IPL 2026: 'ಭಾನಾಮತಿ'ಯೋ ಅಥವಾ ಕಾಕತಾಳೀಯವೋ? SRH ಅಭಿಮಾನಿಯ 'ನಿಂಬೆ' ಮಂತ್ರಕ್ಕೆ CSK ವಿಕೆಟ್ ಪತನ; Video viral
ಈ ಹಿಂದೆ ವಿವಾದಾತ್ಮಕ ಸಂಗೀತ ವಿಚಾರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ RCB ಡಿಜೆ ವಿರುದ್ಧ ದೂರು ಸಲ್ಲಿಕೆ ಮಾಡಿತ್ತು.

ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾದಾಗಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದು, ಈ ಭಾರಿ ಅಭಿಮಾನಿಯೊಬ್ಬರ ನಿಂಬೆ ಮಂತ್ರದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಈ ಹಿಂದೆ ವಿವಾದಾತ್ಮಕ ಸಂಗೀತ ವಿಚಾರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ RCB ಡಿಜೆ ವಿರುದ್ಧ ದೂರು ಸಲ್ಲಿಕೆ ಮಾಡಿತ್ತು. ಈ ಬೆಳವಣಿಗೆ ಹಸಿರಾಗಿರುವಂತೆಯೇ ಇದೇ ಸಿಎಸ್ ಕೆ ಪಂದ್ಯದಲ್ಲೇ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಸ್ಟೇಡಿಯಂನಲ್ಲಿ ಅಭಿಮಾನಿಯೊಬ್ಬನ ವರ್ತನೆಯ ವಿಡಿಯೋ ವೈರಲ್ ಆಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಇಷ್ಟಕ್ಕೂ ಆಗಿದ್ದೇನು?
ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯದ ವಿಲಕ್ಷಣ ವೀಡಿಯೊವೊಂದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಎರಡನೇ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ, ಸಿಎಸ್‌ಕೆ 194 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ್ದಾಗ, ಶಿವಂ ದುಬೆ ಚೆನ್ನೈ ತಂಡದ ಕೊನೆಯ ಪ್ರಮುಖ ಆಸರೆಯಾಗಿದ್ದರು. ಹೈದರಾಬಾದ್ ತಂಡದ ಸಕೀಬ್ ಹುಸೇನ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಪ್ರೇಕ್ಷಕರ ಸ್ಟ್ಯಾಂಡ್ ನಲ್ಲಿ ಕುಳಿತಿದ್ದ ಹೈದರಾಬಾದ್ ಬೆಂಬಲಿಗರೊಬ್ಬರು ನಿಂಬೆ ಹಣ್ಣನ್ನು ತಿರುಗಿಸುತ್ತಾ ಬ್ಯಾಟರ್ ನತ್ತ ಮಾಟ ಮಾಡುವಂತೆ ಸನ್ನೆ ಮಾಡಿದರು.
ಅಚ್ಚರಿ ಎಂದರೆ ಆತ ನಿಂಬೆ ಮಂತ್ರ ಹಾಕಿದ ಕೆಲವೇ ಸೆಕೆಂಡುಗಳ ನಂತರ, ಸಕೀಬ್ ಹುಸೇನ್ ಅವರ ಯಾರ್ಕರ್ ಎಸೆತಕ್ಕೆ ಶಿವಂ ದುಬೆ ಕ್ಲೀನ್ ಬೌಲ್ಡ್ ಆದರು. ಇದನ್ನು ಕಂಡು ಆ ಅಭಿಮಾನಿ ಸಂಭ್ರಮಾಚರಿಸಿದರು.
ವಿಡಿಯೋ ವ್ಯಾಪಕ ವೈರಲ್
ಇದನ್ನು ಆ ಅಭಿಮಾನಿಯ ಸ್ನೇಹಿತ ವಿಡಿಯೋ ಮಾಡಿದ್ದು, ಇದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಈ 'ಬ್ಲ್ಯಾಕ್ ಮ್ಯಾಜಿಕ್' ಆಚರಣೆಯಿಂದಲೇ ಶಿವಂ ದುಬೆ ವಿಕೆಟ್ ಬಿತ್ತು ಎಂದು ಊಹಾಪೋಹಗಳು ಹರಡಿವೆ.
ಸಿಎಸ್ ಕೆ ದೂರು?
ಬೆಂಕಿಗೆ ತುಪ್ಪ ಸುರಿಯುವಂತೆ ಚೆನ್ನೈ ಸೂಪರ್ ಕಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಬಿಸಿಸಿಐಗೆ ಈ ಸಂಬಂಧ ದೂರು ನೀಡಲಾಗಿದೆ ಎಂದೂ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಚೆ್ನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿ ಹೆಸರಿನಲ್ಲಿ ದೂರು ದಾಖಲಿಸಿರುವ ಪತ್ರವೊಂದು ಕೂಡ ವೈರಲ್ ಆಗುತ್ತಿದೆ. ಆದರೆ ಸಿಎಸ್ ಕೆ ದೂರಿನ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಮೀಮ್ ಫೆಸ್ಟ್
ಕ್ಲಿಪ್ ಅಥವಾ ದೂರಿನ ಸತ್ಯಾಸತ್ಯತೆಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಈ ವಿಚಿತ್ರ ಘಟನೆಯು SRH vs CSK ಪಂದ್ಯದ ದೊಡ್ಡ ಚರ್ಚಾಸ್ಪದ ಅಂಶಗಳಲ್ಲಿ ಒಂದಾಗಿದೆ. ಈ ಬಗ್ಗೆ ವ್ಯಾಪಕ ಮೀಮ್ ಗಳು ಹಾಸ್ಯಾತ್ಮಕ ವಿಡಿಯೋಗಳು ಹರಿದಾಡುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



