'ವೈಫ್ ಮೆಟೀರಿಯಲ್': Toxic ನಟಿ ರುಕ್ಮಿಣಿ ವಸಂತ್ ಪರ ನಿಂತ ಗಾಯಕಿ ಚಿನ್ಮಯಿ; ಟ್ರೋಲಿಗರಿಗೆ Belt Treatment
ನಟಿ ರುಕ್ಮಿಣಿ ವಸಂತ್-ನಟ ಯಶ್ ಅಭಿನಯದ ಅಭಿನಯದ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಆಗಸ್ಟ್ 26ರಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು: ಟಾಕ್ಸಿಕ್ ಚಿತ್ರದಲ್ಲಿನ ಅಭಿನಯಕ್ಕಾಗಿ ವ್ಯಾಪಕ ಟ್ರೋಲಿಂಗ್ ಗುರಿಯಾಗಿರುವ ರುಕ್ಮಿಣಿ ವಸಂತ್ ಪರ ವಿವಾದಿತ ಗಾಯಕಿ ಚಿನ್ಮಯಿ ಬೆಂಬಲಕ್ಕೆ ನಿಂತಿದ್ದು, ನಟಿ ಪರ ಫುಲ್ ಬ್ಯಾಟಿಂಗ್ ಮಾಡಿದ್ದಾರೆ.
ಹೌದು.. ನಟಿ ರುಕ್ಮಿಣಿ ವಸಂತ್-ನಟ ಯಶ್ ಅಭಿನಯದ ಅಭಿನಯದ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಆಗಸ್ಟ್ 26ರಂದು ಬಿಡುಗಡೆಯಾಗಿದೆ. ಚಿತ್ರದಲ್ಲಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮೆಲಿಸಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಅವರ ಪಾತ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹಾಗೂ ಟೀಕೆಗಳು ಶುರುವಾಗಿದೆ.
ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವರಿಗೆ ನೀಡಲಾಗಿರುವ ಪಾತ್ರ ಕೆಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಎಕ್ಸ್ ಪೇಜ್‌ವೊಂದು ರುಕ್ಮಿಣಿ ಅವರನ್ನು ‘ವೈಫ್ ಮೆಟೀರಿಯಲ್’ ಎಂದು ಕರೆದಿದೆ. ನಟಿಯ ‘ಪ್ಯೂರಿಟಿ’ಯಿಂದ ಪ್ರೇಕ್ಷಕರಿಗೆ ಕಂಫರ್ಟ್ ಭಾವನೆ ಮೂಡುತ್ತದೆ ಎಂದು ಹೇಳಿರುವ ಆ ಪೋಸ್ಟ್, ‘ಟಾಕ್ಸಿಕ್’ ಚಿತ್ರದಲ್ಲಿನ ಅವರ ಪಾತ್ರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಈ ಪೋಸ್ಟ್‌ಗೆ ಗಾಯಕಿ ಚಿನ್ಮಯಿ ಶ್ರೀಪಾದ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ರುಕ್ಮಿಣಿ ಪರ ನಿಂತಿರುವ ಚಿನ್ಮಯಿ, ಮಹಿಳೆಯೊಬ್ಬರನ್ನು ‘ವೈಫ್ ಮೆಟೀರಿಯಲ್’ ಎಂದು ಕರೆಯುವ ಮನಸ್ಥಿತಿಯನ್ನೇ ಪ್ರಶ್ನಿಸಿದ್ದಾರೆ.
ನಟಿ ಪರ ನಿಂತ ಗಾಯಕಿ
ಚಿನ್ಮಯಿ ತಮ್ಮ ಎಕ್ಸ್ ಖಾತೆಯಲ್ಲಿ, “ವೈಫ್ ಮೆಟೀರಿಯಲ್. ಪ್ಯೂರಿಟಿ. ಹಾಗಾದರೆ ಒಬ್ಬ ನಟಿ ‘ವೈಫ್ ಮೆಟೀರಿಯಲ್’ ಆಗಿ ಕಾಣಿಸುತ್ತಾಳೆ ಎಂದಾಕ್ಷಣ, ಆಕೆಗೆ ಯಾವುದು ಒಪ್ಪಿಗೆಯಾದ ಪಾತ್ರ, ಯಾವುದು ಅಲ್ಲ ಎಂಬುದನ್ನು ಈ ವ್ಯಕ್ತಿಯೇ ನಿರ್ಧರಿಸುತ್ತಾರಾ?” ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ.
ಟ್ರೋಲ್ ಮಾಡಿದ್ದ ಎಕ್ಸ್ ಪೋಸ್ಟ್‌ನಲ್ಲಿ, “ರುಕ್ಮಿಣಿ ವಸಂತ್ ಅವರು ಹಲವು ಹುಡುಗರಿಗೆ ‘ವೈಫ್ ಮೆಟೀರಿಯಲ್’ ಎಂಬ ಭಾವನೆ ಮೂಡಿಸುವಂತಹ ಹುಡುಗಿ. ಬಹುತೇಕ ಪುರುಷರು ಅವರನ್ನು ಲೈಂಗಿಕ ಅಥವಾ ದೈಹಿಕ ದೃಷ್ಟಿಕೋನದಿಂದ ನೋಡಿರಲಿಕ್ಕಿಲ್ಲ. ಅವರ ಸಾನ್ನಿಧ್ಯ ಮತ್ತು ಪ್ಯೂರಿಟಿಯಿಂದ ನಮಗೆ ಕಂಫರ್ಟ್ ಅನಿಸುತ್ತದೆ. ಹೀಗಿರುವಾಗ ‘ಟಾಕ್ಸಿಕ್’ನಲ್ಲಿ ಅವರು ಒಪ್ಪಿಕೊಂಡಿರುವ ಪಾತ್ರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಲಾಗಿತ್ತು.
ಅಲ್ಲದೆ, ರುಕ್ಮಿಣಿ ಅವರು ಕಿಯಾರಾ ಅಡ್ವಾಣಿ ಅವರಂತೆ ಸಿನಿಮಾದಲ್ಲಿ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಂಡಿಲ್ಲ. ಆದರೂ ಅವರು ನಿರ್ವಹಿಸಿರುವ ಪಾತ್ರದ ಪರಿಣಾಮವನ್ನು ಸುಲಭವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿತ್ತು.

ಯಶ್ ಬಗ್ಗೆ ರುಕ್ಮಿಣಿ ಹೇಳಿದ್ದೇನು?
‘ಟಾಕ್ಸಿಕ್’ ಬಿಡುಗಡೆಗೂ ಮುನ್ನ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ನಡೆದ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರುಕ್ಮಿಣಿ ವಸಂತ್ ಅವರು ಯಶ್ ಜೊತೆಗಿನ ತಮ್ಮ ಕೆಲಸದ ಅನುಭವ ಹಂಚಿಕೊಂಡಿದ್ದರು.
“ನೀವು ಎಂತಹ ಕಲಾವಿದ, ಎಂತಹ ಸ್ಟಾರ್ ಎಂಬುದರ ಬಗ್ಗೆ ನಾನು ಸಾಕಷ್ಟು ಹೇಳಬಹುದು. ಆದರೆ ಆರಂಭದಿಂದಲೂ ನನ್ನೊಂದಿಗೆ ಉಳಿದಿರುವ ಮತ್ತು ನನ್ನ ವೃತ್ತಿಜೀವನದುದ್ದಕ್ಕೂ ಉಳಿಯುತ್ತದೆ ಎಂದು ಭಾವಿಸುವ ಒಂದು ಸಂಗತಿಯಿದೆ. ನಾನು ಈ ಸೆಟ್‌ಗೆ ಫ್ಯಾನ್‌ಗರ್ಲ್ ಆಗಿ ಬಂದಿದ್ದೆ. ಆದರೆ ನೀವು ನನ್ನನ್ನು ಸಹ-ಸೃಜನಶೀಲರಾಗಿ (collaborator) ಸ್ವಾಗತಿಸಿದಿರಿ. ನಾನು ಕೆಲಸ ಮಾಡುವ ಪ್ರತಿಯೊಂದು ಸೆಟ್‌ನಲ್ಲೂ ಇದೇ ಮನೋಭಾವವನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಾನೂ ಕೂಡ ಸಿನಿಮಾಗೆ ಬಲಿಷ್ಠ ಸಹಯೋಗಿ ಹಾಗೂ ಕೊಡುಗೆ ನೀಡುವ ಕಲಾವಿದೆಯಾಗಬೇಕು” ಎಂದು ರುಕ್ಮಿಣಿ ಹೇಳಿದ್ದರು.
ಇನ್ನು ‘ಟಾಕ್ಸಿಕ್’ ಚಿತ್ರವು ಬಿಡುಗಡೆಯಾದ ಎರಡು ದಿನಗಳಲ್ಲಿ ಭಾರತದಲ್ಲಿ 101.10 ಕೋಟಿ ರೂ ನಿವ್ವಳ ಕಲೆಕ್ಷನ್ ಮಾಡಿದೆ. ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ 185.60 ಕೋಟಿ ರೂ ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



