ಕ್ರಿಕೆಟ್

ಕೊನೆಗೂ ಗೊಂದಲ ಪರಿಹಾರ: 3 IPL, 2 ಅಂತಾರಾಷ್ಟ್ರೀಯ ಪಂದ್ಯದ ಟಿಕೆಟ್ ನೀಡಲು KSCA ಒಪ್ಪಿಗೆ; DCM ಡಿ.ಕೆ ಶಿವಕುಮಾರ್ ಹೇಳಿಕೆ

IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು KSCA ಮತ್ತು RCB ಮ್ಯಾನೇಜ್ಮೆಂಟ್ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದರು.

ಕೊನೆಗೂ ಗೊಂದಲ ಪರಿಹಾರ: 3 IPL, 2 ಅಂತಾರಾಷ್ಟ್ರೀಯ ಪಂದ್ಯದ ಟಿಕೆಟ್ ನೀಡಲು KSCA ಒಪ್ಪಿಗೆ; DCM ಡಿ.ಕೆ ಶಿವಕುಮಾರ್ ಹೇಳಿಕೆ
ಕೆಎಸ್ ಸಿಎ ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಚರ್ಚೆ
Published On :

ಬೆಂಗಳೂರು: ಕರ್ನಾಟಕದ ಶಾಸಕರು ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನಡುವೆ ನಡೆದಿದ್ದ ಟಿಕೆಟ್ ಗೊಂದಲ ಕೊನೆಗೂ ಇತ್ಯರ್ಥವಾಗಿದ್ದು, ಹಾಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಶಾಸಕರಿಗೆ ಮೂರು ಟಿಕೆಟ್ ನೀಡಲು ಕೆಎಸ್ ಸಿಎ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಕರ್ನಾಟಕದ ಶಾಸಕರು ಬಜೆಟ್ ಅಧಿವೇಶನದಲ್ಲಿ ಐಪಿಎಲ್ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಐಪಿಎಲ್ ಟಿಕೆಟ್ ನೀಡುವ ಬಗ್ಗೆ ಧ್ವನಿ ಎತ್ತಿದ್ದು, ಇದಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಧ್ವನಿಗೂಡಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಮಧ್ಯೆ KSCA, DNA, RCB ಪದಾಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿದ್ದು, ಚರ್ಚೆ ಬಳಿಕ ಮಹತ್ವದ ಘೋಷಣೆ ಮಾಡಿದ್ದಾರೆ.

IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA), DNA ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮ್ಯಾನೇಜ್ಮೆಂಟ್ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಓರ್ವ ಶಾಸಕನಿಗೆ ಮೂರು ಐಪಿಎಲ್ ಟಿಕೆಟ್ ನೀಡಲು ತೀರ್ಮಾನವಾಗಿದೆ.

ಈ ಮೊದಲು 1 ಪ್ಲಸ್ 1 ಒಟ್ಟು ಎರಡು ಉಚಿತ ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಇಂದಿನ ಸಭೆಯಲ್ಲಿ ಇನ್ನೊಂದು ಟಿಕೆಟ್ ಹೆಚ್ಚಳ ಮಾಡಲಾಗಿದ್ದು, ಅಂತಿಮವಾಗಿ ಒಬ್ಬ ಎಂಎಲ್​​ಎಗೆ ಒಟ್ಟು 3 ಟಿಕೆಟ್​​ಗಳನ್ನು ನೀಡಲು ಒಪ್ಪಂದವಾಗಿದೆ.

ಕೆಎಸ್ ಸಿಎ-ಡಿಕೆ ಶಿವಕುಮಾರ್ ಸಭೆ

IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಇಂದು (ಮಾರ್ಚ್ 30) ಬೆಂಗಳೂರಿನ ಸದಾಶಿವನಗರದ ಡಿಸಿಎಂ ಡಿಕೆ ಶಿವಕುಮಾರ್​​ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಆರ್​ಸಿಬಿ ಪದಾಧಿಕಾರಿಗಳು ಭಾಗಿಯಾಗಿದ್ದು, ಐಪಿಎಲ್ ಟಿಕೆಟ್ ಹಾಗೂ ಸ್ಟೇಡಿಯಂ ಬಗ್ಗೆ ಮಹತ್ವದ ಚರ್ಚೆಯಾಗಿದೆ ಎನ್ನಲಾಗಿದೆ.

ಪ್ರತಿ ಮ್ಯಾಚ್​​ಗೆ 3 ಟಿಕೆಟ್

ಇಂದಿನ ಸಭೆಯ ತೀರ್ಮಾನದಂತೆ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯದ ಮುರು ಟಿಕೆಟ್ ಹಾಗೂ ಇಂಟರ್​ ನ್ಯಾಷಲ್ ಮ್ಯಾಚ್​​ಗೆ ಎರಡು ಟಿಕೆಟ್ ನೀಡುವ ಕುರಿತು ತೀರ್ಮಾನವಾಗಿದೆ. ಈ ಹಿಂದಿನ ಸಭೆಯಲ್ಲಿ ಎರಡು ಟಿಕೆಟ್ ನೀಡುವ ಬಗ್ಗೆ ತೀರ್ಮಾನವಾಗಿತ್ತು. ಆದರೆ, ಇದೀಗ ಎರಡರ ಜೊತೆಗೆ ಮತ್ತೊಂದು ಹೆಚ್ಚುವರಿ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.

ಡಿಕೆಶಿಗೆ ಆರ್​ಸಿಬಿ ಜರ್ಸಿ ಗಿಫ್ಟ್

ಕೆಎಸ್​​ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಜೊತೆ ಆರ್​​ಸಿಬಿ ತಂಡದ ಸಿಇಒ ಸಹ ಡಿಕೆ ಶಿವಕುಮಾರ್ ಸಭೆಯಲ್ಲಿ ಹಾಜರಾಗಿದ್ದು, ಇದೇ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಒ, ಡಿಕೆ ಶಿವಕುಮಾರ್​​​ಗೆ ಆರ್​​ಸಿಬಿ ಜರ್ಸಿ ಗಿಫ್ಟ್ ನೀಡಿದರು. ಇನ್ನು ಡಿಕೆ ಶಿವಕುಮಾರ್ ಜರ್ಸಿಯನ್ನು ಧರಿಸಿ ಫೋಟೋಗೆ ಪೋಸ್ ನೀಡಿದರು.

ಡಿಕೆಶಿ ಹೇಳದ್ದೇನು?

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, 'ಶಾಸಕರಿಗೆ ಐಪಿಎಲ್ ಟಿಕೆಟ್ ನೀಡುವ ಸಂಬಂಧ ನಮ್ಮ ಸ್ಪೀಕರ್ ಬಳಿ ಮಾತಾಡಿದ್ದೆ. ಇಂದಿನ ಸಭೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿ ಐಪಿಎಲ್ ಮ್ಯಾಚ್ ಗೆ ಶಾಸಕರೊಬ್ಬರಿಗೆ 3 ಟಿಕೆಟ್ ಕೊಡಲು ಒಪ್ಪಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಟೂರ್ನಿ ಇದ್ದಾಗ ಎರಡು ಟಿಕೆಟ್ ಕೊಡುತ್ತಾರೆ. ಇನ್ನೂ ಹೆಚ್ಚು ಬೇಕಾದರೇ ಬೇರೆ ಮನವಿ ಮಾಡಬೇಕು. ಇಲ್ಲಂದ್ರೆ ಖರೀದಿ ಮಾಡಿ ಎಂದು‌ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸ್ಟೇಡಿಯಂ ವಿಚಾರಕ್ಕೆ ಸಂಬಂಧಿಸಿ ಚರ್ಚೆ ಮಾಡಿದ್ದೇವೆ ಎಂದ ಡಿಸಿಎಂ, 'ಹೆಚ್ಚುವರಿ ಸ್ಟೇಡಿಯಂ ವಿಚಾರಕ್ಕೆ ಚರ್ಚೆ ಆಗಿದೆ. ಅದಕ್ಕೆ ಕೆಎಸ್ಸಿಎ ಅವರು ಇವತ್ತು ಬಂದಿದ್ರು. ಕ್ರೀಡಾಂಗಣದಲ್ಲಿ ಆಸನ ಹೆಚ್ಚಿಸೋ ಚಿಂತನೆ ಇದ್ದು, ಕೆಎಸ್ ಸಿ ಎ ಅವರು ಯೋಚನೆ ಮಾಡಿದ್ದಾರೆ. ಅದಕ್ಕೆ ಸರ್ಕಾರಕ್ಕೆ ವರದಿ ನೀಡಿ ಎಂದಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.