ಶಿಕ್ಷಕರಿಗೆ SIR ಡ್ಯೂಟಿಯಿಂದ ಪರೀಕ್ಷಾ ಫಲಿತಾಂಶಗಳ ಮೇಲೆ ಪರಿಣಾಮ: ಮಧು ಬಂಗಾರಪ್ಪ ಆತಂಕ
SIR ಕಾರ್ಯದಿಂದ ಶಿಕ್ಷಕರು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು. ಶಿಕ್ಷಕರನ್ನು ಈ ಕಾರ್ಯದಿಂದ ವಿನಾಯಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ SIR ಕಾರ್ಯಕ್ಕೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರನ್ನು ಬೋಧನೆಯೇತರ ಕಾರ್ಯಗಳಿಗೆ ನಿಯೋಜಿಸುವ ಪದ್ಧತಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಪ್ರತ್ಯೇಕ ಕಾನೂನು ರೂಪಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಕರಡು ಸಿದ್ಧಪಡಿಸಿ, ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.
SIR ಕಾರ್ಯದಿಂದ ಶಿಕ್ಷಕರು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು. ಶಿಕ್ಷಕರನ್ನು ಈ ಕಾರ್ಯದಿಂದ ವಿನಾಯಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರು ಶಾಲೆಯಿಂದ ಹೊರಗಿರುವುದರಿಂದ ಕೆಲವೆಡೆ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ, ಮಕ್ಕಳಿಗೆ ಬೋಧನಾ ಸಮಯ ಕಡಿಮೆಯಾಗುತ್ತಿದೆ ಎಂಬ ದೂರುಗಳು ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಬರುತ್ತಿವೆ ಎಂದು ತಿಳಿಸಿದರು.
ಚುನಾವಣಾ ಸಂಬಂಧಿತ ಕೆಲಸಗಳು ಹಾಗೂ ಆಡಳಿತಾತ್ಮಕ ಮಾಹಿತಿ ಸಂಗ್ರಹಣೆಯಂತಹ ಕಾರ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವ ಬದಲು, ಇತರೆ ಸರ್ಕಾರಿ ಸಿಬ್ಬಂದಿ, ನಿವೃತ್ತ ಸರ್ಕಾರಿ ನೌಕರರು ಹಾಗೂ ತರಬೇತಿ ಪಡೆದ ಸ್ವಯಂಸೇವಕರನ್ನು ಒಳಗೊಂಡ ಪ್ರತ್ಯೇಕ ವ್ಯವಸ್ಥೆ ರೂಪಿಸುವ ಉದ್ದೇಶ ಸರ್ಕಾರಕ್ಕಿದೆ. ಕರಡು ಕಾನೂನಿನಲ್ಲೂ ಇಂತಹ ಪರ್ಯಾಯ ಸಿಬ್ಬಂದಿಯ ಬಳಕೆಗೆ ಆದ್ಯತೆ ನೀಡುವ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.
ಶೈಕ್ಷಣಿಕ ಫಲಿತಾಂಶದ ಮೇಲೆ ಪರಿಣಾಮ
ಮಧ್ಯಂತರ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಿಕ್ಷಕರ ಕೊರತೆ ಮುಂದುವರಿದರೆ ವಿದ್ಯಾರ್ಥಿಗಳ ಸಿದ್ಧತೆ ಹಾಗೂ ಶೈಕ್ಷಣಿಕ ಫಲಿತಾಂಶದ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಸಚಿವರು ಹೇಳಿದ್ದಾರೆ. ಶಿಕ್ಷಕರನ್ನು ಬೋಧನೆಯೇತರ ಕಾರ್ಯಗಳಿಗೆ ನಿಯೋಜಿಸುವ ಅಗತ್ಯ ಬಂದರೂ, ಶಾಲೆಯಲ್ಲಿನ ಬೋಧನಾ ವ್ಯವಸ್ಥೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸರ್ಕಾರದ ನಿಲುವಾಗಿದೆ.
ಶಿಕ್ಷಕರನ್ನು ಬೋಧನಾ ಕಾರ್ಯಕ್ಕೆ ಸೀಮಿತಗೊಳಿಸಿ, ಮಕ್ಕಳಿಗೆ ನಿರಂತರ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಪ್ರಸ್ತಾವಿತ ಕಾನೂನು ಮುಂದಿನ ಹಂತ ತಲುಪಿದರೆ, ಸರ್ಕಾರಿ ಶಾಲೆಗಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ವೇದಿಕೆಯಾಗುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



