ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳ ಜಾಹೀರಾತು ಪ್ರಚಾರ ಮಾಡಬೇಡಿ: ಸಿನಿಮಾ ತಾರೆಯರಿಗೆ ರಾಷ್ಟ್ರಪತಿ ಮುರ್ಮು ಮನವಿ; Video
ಗುಜರಾತ್‌ನಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅತ್ಯಂತ ಜನಪ್ರಿಯರಾಗಿರುವ ಚಿತ್ರ ಕಲಾವಿದರು ದೇಶದ ಜನರ ಮೇಲೆ, ವಿಶೇಷವಾಗಿ ಯುವಜನರ ಮೇಲೆ ಅಪಾರ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಜನಪ್ರಿಯ ಚಲನಚಿತ್ರ ತಾರೆಯರು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ ಉತ್ಪನ್ನಗಳನ್ನು ಪ್ರಚಾರ ಮಾಡಬಾರದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮನವಿ ಮಾಡಿದ್ದಾರೆ. ದೇಶದ ಯುವಜನರ ಮೇಲೆ ಸೆಲೆಬ್ರಿಟಿಗಳು ಬೀರುವ ಪ್ರಭಾವವನ್ನು ಒತ್ತಿ ಹೇಳಿದ ಅವರು, ತಮ್ಮ ಮಾತು ಮತ್ತು ಕೃತಿಗಳ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುವ ಸಾಮರ್ಥ್ಯ ಚಿತ್ರನಟ-ನಟಿಯರಿಗಿದೆ ಎಂದು ಹೇಳಿದರು.
ಗುಜರಾತ್‌ನಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅತ್ಯಂತ ಜನಪ್ರಿಯರಾಗಿರುವ ಚಿತ್ರ ಕಲಾವಿದರು ದೇಶದ ಜನರ ಮೇಲೆ, ವಿಶೇಷವಾಗಿ ಯುವಜನರ ಮೇಲೆ ಅಪಾರ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ.
ಯಶಸ್ವಿ ಕಲಾವಿದರು ಶಿಸ್ತುಬದ್ಧ ಜೀವನಶೈಲಿಯ ಪ್ರಯೋಜನಗಳ ಕುರಿತು ಮಾತನಾಡಿದಾಗ, ಲಕ್ಷಾಂತರ ಮಕ್ಕಳು ಮತ್ತು ಯುವಜನರು ಅವರನ್ನು ಅನುಸರಿಸುತ್ತಾರೆ. ಜನರ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಉತ್ಪನ್ನಗಳನ್ನು ಜನಪ್ರಿಯ ಕಲಾವಿದರು ಪ್ರಚಾರ ಮಾಡಬಾರದು. ಕತ್ತಲೆಯನ್ನು ಹರಡುವವನಲ್ಲ, ಬೆಳಕನ್ನು ಪಸರಿಸುವವನೇ ನಿಜವಾದ ತಾರೆ ಎಂದು ಸಿನಿಮಾ ನಟ-ನಟಿಯರಿಗೆ ಮನವಿ ಮಾಡಿಕೊಂಡರು.
ತೀರ್ಪುಗಾರರ ಸಮಿತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಚಿತ್ರಗಳನ್ನು ಆಯ್ಕೆ ಮಾಡುವ ತೀರ್ಪುಗಾರರ ಸಮಿತಿಗಳಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ರಾಷ್ಟ್ರಪತಿ ಮುರ್ಮು ಕರೆ ನೀಡಿದರು.
ಪ್ರತಿ ಪ್ರಾದೇಶಿಕ ತೀರ್ಪುಗಾರರ ಸಮಿತಿಯಲ್ಲೂ ಮಹಿಳೆಯರ ಭಾಗವಹಿಸುವಿಕೆ ಇರುವುದನ್ನು ನಾನು ನೋಡಲು ಬಯಸುತ್ತೇನೆ. ಸಮಾರಂಭದಲ್ಲಿ ಹಲವು ಮಹಿಳೆಯರು ಪ್ರಶಸ್ತಿಗಳನ್ನು ಸ್ವೀಕರಿಸಿರುವುದನ್ನು ಅವರು ಉಲ್ಲೇಖಿಸಿದರು.
ಯಾವುದೇ ಕ್ಷೇತ್ರದಲ್ಲಿ ಮಹಿಳೆಯರ ದೃಷ್ಟಿಕೋನಗಳನ್ನು ಒಳಗೊಳ್ಳುವುದರಿಂದ ಸಮಗ್ರ ಮಾನವೀಯ ದೃಷ್ಟಿಕೋನವನ್ನು ರೂಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ತೀರ್ಪುಗಾರರ ಸಮಿತಿಗಳಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು ಎಂದು ಹೇಳಿದರು.
ಈ ನಡುವೆ, ಬಾಲಿವುಡ್‌ನ ಪ್ರಮುಖ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರು ಪಾನ್ ಮಸಾಲಾ ಜಾಹೀರಾತಿನೊಂದಿಗಿನ ತಮ್ಮ ಸಹಭಾಗಿತ್ವದ ವಿಚಾರದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಈ ಸಂಬಂಧ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತ ತುಕಾರಾಂ ಮುಂಡೆ ನಟರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ಇಂತಹ ಉತ್ಪನ್ನಗಳ ಜಾಹೀರಾತಿನ ವಿಚಾರದಲ್ಲಿ ಶಾರುಖ್, ಅಜಯ್ ಮತ್ತು ಟೈಗರ್ ಅವರನ್ನು ಸಾರ್ವಜನಿಕರು ತಾರೆಯರೆಂದು ಪರಿಗಣಿಸಿದರೂ, ಎಫ್‌ಡಿಎ ದೃಷ್ಟಿಯಲ್ಲಿ ಅವರು ಕೇವಲ ಜಾಹೀರಾತುದಾರರು ಎಂದು ಮುಂಡೆ ಹೇಳಿದ್ದಾರೆ.
ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾವಿದರ ಸಾಮಾಜಿಕ ಭದ್ರತೆ
ಚಿತ್ರರಂಗದ ಆರ್ಥಿಕ ವ್ಯವಸ್ಥೆಗೆ ಕೊಡುಗೆ ನೀಡುತ್ತಾ ತಮ್ಮದೇ ಆದ ಸ್ಥಾನಮಾನ ಪಡೆಯಲು ಪ್ರಯತ್ನಿಸುತ್ತಿರುವ ಕಾರ್ಮಿಕರು, ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾವಿದರು, ಸಹಾಯಕರು ಮತ್ತು ಇತರರಿಗೆ ಗೌರವ ಹಾಗೂ ಸಾಮಾಜಿಕ ಭದ್ರತೆ ದೊರೆಯುವಂತೆ ಚಿತ್ರರಂಗ ಖಚಿತಪಡಿಸಿಕೊಳ್ಳಬೇಕು ಎಂದು ರಾಷ್ಟ್ರಪತಿ ಮುರ್ಮು ಕರೆ ನೀಡಿದರು.
ಈ ಆರ್ಥಿಕ ವ್ಯವಸ್ಥೆಗೆ ಕೊಡುಗೆ ನೀಡುತ್ತಿರುವ ಕಾರ್ಮಿಕರು, ಸಣ್ಣ ಕಲಾವಿದರು, ಸಹಾಯಕರು ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಹೋರಾಡುತ್ತಿರುವವರಿಗೆ ಗೌರವ ಮತ್ತು ಸಾಮಾಜಿಕ ಭದ್ರತೆ ಎರಡೂ ದೊರೆಯುವಂತೆ ದಯವಿಟ್ಟು ಖಚಿತಪಡಿಸಿಕೊಳ್ಳಿ ಎಂದು ರಾಷ್ಟ್ರಪತಿ ಮುರ್ಮು ಹೇಳಿದರು.
ಹಿಂದಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರತಂಡದ ಪ್ರತಿಯೊಬ್ಬ ಸದಸ್ಯರ ಬಗ್ಗೆಯೂ ಗೌರವ ಮತ್ತು ಸಂವೇದನಾಶೀಲತೆಯನ್ನು ಚಿತ್ರರಂಗ ತನ್ನ ಕಾರ್ಯಸಂಸ್ಕೃತಿಯ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ತಾವು ಮನವಿ ಮಾಡಿದ್ದನ್ನು ರಾಷ್ಟ್ರಪತಿಗಳು ಸ್ಮರಿಸಿದರು.
ಈ ನಡುವೆ, ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆಗೆ ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಜೀವನಚರಿತ್ರಾಧಾರಿತ ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರಕ್ಕಾಗಿ ರಣದೀಪ್ ಹೂಡಾ ಅವರಿಗೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶನದ ಪ್ರಶಸ್ತಿ ಲಭಿಸಿದೆ.
ಆರ್ಟಿಕಲ್ 370 ಚಿತ್ರದಲ್ಲಿನ ಅಭಿನಯಕ್ಕಾಗಿ ಯಾಮಿ ಗೌತಮ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಚಂದು ಚಾಂಪಿಯನ್ ಚಿತ್ರದಲ್ಲಿನ ಅಭಿನಯಕ್ಕಾಗಿ ಕಾರ್ತಿಕ್ ಆರ್ಯನ್ ಅವರಿಗೆ ಪ್ರಶಸ್ತಿ ಲಭಿಸಿದೆ.
ಬ್ರಹ್ಮಯುಗಂ ಚಿತ್ರದಲ್ಲಿನ ಅಭಿನಯಕ್ಕಾಗಿ ಮಮ್ಮೂಟ್ಟಿ ತಮ್ಮ ನಾಲ್ಕನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



