Karnataka Tiger Count: ರಾಜ್ಯದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ: 700ರ ಗಡಿ ತಲುಪಿದ ಸಂಖ್ಯೆ..!
ಮೌಲ್ಯಮಾಪನದ ಪ್ರಕಾರ ರಾಜ್ಯದಲ್ಲಿ ಸುಮಾರು 700 ಹುಲಿಗಳಿವೆ. ಹುಲಿಗಳ ಸಂಖ್ಯೆ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಮಾತ್ರವಲ್ಲದೆ, ಪ್ರಾದೇಶಿಕ ಅರಣ್ಯ ವಿಭಾಗಗಳು ಹಾಗೂ ಅರಣ್ಯದ ಹೊರಭಾಗಗಳಲ್ಲಿಯೂ ಹೆಚ್ಚುತ್ತಿದೆ.

ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಮ್ಮೆಯ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಮತ್ತಷ್ಟು ವೃದ್ಧಿಯಾಗಿದೆ.
ರಾಜ್ಯದ ಅರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಈಗ ಸುಮಾರು 700 ಕ್ಕೆ ಏರಿಕೆಯಾಗಿದೆ ಎಂದು ಅರಣ್ಯ ಇಲಾಖೆಯ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. 2022 ರ ಹುಲಿ ಗಣತಿಯಲ್ಲಿ ರಾಜ್ಯದಲ್ಲಿ 563 ಹುಲಿಗಳು ದಾಖಲಾಗಿದ್ದವು.
ನಮ್ಮ ಮೌಲ್ಯಮಾಪನದ ಪ್ರಕಾರ ರಾಜ್ಯದಲ್ಲಿ ಸುಮಾರು 700 ಹುಲಿಗಳಿವೆ. ಹುಲಿಗಳ ಸಂಖ್ಯೆ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಮಾತ್ರವಲ್ಲದೆ, ಪ್ರಾದೇಶಿಕ ಅರಣ್ಯ ವಿಭಾಗಗಳು ಹಾಗೂ ಅರಣ್ಯದ ಹೊರಭಾಗಗಳಲ್ಲಿಯೂ ಹೆಚ್ಚುತ್ತಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ತಿಳಿಸಿದ್ದಾರೆ.
ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಸಂರಕ್ಷಣಾ ಕಾರ್ಯಗಳ ಸೂಚನೆಯಾದರೂ, ಇದರೊಂದಿಗೆ ಮಾನವ–ವನ್ಯಜೀವಿ ಸಂಘರ್ಷವೂ ಹೆಚ್ಚುತ್ತಿದೆ. ಹೀಗಾಗಿ ಸಂಘರ್ಷ ತಡೆಗಟ್ಟಲು ಕಠಿಣ ಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 2ರಿಂದ ಆರಂಭವಾಗಿರುವ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಒಂದು ದಿನದ ಸಮಾವೇಶದಲ್ಲಿ ‘ಕರ್ನಾಟಕದ ಸಂರಕ್ಷಣಾ ಪರಂಪರೆ: ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಭೂದೃಶ್ಯಗಳು ಮತ್ತು ಮುಂದಿನ ದಶಕ’ ವಿಷಯದ ಕುರಿತು ಅವರು ಮಾತನಾಡಿದರು.
ದೇಶಾದ್ಯಂತವೂ ಹುಲಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕರ್ನಾಟಕದ ಜತೆಗೆ ಮಧ್ಯಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿಯೂ ಹುಲಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬರುವ ನಿರೀಕ್ಷೆಯಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ 2022ರ ಹುಲಿ ಗಣತಿ ವರದಿಯ ಪ್ರಕಾರ, ಮಧ್ಯಪ್ರದೇಶದ ಬಳಿಕ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿತ್ತು. ಹುಲಿ ಗಣತಿ ಪ್ರಕ್ರಿಯೆ 2025ರ ನವೆಂಬರ್‌ನಲ್ಲಿ ಆರಂಭವಾಗಿ 2026ರ ಮೇ ತಿಂಗಳಲ್ಲಿ ಪೂರ್ಣಗೊಂಡಿದೆ. ದತ್ತಾಂಶವನ್ನು ಸಂಗ್ರಹಿಸಿ ಅಂತಿಮ ಪರಿಶೀಲನೆ ಮತ್ತು ವರದಿ ಬಿಡುಗಡೆಗಾಗಿ ಸಚಿವಾಲಯಕ್ಕೆ ಕಳುಹಿಸಲಾಗಿದೆ.
ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಸ್ಥಿರತೆಯತ್ತ ಸಾಗಿದ್ದು, ಹುಲಿಗಳು ಸೇರಿದಂತೆ ಎಲ್ಲ ವನ್ಯಜೀವಿಗಳ ನಿರ್ವಹಣೆ ಮತ್ತು ಮಾನವ–ವನ್ಯಜೀವಿ ಸಂಘರ್ಷ ತಗ್ಗಿಸಲು ಸಕ್ರಿಯ ಕ್ರಮಗಳ ಅಗತ್ಯವಿದೆ ಎಂದು ಪುಷ್ಕರ್ ಹೇಳಿದರು.
ಆನೆಗಳ ಸಂಖ್ಯೆಯಲ್ಲಿನ ಏರಿಕೆಯ ಬಗ್ಗೆಯೂ ಪ್ರಸ್ತಾಪಿಸಿದ ಅವರು, ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಆನೆಗಳ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ಆನೆ ಕಾರಿಡಾರ್ ನೀತಿಯನ್ನು ರೂಪಿಸಲಾಗುತ್ತಿದ್ದು, ಶೀಘ್ರದಲ್ಲೇ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದರು.
ಈ ನೀತಿಯಡಿ ಈಗಿರುವ ಆನೆ ಕಾರಿಡಾರ್‌ಗಳನ್ನು ಮತ್ತಷ್ಟು ಬಲಪಡಿಸಿ ಸಂರಕ್ಷಿಸಲಾಗುವುದು. ಈ ಹಿಂದೆ ಅಸ್ತಿತ್ವದಲ್ಲಿದ್ದು ಕಳೆದುಹೋಗಿರುವ ಕಾರಿಡಾರ್‌ಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನೂ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕದ ಕಾಫಿ ತೋಟಗಳಲ್ಲಿ ಮತ್ತು ಸುತ್ತಮುತ್ತ ವಾಸಿಸುವ ಆನೆಗಳ ಸಂತಾನ ನಿಯಂತ್ರಣಕ್ಕಾಗಿ ರೋಗನಿರೋಧಕ ಆಧಾರಿತ ಗರ್ಭನಿರೋಧಕ ವಿಧಾನವನ್ನು ಅನುಸರಿಸುವ ಕುರಿತು ವೈಜ್ಞಾನಿಕ ಹಾಗೂ ಕಾನೂನು ತಜ್ಞರೊಂದಿಗೆ ಚರ್ಚೆಗಳು ನಡೆಯುತ್ತಿವೆ.
ಕಾಡುಕೋಣಗಳ ಸಂಖ್ಯೆ ನಿಯಂತ್ರಿಸುವ ಬಗ್ಗೆಯೂ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ. ಮಾನವ–ಕಾಡುಕೋಣ ಸಂಘರ್ಷದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾವಿನ ಕಡಿತವನ್ನು ಅಧಿಸೂಚಿತ ರೋಗವೆಂದು ಘೋಷಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಹಾವು ಹಿಡಿಯುವವರು ಮತ್ತು ತಜ್ಞರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಸರ್ಕಾರ ಹಲವು ನಿಯಮಗಳನ್ನು ರೂಪಿಸಲು ಮುಂದಾಗಿದೆ ಎಂದು ಪುಷ್ಕರ್ ಹೇಳಿದರು.
ಹಾವುಗಳನ್ನು ಹಿಡಿಯುವುದು, ರಕ್ಷಿಸುವುದು ಮತ್ತು ಪುನರ್ವಸತಿ ಕಲ್ಪಿಸುವುದಕ್ಕೆ ಸಂಬಂಧಿಸಿದ ನಿಯಮಾವಳಿಗಳು ಹಾಗೂ ಕಾರ್ಯವಿಧಾನಗಳನ್ನೂ ಸಿದ್ಧಪಡಿಸಲಾಗುತ್ತಿದೆ. ನೋಂದಾಯಿತ ಹಾವು ಹಿಡಿಯುವವರ ಪಟ್ಟಿಯನ್ನು ಸಿದ್ಧಪಡಿಸಿ, ಸಾರ್ವಜನಿಕರು ಸುಲಭವಾಗಿ ಮಾಹಿತಿ ಪಡೆಯಲು ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನಗರ ಪ್ರದೇಶಗಳಲ್ಲಿ ಮತ್ತಷ್ಟು ಟ್ರೀ ಪಾರ್ಕ್‌ಗಳ ನಿರ್ಮಾಣ: ರಾಮಲಿಂಗಾ ರೆಡ್ಡಿ
ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಹಸಿರು ಪ್ರದೇಶಗಳನ್ನು ಹೆಚ್ಚಿಸಲು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮತ್ತಷ್ಟು ಟ್ರೀ ಪಾರ್ಕ್‌ಗಳನ್ನು ನಿರ್ಮಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಗುರುವಾರ ತಿಳಿಸಿದ್ದಾರೆ.
72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಆಯೋಜಿಸಿದ್ದ ಬೆಂಗಳೂರು ಸಮಾವೇಶದಲ್ಲಿ ಮಾತನಾಡಿದ ಅವರು, ನಗರೀಕರಣದ ಪರಿಣಾಮವಾಗಿ ಹಸಿರು ಪ್ರದೇಶಗಳು ಕ್ರಮೇಣ ಕುಗ್ಗುತ್ತಿವೆ ಎಂದು ಹೇಳಿದರು.
ವಿಧಾನಸೌಧ ಮತ್ತು ಹೈಕೋರ್ಟ್ ಸೇರಿದಂತೆ ಕಚೇರಿ ಕಟ್ಟಡಗಳು ಹಾಗೂ ಸಂಕೀರ್ಣಗಳ ನಿರ್ಮಾಣದಿಂದ ಕಬ್ಬನ್ ಪಾರ್ಕ್‌ನ ಹಸಿರು ಪ್ರದೇಶವೂ ಕಡಿಮೆಯಾಗಿದೆ ಎಂದು ಅವರು ತಿಳಿಸಿದರು. ಹಸಿರು ಪ್ರದೇಶಗಳನ್ನು ಸಂರಕ್ಷಿಸುವುದು ಅರಣ್ಯ ಇಲಾಖೆ ಅಥವಾ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ; ಜನರ ಸಹಭಾಗಿತ್ವವೂ ಅಗತ್ಯ ಎಂದರು.
ಕರ್ನಾಟಕದ ಅರಣ್ಯ ಪ್ರದೇಶವು ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದ ಸುಮಾರು ಶೇ.20ರಷ್ಟಿದೆ. ಮಾಲಿನ್ಯ ಮತ್ತು ಮಾನವ–ವನ್ಯಜೀವಿ ಸಂಘರ್ಷದ ಪರಿಣಾಮಗಳನ್ನು ಎದುರಿಸಲು ಅರಣ್ಯ ಪ್ರದೇಶವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ಸಮಾವೇಶದ ಸಂದರ್ಭದಲ್ಲಿ ಸಚಿವರು ‘ಕ್ರಾಸಿಂಗ್ ಪಾತ್ಸ್’, ‘ಲಂಗ್ಸ್ ಆಫ್ ಬೆಂಗಳೂರು’ ಮತ್ತು ‘ಎಲಿಫೆಂಟ್ ಟಾಸ್ಕ್ ಫೋರ್ಸ್ ರಾಮನಗರ’ ಎಂಬ ಮೂರು ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಿದರು.
2025–26ನೇ ಸಾಲಿನಲ್ಲಿ ಮಾನವ–ವನ್ಯಜೀವಿ ಸಂಘರ್ಷ
ಮಾನವ ಸಾವುಗಳು: 51
ಮಾನವರಿಗೆ ಗಾಯಗಳು: 368
ಜಾನುವಾರು ನಷ್ಟ: 6,351
ಬೆಳೆ ನಷ್ಟದ ಪ್ರಕರಣಗಳು: 41,755
ದೇಶದಲ್ಲಿ ಕರ್ನಾಟಕದ ಸ್ಥಾನ
ಆನೆಗಳು: 6,395 — ಮೊದಲ ಸ್ಥಾನ
ಹುಲಿಗಳು: 563 — ಎರಡನೇ ಸ್ಥಾನ
ಚಿರತೆಗಳು: 1,879 — ಮೂರನೇ ಸ್ಥಾನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



