ಯುವ ನಿರ್ದೇಶಕರ ನಾಲ್ಕು ಚಿತ್ರಗಳು ಭರ್ಜರಿ ಪ್ರದರ್ಶನ; ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ!
ಕನ್ನಡ ಚಿತ್ರರಂಗಕ್ಕೆ ಇದು ಸಂಕ್ರಮಣ ಕಾಲ. ಕನ್ನಡದ ನಾಲ್ಕು ಯುವ ಮನಸ್ಸುಗಳು ನಿರ್ದೇಶಿಸಿರುವ ನಾಲ್ಕು ಕನ್ನಡ ಚಿತ್ರಗಳು, ಕನ್ನಡ ನಾಡಿನಲ್ಲಷ್ಟೇ ಅಲ್ಲ- ದೇಶ-ವಿದೇಶದಲ್ಲೆಲ್ಲಾ ಪರ್ಯಟಿಸಿ

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಇದು ಸಂಕ್ರಮಣ ಕಾಲ. ಕನ್ನಡದ ನಾಲ್ಕು ಯುವ ಮನಸ್ಸುಗಳು ನಿರ್ದೇಶಿಸಿರುವ ನಾಲ್ಕು ಕನ್ನಡ ಚಿತ್ರಗಳು, ಕನ್ನಡ ನಾಡಿನಲ್ಲಷ್ಟೇ ಅಲ್ಲ- ದೇಶ-ವಿದೇಶದಲ್ಲೆಲ್ಲಾ ಪರ್ಯಟಿಸಿ-ಪಸರಿಸಿ ವಿಮರ್ಶಕರ-ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿರುವುದು ಚಿತ್ರರಂಗವನ್ನು ಹೊಸ ದಿಕ್ಕಿಗೆ ಕೊಂಡೊಯ್ದಿದೆ.
ಈ ನಾಲ್ಕು ಸಿನೆಮಾಗಳಲ್ಲಿ ಮೂರು ಸಿನೆಮಾಗಳ ನಿರ್ದೇಶಕರು ಚೊಚ್ಚಲ ಬಾರಿಗೆ ಸಿನೆಮಾ ನಿರ್ದೇಶನಕ್ಕೆ ಇಳಿದವರು ಎಂಬುದು ಗಮನಾರ್ಹ! ರಾಮ್ ರೆಡ್ಡಿ ನಿರ್ದೇಶನ 'ತಿಥಿ', ನವನೀತ್ ನಿರ್ದೇಶನ 'ಕರ್ವ', ಹೇಮಂತ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮತ್ತು ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ರಾಜ್ಯದಾದ್ಯಂತ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡುತ್ತಿರುವ ಚಿತ್ರಗಳು.
ಸ್ವಲ್ಪ ಹಿಂದಕ್ಕೆ ಚಲಿಸಿದರೆ ಅನೂಪ್ ಬಂಢಾರಿ ನಿರ್ದೇಶನ 'ರಂಗಿತರಂಗ' ಸಿನೆಮಾ ಕೂಡ ಹೊಸ ಸಾಧ್ಯತೆಗಳನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ತಿತ್ತು. ಈ ಸಿನೆಮಾ ಕರ್ನಾಟಕದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಹಲವಾರು ಕಡೆ ಪ್ರದರ್ಶನ ಕಂಡು ಒಂದು ವರ್ಷ ಪೂರೈಸುವತ್ತ ದಾಪುಗಾಲು ಹಾಕಿದ್ದು, ಇನ್ನೂ ಪ್ರದರ್ಶನ ಕಾಣುತ್ತಿರುವುದೇ ವಿಶೇಶ. ಈಗ ಇದೇ ಹಾದಿಯಲ್ಲಿ ಮುಂದುವರೆದಿವೆ ಈ ನಾಲ್ಕು ಚಿತ್ರಗಳು.
ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಮೇ ನಲ್ಲಿ ಕರ್ನಾಟಕಾದಾದ್ಯಂತ ಬಿಡುಗಡೆ ಕಂಡು ಈಗ ದೇಶದೆಲ್ಲೆಡೆ ಮುಂಚೂಣಿಯಲ್ಲಿ ಪ್ರದರ್ಶನ ಕಾಣುತ್ತಿರುವುದಲ್ಲದೆ, ಬಾಲಿವುಡ್ ನ ನಟ-ನಿರ್ದೇಶಕರು ಈ ಸಿನೆಮಾದ ಬಗ್ಗೆ ಹಲವಾರು ಟ್ವೀಟ್ ಮಾಡಿ ಸಿಎನ್ಮಾ ನೋಡುವಂತೆ ಪ್ರೇಕ್ಷಕರನ್ನು ಪ್ರೇರೇಪಿಸಿದ್ದಾರೆ. ಜೊತೆಗೆ ಯು-ಟರ್ನ್ ಸಿನೆಮಾ ಕೂಡ ದೇಶದ ಹಲವೆಡೆ ಪ್ರದರ್ಶನ ಕಾಣುತ್ತಿದೆ. ಈಗ ಸದ್ಯಕ್ಕೆ ಕರ್ನಾಟಕದಲ್ಲಿ ಮುಂಚೂಣಿಯಲ್ಲಿ ಪ್ರದರ್ಶನ ಕಾಣುತ್ತಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಜೂನ್ ೧೦ ಕ್ಕೆ ಅನ್ಯ ರಾಜ್ಯಗಳಲ್ಲಿ ಬಿಡುಗಡೆ ಕಾಣಲಿದೆ. 'ಕರ್ವ' ಸಿನೆಮಾಗೆ ಕೂಡ ಉತ್ತಮ ಪ್ರತಿಕ್ರಿಯೆ ಬಂದಿರುವುದು ಗಮನಾರ್ಹ.
ಅಂತರ್ಜಾಲ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆ ತಾಣ ಬುಕ್ ಮೈ ಶೋ. ಕಾಂ ನಲ್ಲಿ 'ತಿಥಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕರ್ವ', 'ಯು-ಟರ್ನ್' ಸಿನೆಮಾಗಳು ಕರ್ನಾಟಕ ಪ್ರದೇಶದಲ್ಲಿ ಕ್ರಮವಾಗಿ ೮೪%, ೯೦%, ೮೫% ಮತ್ತು ೮೩% ರೇಟಿಂಗ್ ಪಡೆದು ಬಾಲಿವುಡ್-ಹಾಲಿವುಡ್ ಸಿನೆಮಾಗಳನ್ನು ಹಿಂದಿಕ್ಕಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನಾಲ್ಕು ಸಿನೆಮಾಗಳಿಗೆ ವಾರಾಂತ್ಯಗಳಲ್ಲಿ ಟಿಕೆಟ್ ಸಿಗುತ್ತಿಲ್ಲ ಎಂಬ ಕೂಗು ಸಾಮಾನ್ಯವಾಗಿದ್ದು, ಚಿತ್ರರಂಗದಲ್ಲಿ ಸಂಭ್ರಮದ ವಾತಾವರಣ ಮೂಡಿದೆ.
ಈ ಸಂಕ್ರಮಣ ಪರ್ವದಲ್ಲಿ ನಾಳೆ ಶುಕ್ರವಾರ ದರ್ಶನ್ ಅಭಿನಯದ 'ಜಗ್ಗು ದಾದ' ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


