ರಾಜ್ಯ

ಸರ್ಕಾರದ ಪರಿಹಾರದ ನಿರೀಕ್ಷೆ: ವರ್ಷಗಳಿಂದ ಶೌಚಾಲಯದಲ್ಲೇ ಬದುಕು ಸವೆಸುತ್ತಿರುವ ಹಿರಿಯ ದಂಪತಿ!

ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಿಡುಗಡೆಗಾಗಿ ಕಾದು ಕುಳಿತಿರುವ ಕುಟುಂಬವೊಂದು ಇದೀಗ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡುತ್ತದೆ ಎಂದು ನಂಬಿ, ಇದ್ದ ಮನೆಯನ್ನೂ ಹಾಳು ಮಾಡಿಕೊಂಡ ಕುಟುಂಬವೊಂದು...

ಸರ್ಕಾರದ ಪರಿಹಾರದ ನಿರೀಕ್ಷೆ: ವರ್ಷಗಳಿಂದ ಶೌಚಾಲಯದಲ್ಲೇ ಬದುಕು ಸವೆಸುತ್ತಿರುವ ಹಿರಿಯ ದಂಪತಿ!
ಸರ್ಕಾರದ ಪರಿಹಾರದ ನಿರೀಕ್ಷೆ; ವರ್ಷಗಳಿಂದ ಶೌಚಾಲಯದಲ್ಲೇ ಬದುಕು ಸವೆಸುತ್ತಿರುವ ಹಿರಿಯ ದಂಪತಿ!
Published On :
ತುಮಕೂರು: ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಿಡುಗಡೆಗಾಗಿ ಕಾದು ಕುಳಿತಿರುವ ಕುಟುಂಬವೊಂದು ಇದೀಗ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡುತ್ತದೆ ಎಂದು ನಂಬಿ, ಇದ್ದ ಮನೆಯನ್ನೂ ಹಾಳು ಮಾಡಿಕೊಂಡ ಕುಟುಂಬವೊಂದು ಇದೀಗ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಿರ್ಮಾಣಗೊಂಡಿರುವ ಶೌಚಾಲಯದಲ್ಲಿ ಜೀವನ ನಡೆಸುತ್ತಿದ್ದಾರೆ. 
ಕಡುಬಡತನದಲ್ಲಿರುವ ಲಕ್ಷ್ಮೀನರಸಮ್ಮ ಮತ್ತು ಓಬಲಪ್ಪ ದಂಪತಿಗಳು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಪಾವಗಡ ತಾಲೂಕಿನ ಕಡಪಲಕೆರೆ ಗ್ರಾಮದ ಗ್ರಾಮ ಪಂಚಾಯಿತಿಯಡಿಯಲ್ಲಿ ಈ ದಂಪತಿಗೆ ಮನೆಯನ್ನು ಮಂಜೂರು ಮಾಡಲಾಗಿತ್ತು. ಆದರೆ, ಸರ್ಕಾರದ ವತಿಯಿಂದ ಈ ವರೆಗೂ ಮನೆ ನಿರ್ಮಾಣಕ್ಕೆ ಕೇವಲ ರೂ.1 ಬಿಡುಗಡೆಯಾಗಿದೆ. 
ದಂಪತಿ ಕಡುಗೊಲ್ಲ ಸಮುದಾಯಕ್ಕೆ ಸೇರಿದರವಾಗಿದ್ದು, ಬಡತನ ರೇಖೆಗಿಂತಲೂ ಕಡಿಮೆ ವರ್ಗಕ್ಕೆ ಬರುತ್ತಾರೆ. ಸರ್ಕಾರದ ಅಂಬೇಡ್ಕರ್ ಆವಾಜ್ ಯೋಜನೆಯಿಂದ ಪ್ರೇರಿತರಾಗಿದ್ದ ಈ ದಂಪತಿ, ಸರ್ಕಾರದಿಂದ ಹಣ ಬಿಡುಗಡೆಯಾಗುತ್ತದೆ ಎಂಬು ನಂಬಿ ಇದ್ದ ಮನೆಯನ್ನು ಕೆಡವಿ, ನೂತನವಾಗಿ ಮನೆ ಕಟ್ಟಲು ಪಾಯ ಹಾಕಿಸಿದ್ದಾರೆ. 
ಇವರ ಮೊದಲ ಪುತ್ರ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಮೊಸರು ಮಾರುವ ವ್ಯಾಪಾರ ಮಾಡುತ್ತಿದ್ದಾರೆ. ಮನೆ ಕಟ್ಟುವ ಸಲುವಾಗಿ ಸ್ವಲ್ಪ ಮಟ್ಟಿಗಿನ ಹಣವನ್ನು ಪೋಷಕರಿಗೆ ನೀಡಿದ್ದಾನೆ. ಸರ್ಕಾರ ಹಣ ಬಿಡುಗಡೆ ಮಾಡುತ್ತದೆ ಎಂಬುದನ್ನು ನಂಬಿದ್ದ ಕುಟುಂಬ ಸಂಕಷ್ಟಗಳ ನಡುವೆಯೂ ಸಾಲಗಳನ್ನು ಮಾಡಿ ರೂ.45 ಸಾವಿರದವರೆಗೂ ಕೂಡಿ ಹಾಕಿ ಮನೆಗೆ ಅಡಿಪಾಯ ಹಾಕಿಸಿದ್ದಾರೆ. ಆದರೆ, ಸರ್ಕಾರದಿಂದ ಮಾತ್ರ ರೂ.1 ಬಿಡುಗಡೆಯಾಗಿದೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಿಶೋರ್ ನಾಯಕ್ ಅವರು, ಹಣ ಬಿಡುಗಡೆಗೆ ಸರ್ಕಾರದ ಬಳಿ ಮನವಿ ಮಾಡಲಾಗಿದೆ. ತಾಂತ್ರಿಕ ದೋಷಗಳಿಂದಾಗಿ ಹಣ ಬಿಡುಗಡೆಯಾಗಿಲ್ಲ. ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುತ್ತದೆ ಎಂದು ಹೇಳಿದ್ದಾರೆ. 
ಸರ್ಕಾರದ ಗೃಹ ನಿರ್ಮಾಣ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ರೂ.1.60 ಲಕ್ಷ ನೀಡಲಾಗುತ್ತದೆ. ಮೊದಲ ಹಂತದಲ್ಲಿ ರೂ.45 ಸಾವಿರ ನಂತರ ಕಂತು ಕಂತುಗಳ ಮೂಲಕ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. 
ಹಣ ಬಿಡುಗಡೆ ಮಾಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವ ಹಿನ್ನಲೆಯಲ್ಲಿ ದಂಪತಿಗಳು ಬೇರಾವುದೇ ದಾರಿಯಿಲ್ಲದೆ. ಮನೆಯ ಹತ್ತಿರ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಿರ್ಮಾಣಗೊಂಡಿರುವ ಶೌಚಾಲಯದಲ್ಲಿ ಜೀವನ ನಡೆಸುತ್ತಿದೆ. ಶೌಚಾಲಯದ ಕಮೋಡ್ ಮೇಲೆ ಹಲಗೆಯನ್ನು ಹಾಕಿರುವ ದಂಪತಿಗಳು ಅಲ್ಲಿಯೇ ಮಲಗುತ್ತಿದ್ದಾರೆ. ಇದೀಗ ನೆರೆಮನೆಯವರು ಶೌಚಾಲಯ ಖಾಲಿ ಮಾಡುವಂತೆ ಆಗ್ರಹಿಸುತ್ತಿದ್ದಾರೆಂದು ದಂಪತಿಗಳು ಹೇಳಿದ್ದಾರೆ. 
ಸಾಲ ತೀರಿಸುವಂತೆ ಸಾಲಗಾರರು ಒತ್ತಡ ಹೇರುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನನ್ನ ಎರಡನೇ ಪುತ್ರ ಸಾವನ್ನಪ್ಪಿದ್ದ. ಇದೀಗ ಅವನ ಪತ್ನಿ ತನ್ನ ಪೋಷಕರ ಮನೆಗೆ ತೆರಳಿದ್ದಾಳೆ. ಬೆಂಗಳೂರಿಗೆ ಹೋಗಿ ನೆಲೆಸೋಣ ಎಂದರೂ ಸಾಲಗಾರರು ಬಿಡುತ್ತಿಲ್ಲ ಎಂದು ಲಕ್ಷ್ಮೀನರಸಮ್ಮ ಅವರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.