ಕೌಶಲ್ಯದಲ್ಲಿ ಸ್ವಾವಲಂಬನೆ ಕರ್ನಾಟಕ ಪರ್ವದ ಆಶಯ; ಅಲ್ಪ ಸಂಖ್ಯಾತರು SIR ಬಗ್ಗೆ ಎಚ್ಚರದಿಂದಿರಿ: ಡಿ.ಕೆ ಶಿವಕುಮಾರ್
ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲಿ, ಪೈಗಂಬರ್ ಅವರು ದಿವ್ಯ ವಾಣಿ ಕೇಳಿದ ಗಳಿಗೆಯಲ್ಲಿ, ಭೀಮಾಬಾಯಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ಗಳಿಗೆಯಲ್ಲಿ ಕಾರ್ಯಕ್ರಮ ಆರಂಭವಾಗಿದೆ.

ಬೆಂಗಳೂರು: ವೈವಿಧ್ಯತೆಯಲ್ಲಿ ಏಕತೆ, ಕೌಶಲ್ಯದಲ್ಲಿ ಸ್ವಾವಲಂಬನೆ ಕರ್ನಾಟಕ ಪರ್ವದ ಆಶಯ. ಇದು ನಮ್ಮ ಸರ್ಕಾರದ ಪ್ರತಿಬಿಂಬ, ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ, ಕುಶಲಕರ್ಮಿಗಳ ಬದುಕು ಬೆಳಗಲಿ ಎಂದು ಈ ಕಾರ್ಯಕ್ರಮ ಮಾಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಕರ್ನಾಟಕ ಪರ್ವ 2026 ಕಾರ್ಯಕ್ರಮವನ್ನು ಸಿಎಂ ಡಿ ಕೆ ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು. ನಾವು ಈ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದೆ, ನಮ್ಮ ಮಿತ್ರ ಯು ಟಿ ಖಾದರ್ ಅವರು ಉತ್ತಮ ಆರಂಭ ನೀಡಿದರು. ಎಲ್ಲಾ ಧರ್ಮದ ಪ್ರಮುಖರನ್ನು ಈ ಕಾರ್ಯಕ್ರಮದಲ್ಲಿ ನೋಡುತ್ತಿದ್ದೇವೆ.
ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲಿ, ಪೈಗಂಬರ್ ಅವರು ದಿವ್ಯ ವಾಣಿ ಕೇಳಿದ ಗಳಿಗೆಯಲ್ಲಿ, ಭೀಮಾಬಾಯಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಜನ್ಮಕೊಟ್ಟ ಗಳಿಗೆಯಲ್ಲಿ, ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ನೇತೃತ್ವ ವಹಿಸಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಗಳಿಗೆಯಲ್ಲಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಖಾದರ್ ಅವರು ಆರಂಭಿಸಿದ್ದಾರೆ ಎಂದು ಬಣ್ಣಿಸಿದರು.
ಇಂದು 180ಕ್ಕೂ ಹೆಚ್ಚು ಮಳಿಗೆಗಳನ್ನು ಆರಂಭಿಸಲಾಗಿದೆ. ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಕರ್ನಾಟಕ ಸಾಂಸ್ಕೃತಿಕ ವೈವಿದ್ಯತೆ ವೇದಿಕೆಯಾಗಿದೆ. ಕುಶಲಕರ್ಮಿಗಳ ಕೈಚಳಕ ಮಾರುಕಟ್ಟೆ, ಉದ್ಯಮಗಳಿಗೆ ಮಾರುಕಟ್ಟೆ ಅವಕಾಶ ಕಲ್ಪಿಸುತ್ತಿದ್ದೇವೆ. ಪಾರಂಪರಿಕ ಕಲೆ ಉಳಿಸಲು ಪ್ರೋತ್ಸಾಹ ನೀಡಲು ನಾವು ಸೇರಿದ್ದೇವೆ.
ನಮ್ಮ ರಾಜ್ಯದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಆಹಾರ ಪದ್ಧತಿ ಇದೆ. ಈ ವೈವಿದ್ಯತೆ ನಮ್ಮ ದೇಶದ ಶಕ್ತಿ. ಈ ದೇಶದ ಆಸ್ತಿ ನಮ್ಮ ಸಂಸ್ಕೃತಿ. ಇದನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮ್ಮ ಸರ್ಕಾರ, ಜನತೆಯ ಸರ್ಕಾರ” ಎಂದು ತಿಳಿಸಿದರು.
“ಅಲ್ಪಸಂಖ್ಯಾತರ ಸ್ವಾವಲಂಬಿಕರಣ, ಕರ್ನಾಟಕದ ಸಮಗ್ರ ಅಭಿವೃದ್ಧಿಯ ಭಾಗ. ಅಲ್ಪಸಂಖ್ಯಾತರ ಎಲ್ಲಾ ಸಮುದಾಯಗಳು ಒಟ್ಟಾಗಿ ಸೇರಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಇತಿಹಾಸ. ಇದೇ ಉದೇಶದ ಮೇಲೆ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ.
ನಾಡಿನ ಎಲ್ಲಾ ಜನರ ಬದುಕಿಗೆ ಕೊಟ್ಟ ದೊಡ್ಡ ಅವಕಾಶ ಕರ್ನಾಟಕ ಪರ್ವ. ನಾನು ಅಧಿಕಾರ ವಹಿಸಿಕೊಂಡು 115 ದಿನಗಳಾಗಿವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸಲಾಗಿದ್ದು, ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ” ಎಂದರು.
ಇಂದು ಅಲ್ಪಸಂಖ್ಯಾತ ಸಮುದಾಯದ ಮೂವರನ್ನು ಸಚಿವರನ್ನಾಗಿ, ಒಬ್ಬರನ್ನು ಪರಿಷತ್ ಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. 25 ಕ್ಕೂ ಹೆಚ್ಚು ಮಂದಿಗೆ ವಿವಿಧ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದೆ. ಕಲಬುರ್ಗಿ ದರ್ಗಾದ ಪ್ರಮುಖ ನಾಯಕರಿಗೆ ವಕ್ಫ್ ಮಂಡಳಿ ಜವಾಬ್ದಾರಿ ನೀಡಲಾಗಿದೆ. ಆಮೂಲಕ ರಾಜ್ಯದ ಬೇರೆ ಭಾಗದ ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
ಅಲ್ಪಸಂಖ್ಯಾತರು ಎಸ್ಐಆರ್ ಬಗ್ಗೆ ಎಚ್ಚರದಿಂದಿರಿ
“ಈ ಬಾರಿಯ ಮೈಸೂರು ದಸರಾ ಹಬ್ಬಕ್ಕೆ ಬೈಲುಕುಪ್ಪೆಯ ಬೌದ್ಧಧರ್ಮದವರಿಗೆ ಹಾಗೂ ರಾಜ್ಯದ ಎಲ್ಲಾ ಸಮುದಾಯದವರಿಗೆ ಆಹ್ವಾನ ನೀಡಿದ್ದೇನೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರಿಗೆ ಅದರಲ್ಲೂ ಯುವಕರ ವಿದ್ಯಾಭ್ಯಾಸಕ್ಕೆ ಹಾಗೂ ಕೌಶಲ್ಯಕ್ಕೆ ಉತ್ತೇಜನ ನೀಡಲು ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ನೀವು ಬೇರೆ ಕಡೆ ಉದ್ಯೋಗ ಹುಡುವುದರ ಜತೆಗೆ ನೀವೇ ಹತ್ತಾರು ಜನರಿಗೆ ಉದ್ಯೋಗ ಕಲ್ಪಿಸುವಂತಹ ಕಾರ್ಯಕ್ರಮ ರೂಪಿಸಿದ್ದೇವೆ" ಎಂದರು.
"ಯುವ ಜನಾಂಗ ಜಾಗೃತರಾಗಿರಬೇಕು. ಎಸ್ಐಆರ್ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಮತಪಟ್ಟಿಯಿಂದ ಕೈಬಿಡಲು ಸಂಚು ನಡೆಯುತ್ತಿದ್ದು, ನಾವು ಇದರ ವಿರುದ್ಧ ಹೋರಾಟ ಮಾಡುತ್ತಿದಿದ್ದೇವೆ. ನೀವು ನಿಮ್ಮ ಮತದಾನದ ಹಕ್ಕು ರಕ್ಷಿಸಿಕೊಳ್ಳಿ. ಮತದಾನದ ಹಕ್ಕು ಬದುಕಿನ ಹಕ್ಕಾಗಿದೆ. ಇದನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡುವೆ” ಎಂದು ಕರೆ ನೀಡಿದರು.
“ಮಹಿಳೆಯರು ಸ್ವಾವಲಂಬಿಗಳಾಗಿ, ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಸಬೇಕು. ಅದಕ್ಕಾಗಿ ನಿಮ್ಮ ಬದುಕಿನಲ್ಲಿ ಶಕ್ತಿ ತುಂಬಲು ಬದ್ಧವಾಗಿದೆ. ಮಹಿಳೆಯರ ಬದುಕಿನಲ್ಲಿ ಶಕ್ತಿ ನೀಡಲು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಸಮಾಜದ ಎಲ್ಲಾ ವರ್ಗದ ಜನರಿಗೆ ಆರ್ಥಿಕ ಶಕ್ತಿ ತುಂಬಲು ನಮ್ಮ ಸರ್ಕಾರ ಪ್ರತಿ ವರ್ಷ 1.20 ಲಕ್ಷ ಕೋಟಿ ಹಣ ವಿನಿಯೋಗಿಸುತ್ತಿದೆ” ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




