FlyDubai ಕೋ ಪೈಲಟ್ ಹಾರಾಟಕ್ಕೆ ಒಮಾನ್ ನಲ್ಲಿ ನಿಷೇಧ; ಪತನಕ್ಕೆ ಯತ್ನಿಸಿದ್ದ ಆತ ಉಗ್ರವಾದ ಹಿನ್ನಲೆಯವನೇ?
182 ಜನ ಪ್ರಯಾಣಿಕರನ್ನು ಹೊತ್ತೊಯ್ದು ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಬಹುತೇಕ ಪತನಗೊಳ್ಳುವಂತೆ ಮಾಡಿದ ಎಂದು ಅಧಿಕಾರಿಗಳು ಹೇಳಿರುವ ಅದರ ಸಹ ಪೈಲಟ್‌ಗೆ, ಆತ ಉಗ್ರವಾದಿ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದಾನೆ ಎಂದು ಆತನ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು

ಟೆಲ್ ಅವೀವ್: 182 ಜನ ಪ್ರಯಾಣಿಕರನ್ನು ಹೊತ್ತೊಯ್ದು ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಬಹುತೇಕ ಪತನಗೊಳ್ಳುವಂತೆ ಮಾಡಿದ ಎಂದು ಅಧಿಕಾರಿಗಳು ಹೇಳಿರುವ ಅದರ ಸಹ ಪೈಲಟ್‌ಗೆ, ಆತ ಉಗ್ರವಾದಿ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದಾನೆ ಎಂಬ ಆತಂಕದ ಹಿನ್ನೆಲೆಯಲ್ಲಿ ಒಮಾನ್‌ನಲ್ಲಿ ಆತನ ಹಾರಾಟಕ್ಕೆ ನಿಷೇಧ ಹೇರಲಾಗಿತ್ತು ಎಂದು ಈ ವಿಷಯದ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ಹೇಳುತ್ತಾರೆ.
ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ತಮ್ಮ ಹೆಸರನ್ನು ಬಹಿರಂಗಪಡಿಸದಂತೆ ಮನವಿ ಮಾಡಿದ ಅವರು, ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ವಿಮಾನಯಾನ ಸಂಸ್ಥೆಯೊಂದು ಸಹ ಪೈಲಟ್‌ನನ್ನು ನೇಮಕ ಮಾಡಿಕೊಂಡಿತ್ತು ಎಂದು ಹೇಳಿದ್ದಾರೆ.
ಯುಎಇಯಲ್ಲಿ ನೇಮಕ ಮಾಡುವ ಸಂದರ್ಭದಲ್ಲಿ ಆತನ ಹಿನ್ನೆಲೆಯನ್ನು ಯಾವ ಮಟ್ಟಿಗೆ ಪರಿಶೀಲಿಸಲಾಗಿತ್ತು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಸಹ ಪೈಲಟ್‌ಗೆ ವಿಮಾನ ಹಾರಾಟ ನಡೆಸದಂತೆ ಒಮಾನ್ ನಿಷೇಧ ಹೇರಿದ್ದ ವಿಷಯವನ್ನು ವಾಲ್ ಸ್ಟ್ರೀಟ್ ಜರ್ನಲ್ ಮೊದಲಿಗೆ ವರದಿ ಮಾಡಿತ್ತು.
ಈ ದಾಳಿ ಪ್ರಾದೇಶಿಕ ಪ್ರವಾಸೋದ್ಯಮ ಮತ್ತು ವಿಮಾನಯಾನ ಉದ್ಯಮವನ್ನು ಬಿಕ್ಕಟ್ಟಿಗೆ ತಳ್ಳಿದ್ದು, ವಾಯುಯಾನ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗಾಗಲೇ ಅಮೆರಿಕ-ಇರಾನ್ ಯುದ್ಧದಿಂದ ತಲ್ಲಣಗೊಂಡಿರುವ ಮಧ್ಯಪ್ರಾಚ್ಯದಲ್ಲಿ ಈ ಘಟನೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಪ್ರಾದೇಶಿಕ ಮಟ್ಟದ ತನಿಖೆ ನಡೆಯುತ್ತಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಇಸ್ರೇಲ್‌ಗೆ ತೆರಳುವ ಎಲ್ಲ ವಿಮಾನಗಳನ್ನು ರದ್ದುಗೊಳಿಸಿದ್ದು, ಸಾಮಾನ್ಯ ದಿನಗಳಲ್ಲಿ ಉಭಯ ದೇಶಗಳ ನಡುವೆ ಪ್ರಯಾಣಿಸುವ ನೂರಾರು ಪ್ರಯಾಣಿಕರಿಗೆ ತೊಂದರೆಯಾಗಿದೆ. ಉಭಯ ದೇಶಗಳ ನಡುವಿನ ವಾಣಿಜ್ಯ ವಿಮಾನ ಸಂಚಾರ ಸ್ಥಗಿತಗೊಂಡ ಬಳಿಕ ಯುಎಇಯಲ್ಲಿ ಸಿಲುಕಿರುವ ಪ್ರಯಾಣಿಕರನ್ನು ವಾಪಸ್ ಕರೆತರಲು ಇಸ್ರೇಲ್ ಮತ್ತು ಯುಎಇ ನಿನ್ನೆಯಿಂದ ವಿಶೇಷ ವಾಪಸಾತಿ ವಿಮಾನಗಳನ್ನು ಆರಂಭಿಸಲು ಒಪ್ಪಿಕೊಂಡಿವೆ ಎಂದು ಇಸ್ರೇಲಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾರ್ವಜನಿಕವಾಗಿ ಮಾತನಾಡಲು ಅವರಿಗೆ ಅನುಮತಿ ಇರದ ಕಾರಣ ಅವರು ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡಿದ್ದಾರೆ.
ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವೆಬ್‌ಸೈಟ್ ಪ್ರಕಾರ, ಮೊದಲ ವಾಪಸಾತಿ ವಿಮಾನವು ರಾತ್ರಿ 11 ಗಂಟೆಗೆ ಸ್ವಲ್ಪ ಮುನ್ನ ಯುಎಇಯಿಂದ ಹೊರಟು, ಮುಂಜಾನೆ 1 ಗಂಟೆಯ ನಂತರ ಟೆಲ್ ಅವೀವ್ ತಲುಪಿತು.
ಇಂದು ಮುಂಜಾನೆ ದುಬೈಯಿಂದ ಆಗಮಿಸಬೇಕಿದ್ದ ವಿಮಾನಗಳ ಪಟ್ಟಿಯಲ್ಲಿ ಆರ್ಕಿಯಾ ಮತ್ತು ಇಸ್ರೇರ್ ವಿಮಾನಯಾನ ಸಂಸ್ಥೆಗಳ ವಿಮಾನಗಳು ಇದ್ದವು. ನಾಳೆ ಭಾನುವಾರ ದುಬೈಯಿಂದ ಇಸ್ರೇಲ್‌ಗೆ ಪ್ರಯಾಣಿಕರನ್ನು ಕರೆತರಲು ಎಲ್ ಅಲ್ ವಿಮಾನ ಹಾರಾಟ ನಡೆಸುವ ನಿರೀಕ್ಷೆಯಿತ್ತು.
2020ರಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತದ ಅವಧಿಯಲ್ಲಿ ಇಸ್ರೇಲ್ ಮತ್ತು ಅರಬ್ ದೇಶಗಳ ನಡುವಿನ ಸಂಬಂಧ ಸಾಮಾನ್ಯಗೊಳಿಸುವ ಉದ್ದೇಶದಿಂದ ಅಬ್ರಹಾಂ ಒಪ್ಪಂದಗಳ ಭಾಗವಾಗಿ ಇಸ್ರೇಲ್ ಮತ್ತು ಯುಎಇ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿದ ಬಳಿಕ ದುಬೈ ಇಸ್ರೇಲಿಯರ ಜನಪ್ರಿಯ ಪ್ರವಾಸಿ ತಾಣವಾಗಿದೆ.
ದಾಳಿ ಉಗ್ರವಾದದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ
ದಾಳಿಗೂ ಇರಾನ್ ಗೂ ಸಂಪರ್ಕವಿರುವ ಸಾಧ್ಯತೆ ಇದೆ ಎಂಬ ಪ್ರಾಥಮಿಕ ಮಾಹಿತಿ ತಮಗೆ ಲಭ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ವಿವರ ನೀಡಿಲ್ಲ. ದಾಳಿಯ ಹಿಂದೆ ಇರಾನ್ ಏಜೆಂಟ್‌ಗಳು ಇದ್ದಾರೆ ಎಂಬುದು ದೃಢಪಟ್ಟರೆ, ಅಮೆರಿಕವು ಅವರನ್ನು ಬಹಳ ಕಠಿಣವಾಗಿ ಹೊಡೆಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ತನಿಖೆಯಲ್ಲಿ ಇಸ್ರೇಲಿ ತನಿಖಾಧಿಕಾರಿಗಳು ಭಾಗಿಯಾಗಿದ್ದರೂ, ತನಿಖೆಯ ನೇತೃತ್ವವನ್ನು ಎಮಿರೇಟ್ಸ್ ಅಧಿಕಾರಿಗಳು ವಹಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಲು ಅನುಮತಿ ಇಲ್ಲದ ಅಧಿಕಾರಿಯೊಬ್ಬರು ಅನಾಮಧೇಯತೆಯ ಷರತ್ತಿನ ಮೇಲೆ ತಿಳಿಸಿದ್ದಾರೆ. ದಾಳಿಕೋರ ಯಾವುದಾದರೂ ಸಂಘಟನೆಯ ಭಾಗವಾಗಿದ್ದನೇ ಎಂಬುದು ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಇರಾನ್‌ನೊಂದಿಗೆ ಆತನ ಸಂಪರ್ಕವಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಅವರು ಹೇಳಿದ್ದಾರೆ.
ಫ್ಲೈದುಬೈ ವಿಮಾನ 15,000 ಅಡಿ ಎತ್ತರಕ್ಕೆ ಕುಸಿತ
ಬುಧವಾರ ಸೌದಿ ಅರೇಬಿಯಾದ ಟಬುಕ್‌ನಲ್ಲಿ ವಿಮಾನದ ಇತರ ಸಿಬ್ಬಂದಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಿದ ಈ ಭಯಾನಕ ಘಟನೆಯ ಕುರಿತು ಮತ್ತಷ್ಟು ವಿವರಗಳು ಹೊರಬರುತ್ತಿವೆ. ಗಾಯಗೊಂಡು, ಈ ವಿಮಾನದ ಹೀರೋಗಳಲ್ಲಿ ಒಬ್ಬರೆಂದು ಪ್ರಶಂಸಿಸಲ್ಪಟ್ಟಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮತ್ತು ಸಹ ಪೈಲಟ್ ಅವರನ್ನು ಗುರುವಾರ ಸೌದಿ ಅರೇಬಿಯಾದಿಂದ ಯುಎಇಗೆ ಸ್ಥಳಾಂತರಿಸಲಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಮಚ್ಚಾರ್ ಅವರು ಅಬುಧಾಬಿಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ನಿನ್ನೆ ದೂರದರ್ಶನದಲ್ಲಿ ಪ್ರಸಾರವಾದ ವಿಡಿಯೊ ಕಾಲ್ ಮೂಲಕ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದರು. ಕಾಕ್‌ಪಿಟ್ ಒಳಗೆ ದಾಳಿ ನಡೆದ ಬಳಿಕ ತಾವು ಎದುರಿಸಿದ ಭಯಾನಕ ಪರಿಸ್ಥಿತಿಯನ್ನು ಅವರು ವಿವರಿಸಿದರು.
ನನಗೆ ಅನೇಕ ಗಾಯಗಳಾಗಿದ್ದವು. ನಾನು ಕೆಳಗೆ ಬಿದ್ದಿದ್ದೆ ಎಂದು ತಲೆಗೆ ಬ್ಯಾಂಡೇಜ್ ಹಾಕಿಕೊಂಡಿದ್ದ ಅವರು ಕಣ್ಣೀರಿಡುತ್ತಾ ಹೇಳಿದರು. ನಾನು ನನ್ನ ಜೀವಕ್ಕಾಗಿ ಹೋರಾಡುತ್ತಿದ್ದೆ. ಒಂದು ಹಂತದಲ್ಲಿ ನನಗೆ ಅರಿವಾಯಿತು... ನಾನು ಎದ್ದು ನಿಲ್ಲದಿದ್ದರೆ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದರು.
ವಿಮಾನ ಹಾರಾಟ ಆರಂಭಗೊಂಡ ಎರಡು ಗಂಟೆಗಳಿಗೂ ಹೆಚ್ಚು ಸಮಯದ ಬಳಿಕ ಮೊದಲ ಬಾರಿಗೆ ಆತಂಕಕಾರಿ ಬೆಳವಣಿಗೆ ಸಂಭವಿಸಿತು. ವಿಮಾನ ಏಕಾಏಕಿ 16,600 ಅಡಿಗೆ ಕುಸಿಯಿತು. ದತ್ತಾಂಶ ಟ್ರ್ಯಾಕಿಂಗ್ ವೇದಿಕೆಗಳಲ್ಲಿ ದಾಖಲಾಗಿರುವ ಅತಿ ತೀವ್ರ ಎತ್ತರ ಕುಸಿತ ಇದಾಗಿದೆ.
ಆದರೆ ವಿಮಾನ ಮೂಗು ಕೆಳಮುಖವಾಗಿ ಧುಮುಕುವ ಕೆಲವೇ ಕ್ಷಣಗಳ ಮೊದಲು, ವಿಮಾನದ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಕಾಕ್‌ಪಿಟ್ ಒಳಗೆ ಹೊಡೆದಾಟ ನಡೆಯುತ್ತಿರುವಂತಹ ಶಬ್ದಗಳನ್ನು ಕೇಳಿದ್ದರು ಎಂದು ಎರಡನೇ ಸಾಲಿನಲ್ಲಿ ಕುಳಿತಿದ್ದ ಪ್ರಯಾಣಿಕ ಡೇನಿಯಲ್ ಶ್ಲಿಚ್ಟರ್ ಹೇಳಿದ್ದಾರೆ.
ಕೆಲವೇ ಸೆಕೆಂಡುಗಳ ಬಳಿಕ ವಿಮಾನ ಮತ್ತೆ 21,725 ಅಡಿ ಎತ್ತರಕ್ಕೆ ಏರಿತು. ನಂತರ ಶೀಘ್ರದಲ್ಲೇ 15,000 ಅಡಿಗೆ ಇಳಿದು, ಒಂದು ಗಂಟೆಗೂ ಹೆಚ್ಚು ಕಾಲ ಅದೇ ಎತ್ತರದಲ್ಲಿ ಹಾರಾಟ ನಡೆಸಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
ವಿಮಾನ ಬಹಳ ವೇಗವಾಗಿ ಕೆಳಗೆ ಇಳಿಯಲು ಆರಂಭಿಸಿತು. ಗುರುತ್ವಾಕರ್ಷಣೆಯು ನಮ್ಮನ್ನು ಹಿಂದಕ್ಕೆ ಎಳೆದಂತೆ ನಾವೆಲ್ಲರೂ ಹಿಂದಕ್ಕೆ ಸರಿದುಬಿಟ್ಟೆವು ಎಂದು ಶ್ಲಿಚ್ಟರ್ ಹೇಳಿದ್ದಾರೆ.
ವಿಮಾನ ಕೆಳಕ್ಕೆ ಧುಮುಕುತ್ತಿದ್ದಾಗ ಮಕ್ಕಳು ಕಿರುಚುತ್ತಿದ್ದ ದೃಶ್ಯ ಭಯಾನಕವಾಗಿತ್ತು ಎಂದು ಹೇಳಿದ್ದಾರೆ. ಬೋಯಿಂಗ್ 737 ವಿಮಾನದಲ್ಲಿ 174 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಇದ್ದರು. ಅವರಲ್ಲಿ ಬಹುತೇಕರು ಇಸ್ರೇಲಿಯರಾಗಿದ್ದರು. ಕ್ಯಾಪ್ಟನ್ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಪ್ರಯಾಣಿಕರು ಒಳಗೆ ಪ್ರವೇಶಿಸಿ ದಾಳಿಕೋರನನ್ನು ಹಿಡಿದು ನಿಯಂತ್ರಿಸಲು ಸಾಧ್ಯವಾಯಿತು. ಅಷ್ಟರಲ್ಲಿ ವಿಮಾನ ತೀವ್ರವಾಗಿ ಕೆಳಕ್ಕೆ ಇಳಿಯುತ್ತಿತ್ತು.
ಪ್ರಯಾಣಿಕರು ಸಹ ಪೈಲಟ್‌ನನ್ನು ಕಾಕ್‌ಪಿಟ್‌ನಿಂದ ಹೊರಗೆಳೆದು ಮುಖ್ಯ ಕ್ಯಾಬಿನ್‌ನ ನೆಲಕ್ಕೆ ಕೆಡವಿದರು. ಬಳಿಕ ಹೆಡ್‌ಫೋನ್‌ಗಳನ್ನು ಬಳಸಿ ಆತನ ಕೈಗಳನ್ನು ಕಟ್ಟಿಹಾಕಿದರು. ಗಾಯಗೊಂಡ ಪೈಲಟ್‌ನನ್ನು ಸಹ ಆತನ ಪಕ್ಕದಲ್ಲೇ ಮಲಗಿಸಲಾಯಿತು. ದಂತ ವೈದ್ಯರೊಬ್ಬರು ಪೈಲಟ್‌ನ ಗಾಯಗಳಿಗೆ ಚಿಕಿತ್ಸೆ ನೀಡಿದರು.
ವಿಮಾನದಲ್ಲಿದ್ದ ಶ್ಲಿಚ್ಟರ್ ಮತ್ತು ದಂತ ವೈದ್ಯ ಡಾ. ಶೋಟಾ ಮುಸಾಯೆವ್ ಅವರಿಬ್ಬರೂ ವಿಮಾನದ ಮುಂಭಾಗದಲ್ಲಿ ಯಾವುದೇ ಚಾಕು ಅಥವಾ ಇತರ ಆಯುಧಗಳು ಕಾಣಿಸಲಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.







