ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!
ಮ್ಯಾಗಜೀನ್ ವರದಿಯಿಂದ ದೊಡ್ಡ ಕೇಸ್ ಆಯ್ತು. ಆ ರೀತಿ ಆಗಬಾರದಿತ್ತು. ಇವತ್ತಿಗೂ ರವಿ ಸರ್ ಚಿತ್ರದಲ್ಲಿ ತಾಯಿ ಪಾತ್ರ, ಅಜ್ಜಿ ಪಾತ್ರ ಕೊಟ್ರೆ ನಟಿಸೋಕೆ ಸಿದ್ಧ. ಸಂಭಾವನೆ ಇಲ್ಲದೇ ನಟಿಸ್ತೀನಿ. ದಯವಿಟ್ಟು ಒಂದು ಅವಕಾಶ ಕೊಡಿ ಸರ್..

ಬೆಂಗಳೂರು: ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ ಮಾಡಿದ್ದ 'ಹಳ್ಳಿ ಮೇಷ್ಟು' ನಟಿ 34 ವರ್ಷಗಳ ನಂತರವೂ ಘಟನೆ ನೆನೆದು ಕಣ್ಣೀರಿಟ್ಟು ಕ್ಷಮೆ ಕೇಳಿದ್ದಾರೆ.
ಕನ್ನಡ ನಟ, ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಬರುವ ‘ನೂರೊಂದು ನೆನಪು’ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ಬಿಂದಿಯಾ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಮಾತ್ರವಲ್ಲದೇ ಕಣ್ಣೀರು ಹಾಕಿದ್ದಾರೆ.
ಅಲ್ಲದೆ ರವಿಚಂದ್ರನ್ ಅವರು ಅಷ್ಟು ದೊಡ್ಡ ಬ್ರೇಕ್ ಕೊಟ್ರು. ಆದ್ರೆ ಆ ಮ್ಯಾಗಜೀನ್ ವರದಿಯಿಂದ ದೊಡ್ಡ ಕೇಸ್ ಆಯ್ತು. ಆ ರೀತಿ ಆಗಬಾರದಿತ್ತು. ಇವತ್ತಿಗೂ ರವಿ ಸರ್ ಚಿತ್ರದಲ್ಲಿ ತಾಯಿ ಪಾತ್ರ, ಅಜ್ಜಿ ಪಾತ್ರ ಕೊಟ್ರೆ ನಟಿಸೋಕೆ ಸಿದ್ಧ. ಯಾವುದೇ ಸಂಭಾವನೆ ಇಲ್ಲದೇ ನಟಿಸ್ತೀನಿ. ದಯವಿಟ್ಟು ಒಂದು ಅವಕಾಶ ಕೊಡಿ ಸರ್ ಎಂದು ಗೋಗರೆದಿದ್ದಾರೆ.
ರವಿ ಸರ್ ಜೊತೆ ಮಾತನಾಡಲಾಗಲಿಲ್ಲ
ಅಂತೆಯೇ ಆ ಘಟನೆ ಬಳಿಕ ರವಿಚಂದ್ರನ್ ಅವರೊಟ್ಟಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಕೋರ್ಟ್ನಲ್ಲೇ ಭೇಟಿ ಆಗಿದ್ವಿ. ಆಗ ನಾನು ಬಹಳ ಚಿಕ್ಕವಳು, ಬುದ್ದಿ ಇಲ್ದೆ ನಡೆದುಕೊಂಡಿದ್ದೆ. ಪ್ರಬುದ್ಧತೆ ಇರ್ಲಿಲ್ಲ. ಕೊನೆಗೆ ರವಿ ಸರ್ ಕೇಸ್ ಗೆದ್ರು, ಬಳಿಕ ವಾಪಸ್ ಪಡೆದ್ರು. ಎಲ್ಲಾ ಇತ್ಯರ್ಥವಾಗಿತ್ತು ಎಂದು ನಟಿ ಬಿಂದಿಯಾ ಹೇಳಿದ್ದಾರೆ.
ನಾನು ಹೇಳಿದ್ದೇ ಒಂದು ಮ್ಯಾಗಜಿನ್ ಬರೆದಿದ್ದೇ ಒಂದು
ಅಂದಿನ ಕೇಸ್ ನಲ್ಲಿ ನನ್ನ ಆರೋಪಕ್ಕೆ ಯಾವುದೇ ಆಧಾರ ಇರಲಿಲ್ಲ. ನಾನು ಹೇಳಿದ್ದು ಬೇರೆ, ಮ್ಯಾಗಜೀನ್ನಲ್ಲಿ ಬಂದಿದ್ದು ಬೇರೆ. ಅದು ರವಿಚಂದ್ರನ್ ಅವರ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತವಾಗುವಂತಾಗಿತ್ತು. ಕೋರ್ಟ್ನಲ್ಲಿ ಅವರನ್ನು ನೋಡಿದಾಗ ಸಂಕಟವಾಯಿತು. ಅಷ್ಟು ದೊಡ್ಡ ನಟ ಅಲ್ಲಿಗೆ ಬರುವಂತಾಯಿತು. ರವಿ ಸರ್ ನಿಜಕ್ಕೂ ಯಾವುದೇ ತಪ್ಪು ಮಾಡ್ಲಿಲ್ಲ ಎಂದು ಹೇಳಿ ಬಿಂದಿಯಾ ಹೇಳಿದರು.
ಇಷ್ಟಕ್ಕೂ ಏನದು ಕೇಸ್? ಏನಾಗಿತ್ತು?
1992ರಲ್ಲಿ ತೆರೆಗೆ ಬಂದ ಕನ್ನಡದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ‘ಹಳ್ಳಿಮೇಷ್ಟ್ರು’ ಚಿತ್ರದಲ್ಲಿ ನಟಿ ಬಿಂದಿಯಾ ನಟಿಸಿದ್ದರು. ತಮಿಳಿನ ‘ಮುಂದಾನೈ ಮುಡಿಚು’ ಚಿತ್ರದ ರೀಮೇಕ್ ಆಗಿದ್ದ ‘ಹಳ್ಳಿಮೇಷ್ಟ್ರು’ ಸ್ಯಾಂಡಲ್ವುಡ್ನಲ್ಲಿ ಸೂಪರ್ ಹಿಟ್ ಆಗಿ ಭರ್ಜರಿ ಕಲೆಕ್ಷನ್ ಸಹ ಮಾಡಿತ್ತು. ಹೀಗಿರುವಾಗಲೇ, ರವಿಚಂದ್ರನ್ ವಿರುದ್ಧ ನಟಿ ಬಿಂದಿಯಾ ಗಂಭೀರ ಆರೋಪ ಮಾಡಿದ್ದರು. ಮ್ಯಾಗಝೀನ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ‘’ರವಿಚಂದ್ರನ್ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು’’ ಎಂದು ಬಿಂದಿಯಾ ಆರೋಪ ಮಾಡಿದ್ದರು.
ಕೋರ್ಟ್ ಮೆಟ್ಟಿಲೇರಿದ ರವಿಚಂದ್ರನ್
ಅಂದು ನಟಿ ಬಿಂದಿಯಾ ಮಾಡಿದ್ದ ಆರೋಪಗಳು ರವಿಚಂದ್ರನ್ ಅವರನ್ನು ಇನ್ನಿಲ್ಲದಂತೆ ಕೆರಳಿಸಿತ್ತು. ಸಿನಿಮಾ ಬಗ್ಗೆ ಸದಾ ಕನಸು ಕಾಣುತ್ತಿದ್ದ ಕನಸುಗಾರ ರವಿಚಂದ್ರನ್ ವಿರುದ್ಧ ಬಿಂದಿಯಾ ವಿನಾಕಾರಣ ಸುಳ್ಳು ಆರೋಪ ಮಾಡಿದ್ದರು.
ಇದರಿಂದ ಮನನೊಂದ ರವಿಚಂದ್ರನ್ ಸತ್ಯವನ್ನ ಬಹಿರಂಗಗೊಳಿಸುವ ಸಲುವಾಗಿ ನಟಿ ಬಿಂದಿಯಾ ಅವರನ್ನ ಕೋರ್ಟ್ಗೆ ಎಳೆದಿದ್ದರು. ತಮ್ಮ ಮೇಲೆ ಮಾಡಿರುವ ಆರೋಪವನ್ನ ಸಾಬೀತು ಪಡಿಸುವಂತೆ ಸವಾಲು ಹಾಕಿ ಬಿಂದಿಯಾ ವಿರುದ್ಧ ರವಿಚಂದ್ರನ್ ಕೇವಲ 1 ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕಿದ್ದರು.
ಕ್ಷಮೆ ಕೇಳಿದ್ದ ನಟಿ
ವಿಚಾರಣೆ ವೇಳೆ, ‘’ನಾನು ಆ ತರಹದ ಹೇಳಿಕೆ ನೀಡಿಲ್ಲ. ಅದೆಲ್ಲಾ ಸುಳ್ಳು’’ ಎಂದು ತಪ್ಪೊಪ್ಪಿಕೊಂಡ ನಟಿ ಬಿಂದಿಯಾ ಕ್ಷಮೆ ಕೇಳಿದ್ದರು. ಬಳಿಕ ಆ ಪ್ರಕರಣ ಇತ್ಯರ್ಥವಾಗಿತ್ತು. ಆದರೆ ಆ ಘಟನೆಯನ್ನು ಇಂದಿಗೂ ನಟಿ ಬಿಂದಿಯಾ ನೆನೆದು ಕಣ್ಣೀರು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


