು ಪಾಲಿಸಿದ ನಂತರವೇ ಪ್ರಯಾಣಿಕರ ಸಂಚಾರಕ್ಕೆ ಅನುಮೋದನೆ ನೀಡಲಾಗುತ್ತದೆ.
ಈ ಎಲಿವೇಟೆಡ್ ಗುಲಾಬಿ ಮಾರ್ಗವು ಸಾರ್ವಜನಿಕ ಸೇವೆಗೆ ಮುಕ್ತಗೊಂಡ ನಂತರ, ನಮ್ಮ ಮೆಟ್ರೋದ ಸದ್ಯದ ಕಾರ್ಯಾಚರಣೆಯಲ್ಲಿರುವ 96.10 ಕಿಮೀ ಮಾರ್ಗದ ಉದ್ದವು 103.6 ಕಿಮೀಗೆ ವಿಸ್ತರಣೆಯಾಗಲಿದೆ. ಇದರಿಂದ ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಧಾರಿಸಲಿದ್ದು, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಬಲ ದೊರೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



