'ಯಾರಿಗೂ ಭಯ ಅನ್ನೋದೇ ಇಲ್ಲ.. ಜೈಲಲ್ಲಿ ಕೂತ್ಕೋ ಬೇಕಾಗುತ್ತೆ': ವಿಮಾನದಲ್ಲಿ Yuzvendra Chahal ವೇಪಿಂಗ್ ಕುರಿತು ಮಾಜಿ ಆಟಗಾರ ಎಚ್ಚರಿಕೆ!
ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವಂತೆಯೇ ಈ ವಿಷಯದ ಬಗ್ಗೆ ಚಾಹಲ್ ಇದುವರೆಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನವದೆಹಲಿ: ವಿಮಾನದಲ್ಲೇ ವೇಪಿಂಗ್ ಮಾಡಿದ ಕ್ರಿಕೆಟಿಗ ಯುಜುವೇಂದ್ರ ಚಹಲ್ ರ ವಿಡಿಯೋ ವ್ಯಾಪಕ ವೈರಲ್ ಆದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮ ಕೃಷ್ಣನ್ ಜೈಲಲ್ಲಿ ಕೂತ್ಕೋ ಬೇಕಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕ್ರಿಕೆಟಿಗ ಯುಜುವೇಂದ್ರ ಚಹಲ್ (Yuzvendra Chahal) ಅವರು ಪಂಜಾಬ್ ಕಿಂಗ್ಸ್ ತಂಡದೊಂದಿಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ವೇಪಿಂಗ್ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವಂತೆಯೇ ಈ ವಿಷಯದ ಬಗ್ಗೆ ಚಾಹಲ್ ಇದುವರೆಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಮೈದಾನದ ಡಗೌಟ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಕೂಡ ಇದೇ ರೀತಿಯ ವರ್ತನೆ ತೋರಿ ಸಿಕ್ಕಿಬಿದಿದ್ದರು. ಬಳಿಕ ಅವರಿಗೆ ಬಿಸಿಸಿಐ ಎಚ್ಚರಿಕೆ ನೀಡಿದ್ದು ಮಾತ್ರವಲ್ಲದೇ ದಂಡ ಕೂಡ ಹೇರಿ ಡಿಮೆರಿಟ್ ಪಾಯಿಂಟ್ ಹೇರಿತ್ತು. ಈ ಪ್ರಕರಣ ಹಸಿರಾಗಿರುವಂತೆಯೇ ಚಹಲ್ ಕೂಡ ಅಂತಹುದೇ ಘಟನೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಇದೇ ವಿಚಾರವಾಗಿ ಕಿಡಿಕಾರಿರುವ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮ ಕೃಷ್ಣನ್ ಆಟಗಾರರ ಇಂತಹ ವರ್ತನೆಗಳನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ. 'ಭಾರತದಲ್ಲಿ ವೇಪಿಂಗ್ ನಿಷೇಧಿತವಾಗಿದೆ ಮತ್ತು ಈ ವಿಷಯದಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು' ಅವರು ಹೇಳಿದ್ದಾರೆ.
ಬಿಸಿಸಿಐ ಮತ್ತು ಆಟಗಾರರ ವಿರುದ್ಧ ಕಿಡಿಕಾರಿದ್ದಾರೆ. ಭಾರತದಲ್ಲಿ ವೇಪಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಕಾನೂನು ಅಂತ ಇದ್ದ ಮೇಲೆ ಅದನ್ನು ಪಾಲಿಸದಿದ್ದರೆ ಏನು ಪ್ರಯೋಜನ? ಇಂತಹ ಆಟಗಾರರು ಜೈಲು ಪಾಲಾಗಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಏನಿದು ವಿವಾದ?
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಒಂದು ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್, ತಂಡದ ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿ ಕುಳಿತಿದ್ದಾಗ ಇ-ಸಿಗರೇಟ್ ಅಥವಾ ವೇಪ್ ಬಳಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಶಶಾಂಕ್ ಸಿಂಗ್ ಜೊತೆ ಕುಳಿತಿದ್ದ ಚಾಹಲ್, ಅರ್ಶ್ದೀಪ್ ಸಿಂಗ್ ವಿಡಿಯೋ ಮಾಡುತ್ತಿದ್ದಂತೆ ತಮ್ಮ ಬಳಿ ಇದ್ದ ವೇಪ್ ಅನ್ನು ಮರೆಮಾಡಲು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಕಂಡಿದೆ. ಈ ಕ್ಲಿಪ್ ಹೊರಬರುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಕ್ಸ್‌ನಲ್ಲಿ ಈ ಬಗ್ಗೆ ಬರೆದಿರುವ ಅವರು, “ಕಾನೂನು ಇದ್ದರೆ ಅದನ್ನು ಎಲ್ಲರ ಮೇಲೂ ಸಮಾನವಾಗಿ ಜಾರಿಗೆ ತರಬೇಕು. ಶೇ. 25 ಪ್ರತಿಶತ ಪಂದ್ಯ ಶುಲ್ಕ ಕಡಿತವು ತುಂಬಾ ಸಣ್ಣ ಶಿಕ್ಷೆ. ಸಾಮಾನ್ಯ ವ್ಯಕ್ತಿ ಇದೇ ಕೆಲಸ ಮಾಡಿದ್ದರೆ ಏನು ಕ್ರಮ ಕೈಗೊಳ್ಳಲಾಗುತ್ತಿತ್ತು?” ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಯಾರಿಗೂ ಭಯ ಅನ್ನೋದೇ ಇಲ್ಲ.. ಜೈಲಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಿಯಾನ್ ಪರಾಗ್ ಪ್ರಕರಣ
ಇನ್ನು ಐಪಿಎಲ್ 2026ರಲ್ಲಿ ಮಲ್ಲಾನ್‌ಪುರದಲ್ಲಿ ನಡೆದ Punjab Kings ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ವೇಪಿಂಗ್ ಮಾಡುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಸಿಐ ಐಪಿಎಲ್ ನೀತಿ ಸಂಹಿತೆಯ Article 2.21 ಅನ್ನು ಉಲ್ಲಂಘಿಸಿದ್ದಾರೆ. ಅದರಂತೆ ಅವರಿಗೆ ಬಿಸಿಸಿಐ ಪಂದ್ಯ ಶುಲ್ಕದ 25 ಪ್ರತಿಶತ ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ವಿಧಿಸಿತ್ತು. ಪರಾಗ್ ತಮ್ಮ ತಪ್ಪನ್ನು ಒಪ್ಪಿಕೊಂಡು, ಮ್ಯಾಚ್ ರೆಫರಿ ಅಮಿತ್ ಶರ್ಮಾ ವಿಧಿಸಿದ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.
ಮತ್ತಷ್ಟು ಕ್ರಮ
ಬಿಸಿಸಿಐ ಪ್ರಕಾರ, ಪರಾಗ್ ಅವರು ಐಪಿಎಲ್ ನೀತಿ ಸಂಹಿತೆಯ Article 2.21 ಅನ್ನು ಉಲ್ಲಂಘಿಸಿದ್ದಾರೆ. ಈ ವಿಧಿ “ಆಟದ ಗೌರವಕ್ಕೆ ಧಕ್ಕೆ ತರುವ ವರ್ತನೆ”ಗೆ ಸಂಬಂಧಿಸಿದೆ. ಅಧಿಕಾರಿಗಳ ತಂಡ, ಅಧಿಕಾರಿಗಳು ಮತ್ತು ಆಟಗಾರರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಆಯ್ಕೆಗಳನ್ನೂ ಪರಿಶೀಲಿಸುತ್ತಿದೆ ಎಂದು ತಿಳಿಸಿದೆ. IPL ಪ್ರತಿಷ್ಠೆ ಮತ್ತು ಗೌರವವನ್ನು ಕಾಪಾಡಲು ಈ ಕ್ರಮಗಳನ್ನು ಪರಿಗಣಿಸಲಾಗುತ್ತಿದೆ ಎಂದು ಬಿಸಿಸಿಐ ಹೇಳಿದೆ.
ಬಿಸಿಸಿಐ ಎಚ್ಚರಿಕೆ: ಗೈಡ್‌ಲೈನ್ಸ್ ಬಿಡುಗಡೆ
ಈ ಸಾಲು ಸಾಲು ವಿವಾದಗಳಿಂದ ಎಚ್ಚೆತ್ತುಕೊಂಡಿರುವ ಬಿಸಿಸಿಐ, ಈಗ ಎಲ್ಲಾ 10 ಐಪಿಎಲ್ ತಂಡಗಳಿಗೆ ಎಂಟು ಪುಟಗಳ ಕಟ್ಟುನಿಟ್ಟಿನ ನಿರ್ದೇಶನವನ್ನು ನೀಡಿದೆ. ಸ್ಟೇಡಿಯಂ ಆವರಣ, ಹೋಟೆಲ್ ಮತ್ತು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ವೇಪ್ ಅಥವಾ ಇ-ಸಿಗರೇಟ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಾರತೀಯ ಕಾನೂನಿನ ಅಡಿಯಲ್ಲಿ ಇವುಗಳಿಗೆ ನಿಷೇಧವಿದೆ ಎಂಬುದು ನೆನಪಿರಲಿ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




