ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ- ಟ್ರಂಪ್ ಮಾರ್ಮಿಕ ನುಡಿ; ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಇದು ಯುದ್ಧವೇ, ನಾವು ಯುದ್ಧದಲ್ಲಿದ್ದೇವೆ” ಎಂದು ಹೇಳುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳಿದ್ದಾರೆ.

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇತ್ತೀಚೆಗೆ ವಾಯುಪ್ರದೇಶದ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕಾ ಯುದ್ಧವಿಮಾನವನ್ನು ಇರಾನ್ ಪಡೆಗಳು ಹೊಡೆದುರುಳಿಸಿದ ಘಟನೆ ಜಾಗತಿಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅಮೆರಿಕಾ ಯುದ್ಧವಿಮಾನವು ಮಹತ್ವದ ಮಿಷನ್‌ನಲ್ಲಿ ತೊಡಗಿಸಿಕೊಂಡಿದ್ದ ವೇಳೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ವಿಮಾನದಲ್ಲಿ ಇಬ್ಬರು ಸಿಬ್ಬಂದಿ ಇದ್ದರು ಎನ್ನಲಾಗಿದ್ದು, ಈ ಪೈಕಿ ಒಬ್ಬ ಪೈಲಟ್‌ನ್ನು ಸುರಕ್ಷಣೆ ಮಾಡಲಾಗಿದ್ದು, ಮತ್ತೊಬ್ಬ ಸಿಬ್ಬಂದಿ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಇವರಿಗಾಗಿ ಅಮೆರಿಕಾ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಈ ರಕ್ಷಣಾ ಕಾರ್ಯಾಚರಣೆ ಕೂಡ ಸುಲಭವಾಗಿರಲಿಲ್ಲ. ಶೋಧ ಕಾರ್ಯಕ್ಕೆ ತೆರಳಿದ್ದ ಅಮೆರಿಕಾ ಹೆಲಿಕಾಪ್ಟರ್‌ಗಳ ಮೇಲೂ ಇರಾನ್ ಪಡೆಗಳು ದಾಳಿ ನಡೆಸಿದ ವರದಿಗಳು ಲಭ್ಯವಾಗಿವೆ.
ಇದರಿಂದಾಗಿ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದೆ. ಯುದ್ಧದ ವಾತಾವರಣದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಅಮೆರಿಕಾಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಘಟನೆಯ ನಂತರ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಇದು ಯುದ್ಧವೇ, ನಾವು ಯುದ್ಧದಲ್ಲಿದ್ದೇವೆ” ಎಂದು ಹೇಳುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳಿದ್ದಾರೆ.
ಆದಾಗ್ಯೂ, ಈ ಘಟನೆ ಇರಾನ್ ಜೊತೆ ನಡೆಯುತ್ತಿರುವ ಮಾತುಕತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆ ಅಮೆರಿಕಾ-ಇರಾನ್ ಸಂಬಂಧಗಳನ್ನು ಮತ್ತಷ್ಟು ಹದಗೆಡಿಸಿದೆ. ಇತ್ತೀಚಿನ ಘಟನೆಗಳು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಈ ನಡುವೆ ಅಮೆರಿಕಾ ತನ್ನ ಸೈನಿಕ ಶಕ್ತಿಯನ್ನು ಪ್ರದರ್ಶಿಸುತ್ತಿರುವಾಗ, ಇರಾನ್ ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ತೋರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸರಬರಾಜಿನ ಪ್ರಮುಖ ಕೇಂದ್ರವಾಗಿರುವುದರಿಂದ, ಯಾವುದೇ ಯುದ್ಧದ ಪರಿಣಾಮಗಳು ಜಾಗತಿಕ ಆರ್ಥಿಕತೆಯ ಮೇಲೂ ಬೀರುವ ಸಾಧ್ಯತೆ ಇದೆ. ತೈಲ ಬೆಲೆ ಏರಿಕೆ, ಸಾಗಣೆ ಸಮಸ್ಯೆಗಳು, ಮತ್ತು ವ್ಯಾಪಾರ ವ್ಯತ್ಯಯಗಳು ಎದುರಾಗುವ ಭೀತಿ ಹೆಚ್ಚಾಗಿದೆ.
ಈಗಾಗಲೇ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಆತಂಕ ವ್ಯಕ್ತಪಡಿಸಿದ್ದು, ಕೆಲ ರಾಷ್ಟ್ರಗಳು ಶಾಂತಿ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಪರಿಹರಿಸಲು ಕರೆ ನೀಡಿದ್ದರೆ, ಇನ್ನು ಕೆಲವು ರಾಷ್ಟ್ರಗಳು ತಮ್ಮ ನಾಗರಿಕರ ಸುರಕ್ಷತೆಗಾಗಿ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ.
ಒಟ್ಟಿನಲ್ಲಿ, ಪ್ರಸ್ತುತ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಮತ್ತಷ್ಟು ಗಂಭೀರಗೊಳಿಸಿದ್ದು, ಮುಂದಿನ ದಿನಗಳಲ್ಲಿ ಯುದ್ಧ ವಿಸ್ತಾರವಾಗುವ ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ಈಗಿನ ಪರಿಸ್ಥಿತಿಯಲ್ಲಿ ವಿಶ್ವದ ಗಮನ ಅಮೆರಿಕಾ ಮತ್ತು ಇರಾನ್ ನಡುವಿನ ಮುಂದಿನ ಬೆಳವಣಿಗೆಗಳತ್ತ ನೆಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



