ಸಿನಿಮಾ ಸುದ್ದಿ

'ಸಿನಿಮಾ ಬಗ್ಗೆ ಆಸಕ್ತಿಯಿಂದ ಕಲಿಯುವ ವಿದ್ಯಾರ್ಥಿಗಳು, ಸಮಗ್ರ ನೀತಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಗತ್ಯ': KFCC ಅಧ್ಯಕ್ಷೆ ಡಾ. ಜಯಮಾಲಾ

ಕನ್ನಡ ಚಿತ್ರರಂಗಕ್ಕೆ ಬೇಕಿರುವುದು ಸಿನಿಮಾಗಳ ಬಗ್ಗೆ ಆಸಕ್ತಿಯಿಂದ ಕಲಿಯುವ ವಿದ್ಯಾರ್ಥಿಗಳು, ಉತ್ತಮ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುವವರು ಬರಬೇಕು, ಸಿನಿಮಾ ಪ್ರೀತಿಸುವವರು ಬರಬೇಕು, ದುಡ್ಡು ಮಾಡುವ ಜೊತೆಗೆ ಪ್ರೀತಿ ಇರುವವರು ಇನ್ನೂ ಹೆಚ್ಚಾಗಬೇಕು ಎಂದರು.

'ಸಿನಿಮಾ ಬಗ್ಗೆ ಆಸಕ್ತಿಯಿಂದ ಕಲಿಯುವ ವಿದ್ಯಾರ್ಥಿಗಳು, ಸಮಗ್ರ ನೀತಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಗತ್ಯ': KFCC ಅಧ್ಯಕ್ಷೆ ಡಾ. ಜಯಮಾಲಾ
ಡಾ ಜಯಮಾಲಾ
Published On :

ಕನ್ನಡ ಚಿತ್ರರಂಗ ಅಸ್ಥಿತ್ವಕ್ಕೆ ಬಂದು 100 ವರ್ಷಗಳಾಗುತ್ತಾ ಬಂತು. ಇನ್ನು 6 ವರ್ಷಗಳಾದರೆ ನಾವು ಶತಮಾನೋತ್ಸವ ಆಚರಿಸಲಿದ್ದೇವೆ, ಆದರೆ ಕನ್ನಡ ಚಿತ್ರರಂಗಕ್ಕೆ ಸಮಗ್ರವಾದ ನೀತಿ ಇನ್ನೂ ಬಂದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ(The New Indian Express) ಬೆಂಗಳೂರು ಸಿಬ್ಬಂದಿ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರಗಳ ನಿಜವಾದ ಪ್ರೇಕ್ಷಕರನ್ನು ನಾವು ಹುಟ್ಟುಹಾಕಬೇಕು, ನಮ್ಮಲ್ಲಿ ಚಿತ್ರರಂಗ, ಸಿನಿಮಾಗಳ ಬಗ್ಗೆ ಅಧ್ಯಯನ ಮಾಡುವ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳಬೇಕು, ವಿದ್ಯಾರ್ಥಿಗಳು ಸಿನಿಮಾ ಬಗ್ಗೆ ಅಧ್ಯಯನ ಮಾಡಬೇಕು, ಸಿನಿಮಾ ಅಂದರೆ ಏನೆಂದು ಗೊತ್ತಾಗಬೇಕು, ಮಕ್ಕಳು ಕಲಿತಾಗ ಅವರ ಕುಟುಂಬದವರು ಕನ್ನಡ ಚಿತ್ರಗಳನ್ನು ವೀಕ್ಷಿಸುತ್ತಾರೆ. ಯಾವುದೇ ವಿದ್ಯೆಯನ್ನು ಶಾಸ್ತ್ರೀಯವಾಗಿ ಕಲಿತಾಗಲೇ ಅದರ ಮೌಲ್ಯ ಹೆಚ್ಚಾಗುವುದು ಎಂದರು.

ಬೇರೆ ದೇಶಗಳಲ್ಲಿ ಸಿನಿಮಾರಂಗದ ಬಗ್ಗೆ ಕಲಿಯುವ ಸಂಸ್ಥೆಗಳು ಸಾಕಷ್ಟಿವೆ. ನಟನೆ, ನಿರ್ದೇಶನ, ಸಂಗೀತ ಹೀಗೆ ಬೇರೆ ಬೇರೆ ಕಲಾ ವಿಭಾಗಗಳಲ್ಲಿ ಕಲಿಯುವ ಅವಕಾಶಗಳು ಇರುತ್ತವೆ, ಇವತ್ತು ಹೊಸ ತಂತ್ರಜ್ಞಾನಗಳು ಬಂದಿವೆಯಲ್ಲ. ಎನಿಮೇಶನ್, ಗ್ರಾಫಿಕ್ಸ್ ಇವುಗಳನ್ನೆಲ್ಲಾ ನಮ್ಮ ಚಿತ್ರಗಳಲ್ಲಿ ಅಳವಡಿಸಿಕೊಳ್ಳಲು ಅವುಗಳನ್ನು ಕಲಿಯಲು ಸಂಸ್ಥೆಗಳಿರಬೇಕು. ನಮ್ಮದೇ ಆದ ಸಂಸ್ಥೆಗಳು ಇದ್ದರೆ ನಮ್ಮದೇ ಸುತ್ತಮುತ್ತಲ, ಸ್ಥಳೀಯ ಕಥೆಗಳು ಹುಟ್ಟಿಕೊಂಡರೆ ಒಳ್ಳೆಯದಲ್ಲವೇ ಎಂದರು.

ಕನ್ನಡ ಚಿತ್ರರಂಗಕ್ಕೆ ಬೇಕಿರುವುದು ಸಿನಿಮಾಗಳ ಬಗ್ಗೆ ಆಸಕ್ತಿಯಿಂದ ಕಲಿಯುವ ವಿದ್ಯಾರ್ಥಿಗಳು, ಉತ್ತಮ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುವವರು ಬರಬೇಕು, ಸಿನಿಮಾ ಪ್ರೀತಿಸುವವರು ಬರಬೇಕು, ದುಡ್ಡು ಮಾಡುವ ಜೊತೆಗೆ ಪ್ರೀತಿ ಇರುವವರು ಇನ್ನೂ ಹೆಚ್ಚಾಗಬೇಕು. ಮೂಲಭೂತ ಸೌಕರ್ಯ ಹೆಚ್ಚಾಗಬೇಕು , ಇವತ್ತು ಅವಕಾಶಗಳು ಹೆಚ್ಚಾಗಿವೆ, ಅವುಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಖಂಡಿತಾ ಕನ್ನಡ ಚಿತ್ರರಂಗ ಪ್ರಪಂಚದಾದ್ಯಂತ ಪಸರಿಸುತ್ತದೆ ಎಂದರು.

ಸರ್ಕಾರಕ್ಕೆ ಮನವಿ

ಚಲನಚಿತ್ರ ಕಲಿಕೆಗೆ ಸಂಸ್ಥೆಗಳನ್ನು ಆರಂಭಿಸಲು ಅವಕಾಶ ಕೊಡಿ ಎಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳನ್ನು ನಾವು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಕೇಳಿದ್ದೇವೆ.ಚಿತ್ರನಗರಿಯನ್ನು ಮಾಡಿದರೆ ಸಾಂಸ್ಕೃತಿಕವಾಗಿ ನಾವು ಬೆಳೆಯುತ್ತೇವೆ.

ಇಂದು ಸಿನಿಮಾ ತಯಾರಿಯ ಪರಿಕಲ್ಪನೆ ಬದಲಾಗಿದೆ, ಒಂದು ಗ್ರೀನ್ ಮ್ಯಾಟ್ ಒಳಗೆ ಸಿನಿಮಾ ತೆಗೆಯಲು ಆಗುತ್ತದೆ ಎಂದಾದರೆ ಅದನ್ನು ಸಾಧ್ಯತೆ ಮಾಡಿಕೊಳ್ಳಲು ನಮ್ಮಲ್ಲಿ ವ್ಯವಸ್ಥೆಯಿರಬೇಕು. ಹೊರಗಡೆ ಹೋಗದೆ ನಮ್ಮ ರಾಜ್ಯದಲ್ಲಿಯೇ ಚಿತ್ರ ತಯಾರಾಗಬೇಕೆಂದರೆ ಅದಕ್ಕೆ ತಕ್ಕಂತೆ ಮೂಲಸೌಕರ್ಯ ನೀಡಬೇಕಾಗುತ್ತದೆ. ಬೇರೆ ಚಿತ್ರರಂಗದವರು ನಮ್ಮಲ್ಲಿಗೆ ಬಂದು ಚಿತ್ರ ತಯಾರಿಸುವಂತಾಗಬೇಕು, ಅಂತಹ ವ್ಯವಸ್ಥೆಯನ್ನು ನಾವು ಸೃಷ್ಟಿಸಬೇಕು ಎಂದರು.

ಟಿಕೆಟ್ ಬೆಲೆ ದುಬಾರಿ

ದಕ್ಷಿಣ ಭಾರತದ ಬೇರೆ ರಾಜ್ಯಗಳಿಗೆ ಹೋದರೆ ಸಿನಿಮಾ ಟಿಕೆಟ್ ದರ 150, 200 ರೂಪಾಯಿ ಇದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಡ ಕಡಿಮೆ ಇದೆ, ನಾವು ಬೇರೆ ಭಾಷೆಗಳ ಚಿತ್ರಗಳ ಜೊತೆ ಹೋರಾಟ ಮಾಡಬೇಕು, ಅದರ ಜೊತೆಗೆ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದುಬಾರಿ ಬೇರೆ. ಅಲ್ಲಿ ಬೇರೆ ಭಾಷೆಗಳ ಚಿತ್ರಗಳ ಹಾವಳಿ ಇಲ್ಲ, ಆದರೆ ನಾವು ಬೇರೆ ಭಾಷೆಗಳ ಚಿತ್ರಗಳ ಜೊತೆ ಕೂಡ ಹೋರಾಟ ಮಾಡಬೇಕಾದುದು ಬೇಸರದ ಸಂಗತಿ ಎಂದರು.

ಕನ್ನಡ ಚಿತ್ರರಂಗವನ್ನು ಸ್ವತಂತ್ರವಾಗಿ ಬೆಳೆಸಿಲ್ಲ, ಕನ್ನಡ ಚಿತ್ರರಂಗ ಬೆಳೆಯಲು ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಸ್ವತಂತ್ರವಾಗಿ ಬೆಳೆಯಲು ಅವಕಾಶ ಕೊಡಬೇಕು. ಈ ಪ್ರಪಂಚದ ಯಾವ ಸ್ಪರ್ಧೆಯನ್ನು ಎದುರಿಸಲೂ ಕೂಡ ಸಿದ್ಧವಾಗಿದ್ದೇನೆ ಎಂದು ತೋರಿಸುವಂತೆ ನಾವು ಬೆಳೆಯಲು ಬಿಡಬೇಕು ಎಂದು ಆಶಿಸಿದರು.

ಸಿನಿಮಾ ಕಥೆಗಳು, ಟೈಟಲ್ ವಿವಾದ

ಚಿತ್ರಗಳ ಕಥೆಗಳ ಕಾಪಿರೈಟ್ ಆಕ್ಟ್ ಕರ್ನಾಟಕದಲ್ಲಿ ಇಲ್ಲ. ಕಥೆಗಳನ್ನು ನಿರ್ದೇಶಕರೇ ರಿಜಿಸ್ಟರ್ ಮಾಡಿಕೊಂಡು, ಇಮೇಲ್ ಮಾಡಿಕೊಂಡು, ಪುಸ್ತಕ ರೂಪದಲ್ಲಿ ತಂದರೆ ಬೇರೆಯವರು ಕದಿಯಲು ಸಾಧ್ಯವಿಲ್ಲ ಎಂದು ಹೇಳುತ್ತೇವೆ. ಕಥೆಗಾರರು ಕಥೆ ಹೇಳುವಾಗ ರೆಕಾರ್ಡ್ ಮಾಡಿಟ್ಟುಕೊಂಡರೆ ದಾಖಲೆಯಾಗಬಹುದು.

ಸಿನಿಮಾ ಟೈಟಲ್ ವಿಚಾರದಲ್ಲಿ, ಹಿಂದೆ ಕನ್ನಡದ್ದೇ ಟೈಟಲ್ ಇಡಬೇಕೆಂದು ಹೇಳುತ್ತಿದ್ದೆವು. ಪ್ಯಾನ್ ಇಂಡಿಯಾ ಸಿನಿಮಾ ಎಂದು ಬಂದಾಗ ಕನ್ನಡದ್ದೇ ಟೈಟಲ್ ಇಡಲು ಸಾಧ್ಯವಾಗುವುದಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.