RCB ಮಾಜಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್, ಭಾರತ ಮೂಲದ ವಿನಿ ರಾಮನ್ ದಂಪತಿಗೆ ಹೆಣ್ಣು ಮಗು ಜನನ; ಮಗಳ ಹೆಸರು ರೀವೀಲ್ ಮಾಡಿದ ಕ್ರಿಕೆಟಿಗ!
ಸದ್ಯ, ಮ್ಯಾಕ್ಸ್‌ವೆಲ್ ಚೊಚ್ಚಲ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ (ETPL) ಸಿದ್ಧತೆ ನಡೆಸುತ್ತಿದ್ದು, ಇದರಲ್ಲಿ ಅವರು 'ಬೆಲ್‌ಫಾಸ್ಟ್ ವುಲ್ವ್ಸ್' ತಂಡದ ಸಹ-ಮಾಲೀಕ ಹಾಗೂ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಆಸ್ಟ್ರೇಲಿಯಾದ ಆಲ್-ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಅವರ ಪತ್ನಿ ವಿನಿ ರಾಮನ್ ದಂಪತಿಗೆ ಹೆಣ್ಣುಮಗು ಜನಿಸಿದ್ದು, ಅಭಿಮಾನಿಗಳೊಂದಿಗೆ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ದಂಪತಿ ತಮ್ಮ ಎರಡನೇ ಮಗುವಿಗೆ 'ಮಯಾ ಮ್ಯಾಕ್ಸ್‌ವೆಲ್' ಎಂದು ಹೆಸರಿಟ್ಟಿದ್ದು, ಈ ಬಗ್ಗೆ ಘೋಷಿಸಿದ್ದಾರೆ. ದಂಪತಿಗೆ ಈಗಾಗಲೇ ಲೋಗನ್ ಮ್ಯಾವರಿಕ್ ಮ್ಯಾಕ್ಸ್‌ವೆಲ್ ಎಂಬ ಮಗನಿದ್ದು, ಆತ 2023ರ ಸೆಪ್ಟೆಂಬರ್‌ನಲ್ಲಿ ಜನಿಸಿದ್ದನು. ಮಂಗಳವಾರದಂದು ಗ್ಲೆನ್ ಮತ್ತು ವಿನಿ ಇನ್‌ಸ್ಟಾಗ್ರಾಂನಲ್ಲಿ ಜಂಟಿ ಪೋಸ್ಟ್ ಮೂಲಕ ಈ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ; ಇದಕ್ಕೆ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ತಂಡಗಳು ಮತ್ತು ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ತಮ್ಮ ನವಜಾತ ಮಗಳ ಮುದ್ದಾದ ಚಿತ್ರವೊಂದನ್ನು ಹಂಚಿಕೊಂಡ ದಂಪತಿ, 'ನಮ್ಮ ಕನಸಿನ ಮಗಳು ಬಂದಿದ್ದಾಳೆ, ಮಯಾ ಮ್ಯಾಕ್ಸ್‌ವೆಲ್' ಎಂದು ಆ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಮ್ಯಾಕ್ಸ್‌ವೆಲ್ ಮತ್ತು ರಾಮನ್ ಮೊದಲ ಬಾರಿಗೆ ಡಿಸೆಂಬರ್ 2013ರಲ್ಲಿ ಭೇಟಿಯಾದರು. ಮೊದಲಿಗೆ ಸ್ನೇಹಿತರಾದ ಇವರು ನಂತರ ಪ್ರೇಮಿಗಳಾಗಿ ಬದಲಾದರು; ಈ ವಿಷಯವನ್ನು ಅವರು 2017ರಲ್ಲಿ ಬಹಿರಂಗಪಡಿಸಿದರು.
ಈ ಜೋಡಿಯು ಫೆಬ್ರುವರಿ 2020ರಲ್ಲಿ ತಮ್ಮ ನಿಶ್ಚಿತಾರ್ಥ ಘೋಷಿಸಿತು ಮತ್ತು 2022ರ ಮಾರ್ಚ್ 27ರಂದು ಮೆಲ್ಬೋರ್ನ್‌ನಲ್ಲಿ ವಿವಾಹವಾಯಿತು. ಅವರು ಸಾಂಪ್ರದಾಯಿಕ ಕ್ರಿಶ್ಚಿಯನ್ ವಿವಾಹ ಹಾಗೂ ತಮಿಳು ಬ್ರಾಹ್ಮಣ ಸಂಪ್ರದಾಯದ ವಿವಾಹವಾದರು.
ಈ ಆಸ್ಟ್ರೇಲಿಯನ್ ಆಲ್‌ರೌಂಡರ್ ಜೂನ್ 2025ರಲ್ಲಿ ಏಕದಿನ (ODI) ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು; ಆಡಿದ 149 ಪಂದ್ಯಗಳಲ್ಲಿ 3,990 ರನ್ ಹಾಗೂ 77 ವಿಕೆಟ್‌ಗಳನ್ನು ಕಬಳಿಸಿದ್ದ ತಮ್ಮ ವೃತ್ತಿಜೀವನಕ್ಕೆ ತೆರೆಎಳೆದರು. 2015 ಮತ್ತು 2023ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದ ತಂಡಗಳ ಪ್ರಮುಖ ಸದಸ್ಯರಾಗಿದ್ದ ಇವರು, ಮುಂಬೈನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಅಜೇಯ 201 ರನ್ ಗಳಿಸುವ ಮೂಲಕ ಟೂರ್ನಿಯ ಇತಿಹಾಸದಲ್ಲೇ ಅತ್ಯಂತ ಸ್ಮರಣೀಯ ಇನಿಂಗ್ಸ್‌ಗಳಲ್ಲಿ ಒಂದನ್ನು ಆಡಿದರು; ಈ ಪ್ರದರ್ಶನವು 2023ರಲ್ಲಿ ಆಸ್ಟ್ರೇಲಿಯಾದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಸದ್ಯ, ಮ್ಯಾಕ್ಸ್‌ವೆಲ್ ಚೊಚ್ಚಲ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ (ETPL) ಸಿದ್ಧತೆ ನಡೆಸುತ್ತಿದ್ದು, ಇದರಲ್ಲಿ ಅವರು 'ಬೆಲ್‌ಫಾಸ್ಟ್ ವುಲ್ವ್ಸ್' ತಂಡದ ಸಹ-ಮಾಲೀಕ ಹಾಗೂ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
'ಬೆಲ್‌ಫಾಸ್ಟ್ ವುಲ್ವ್ಸ್‌ಗಾಗಿ ನಡೆದ ಡ್ರಾಫ್ಟ್ ಪ್ರಕ್ರಿಯೆಯು ಅತ್ಯಂತ ತೃಪ್ತಿದಾಯಕವಾಗಿತ್ತು. ತಂಡವೊಂದನ್ನು ಶೂನ್ಯದಿಂದಲೇ ಕಟ್ಟಿ ಬೆಳೆಸುವುದು ಹಾಗೂ ಆಟಗಾರರ ಆಯ್ಕೆ ಮತ್ತು ನಿರ್ವಹಣಾ ಪ್ರಕ್ರಿಯೆಯಲ್ಲಿ ಇಷ್ಟೊಂದು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ನನಗೆ ಹೊಸದೊಂದು ಅನುಭವವಾಗಿತ್ತು. ತಳಮಟ್ಟದಿಂದ ತಂಡವೊಂದನ್ನು ರೂಪಿಸುವುದು ಸುಲಭದ ಕೆಲಸವಲ್ಲ, ಆದರೆ ನಮ್ಮ ಬಳಿ ಸ್ಪಷ್ಟವಾದ ಯೋಜನೆಯಿತ್ತು' ಎಂದು ಮ್ಯಾಕ್ಸ್‌ವೆಲ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



