'100 ರೂಪಾಯಿ ಕೊಟ್ ಸಿನಿಮಾ ನೋಡಿದ್ರೆ ಗಂಟೇನು ಹೋಗಲ್ಲ': 'ದಿ ರೈಸ್ ಆಫ್ ಅಶೋಕ' ಟ್ರೈಲರ್ ರಿಲೀಸ್ ವೇಳೆ ಸಿಟ್ಟಾದ ನಟ ರವಿಚಂದ್ರನ್
ಕ್ಷೇತ್ರಪತಿ ಮತ್ತು ಅವತಾರ ಪುರುಷ ಚಿತ್ರಗಳಿಗೆ ಹೆಸರಾಗಿರುವ ಸಂಕಲನಕಾರ ಮನು ಶೇಡ್ಗಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಸತೀಶ್ ನೀನಾಸಂ ಮತ್ತು ಸಪ್ತಮಿ ಗೌಡ ನಟಿಸಿರುವ 'ದಿ ರೈಸ್ ಆಫ್ ಅಶೋಕ' ಚಿತ್ರವು ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೇ ಚಿತ್ರತಂಡ ಟ್ರೈಲರ್ ರಿಲೀಸ್ ಮಾಡಿದೆ. 'ದಿ ರೈಸ್ ಆಫ್ ಅಶೋಕ' ಚಿತ್ರವು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ತೆರೆಕಾಣಲಿದೆ.
ಕ್ಷೇತ್ರಪತಿ ಮತ್ತು ಅವತಾರ ಪುರುಷ ಚಿತ್ರಗಳಿಗೆ ಹೆಸರಾಗಿರುವ ಸಂಕಲನಕಾರ ಮನು ಶೇಡ್ಗಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವೃದ್ಧಿ ಕ್ರಿಯೇಷನ್ಸ್ ಮತ್ತು ಸತೀಶ್ ಪಿಕ್ಚರ್ ಹೌಸ್ ನಿರ್ಮಿಸಿರುವ ಈ ಚಿತ್ರವು ಬಿ ಸುರೇಶ್, ಅಚ್ಯುತ್ ಕುಮಾರ್ ಮತ್ತು ಸಂಪತ್ ಮೈತ್ರೇಯ ಸೇರಿದಂತೆ ಇತರ ತಾರಾಬಳಗವನ್ನು ಹೊಂದಿದೆ.
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರೇಕ್ಷಕರ ವಿರುದ್ಧ ಕಿಡಿಕಾರಿರುವ ಘಟನೆ ನಡೆದಿದೆ. 'ಸಿನಿಮಾಗಳು ಬರುತ್ತಲೇ ಇವೆ. ಆದರೆ, ಒಳ್ಳೆ ಸಿನಿಮಾಗಳನ್ನು ನೀವು ಗೆಲಿಸ್ತಿಲ್ಲ. ಬದಲಿಗೆ ಎಲ್ಲರೂ ಮೊಬೈಲ್‌ನಲ್ಲಿಯೇ ಕಳೆದು ಹೋಗಿದ್ದೀರ. ಅದನ್ನ ಬಿಟ್ಟು ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ನೋಡಿ. ಒಬ್ಬ ಪ್ರೇಕ್ಷಕನಿಗೆ ₹100 ಕೊಟ್ಟು ಸಿನಿಮಾ ನೋಡೋಕೆ ಆಗಲ್ವಾ. ಸಿನಿಮಾಗೋಸ್ಕರ ನೂರು ರೂಪಾಯಿ ಖರ್ಚು ಮಾಡೋಕೆ ಆಗುವುದಿಲ್ಲವೇ?. 100 ರೂಪಾಯಿ ಕೊಟ್ಟು ಸಿನಿಮಾ ನೋಡಿ, ಅದರಿಂದ ನಿಮ್ಮ ಗಂಟೇನೂ ಹೋಗಲ್ಲ ಎಂದು ಕಟುವಾಗಿ ಮಾತನಾಡಿದ್ದಾರೆ.
ಸಿನಿಮಾನ ಗೆಲ್ಲಿಸಿ, ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ನೀವು ಸಿನಿಮಾ ನೋಡಿದ ಬಳಿಕ ನಿಮಗೆ ಇಷ್ಟವಾಗಿಲ್ಲ ಅಂದರೂ ಏನೂ ಆಗುವುದಿಲ್ಲ. ಆದರೆ, ಚಿತ್ರಮಂದಿರಗಳಿಗೆ ಬಂದು ಮೊದಲು ಚಿತ್ರವನ್ನು ನೋಡಿ. ಈಗಂತೂ ಲೈಕ್ಸ್ ಮತ್ತು ಕಾಮೆಂಟ್ಸ್ ಎನ್ನುತ್ತಲೇ ಇರುತ್ತಾರೆ. ಅದನ್ನ ಬಿಟ್ಟು ಹೊರಗೆ ಬನ್ನಿ, ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಎಂದು ನಟ ಒತ್ತಾಯಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಟ ಸತೀಶ್ ನೀನಾಸಂ, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ಸೇರಿ ಹಲವರು ಇದ್ದರು. ಚಿತ್ರವು ಇದೇ ತಿಂಗಳು 27 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 'ದಿ ರೈಸ್ ಆಫ್ ಅಶೋಕ' ಚಿತ್ರದ ತಾಂತ್ರಿಕ ತಂಡದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ರವಿ ವರ್ಮಾ ಮತ್ತು ವಿಕ್ರಮ್ ಮೋರ್ ಅವರ ಸಾಹಸ ಮತ್ತು ಲವಿತ್ ಅವರ ಛಾಯಾಗ್ರಹಣವನ್ನು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


