ಎಂಎಸ್ ಧೋನಿ ಶೇ 25ರಷ್ಟು 'ಪಾಲು ಕೇಳಿದ್ದಾರೆ' ಎಂಬ ಸ್ಫೋಟಕ ವರದಿ ಕುರಿತು ಕೊನೆಗೂ ಮೌನ ಮುರಿದ CSK!
ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ, ಧೋನಿ ಅವರು ತಂಡದಲ್ಲಿ ಪಾಲು (stake) ಕೇಳಿದ್ದಾರೆ ಎಂಬ ವಾದವು ವಾಸ್ತವವಲ್ಲ. ಇದೊಂದು ಉದ್ದೇಶಪೂರ್ವಕವಾಗಿ ಹಬ್ಬಿಸಿದ ಕಟ್ಟುಕಥೆ ಎಂದು ಬಣ್ಣಿಸಿದ್ದಾರೆ.

ಇತ್ತೀಚೆಗೆ ವರದಿಯೊಂದರ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ನಾಯಕ ಎಂಎಸ್ ಧೋನಿ ತಂಡದಲ್ಲಿ ಶೇ 25ರಷ್ಟು ಪಾಲನ್ನು ಕೋರಿದ್ದರು ಮತ್ತು ನಂತರ ಅದನ್ನು ಶೇ 20ಕ್ಕೆ ಇಳಿಸಿದ್ದರು. ಆಗ ಫ್ರಾಂಚೈಸಿ ಅವರಿಗೆ ಶೇ 5.5ರಷ್ಟು ಪಾಲನ್ನು ನೀಡುವ ಪ್ರಸ್ತಾಪವನ್ನು ಮುಂದಿಟ್ಟಿತ್ತು ಎಂದು ಹೇಳಲಾಗಿದೆ. ಧೋನಿ ಇನ್ನೂ ಸಿಎಸ್‌ಕೆ ತಂಡದ ಭಾಗವಾಗಿದ್ದು, ಅವರ ನಾಯಕತ್ವದಲ್ಲಿ ತಂಡವು ಐದು ಬಾರಿ ಐಪಿಎಲ್ (IPL) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದೀಗ ಸಿಎಸ್‌ಕೆ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದೆ.
'ಎಂಎಸ್ ಈ ಬಗ್ಗೆ ನಮ್ಮಲ್ಲಿ ಎಂದಿಗೂ ಕೇಳಿಲ್ಲ. ನಾವು ಈ ವಿಷಯದ ಬಗ್ಗೆ ಚರ್ಚಿಸಿಲ್ಲ. ಅವರು ಎನ್. ಶ್ರೀನಿವಾಸನ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎಂಬುದರ ಕುರಿತೂ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ' ಎಂದು ಸಿಎಸ್‌ಕೆ ಹಿರಿಯ ಅಧಿಕಾರಿಯೊಬ್ಬರು 'ಕ್ರಿಕ್‌ಬಜ್' (Cricbuzz)ಗೆ ತಿಳಿಸಿದ್ದಾರೆ.
ಧೋನಿ ಅವರು ಈ ಫ್ರಾಂಚೈಸ್‌ನಲ್ಲಿ ಕೆಲವು ಷೇರುಗಳನ್ನು ಹೊಂದಿದ್ದಾರೆ ಎಂದು ವರದಿಯು ತಿಳಿಸಿದೆ. ಸಿಎಸ್‌ಕೆ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿಲ್ಲದಿರುವುದರಿಂದ ಮತ್ತು ಅದರ ಷೇರುಗಳು ಮುಕ್ತ ಮಾರುಕಟ್ಟೆಯಲ್ಲಿ ವಹಿವಾಟು ನಡೆಸದ ಕಾರಣ, 'ಅವುಗಳನ್ನು ಮಾರುಕಟ್ಟೆ-ಬಾಹ್ಯ ವಹಿವಾಟುಗಳ (off-market transactions) ಮೂಲಕ ಖಾಸಗಿಯಾಗಿ ಪಡೆಯಬಹುದು' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿ ಪ್ರಕಾರ, ಧೋನಿ ಅವರು ಒಂದು ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಹೊಂದಿದ್ದಾರೆ. ಇದು ದೊಡ್ಡ ಪ್ರಮಾಣವೇನಲ್ಲ; ಏಕೆಂದರೆ, 'ಸಾರ್ವಜನಿಕರ ಬಳಿ 30 ಕೋಟಿಗೂ ಹೆಚ್ಚು ಷೇರುಗಳಿವೆ ಮತ್ತು ಇದು ಫ್ರಾಂಚೈಸ್‌ನ ಒಟ್ಟು ಷೇರು ಬಂಡವಾಳದ ಸುಮಾರು ಶೇ 40 ರಷ್ಟಿದೆ' ಎಂದು ವರದಿ ತಿಳಿಸಿದೆ. ಬಿಸಿಸಿಐ ಮಾಜಿ ಮುಖ್ಯಸ್ಥ ಎನ್. ಶ್ರೀನಿವಾಸನ್ ಅವರ ಕುಟುಂಬವು ಶೇ 55ಕ್ಕೂ ಹೆಚ್ಚಿನ ಪಾಲನ್ನು (ನಿಯಂತ್ರಣ ಪಾಲು) ಹೊಂದಿದೆ.
ಐಪಿಎಲ್ ಫ್ರಾಂಚೈಸಿಯ ಸದ್ಯದ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ (ಒಂದು ಐಪಿಎಲ್ ತಂಡವು ಇತ್ತೀಚೆಗೆ ₹16,600 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿತ್ತು) ಧೋನಿ ಅವರ ಪಾಲಿನ ಮೌಲ್ಯವು ₹2.6 ರಿಂದ ₹3 ಕೋಟಿಗಳಷ್ಟಿರಬಹುದು. ಧೋನಿ ಅವರ ಅಂದಾಜು ನಿವ್ವಳ ಆಸ್ತಿ ಮೌಲ್ಯವು ಸುಮಾರು ₹1,200 ಕೋಟಿಗಳಷ್ಟಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿಯೂ ಆಡಿರುವ ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ, ಧೋನಿ ಅವರು ತಂಡದಲ್ಲಿ ಪಾಲು (stake) ಕೇಳಿದ್ದಾರೆ ಎಂಬ ವಾದವು ವಾಸ್ತವವಲ್ಲ. ಇದೊಂದು ಉದ್ದೇಶಪೂರ್ವಕವಾಗಿ ಹಬ್ಬಿಸಿದ ಕಟ್ಟುಕಥೆ ಎಂದು ಬಣ್ಣಿಸಿದ್ದಾರೆ.
'ಇತ್ತೀಚೆಗೆ ಆರ್‌ಸಿಬಿ (RCB) ತಂಡವನ್ನು ಖರೀದಿಸಿದಾಗ ಅದರ ಮೌಲ್ಯ 1.7 ರಿಂದ 1.8 ಬಿಲಿಯನ್‌ನಷ್ಟಿತ್ತು ಎಂಬ ಮಾತು ಕೇಳಿಬಂದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಕೂಡ ಅಂತಹದೇ ಒಂದು ಫ್ರಾಂಚೈಸಿ ಆಗಿದೆ. ಮೌಲ್ಯಮಾಪನವನ್ನು ನೀವು ಹೇಗೆ ಬೇಕಾದರೂ ಮಾಡಬಹುದು. ಆದರೆ, ಇದು ಐದು ಪ್ರಶಸ್ತಿಗಳನ್ನು ಗೆದ್ದಿರುವ ಹಾಗೂ ಭಾರತದ ಹೊರಗೂ ಅನೇಕ ಫ್ರಾಂಚೈಸಿಗಳನ್ನು ಹೊಂದಿರುವ ತಂಡವಾಗಿದೆ' ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ ಹೇಳಿದರು.
'ಅವರು ಒಂದು ಭವ್ಯ ಪರಂಪರೆಯನ್ನು ಹೊಂದಿದ್ದಾರೆ ಮತ್ತು ಅವರಿಗೆ ಅನೇಕ ಸಕಾರಾತ್ಮಕ ಅಂಶಗಳಿವೆ. 'ಚೆನ್ನೈ ಸೂಪರ್ ಕಿಂಗ್ಸ್' ಒಂದು ಅತ್ಯಂತ ಪ್ರಬಲವಾದ ಬ್ರ್ಯಾಂಡ್ ಆಗಿದೆ. ಅದರ ಮೌಲ್ಯ 1.8 ಬಿಲಿಯನ್ ಡಾಲರ್ ಆಗಿದ್ದು, ಅದರಲ್ಲಿ ಧೋನಿ ಶೇ 25 ರಷ್ಟು ಪಾಲನ್ನು ಕೇಳಿದ್ದರೆ, ಅದು ಅವಾಸ್ತವವಾಗಿದೆ. ಇದು ಸಾಧ್ಯವಿಲ್ಲದ ಮಾತು. ಯಾರೂ ಸುಮ್ಮನೆ 400 ಮಿಲಿಯನ್ ಡಾಲರ್ ಅನ್ನು ಇನ್ನೊಬ್ಬರಿಗೆ ನೀಡುವುದಿಲ್ಲ. ವಾಸ್ತವವಾಗಿ, ಶೇ 25ರಷ್ಟು ಪಾಲು ಪಡೆಯಲು ನೀವೇ 400 ಮಿಲಿಯನ್ ಡಾಲರ್ ಹೂಡಿಕೆ ಮಾಡಬೇಕಾಗುತ್ತದೆ. ಇದೊಂದು ವಿಚಿತ್ರವಾದ ಅಂಕಿಅಂಶ. ಐಪಿಎಲ್ ತಂಡವೊಂದರಲ್ಲಿ ಯಾರೂ ಇನ್ನೊಬ್ಬರಿಗೆ ಶೇ 25 ರಷ್ಟು ಪಾಲು ನೀಡುವುದಿಲ್ಲ' ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



