US-Iran war: ಹೊಸ ಯುದ್ಧಕ್ಕೆ ಸಂಚು ನಡೆಸಿದ್ದಾರೆ, ನಮ್ಮನ್ನು ಕೆಣಕಿದರೆ ವಿನಾಶಕಾರಿ ದಾಳಿ ಖಂಡಿತ; ಅಮೆರಿಕಾಕ್ಕೆ ಇರಾನ್ ತಿರುಗೇಟು
ಒಂದು ವೇಳೆ ಇರಾನ್ ವಿರುದ್ಧ ಆಕ್ರಮಣ ಮರುಕಳಿಸಿದರೆ ಈ ಬಾರಿಯ ಪ್ರಾದೇಶಿಕ ಯುದ್ಧವು ಮಧ್ಯಪ್ರಾಚ್ಯದ ಗಡಿಗಳನ್ನು ಮೀರಿ ಇಡೀ ವಿಶ್ವಕ್ಕೆ ಹರಡಲಿದೆ ಮತ್ತು ಶತ್ರುಗಳನ್ನು ಹತ್ತಿಕ್ಕುವಂತಹ ವಿನಾಶಕಾರಿ ಪ್ರತಿದಾಳಿಯನ್ನು ಎದುರಿಸಬೇಕಾಗುತ್ತದೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಶಾಂತಿ ಒಪ್ಪಂದ ಏರ್ಪಡದಿದ್ದರೆ ಮತ್ತೊಮ್ಮೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಹೊಸ ಯುದ್ಧವನ್ನು ಪ್ರಾರಂಭಿಸಲು ಅಮೆರಿಕಾ ಬಯಸುತ್ತಿದೆ ಎಂದು ಇರಾನ್ ಮುಖ್ಯ ಸಂಧಾನಕಾರ ಮೊಹಮ್ಮದ್ ಬಘರ್ ಘಾಲಿಬಾಫ್ ಆರೋಪಿಸಿದ್ದಾರೆ.
ಅಮೆರಿಕವು ಆರ್ಥಿಕ ಮತ್ತು ರಾಜಕೀಯ ಒತ್ತಡಗಳ ಹೊರತಾಗಿಯೂ ತನ್ನ ಮಿಲಿಟರಿ ಉದ್ದೇಶಗಳನ್ನು ಕೈಬಿಟ್ಟಿಲ್ಲ ಎಂಬುದನ್ನು ಅದರ ಬಹಿರಂಗ ಹಾಗೂ ರಹಸ್ಯ ನಡೆಗಳು ತೋರಿಸುತ್ತಿವೆ ಎಂದು ಅವರು ದೂರಿದ್ದಾರೆ.
ಇದಕ್ಕೆ ಪೂರಕವಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಪಡೆಗಳು ಕೂಡ ಕಠಿಣ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಇರಾನ್ ವಿರುದ್ಧ ಆಕ್ರಮಣ ಮರುಕಳಿಸಿದರೆ ಈ ಬಾರಿಯ ಪ್ರಾದೇಶಿಕ ಯುದ್ಧವು ಮಧ್ಯಪ್ರಾಚ್ಯದ ಗಡಿಗಳನ್ನು ಮೀರಿ ಇಡೀ ವಿಶ್ವಕ್ಕೆ ಹರಡಲಿದೆ ಮತ್ತು ಶತ್ರುಗಳನ್ನು ಹತ್ತಿಕ್ಕುವಂತಹ ವಿನಾಶಕಾರಿ ಪ್ರತಿದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಆದರೆ, ಈ ಎಲ್ಲ ಯುದ್ಧದ ಬೆದರಿಕೆಗಳ ನಡುವೆಯೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜತಾಂತ್ರಿಕ ಮಾತುಕತೆಗಳ ಬಾಗಿಲನ್ನು ಮುಕ್ತವಾಗಿಟ್ಟಿದ್ದಾರೆ.
ಇರಾನ್ ಜೊತೆಗಿನ ಮಾತುಕತೆ ಪ್ರಸ್ತುತ ಅಂತಿಮ ಹಂತದಲ್ಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿರುವ ಟ್ರಂಪ್, ನಾವು ಶೀಘ್ರದಲ್ಲೇ ಒಂದು ಒಪ್ಪಂದಕ್ಕೆ ಬರುತ್ತೇವೆ. ಒಪ್ಪಂದವಾಗದಿದ್ದರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸದ್ಯಕ್ಕೆ ತಮಗೆ ಯಾವುದೇ ಆತುರವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಯುದ್ಧದ ಮೂಲಕ ಅತಿ ಹೆಚ್ಚು ಜನರು ಸಾಯುವುದಕ್ಕಿಂತ ಕಡಿಮೆ ಸಾವುನೋವುಗಳೊಂದಿಗೆ ಜಾಗತಿಕ ಶಾಂತಿ ಸ್ಥಾಪನೆಯಾಗುವುದು ನಮ್ಮ ಆಶಯವಾಗಿದೆ ಎಂದಿದ್ದಾರೆ.
ಮಾತುಕತೆಗಳಲ್ಲಿ ಅಮೆರಿಕದ ಕೈ ಮೇಲಾಗಿದ್ದು, ಇರಾನ್ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಒಪ್ಪಂದಕ್ಕಾಗಿ ಹಪಹಪಿಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಕಳೆದ ಏಪ್ರಿಲ್ 8 ರಂದು ಜಾರಿಗೆ ಬಂದ ಕದನ ವಿರಾಮವು ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ನೀಡಿದೆಯಾದರೂ, ಉಭಯ ದೇಶಗಳ ನಡುವಿನ ವಾಕ್ಸಮರ ಮತ್ತು ಉದ್ವಿಗ್ನತೆ ಇನ್ನೂ ಕಡಿಮೆಯಾಗಿಲ್ಲ.
ಈ ಬಿಕ್ಕಟ್ಟನ್ನು ಬಗೆಹರಿಸಲು ಪಾಕಿಸ್ತಾನವು ಪ್ರಮುಖ ಮಧ್ಯಸ್ಥಿಕೆ ವಹಿಸುತ್ತಿದ್ದು, ಅದರ ಭಾಗವಾಗಿ ಪಾಕಿಸ್ತಾನದ ಆಂತರಿಕ ಸಚಿವರು ಕೇವಲ ಒಂದು ವಾರದಲ್ಲಿ ಎರಡನೇ ಬಾರಿಗೆ ಟೆಹ್ರಾನ್‌ಗೆ ಭೇಟಿ ನೀಡಿ ಸಂಧಾನ ಮಾತುಕತೆ ನಡೆಸುತ್ತಿದ್ದಾರೆ.
ಈ ರಾಜತಾಂತ್ರಿಕ ಪ್ರಯತ್ನಗಳ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಬುಧವಾರ ಶೇಕಡಾ 5 ಕ್ಕಿಂತ ಹೆಚ್ಚು ಕುಸಿತ ಕಂಡಿವೆ.
ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅವರು ಟ್ರಂಪ್ ಅವರ ಈ ನಿರ್ಧಾರವನ್ನು ಶ್ಲಾಘಿಸಿದ್ದು, ಪ್ರಾದೇಶಿಕ ವಿನಾಶವನ್ನು ತಪ್ಪಿಸಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಇರಾನ್‌ಗೆ ಕರೆ ನೀಡಿದ್ದಾರೆ.
ಇತ್ತ ಇಸ್ರೇಲ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಕರ್ನಲ್ ಇಯಾಲ್ ಜಮೀರ್ ತಮ್ಮ ಪಡೆಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಕಟ್ಟೆಚ್ಚರದಿಂದಿದ್ದೇವೆಂದು ತಿಳಿಸಿದ್ದಾರೆ.

ಅಮೆರಿಕಾ ಜೊತೆ ಒಪ್ಪಂದಕ್ಕೆ ಇರಾನ್ ಕಾತರ, ಶೀಘ್ರದಲ್ಲೇ ಯುದ್ಧ ಅಂತ್ಯ; ತೈಲ ಬೆಲೆ ಭಾರೀ ಕುಸಿತ: ಡೊನಾಲ್ಡ್ ಟ್ರಂಪ್
ಈ ಯುದ್ಧದ ಬಿಕ್ಕಟ್ಟು ಕೇವಲ ಮಧ್ಯಪ್ರಾಚ್ಯಕ್ಕೆ ಸೀಮಿತವಾಗಿರದೆ ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕದನ ವಿರಾಮ ಜಾರಿಯಲ್ಲಿದ್ದರೂ, ಜಗತ್ತಿನ ಐದನೇ ಒಂದು ಭಾಗದಷ್ಟು ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆಯಾಗುವ ಪ್ರಮುಖ ಜಲಮಾರ್ಗವಾದ 'ಸ್ಟ್ರೈಟ್ ಆಫ್ ಹಾರ್ಮುಜ್' ಅನ್ನು ಇರಾನ್ ಇನ್ನೂ ಮುಕ್ತಗೊಳಿಸದಿರುವುದು ಮಾತುಕತೆಗಳಲ್ಲಿ ದೊಡ್ಡ ಕಂಟಕವಾಗಿ ಪರಿಣಮಿಸಿದೆ.
ತೈಲ ನಿರಂತರವಾಗಿ ಸರಬರಾಜು ಆಗದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿದ್ದು, ಆಫ್ರಿಕಾದ ಕೀನ್ಯಾದಲ್ಲಿ ತೀವ್ರ ಜನಪ್ರತಿಭಟನೆಗಳು ಭುಗಿಲೆದ್ದಿವೆ. ಅಲ್ಲಿನ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದು, ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದಲ್ಲದೆ, ಜಗತ್ತಿನ ಮೂರನೇ ಒಂದು ಭಾಗದಷ್ಟು ರಸಗೊಬ್ಬರ ಸಾಗಣೆಯೂ ಇದೇ ಜಲಮಾರ್ಗದ ಮೂಲಕ ನಡೆಯುವುದರಿಂದ, ಇದು ಹೀಗೆಯೇ ಮುಂದುವರಿದರೆ ಜಾಗತಿಕವಾಗಿ ತೀವ್ರ ಆಹಾರದ ಅಭಾವ ಮತ್ತು ಕೃಷಿ ವಲಯದಲ್ಲಿ ಆರ್ಥಿಕ ಆಘಾತ ಉಂಟಾಗಬಹುದು ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಕಳವಳ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



