'aashiq banaya': 'ಅಕ್ಷರಶಃ ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿಯಂತಿತ್ತು'; ನಟ ಇಮ್ರಾನ್ ಹಶ್ಮಿ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ನಟಿ Tanushree Dutta
ಫಿಲ್ಮಿ ಗ್ಯಾನ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ನಟಿ ತನುಶ್ರೀ ದತ್ತಾ, ತಮ್ಮ ಮತ್ತು ನಟ ಇಮ್ರಾನ್ ಹಶ್ಮಿ ನಡುವಿನ ಕೆಮಿಸ್ಟ್ರಿ ರೊಮ್ಯಾಂಟಿಕ್ ಜೋಡಿಗಿಂತಲೂ ಅಣ್ಣ-ತಂಗಿಯ ಸಂಬಂಧದಂತಿತ್ತು ಎಂದು ಹೇಳಿದ್ದಾರೆ.

ಮುಂಬೈ: 'aashiq banaya ಎಂಬ ಹಾಡಿನ ಮೂಲಕ ವ್ಯಾಪಕ ವೈರಲ್ ಆಗಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ, ನಟ ಎಮ್ರಾನ್ ಹಶ್ಮಿ ಜೊತೆಗಿನ ತಮ್ಮ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.
21 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಆಶಿಕ್ ಬನಾಯಾ ಆಪ್ನೆ’ ಸಿನಿಮಾ ಇಂದಿಗೂ ಬಾಲಿವುಡ್ ಪ್ರೇಕ್ಷಕರ ನೆನಪಿನಲ್ಲಿ ಉಳಿದಿದೆ. ನಟ ಇಮ್ರಾನ್ ಹಶ್ಮಿ ಮತ್ತು ತನುಶ್ರೀ ದತ್ತಾ ಅವರ ರೊಮ್ಯಾಂಟಿಕ್ ಕೆಮಿಸ್ಟ್ರಿಯಿಂದ ಈ ಸಿನಿಮಾ ಭಾರಿ ಸುದ್ದಿಯಾಗಿತ್ತು.
ಅದರಲ್ಲೂ ಸಿನಿಮಾದಲ್ಲಿದ್ದ ಬೋಲ್ಡ್ ಹಾಗೂ ಕಿಸ್ಸಿಂಗ್ ಸೀನ್ಸ್‌ಗಳಿಂದಾಗಿ ಈ ಜೋಡಿ ಆ ಸಮಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಆದರೆ ತೆರೆ ಮೇಲೆ ಅಷ್ಟೊಂದು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದ ಈ ಜೋಡಿಯ ಆಫ್‌ಸ್ಕ್ರೀನ್ ಸಂಬಂಧ ಮಾತ್ರ ಸಂಪೂರ್ಣ ಭಿನ್ನವಾಗಿತ್ತು ಎಂಬುದನ್ನು ತನುಶ್ರೀ ದತ್ತಾ ಇದೀಗ ಬಹಿರಂಗಪಡಿಸಿದ್ದಾರೆ.
ಫಿಲ್ಮಿ ಗ್ಯಾನ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ನಟಿ ತನುಶ್ರೀ ದತ್ತಾ, ತಮ್ಮ ಮತ್ತು ನಟ ಇಮ್ರಾನ್ ಹಶ್ಮಿ ನಡುವಿನ ಕೆಮಿಸ್ಟ್ರಿ ರೊಮ್ಯಾಂಟಿಕ್ ಜೋಡಿಗಿಂತಲೂ ಅಣ್ಣ-ತಂಗಿಯ ಸಂಬಂಧದಂತಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಮ್ಮ ಸಂಬಂಧ ಅಣ್ಣ-ತಂಗಿಯಂತಿತ್ತು
ಇಮ್ರಾನ್ ಹಶ್ಮಿ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ತನುಶ್ರೀ, ಇಬ್ಬರ ನಡುವೆ ಯಾವುದೇ ಅಫೇರ್ ಇರಲಿಲ್ಲ ಅಥವಾ ವೈಯಕ್ತಿಕ ಸಂಬಂಧವೂ ಇರಲಿಲ್ಲ. ಅಕ್ಷರಶಃ ನನ್ನ ಮತ್ತು ಎಮ್ರಾನ್ ಹಶ್ಮಿ ಅವರ ಕೆಮಿಸ್ಟ್ರಿ ಅಣ್ಣ-ತಂಗಿಯಂತಿತ್ತು.
ಸಿನಿಮಾಗಳಲ್ಲಿ ಪಾತ್ರಗಳ ನಡುವೆ ರೊಮ್ಯಾಂಟಿಕ್ ಅಂಶಗಳಿದ್ದರೂ, ಕ್ಯಾಮೆರಾ ಮುಂದೆ ಎಷ್ಟೇ ರೊಮ್ಯಾಂಟಿಕ್ ಅಥವಾ ಬೋಲ್ಡ್ ಸೀನ್ಸ್ ಮಾಡಿದ್ದರೂ ತಮ್ಮ ವೈಯಕ್ತಿಕ ಕೆಮಿಸ್ಟ್ರಿ ಮಾತ್ರ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯದಂತಿತ್ತು ಎಂದು ಹೇಳಿದ್ದಾರೆ.
ಕಿಸ್ಸಿಂಗ್ ಸೀನ್ ಬಗ್ಗೆ ತನುಶ್ರೀ ಹೇಳಿದ್ದೇನು?
‘ಆಶಿಕ್ ಬನಾಯಾ ಆಪ್ನೆ’ ಸಿನಿಮಾದ ಕಿಸ್ಸಿಂಗ್ ಸೀನ್ಸ್ ಬಗ್ಗೆಯೂ ತನುಶ್ರೀ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತೆರೆ ಮೇಲೆ ಒಂದು ರೊಮ್ಯಾಂಟಿಕ್ ಸೀನ್ ಆಕರ್ಷಕವಾಗಿ ಕಾಣಿಸಿಕೊಳ್ಳುವುದರ ಹಿಂದೆ ಕೇವಲ ಕಲಾವಿದರ ಅಭಿನಯ ಮಾತ್ರ ಇರುವುದಿಲ್ಲ. ಕ್ಯಾಮೆರಾ ಆ್ಯಂಗಲ್, ಲೈಟಿಂಗ್, ಶಾಟ್, ಕಲಾವಿದರ ಪೊಸಿಷನ್ ಮತ್ತು ಅವರ ಚಲನವಲನ ಸೇರಿದಂತೆ ಹಲವು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದ್ದಾರೆ.
ಇಂತಹ ಸೀನ್ಸ್ ಶೂಟ್ ಮಾಡುವಾಗ ಕಲಾವಿದರ ಗಮನ ಕೇವಲ ಅಭಿನಯದ ಮೇಲಿರುವುದಿಲ್ಲ. ಕ್ಯಾಮೆರಾ ಮುಂದೆ ಸರಿಯಾದ ಸ್ಥಾನದಲ್ಲಿದ್ದೇವೆಯೇ, ಶಾಟ್ ಸರಿಯಾಗಿ ಬರುತ್ತಿದೆಯೇ, ನಿರ್ದೇಶಕರು ನೀಡುತ್ತಿರುವ ಸೂಚನೆಗಳನ್ನು ಸರಿಯಾಗಿ ಪಾಲಿಸುತ್ತಿದ್ದೇವೆಯೇ ಎಂಬುದರ ಮೇಲೂ ಗಮನ ಹರಿಸಬೇಕಾಗುತ್ತದೆ ಎಂದು ತನುಶ್ರೀ ಹೇಳಿದ್ದಾರೆ.
ಪ್ರೇಕ್ಷಕರು ತೆರೆ ಮೇಲೆ ರೊಮ್ಯಾಂಟಿಕ್ ಅಥವಾ ಕಿಸ್ಸಿಂಗ್ ಸೀನ್ ನೋಡಿದಾಗ ಅದನ್ನು ಒಂದು ರೀತಿಯಲ್ಲಿ ಅನುಭವಿಸಬಹುದು. ಆದರೆ ಅದೇ ಸೀನ್ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಕಲಾವಿದರಿಗೆ ಪರಿಸ್ಥಿತಿ ಅಷ್ಟೊಂದು ರೊಮ್ಯಾಂಟಿಕ್ ಆಗಿರುವುದಿಲ್ಲ. ಕ್ಯಾಮೆರಾ, ಲೈಟ್ಸ್ ಮತ್ತು ನಿರ್ದೇಶಕರ ಸೂಚನೆಗಳ ನಡುವೆ ಗಮನ ಕೇಂದ್ರೀಕರಿಸಿ ಕೆಲಸ ಮಾಡಬೇಕಾಗುವುದರಿಂದ ಇಂತಹ ಸೀನ್ಸ್‌ಗಳಲ್ಲಿ ಯಾವುದೇ ‘ಮಜಾ’ ಇರುವುದಿಲ್ಲ ಎಂದು ತನುಶ್ರೀ ದತ್ತಾ ಸ್ಪಷ್ಟವಾಗಿ ಹೇಳಿದ್ದಾರೆ.
2 ವರ್ಷ ಹಳೆಯ ಸಂದರ್ಶನ
ಇನ್ನು ತನುಶ್ರೀ ದತ್ತಾ ಅವರ ಈ ಹೇಳಿಕೆಗಳ ವಿಡಿಯೋ ಇತ್ತೀಚಿನದಲ್ಲ.. 2 ವರ್ಷಗಳ ಹಿಂದೆ ಫಿಲ್ಮಿಗ್ಯಾನ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡುತ್ತಾ ತಮ್ಮ ಸಿನಿ ಪಯಣದ ಕುರಿತು ಮಾತನಾಡಿದ್ದರು. ಈ ಹಳೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಅಂತೆಯೇ ತನುಶ್ರೀ ಅವರ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಇಬ್ಬರೂ ಒಟ್ಟಿಗೆ ನಟಿಸಿದ್ದ ಸಿನಿಮಾಗಳನ್ನು ಅಭಿಮಾನಿಗಳು ಮತ್ತೆ ನೆನಪಿಸಿಕೊಳ್ಳುತ್ತಿದ್ದು, ಅವರ ಆನ್‌ಸ್ಕ್ರೀನ್ ಜೋಡಿಯ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಅಂದಹಾಗೆ 2000ರ ದಶಕದಲ್ಲಿ ತನುಶ್ರೀ ದತ್ತಾ ಮತ್ತು ಇಮ್ರಾನ್ ಹಶ್ಮಿ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. Chocolate: Deep Dark Secrets (2005) ಹಾಗೂ The Good Boy, Bad Boy (2007) ಸಿನಿಮಾಗಳಲ್ಲಿ ಇವರಿಬ್ಬರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಮತ್ತೊಂದೆಡೆ, ಎಮ್ರಾನ್ ಹಶ್ಮಿ 2000ರ ದಶಕದಲ್ಲಿ ರೊಮ್ಯಾಂಟಿಕ್, ಥ್ರಿಲ್ಲರ್ ಮತ್ತು ಸಂಗೀತ ಪ್ರಧಾನ ಸಿನಿಮಾಗಳ ಮೂಲಕ ಬಾಲಿವುಡ್‌ನ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



