‘ನೈಸ್ ಅಕ್ರಮ ಮರೆಮಾಚಲು ಈ ಡ್ರಾಮಾ’: ಚುನಾವಣಾ ಆಯೋಗದ ಮುಂದೆ ಸಿಎಂ, ಸಚಿವರ ಧರಣಿಗೆ ಕುಮಾರಸ್ವಾಮಿ ಕಿಡಿ
ಸಿಎಂ ಡಿಕೆ ಶಿವಕುಮಾರ್ ಅವರು ಸಂಪುಟ ಸಭೆ ರದ್ದುಗೊಳಿಸಿ ಧರಣಿ ನಡೆಸಿದ್ದಕ್ಕೆ ನಾಚಿಕೆ ಆಗಬೇಕು. ದೆಹಲಿ ನಾಯಕರ ಮಾತು ಕೇಳಿಸಿಕೊಂಡು ಬಂದು ನಾಟಕ ಮಾಡ್ತಿದ್ದೀರಾ? ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಅಕ್ರಮ ಖಂಡಿಸಿ ಮತ್ತು ನಕಲಿ ‘ಫಾರ್ಮ್-7’ ಸಲ್ಲಿಸಿ ಮತದಾರರ ಹೆಸರು ಡಿಲೀಟ್ ಮಾಡಲು ಯತ್ನಿಸಿದವರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಅವರ ಸಂಪುಟದ ಎಲ್ಲಾ ಸಚಿವರು ಚುನಾವಣಾ ಆಯೋಗದ ಕಚೇರಿಯ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ನಡೆಸುತ್ತಿರುವುದಕ್ಕೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿವೆ.
ಸಿಎಂ ಡಿಕೆ ಶಿವಕುಮಾರ್ ಅವರು ಸಂಪುಟ ಸಭೆ ರದ್ದುಗೊಳಿಸಿ ಧರಣಿ ನಡೆಸಿದ್ದಕ್ಕೆ ನಾಚಿಕೆ ಆಗಬೇಕು. ದೆಹಲಿ ನಾಯಕರ ಮಾತು ಕೇಳಿಸಿಕೊಂಡು ಬಂದು ನಾಟಕ ಮಾಡ್ತಿದ್ದೀರಾ? ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಈ ಡ್ರಾಮಾ ನಡೆಯುತ್ತಿದೆಯಾ? ಫಾರ್ಮ್ 7 ಕೊಟ್ಟಾಗ ನೀವೇನು ಮಾಡ್ತಿದ್ರಿ, ಕಾರ್ಯಕರ್ತರು ಏನು ಮಾಡುತ್ತಿದ್ದರು? ನಿಮ್ಮ ಕಾರ್ಯಕರ್ತರಿಗೆ ದೊಡ್ಡ ಪಾಠ ಮಾಡುತ್ತೀರಾ, ಇದನ್ನು ಏಕೆ ಹೇಳಲಿಲ್ಲ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕಲ್ಯಾಣಮಂಟಪ, ಮನೆಯಲ್ಲಿ SIR ಮಾಡ್ತಿದ್ದಾರೆ ಅಂದಾಗ ಏಕೆ ಮಾತನಾಡಲಿಲ್ಲ? ಎಂದು ಪ್ರಶ್ನಿಸಿದ ಕುಮರಾಸ್ವಾಮಿ, ನೈಸ್ ಅಕ್ರಮವನ್ನು ಮರೆಮಾಚಲು ಮತ್ತು ಜನರ ಮನಸ್ಸಿನಿಂದ ದೂರ ಮಾಡಲು ಈ ನಾಟಕ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಜನರ ದಿಕ್ಕು ತಪ್ಪಿಸುವ ನಾಟಕ
ರಾಜ್ಯದಲ್ಲಿ ಬರಗಾಲ, ರೈತರ ಸಂಕಷ್ಟ ಹಾಗೂ ಜನರ ಜ್ವಲಂತ ಸಮಸ್ಯೆಗಳಿಗೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಗಮನಹರಿಸಬೇಕಾದ ಮುಖ್ಯಮಂತ್ರಿ ಡಿಕೆಶಿ, ಚುನಾವಣಾಧಿಕಾರಿಗಳ ಕಚೇರಿ ಎದುರು ಏಕಾಏಕಿ ಧರಣಿ ನಡೆಸಿರುವುದು ಅತ್ಯಂತ ವಿಷಾದನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.
ಚುನಾವಣಾ ಪ್ರಕ್ರಿಯೆ, SIR ಪ್ರಕ್ರಿಯೆ, ಫಾರ್ಮ್ 7, ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ಹಾಗೂ ಬಿಎಲ್‌ಎ, ಬಿಎಲ್‌ಒಗಳಿಗೂ ಸ್ಪಷ್ಟ ಅರಿವಿರುತ್ತದೆ ಮತ್ತು ಆಯೋಗವೂ ಈ ಬಗ್ಗೆ ನಿರಂತರವಾಗಿ ಗಮನಹರಿಸುತ್ತದೆ. ಹೀಗಿದ್ದರೂ, ರೈತರ ಸಂಕಷ್ಟ, ಬರಗಾಲದ ಪರಿಸ್ಥಿತಿ, ಜನರ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡೋದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ನಕಲಿ ಗಾಂಧಿಗಳನ್ನು ಓಲೈಸಲು ಸಂದೇಹಾಸ್ಪದ ಮತದಾರರನ್ನು ರಕ್ಷಿಸಲು ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಧರಣಿ ನಡೆಸುತ್ತಿರುವುದು ನಿಜಕ್ಕೂ ದುರಂತ ಹಾಗೂ ಖಂಡನೀಯ. ಇದು ಇಲ್ಲದ ಗುಮ್ಮನನ್ನು ಸೃಷ್ಟಿಸಿ ಜನರ ದಿಕ್ಕು ತಪ್ಪಿಸುವ ನಾಟಕವಷ್ಟೇ ಎಂದ ಜೋಶಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



