ವಿದೇಶ

ಅಮೆರಿಕಾ ಜೊತೆ ಒಪ್ಪಂದಕ್ಕೆ ಇರಾನ್‌ ಕಾತರ, ಶೀಘ್ರದಲ್ಲೇ ಯುದ್ಧ ಅಂತ್ಯ; ತೈಲ ಬೆಲೆ ಭಾರೀ ಕುಸಿತ: ಡೊನಾಲ್ಡ್ ಟ್ರಂಪ್

ಪ್ರಪಂಚದಲ್ಲಿ ಸಾಕಷ್ಟು ತೈಲ ಲಭ್ಯವಿದೆ. ತೈಲದ ಬೆಲೆಗಳು ಇನ್ನಷ್ಟು ಕುಸಿಯಲಿವೆ. ನಾವು ಈ ಯುದ್ಧವನ್ನು ಬಹಳ ಬೇಗ ಮುಗಿಸುತ್ತೇವೆ. ಇರಾನ್ ಒಪ್ಪಂದ ಮಾಡಲು ತುಂಬಾ ಕಾತರದಿಂದಿದೆ.

ಅಮೆರಿಕಾ ಜೊತೆ ಒಪ್ಪಂದಕ್ಕೆ ಇರಾನ್‌ ಕಾತರ, ಶೀಘ್ರದಲ್ಲೇ ಯುದ್ಧ ಅಂತ್ಯ; ತೈಲ ಬೆಲೆ ಭಾರೀ ಕುಸಿತ: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್,ಮೊಜ್ತಾಬಾ ಖಮೇನಿ
Published On :

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್‌ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದರೂ, ಇದೇ ವೇಳೆ ಯುದ್ಧ ಪರಿಸ್ಥಿತಿ ಶೀಘ್ರದಲ್ಲೇ ಶಮನವಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಇರಾನ್‌ ಸರ್ಕಾರ ಅಮೆರಿಕದೊಂದಿಗೆ ಒಪ್ಪಂದ ಮಾಡಲು ತೀವ್ರ ಆಸಕ್ತಿ ತೋರಿಸುತ್ತಿದೆ ಎಂದು ಹೇಳಿದ ಟ್ರಂಪ್‌, ಶೀಘ್ರದಲ್ಲೇ ಕಚ್ಚಾ ತೈಲದ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿವೆ ಎಂದು ಹೇಳಿದ್ದಾರೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, “ಪ್ರಪಂಚದಲ್ಲಿ ಸಾಕಷ್ಟು ತೈಲ ಲಭ್ಯವಿದೆ. ತೈಲದ ಬೆಲೆಗಳು ಇನ್ನಷ್ಟು ಕುಸಿಯಲಿವೆ. ನಾವು ಈ ಯುದ್ಧವನ್ನು ಬಹಳ ಬೇಗ ಮುಗಿಸುತ್ತೇವೆ. ಇರಾನ್ ಒಪ್ಪಂದ ಮಾಡಲು ತುಂಬಾ ಕಾತರದಿಂದಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಾಗೂ ತೈಲ ಮಾರುಕಟ್ಟೆಯ ಏರಿಳಿತಗಳ ನಡುವೆಯೇ ಟ್ರಂಪ್‌ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.

ಇದರ ಬೆನ್ನಲ್ಲೇ ಅಮೆರಿಕಾ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೂ ನಡೆದಿದೆ. ಅಮೆರಿಕ ಸೆನೆಟ್‌ನಲ್ಲಿ ಟ್ರಂಪ್‌ಗೆ ಇರಾನ್‌ ವಿರುದ್ಧ ಯುದ್ಧ ನಡೆಸುವ ಅಧಿಕಾರವನ್ನು ಮಿತಿಗೊಳಿಸುವ ನಿರ್ಣಯಕ್ಕೆ ಅನುಮೋದನೆ ದೊರೆತಿದೆ.

ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಟಿಮ್ ಕೈನೆ ಮಂಡಿಸಿದ್ದ ಈ ನಿರ್ಣಯಕ್ಕೆ ಕೆಲ ರಿಪಬ್ಲಿಕನ್ ಸದಸ್ಯರೂ ಬೆಂಬಲ ನೀಡಿದ್ದಾರೆ.

50-47 ಮತಗಳ ಅಂತರದಲ್ಲಿ ಈ ನಿರ್ಣಯಕ್ಕೆ ಅನುಮೋದನೆ ದೊರೆತಿದ್ದು, ನಾಲ್ವರು ರಿಪಬ್ಲಿಕನ್‌ ಸದಸ್ಯರೂ ಡೆಮಾಕ್ರಟಿಕ್‌ ಸದಸ್ಯರ ಜೊತೆ ಕೈಜೋಡಿಸಿದ್ದಾರೆ. ಸುಸಾನ್ ಕಾಲಿನ್ಸ್, ಲಿಸಾ ಮುರ್ಕೋವ್ಸ್ಕಿ, ರಾಂಡ್ ಪಾಲ್ ಮತ್ತು ಬಿಲ್ ಕ್ಯಾಸಿಡಿ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದಾರೆ.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಡೆಮಾಕ್ರಟಿಕ್‌ ಸೆನೆಟರ್ ಆಡಮ್ ಸ್ಕಿಫ್, “ಅಸಂವಿಧಾನಿಕ ಯುದ್ಧಕ್ಕೆ ಅಂತ್ಯಕಾಣಿಸಲು ಸೆನೆಟ್‌ ಮತ್ತೊಮ್ಮೆ ತನ್ನ ಸಂವಿಧಾನಬದ್ಧ ಹೊಣೆಗಾರಿಕೆಯನ್ನು ನಿರ್ವಹಿಸಿದೆ” ಎಂದು ಹೇಳಿದ್ದಾರೆ.

ಸೆನೆಟರ್ ಬರ್ನಿ ಸ್ಯಾಂಡರ್ಸ್ ಕೂಡ ಪ್ರತಿಕ್ರಿಯಿಸಿ, ಅಮೆರಿಕ ಜನತೆ ಯುದ್ಧಗಳಿಗೆ ಕೋಟ್ಯಂತರ ಡಾಲರ್‌ ವೆಚ್ಚ ಮಾಡಲು ಇಷ್ಟಪಡುವುದಿಲ್ಲ. ದೇಶದ ಒಳಗಿನ ಗಂಭೀರ ಸಮಸ್ಯೆಗಳತ್ತ ಸರ್ಕಾರ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದೆಡೆ, ಅಮೆರಿಕಾ ಮತ್ತು ಇರಾನ್‌ ನಡುವೆ ಶಾಂತಿ ಒಪ್ಪಂದದ ಮಾತುಕತೆಗಳು ಮುಂದುವರಿದಿರುವುದಾಗಿ ವರದಿಯಾಗಿದೆ.

ಈ ನಡುವೆ ಅಮೆರಿಕಾ ಇರಾನ್‌ ಮೇಲೆ ನಡೆಸಲು ಯೋಜಿಸಿದ್ದ ಸೇನಾ ದಾಳಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಪೋಸ್ಟ್‌ನಲ್ಲಿ, ತಮೀಮ್ ಬಿನ್ ಹಮದ್ ಅಲ್ ಥಾನಿ, ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮನವಿಯ ಮೇರೆಗೆ ದಾಳಿಯನ್ನು ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.

ಇರಾನ್‌ ಅಣ್ವಸ್ತ್ರಗಳನ್ನು ಹೊಂದಬಾರದು ಎಂಬುದು ಈ ಒಪ್ಪಂದದ ಪ್ರಮುಖ ಅಂಶ. ಒಪ್ಪಂದ ಕೈಗೂಡದಿದ್ದರೆ ಯಾವುದೇ ಕ್ಷಣದಲ್ಲಿ ಭಾರೀ ಮಟ್ಟದ ಸೇನಾ ದಾಳಿಗೆ ಅಮೆರಿಕ ಸಿದ್ಧವಾಗಿದೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮುಂದುವರಿದಿರುವ ಸಂದರ್ಭದಲ್ಲೇ, ಒಂದೆಡೆ ಶಾಂತಿ ಮಾತುಕತೆಗಳು ನಡೆಯುತ್ತಿರುವುದು ಮತ್ತು ಮತ್ತೊಂದೆಡೆ ಅಮೆರಿಕ ಸೇನಾ ಸಿದ್ಧತೆ ಹೆಚ್ಚಿಸುತ್ತಿರುವುದು ಜಾಗತಿಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.