FKCCI: 2026-27ನೇ ಸಾಲಿಗೆ ಎಫ್‌ಕೆಸಿಸಿಐ ಅಧ್ಯಕ್ಷರಾಗಿ ಟಿ. ಸಾಯಿರಾಮ್ ಪ್ರಸಾದ್ ಆಯ್ಕೆ
ಎಫ್‌ಕೆಸಿಸಿಐ ಹೊಸ ನಾಯಕತ್ವ: ಟಿ. ಸಾಯಿರಾಮ್ ಪ್ರಸಾದ್ ಅಧ್ಯಕ್ಷರಾಗಿ, ಬಿ.ಪಿ. ಶಶಿಧರ್ ಹಿರಿಯ ಉಪಾಧ್ಯಕ್ಷರಾಗಿ, ಎನ್ ಸತೀಶ್ ಉಪಾಧ್ಯಕ್ಷರಾಗಿ ಆಯ್ಕೆ

ಶ್ರೀ ಟಿ. ಸಾಯಿರಾಮ್ ಪ್ರಸಾದ್ ಅವರು 2026–27ನೇ ಸಾಲಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೆ, ಶ್ರೀ ಬಿ.ಪಿ. ಶಶಿಧರ್ ಅವರು 2026–27ನೇ ಸಾಲಿಗೆ FKCCIಯ ಹಿರಿಯ ಉಪಾಧ್ಯಕ್ಷರಾಗಿ, ಶ್ರೀ ಎನ್ ಸತೀಶ್ ಅವರು FKCCIನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸಾಯಿರಾಮ್ ಪ್ರಸಾದ್ 2025-26 ನೇ ಸಾಲಿನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಹಾಗೂ 2024–25ನೇ ಸಾಲಿನಲ್ಲಿ FKCCIಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು, ತಮ್ಮ ಕಾರ್ಯಕ್ಷಮತೆ, ಸರಳ ನಡೆ ಹಾಗೂ ಸಮನ್ವಯದ ನಾಯಕತ್ವದ ಮೂಲಕ ಸಂಸ್ಥೆಯ ಚಟುವಟಿಕೆಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC)ಯ ವ್ಯಾಪಾರ ಕ್ಷೇತ್ರದಲ್ಲಿ ಸುದೀರ್ಘ ಅನುಭವವನ್ನು ಸಂಪಾದಿಸಿರುವ ಅವರು, ವ್ಯಾಪಾರಸ್ಥರ ಸಮಸ್ಯೆಗಳು, ಕೈಗಾರಿಕಾ ವಲಯದ ಅಗತ್ಯತೆಗಳು ಹಾಗೂ ಸೇವಾ ಕ್ಷೇತ್ರದ ಸವಾಲುಗಳನ್ನು ಅತ್ಯಂತ ಸಮೀಪದಿಂದ ಅರಿತುಕೊಂಡಿದ್ದಾರೆ. ಇದೇ ಅನುಭವವು ಅವರ ನಾಯಕತ್ವಕ್ಕೆ ಬಲವಾದ ಅಡಿಪಾಯವಾಗಿದೆ.
1962ರಿಂದ ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿರುವ C. V. Thimmaiah & Co. ಎಂಬ ಕುಟುಂಬದ ಪರಂಪರೆಯ ವ್ಯವಹಾರವನ್ನು ಮುಂದುವರಿಸಿಕೊಂಡು ಬಂದಿರುವ ಶ್ರೀ ಸಾಯಿರಾಮ್ ಪ್ರಸಾದ್ ಅವರು, ವ್ಯಾಪಾರದ ಪರಂಪರೆಯನ್ನು ಆಧುನಿಕ ದೃಷ್ಟಿಕೋನದೊಂದಿಗೆ ಬೆಸೆದುಕೊಂಡು ಸಾಗುತ್ತಿರುವ ಯಶಸ್ವಿ ಉದ್ಯಮಿಯಾಗಿದ್ದಾರೆ. ಈ ಸುದೀರ್ಘ ಪಯಣವು ಅವರಿಗೆ ವ್ಯಾಪಾರಸ್ಥರ ನೈಜ ಅಗತ್ಯಗಳು ಹಾಗೂ ಅವರ ದಿನನಿತ್ಯದ ಸವಾಲುಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಅಮೂಲ್ಯ ಅನುಭವವನ್ನು ನೀಡಿದೆ.
ಸರಳತೆ, ಸೌಜನ್ಯ ಹಾಗೂ ಕ್ರಿಯಾಶೀಲತೆಯನ್ನು ತಮ್ಮ ವ್ಯಕ್ತಿತ್ವದ ಆಭರಣವನ್ನಾಗಿಸಿಕೊಂಡಿರುವ ಶ್ರೀ ಶಶಿಧರ್ ಅವರು, ಉದ್ಯಮ ಕ್ಷೇತ್ರದ ಅಭಿವೃದ್ಧಿಯೊಂದಿಗೆ ವಾಣಿಜ್ಯ ಸಮುದಾಯದ ಹಿತಾಸಕ್ತಿಗಳ ರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿರುವ ಸಮರ್ಥ ಸಂಘಟಕರಾಗಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಬಿ.ಇ. ಪದವಿ ಪಡೆದಿರುವ ಅವರು, ತಾಂತ್ರಿಕ ಜ್ಞಾನವನ್ನು ಉದ್ಯಮಶೀಲತೆಯೊಂದಿಗೆ ಸಮರ್ಥವಾಗಿ ಬೆಸೆದುಕೊಂಡು ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ FKCCIಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ಶಶಿಧರ್ ಅವರು, ಸಂಸ್ಥೆಯ ವಿವಿಧ ಸಮಿತಿಗಳ ನೇತೃತ್ವ ವಹಿಸಿ ತಮ್ಮ ಸಂಘಟನಾ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದ್ದಾರೆ. ಕೈಗಾರಿಕಾ ಸಮಿತಿ, ಕಾರ್ಮಿಕ ಸಮಿತಿ, ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ ಸಮಿತಿ, ರಫ್ತು ಹಾಗೂ ರಫ್ತು ಶ್ರೇಷ್ಠತಾ ಪ್ರಶಸ್ತಿ ಸಮಿತಿ ಸೇರಿದಂತೆ ಹಲವು ಮಹತ್ವದ ಸಮಿತಿಗಳ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ, 2022–23ನೇ ಸಾಲಿನಲ್ಲಿ FKCCIಯ ಕೈಗಾರಿಕಾ ಸಮಿತಿಯ ಅಧ್ಯಕ್ಷರಾಗಿ ಕೈಗಾರಿಕಾ ವಲಯದ ಹಲವು ಪ್ರಮುಖ ವಿಷಯಗಳಿಗೆ ತಮ್ಮ ಸಕ್ರಿಯ ಕೊಡುಗೆಯನ್ನು ನೀಡಿದ್ದಾರೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಧ್ವನಿಯಾಗಿ ಗುರುತಿಸಿಕೊಂಡಿರುವ ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್ (KASSIA), ಬೆಂಗಳೂರು ಸಂಸ್ಥೆಯ ಮಾಜಿ ಅಧ್ಯಕ್ಷರಾಗಿ ಸಹ ಶ್ರೀ ಶಶಿಧರ್ ಅವರು ತಮ್ಮ ನಾಯಕತ್ವದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


