ಸಿನಿಮಾ ಸುದ್ದಿ

'ರಾಯನ ದೊಡ್ಡ ಶತ್ರು ಟಿಕೆಟ್ ಅಲ್ಲ..', 'Toxic ಕೇವಲ ಸಿನಿಮಾ ಅಲ್ಲ…': ನಟ ಯಶ್ ಚಿತ್ರದ ಕುರಿತು ನಟಿ Deepika Das ಪೋಸ್ಟ್ ವೈರಲ್!

‘ಟಾಕ್ಸಿಕ್’ ಕೇವಲ ಸಿನಿಮಾ ಅಲ್ಲ… ಮನಸ್ಸಿನೊಳಗಿನ ರಾಕ್ಷಸನ ಕಥೆ ಎಂದು ಅಭಿಪ್ರಾಯಪಟ್ಟಿರುವ ನಟಿ ದೀಪಿಕಾ ದಾಸ್, 'ಇದು ಅಂತ್ಯವಿಲ್ಲದ ಭಾವನೆಗಳ ಚಕ್ರದಲ್ಲಿ ಸಿಲುಕಿರುವ ಒಬ್ಬ ಮನುಷ್ಯನ ಕಥೆ.

'ರಾಯನ ದೊಡ್ಡ ಶತ್ರು ಟಿಕೆಟ್ ಅಲ್ಲ..', 'Toxic ಕೇವಲ ಸಿನಿಮಾ ಅಲ್ಲ…': ನಟ ಯಶ್ ಚಿತ್ರದ ಕುರಿತು ನಟಿ Deepika Das ಪೋಸ್ಟ್ ವೈರಲ್!
ನಟಿ ದೀಪಿಕಾ ದಾಸ್ ಮತ್ತು ಟಾಕ್ಸಿಕ್ ಚಿತ್ರ
Published On :

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ Toxic: A Fairy Tale for Grown-Ups ಸಿನಿಮಾ ಕುರಿತ ಪರ-ವಿರೋಧ ನಿಲುವುಗಳ ನಡುವೆಯೇ ಬಿಗ್ ಬಾಸ್ ಮಾಜಿ ಸ್ಪರ್ದಿ ಹಾಗೂ ನಟಿ ದೀಪಿಕಾ ದಾಸ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ವ್ಯಾಪಕ ವೈರಲ್ ಆಗುತ್ತಿದೆ.

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ನಡುವೆಯೇ ಥಿಯೇಟರ್ ಗಳಲ್ಲಿ ತನ್ನ ಓಡ ಮುಂದುವರೆಸಿದೆ.

ಈ ನಡುವೆ ಟಾಕ್ಸಿಕ್ ಚಿತ್ರದ ಪರ ನಟ ಯಶ್ ಅವರ ಸಂಬಂಧಿ ಹಾಗೂ ನಟಿ ದೀಪಿಕಾ ದಾಸ್ ಬ್ಯಾಟ್ ಬೀಸಿದ್ದು, 'ರಾಯನಿಗೆ ನಿಜವಾದ ದೊಡ್ಡ ಶತ್ರು ಟಿಕೆಟ್ ಅಲ್ಲ' ಎಂದು ಪೋಸ್ಟ್ ಮಾಡಿದ್ದಾರೆ.

‘ಟಾಕ್ಸಿಕ್’ ಕೇವಲ ಸಿನಿಮಾ ಅಲ್ಲ… ಮನಸ್ಸಿನೊಳಗಿನ ರಾಕ್ಷಸನ ಕಥೆ!

ತಮ್ಮ ಪೋಸ್ಟ್ ನಲ್ಲಿ ‘ಟಾಕ್ಸಿಕ್’ ಕೇವಲ ಸಿನಿಮಾ ಅಲ್ಲ… ಮನಸ್ಸಿನೊಳಗಿನ ರಾಕ್ಷಸನ ಕಥೆ ಎಂದು ಅಭಿಪ್ರಾಯಪಟ್ಟಿರುವ ನಟಿ ದೀಪಿಕಾ ದಾಸ್, 'ಇದು ಅಂತ್ಯವಿಲ್ಲದ ಭಾವನೆಗಳ ಚಕ್ರದಲ್ಲಿ ಸಿಲುಕಿರುವ ಒಬ್ಬ ಮನುಷ್ಯನ ಕಥೆ. ತನ್ನೊಳಗಿನ ಭಾವನೆಗಳನ್ನು ನಿಯಂತ್ರಿಸಲು ಆತ ಕಲಿತಾಗ, ಅದೇ ಮನುಷ್ಯ ಒಬ್ಬ ‘ರಾಕ್ಷಸ’ನಾಗಿ ಬದಲಾಗುತ್ತಾನೆ.

ಈ ಸಿನಿಮಾದಲ್ಲಿ ಕೆಲವು ಪಾತ್ರಗಳು ನಿಜಕ್ಕೂ ಎಷ್ಟು ‘ಟಾಕ್ಸಿಕ್’ ಆಗಿವೆ ಎಂಬುದನ್ನು ತೋರಿಸಲಾಗಿದೆ. ತಮ್ಮದೇ ವ್ಯಕ್ತಿತ್ವವನ್ನು ಕಳೆದುಕೊಂಡಿರುವ ಅವರು, ಸದಾ ತಮ್ಮೊಳಗೇ ಸಿಲುಕಿಕೊಂಡಿರುತ್ತಾರೆ. ತಮ್ಮೊಳಗಿನ ವ್ಯಕ್ತಿ ಮತ್ತು ಹೊರಗಿನ ವ್ಯಕ್ತಿತ್ವದ ನಡುವಿನ ಸಂಘರ್ಷವನ್ನು ಯಾರಿಗೂ ಅರ್ಥವಾಗದಂತೆ ಮುಚ್ಚಿಡುತ್ತಲೇ ಇರುತ್ತಾರೆ. ಆದರೆ ಕೊನೆಗೆ ಸತ್ಯ ಎಂಬುದು ಹೊರಬರಲೇಬೇಕು. ಆ ಸತ್ಯ ಹೊರಬರಲು ಆತ ಬಯಸುತ್ತಾನೆಯೋ ಇಲ್ಲವೋ ಎಂಬುದು ಮುಖ್ಯವಲ್ಲ ಎಂದು ಹೇಳಿದ್ದಾರೆ.

ಸುಲಭವಾಗಿ ಅರ್ಥವಾಗುವ ಕಥೆಯಲ್ಲ

ಅಲ್ಲದೆ 'ಇದು ಸಾಮಾನ್ಯವಾಗಿ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಕಥೆಯಲ್ಲ' ಎಂದು ಹೇಳಿರುವ ನಟಿ ದೀಪಿಕಾ ದಾಸ್, 'ಸಿನಿಮಾದೊಳಗಿನ ಮನೋವೈಜ್ಞಾನಿಕ ಪದರಗಳು ಹಾಗೂ ಪಾತ್ರಗಳ ಒಳಗಿನ ಸಂಘರ್ಷಗಳು ಕೊಂಚ ಗಂಭೀರವಾಗಿವೆ. ಇದರಲ್ಲಿ ಒಂದು ರೀತಿಯ ಯೂನಿವರ್ಸಲ್ ಸಿನಿಮಾಗಳ ಸ್ಪರ್ಶ ಕಾಣಿಸುತ್ತದೆ.

ಒಬ್ಬ ಸಿನಿಮಾ ಪ್ರೇಮಿಯಾಗಿ, ನನಗೆ ಸಿನಿಮಾದ ಬಹುತೇಕ ಭಾಗಗಳು ತುಂಬಾ ಇಷ್ಟವಾದವು. ವಿಶೇಷವಾಗಿ ಪಾತ್ರಗಳ ವೈವಿಧ್ಯತೆ, ಅವರ ಭಾವನೆಗಳನ್ನು ಕಟ್ಟಿಕೊಟ್ಟಿರುವ ರೀತಿ ಮತ್ತು ಪ್ರತಿಯೊಂದು ಪಾತ್ರವನ್ನು ನೋಡುವ ದೃಷ್ಟಿಕೋನ ನಿಜಕ್ಕೂ ಅತ್ಯುತ್ತಮವಾಗಿದೆ. ಪಾತ್ರಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ರೀತಿಯೇ ಸಿನಿಮಾದ ಪ್ರಮುಖ ಶಕ್ತಿ. ಇಂತಹ ವಿಭಿನ್ನ ಪ್ರಯತ್ನಕ್ಕೆ ನಾವು ಖಂಡಿತವಾಗಿಯೂ ಮೆಚ್ಚುಗೆ ವ್ಯಕ್ತಪಡಿಸಬೇಕು' ಎಂದು ಚಿತ್ರಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ರಾಯನ ದೊಡ್ಡ ಶತ್ರು ಟಿಕೆಟ್ ಅಲ್ಲ… ಅವನದೇ ಅಪರಾಧ ಪ್ರಜ್ಞೆ!

ಮತ್ತೊಂದು ಪೋಸ್ಟ್ ನಲ್ಲಿ, 'ರಾಯಾ ತನ್ನ ಇಡೀ ಜೀವನವನ್ನು ಅಧಿಕಾರ, ಹಿಂಸೆ ಮತ್ತು ಸೇಡಿನ ಬೆನ್ನತ್ತಿ ಕಳೆಯುತ್ತಾನೆ. ಆದರೆ ಕೊನೆಗೆ ಆತ ಕಟ್ಟಿದ ಸಾಮ್ರಾಜ್ಯಕ್ಕಿಂತಲೂ ದೊಡ್ಡದಾಗಿ ಬೆಳೆಯುವುದು ಅವನ ಮನಸ್ಸಿನೊಳಗಿನ ಅಪರಾಧ ಪ್ರಜ್ಞೆ, ಪಶ್ಚಾತ್ತಾಪ ಮತ್ತು ನೋವು. ರಾಯನಿಗೆ ನಿಜವಾದ ಶತ್ರು ಹೊರಗಿಲ್ಲ. ಅದು ಅವನೊಳಗೇ ಇದೆ.

ಟಿಕೆಟ್ = ರಾಯಾನ ಮಗ + ಅಪರಾಧ ಪ್ರಜ್ಞೆ + ಪಶ್ಚಾತ್ತಾಪ + ಹಿಂದಿನ ಆಘಾತ ಎಂದು ನಟಿ ದೀಪಿಕಾ ದಾಸ್ ಪೋಸ್ಟ್ ಮಾಡಿದ್ದಾರೆ. ಅವರ ಈ ಪೋಸ್ಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಅಂದಹಾಗೆ ಯಶ್ ನಾಯಕನಾಗಿ ನಟಿಸಿರುವ Toxic: A Fairy Tale for Grown-Ups ಚಿತ್ರಕ್ಕೆ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಿನಿಮಾದ ವಿಭಿನ್ನ ಕಥಾಹಂದರ, ಅದ್ದೂರಿ ನಿರ್ಮಾಣ ಮತ್ತು ಯಶ್ ಅವರ ಪಾತ್ರ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ ಚಿತ್ರ ಬಿಡುಗಡೆಯಾದ ಬಳಿಕ ಚಿತ್ರದ ಕುರಿತು ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಈ ಹೊತ್ತಿನಲ್ಲಿ ನಟಿ ದೀಪಿಕಾ ದಾಸ್ ಅವರ ಪೋಸ್ಟ್ ಸಾಕಷ್ಟು ಗಮನ ಸೆಳೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.