ಲಷ್ಕರ್ ಉಗ್ರ Bilal Arif Sarafi ಹತ್ಯೆಗೆ ಟ್ವಿಸ್ಟ್: ಕೊಂದಿದ್ದು 'ಧುರಂಧರ್' ಅಲ್ಲ ಎಂದ ಪಾಕಿಸ್ತಾನ; ಮತ್ಯಾರು? Video
ಅತ್ಯಂತ ಕಠಿಣ ಭದ್ರತೆ ಇರುವ ಪ್ರದೇಶದಲ್ಲೇ, ಲಷ್ಕರ್-ಎ-ತೈಬಾ ಸಂಘಟನೆಯ ಪ್ರಮುಖ ನಾಯಕರಲ್ಲಿ ಒಬ್ಬನಾದ ಬಿಲಾಲ್ ಆರಿಫ್ ಸಲಾಫಿಯನ್ನು ಹತ್ಯೆ ಮಾಡಲಾಗಿದೆ.

ಲಾಹೋರ್: ಇತ್ತೀಚೆಗೆ ಪಾಕಿಸ್ತಾನ ಮೂಲದ ಉಗ್ರ ನಾಯಕರ ಸರಣಿ ಹತ್ಯೆಗಳಾಗುತ್ತಿದ್ದು, ಈ ಪಟ್ಟಿಗೆ ಇದೀಗ ಲಷ್ಕರ್ ಉಗ್ರ ಬಿಲಾಲ್ ಆರಿಫ್ ಸರಾಫಿ (Bilal Arif Sarafi) ಕೂಡ ಸೇರ್ಪಡೆಯಾಗಿದ್ದಾನೆ.
ಲಷ್ಕರ್ ಉಗ್ರ ಸಂಘಟನೆಗಾಗಿ ಪಾಕಿಸ್ತಾನ ಮತ್ತು ಭಾರತದಿಂದ ಅಮಾಯಕ ಯುವಕರನ್ನು ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ ಈ ಬಿಲಾಲ್ ಆರಿಫ್ ಸರಾಫಿ ಭಾರತದ ಏಜೆಂಟರುಗಳಿಗೆ ಮೋಸ್ಟ್ ವಾಂಟೆಡ್ ಆಗಿದ್ದ. ಆದರೆ ತನ್ನದೇ ದೇಶದ ತನ್ನದೇ ಪ್ರದೇಶದಲ್ಲಿ ಇದೀಗ ಬೀದಿ ಹೆಣವಾಗಿದ್ದಾನೆ.
ಪಾಕಿಸ್ತಾನದ ಮುರಿಡ್ಕೆ ಪಟ್ಟಣದಿಂದ ಬಂದಿರುವ ಇತ್ತೀಚಿನ ಘಟನೆ ಭಯೋತ್ಪಾದನಾ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಅತ್ಯಂತ ಕಠಿಣ ಭದ್ರತೆ ಇರುವ ಪ್ರದೇಶದಲ್ಲೇ, ಲಷ್ಕರ್-ಎ-ತೈಬಾ ಸಂಘಟನೆಯ ಪ್ರಮುಖ ನಾಯಕರಲ್ಲಿ ಒಬ್ಬನಾದ ಬಿಲಾಲ್ ಆರಿಫ್ ಸಲಾಫಿಯನ್ನು ಹತ್ಯೆ ಮಾಡಲಾಗಿದೆ. ಆದರೆ ಈ ಹತ್ಯೆಯನ್ನು ಅನಾಮಿಕರು ಮಾಡಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ರಂಜಾನ್ ಪ್ರಾರ್ಥನೆ ಬೆನ್ನಲ್ಲೇ ಹರಿದ ನೆತ್ತರು
ಇನ್ನು ಶನಿವಾರ ರಂಜಾನ್ ಹಬ್ಬದ ನಿಮಿತ್ತ ಬಿಲಾಲ್ ಸಾಮೂಹಿಕ ಪ್ರಾರ್ಥನೆಗಾಗಿ ಸ್ಥಳೀಯ ಮಸೀದಿಗೆ ಹೋಗಿದ್ದ. ಅಲ್ಲಿ ಪ್ರಾರ್ಥನೆ ಮಾಡಿ ಹೊರಬರುತ್ತಲೇ ಅನಾಮಿಕರು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಗುಂಡು ಹಾರಿಸಿದ್ದಾರೆ.
ದಾಳಿಕೋರರು ಒಳಗೆ ನುಗ್ಗಿ ಬಿಲಾಲ್ ಆರಿಫ್ ಸಲಾಫಿಯನ್ನು ಗುರಿಯಾಗಿಸಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ದಾಳಿಯ ನಂತರ ದಾಳಿಕೋರರು ಯಾವುದೇ ಸುಳಿವು ಬಿಟ್ಟಿಲ್ಲದೇ ಅಲ್ಲಿಂದ ಪಾರಾಗಿದ್ದಾರೆ.
ಭದ್ರತೆ ನಡುವೆಯೇ ದಾಳಿ!
ಅಂದಹಾಗೆ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾ, ಲಷ್ಕರ್-ಎ-ತೈಬಾದ ಮುಖ್ಯ ಕೇಂದ್ರವಾಗಿದ್ದು, ಹೊರಗಿನವರಿಗೆ ಪ್ರವೇಶ ಸಾಧ್ಯವಿಲ್ಲವೆಂದು ಹೇಳಲಾಗುತ್ತದೆ. ಇಂತಹ ಕಟ್ಟುನಿಟ್ಟಿನ ಭದ್ರತೆಯ ನಡುವೆಯೇ ಈ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಯಾರು ಈ ಬಿಲಾಲ್?
ಬಿಲಾಲ್ ಆರಿಫ್ ಸಲಾಫಿ, ಲಷ್ಕರ್ ಸಂಘಟನೆಯ ಪ್ರಮುಖ ತಂತ್ರಜ್ಞನಾಗಿದ್ದ. ಭಾರತದ ವಿರುದ್ಧದ ಚಟುವಟಿಕೆಗಳಲ್ಲಿ ಅವನ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ ಆತ್ಮಹತ್ಯಾ ದಾಳಿಗಳ ಯೋಜನೆ, ಹೊಸ ಭಯೋತ್ಪಾದಕರಿಗೆ ತರಬೇತಿ ಹಾಗೂ ಸಂಘಟನೆಯ ಪ್ರಚಾರ ಕಾರ್ಯಗಳಲ್ಲಿ ಅವನು ಸಕ್ರಿಯನಾಗಿದ್ದನು. ಹಫೀಜ್ ಸಯ್ಯದ್ ನ ಆಪ್ತ ಸಹಚರನಾಗಿದ್ದ, ಸಂಘಟನೆಯ “ಬಲಗೈ” ಎಂದು ಕರೆಯಲ್ಪಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ISIಗೇ ಮತ್ತೊಂದು ಆಘಾತ
ಇನ್ನು ಬಿಲಾಲ್ ಹತ್ಯೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಹೊಸ ತಲೆನೋವು ತಂದೊಡ್ಡಿದ್ದು, ಇತ್ತೀಚೆಗೆ ಪಾಕಿಸ್ತಾನದಲ್ಲಿನ ಉಗ್ರ ನಾಯಕರು ಒಬ್ಬರಾದ ಮೇಲೆ ಒಬ್ಬರು ಸಾವನ್ನಪ್ಪುತ್ತಿದ್ದಾರೆ.
ಬಿಲಾಲ್ ರೀತಿಯಲ್ಲೇ ಜೈಶ್ ಇ-ಮೊಹ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ ಸಂಘಟನೆಗಳ ಪ್ರಮುಖ ಕಮಾಂಡರ್ಗಳೂ ಇದೇ ರೀತಿಯಲ್ಲಿ ಹತ್ಯೆಯಾಗಿದ್ದಾರೆ.
ಈ ಘಟನೆ ನಂತರ ಪಾಕಿಸ್ತಾನದ ಭದ್ರತಾ ಸಂಸ್ಥೆಗಳು, ವಿಶೇಷವಾಗಿ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ಐಎಸ್ಐ), ತೀವ್ರ ಒತ್ತಡಕ್ಕೆ ಒಳಗಾಗಿವೆ.
ಭಾರತದ RAW ಕೈವಾಡ
ಈ ಸರಣಿ ಹತ್ಯೆಗಳು “ಆಂತರಿಕ ಶುದ್ಧೀಕರಣ” ಅಥವಾ ರಹಸ್ಯ ಕಾರ್ಯಾಚರಣೆಗಳ ಭಾಗವಾಗಿರಬಹುದು ಎಂಬ ಶಂಕೆಗಳು ವ್ಯಕ್ತವಾಗುತ್ತಿವೆ. ಈ ಸರಣಿ ಹತ್ಯೆಗಳ ಹಿಂದೆ ಭಾರತದ ಗುಪ್ತಚರ ಇಲಾಖೆ RAW ನ ಏಜೆಂಟರುಗಳ ಕೈವಾಡವಿದೆ ಎಂದು ಪಾಕಿಸ್ತಾನ ಶಂಕಿಸಿದೆಯಾದರೂ ಈ ಬಗ್ಗೆ ಎಲ್ಲಿಯೂ ಅದಿಕೃತವಾಗಿ ಹೇಳಿಕೆ ನೀಡುತ್ತಿಲ್ಲ.
ಜಾಗತಿಕ ಮಟ್ಟದಲ್ಲಿ ತನ್ನ ಮಾನ ಹರಾಜಾಗುವ ಭೀತಿಯಿಂದ ಈ ಹತ್ಯೆಗಳಿಗೆ ಪಾಕಿಸ್ತಾನ ವಿವಿಧ ಕಾರಣಗಳ ತೇಪೆ ಹಚ್ಚುತ್ತಿದೆ ಎನ್ನಲಾಗಿದೆ. ಕೆಲವರು ಇದನ್ನು ಗುಪ್ತಚರ ಸಂಸ್ಥೆಗಳ ಕಾರ್ಯವೆಂದು ಹೇಳುತ್ತಿದ್ದರೆ, ಇನ್ನು ಕೆಲವರು ಸಂಘಟನೆಗಳ ಒಳಜಗಳವೇ ಕಾರಣವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೌಟುಂಬಿಕ ಕಲಹವೇ ಕಾರಣ?
ಇನ್ನು ಬಿಲಾಲ್ ಹತ್ಯೆ ಪಾಕಿಸ್ತಾನ ಮಾತ್ರವಲ್ಲದೇ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಲೇ ಈ ಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.
ಕೌಟುಂಬಿಕ ಕಲಹದಿಂದ ಕೃತ್ಯ ನಡೆದಿರಬಹುದು. ಕೊಲೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




