'ಕೆಲ ಸೈಡ್ ವಿಂಗ್ ನಾಲಿಗೆಗಳು ವ್ಯರ್ಥ ಸಮರ್ಥನೆಗೆ ಇಳಿದಿವೆ, ಪಾಪ ಅವಕ್ಕೆ ವಿದ್ಯೆಬುದ್ಧಿ ಗೊತ್ತಿಲ್ಲ, ದಾಖಲೆಗಳನ್ನು ಓದಲು ಬರಲ್ಲ': HD ಕುಮಾರಸ್ವಾಮಿ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವತಃ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ತಮ್ಮ ಇಡೀ ಕುಟುಂಬವನ್ನು ಆ ಅಕ್ರಮಗಳಲ್ಲಿ ಭಾಗಿದಾರರನ್ನಾಗಿ ಮಾಡಿರುವುದು ರುಜುವಾತಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಬೆಂಗಳೂರು: ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಸಚಿವರ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬುಧವಾರ ವಾಗ್ದಾಳಿ ನಡೆಸಿದ್ದು, ಅಕ್ರಮ ಎಸಗಿರುವ ದಾಖಲೆಗಳು ಸ್ಪಷ್ಟವಾಗಿದ್ದರೂ ಕಾಂಗ್ರೆಸ್ ಸರ್ಕಾರದ ಸಚಿವರು ಸಮರ್ಥನೆಗೆ ಮುಂದಾಗಿದ್ದಾರೆ ಎಂದು ಹೇಳಿದರು.
ಮಂಗಳವಾರ ನಡೆದ ತಮ್ಮ ಪತ್ರಿಕಾಗೋಷ್ಠಿಯ ವಿಡಿಯೋ ತುಣುಕಿನೊಂದಿಗೆ 'ಎಕ್ಸ್' ಖಾತೆಯಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ವತಃ ಆರೋಪಿತ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ತಮ್ಮ ಇಡೀ ಕುಟುಂಬವನ್ನು ಆ ಅಕ್ರಮಗಳಲ್ಲಿ ಭಾಗಿದಾರರನ್ನಾಗಿ ಮಾಡಿರುವುದು ರುಜುವಾತಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ದಾಖಲೆಗಳು ಸ್ಪಷ್ಟವಾಗಿದ್ದರೂ, ಕೆಲ ಸೈಡ್ ವಿಂಗ್ ನಾಲಿಗೆಗಳು ವ್ಯರ್ಥ ಸಮರ್ಥನೆಗೆ ಇಳಿದಿವೆ. ಪಾಪ.. ಅವಕ್ಕೆ ವಿದ್ಯೆಬುದ್ಧಿ ಗೊತ್ತಿಲ್ಲ. ದಾಖಲೆಗಳನ್ನು ಓದಿಕೊಳ್ಳುವ ಬೌದ್ಧಿಕ ಸಾಮರ್ಥ್ಯವು ಇಲ್ಲ! ಆದರೂ ಮಂತ್ರಿಗಳಾಗಿದ್ದಾರೆ!! ಅಕ್ರಮ ಸಂಪತ್ತು ಗಳಿಸಿದ ಸಿಎಂ ಸಾಹೇಬರನ್ನು ಸಮರ್ಥಿಸಿಕೊಳ್ಳದಿದ್ದರೆ, ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬ ಭಯದಿಂದಲೇ ಕಿರುಚುತ್ತಿವೆ ಎಂದಿದ್ದಾರೆ.
ಶಿವಕುಮಾರ್ ಅವರ ನಗರಾಭಿವೃದ್ಧಿ ಸಚಿವ ಹಾಗೂ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ (BMICPA) ಅಧ್ಯಕ್ಷರಾಗಿದ್ದ ಅವಧಿಯ ಬಗ್ಗೆಯೂ ಪ್ರಸ್ತಾಪಿಸಿ, ಆ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಅಧಿಕೃತ ದಾಖಲೆಗಳು ಸೂಚಿಸುತ್ತವೆ ಎಂದು ಪ್ರತಿಪಾದಿಸಿದರು.
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕಾಲದಲ್ಲಿ ಏನಾಯ್ತು? ಜೆಎಚ್ ಪಟೇಲರ ಕಾಲದಲ್ಲಿ ಏನಾಯ್ತು? ಆ ನಂತರ ಬಂದ ಆಕ್ಸ್ಫರ್ಡ್ ಯೂನಿವರ್ಸಿಟಿ ಪದವೀಧರರ ಸರ್ಕಾರದಲ್ಲಿ ಹಾಲಿ ಸಿಎಂ ಮಹಾಶಯ ನಗರಾಭಿವೃದ್ಧಿ ಸಚಿವರಾಗಿ, BMICPA ಅಧ್ಯಕ್ಷರಾಗಿ ಎಸಗಿರುವ ಅಕ್ರಮಗಳನ್ನು ದಾಖಲೆಗಳೇ ಸಾರಿ ಸಾರಿ ಹೇಳುತ್ತಿವೆ ಎಂದು ತಿಳಿಸಿದರು.
NICE/BMIC ಯೋಜನೆ ವಿಷಯವಾಗಿ ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವೆ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಹಾಗೂ ಕೇಂದ್ರ ಸಚಿವರು ಈ ಯೋಜನೆಯ ವಿಚಾರವಾಗಿ ಮುಖ್ಯಮಂತ್ರಿಯವರನ್ನು ನಿರಂತರವಾಗಿ ಗುರಿಯಾಗಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಹಲವು ಸಚಿವರು ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಗಳು ಬಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



