FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್
ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನ ಸಂಖ್ಯೆ ಎಫ್‌ಝಡ್1073ರಲ್ಲಿ ಮಧ್ಯಾಕಾಶದಲ್ಲಿ ನಡೆದ ಅಪಹರಣ ಹಾಗೂ ವಿಮಾನ ಪತನದ ಯತ್ನದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ವಾಷಿಂಗ್ಟನ್: ಫ್ಲೈದುಬೈ ವಿಮಾನದ ಹೈಜಾಕ್ ಯತ್ನದ ಹಿಂದೆ ಇರಾನ್ ದೇಶದ ನೇರ ಕೈವಾಡವಿದೆ. ಇದು ನನ್ನ ವೈಯಕ್ತಿಕವಾಗಿ ನಂಬಿಕೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ವೈಟ್ ಹೌಸ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳು, ಫ್ಲೈದುಬೈ ವಿಮಾನದ ಮೇಲಿನ ದಾಳಿಗೆ ಇರಾನ್ ಹೊಣೆ ಎಂದು ನಂಬುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೌದು, ನಾನು ವೈಯಕ್ತಿಕವಾಗಿ ನಂಬುತ್ತೇನೆ” ಎಂದು ಉತ್ತರಿಸಿದ್ದಾರೆ.
ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನ ಸಂಖ್ಯೆ ಎಫ್‌ಝಡ್1073ರಲ್ಲಿ ಮಧ್ಯಾಕಾಶದಲ್ಲಿ ನಡೆದ ಅಪಹರಣ ಹಾಗೂ ವಿಮಾನ ಪತನದ ಯತ್ನದ ಹಿನ್ನೆಲೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಒಮಾನ್ ಮೂಲದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಕಾಕ್‌ಪಿಟ್‌ನೊಳಗೆ ಭಾರತೀಯ ಮುಖ್ಯ ಪೈಲಟ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿದ್ದ.
ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದ ಸಹ ಪೈಲಟ್ ಕೊಡಲಿಯಿಂದ ಕ್ಯಾಪ್ಟನ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಪ್ರಯಾಣಿಕರು ಹಾಗೂ ಕರ್ತವ್ಯದಲ್ಲಿರದ ಸಿಬ್ಬಂದಿ ಕಾಕ್‌ಪಿಟ್‌ಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ಈ ವೇಳೆ ವಿಮಾನ ತೀವ್ರವಾಗಿ ಕೆಳಮುಖವಾಗಿ ಇಳಿಯತೊಡಗಿದ್ದು, ಕೇವಲ ಎರಡು ನಿಮಿಷಗಳಲ್ಲಿ ಸುಮಾರು 16,000 ಅಡಿ ಎತ್ತರ ಕಳೆದುಕೊಂಡಿತ್ತು. ಬಳಿಕ ಅಪಹರಣದ ತುರ್ತು ಸಂಕೇತವನ್ನು ರವಾನಿಸಲಾಯಿತು.
ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ಗೆ ತಿರುಗಿಸಲಾಗಿದ್ದು, ಅಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ವಿಮಾನದಲ್ಲಿದ್ದ 180 ಮಂದಿ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಕೆಳಗಿಳಿದರು.
ಭಾನುವಾರ ‘ದಿ ಟೈಮ್ಸ್ ಆಫ್ ಇಸ್ರೇಲ್’ ಪ್ರಕಟಿಸಿದ ವರದಿಗಳ ಪ್ರಕಾರ, ಅಲ್-ಹಮ್ಮಾಮಿ ವಿಮಾನವನ್ನು ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದ ಮೇಲೆ ಅಪ್ಪಳಿಸುವ ಯೋಜನೆ ರೂಪಿಸಿದ್ದ ಎನ್ನಲಾಗಿದೆ.
ಹೀಬ್ರೂ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಸುದ್ದಿಗಳ ಪ್ರಕಾರ, ಒಮಾನ್ ಮೂಲದ ಸಹ ಪೈಲಟ್‌ನನ್ನು ಬಂಧಿಸಲಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ವಿಚಾರಣೆ ವೇಳೆ ಅಲ್-ಹಮ್ಮಾಮಿ ನೀಡಿದ್ದಾನೆ ಎನ್ನಲಾದ ಮಾಹಿತಿಯ ಪ್ರಕಾರ, ಕ್ಯಾಪ್ಟನ್ ಮಚ್ಚಾರ್ ಅವರನ್ನು ಅಸಮರ್ಥಗೊಳಿಸಿದ ಬಳಿಕ ವಿಮಾನವನ್ನು ಸಾಮಾನ್ಯ ರೀತಿಯಲ್ಲಿ ಮುನ್ನಡೆಸಿ, ಕಡ್ಡಾಯ ಲ್ಯಾಂಡಿಂಗ್ ಅನುಮತಿಗಳನ್ನು ಪಡೆದು ನಂತರ ವಿಮಾನ ನಿಲ್ದಾಣದ ಕಟ್ಟಡ ಅಥವಾ ಅಲ್ಲಿ ನಿಲುಗಡೆ ಮಾಡಿದ್ದ ಮತ್ತೊಂದು ವಿಮಾನಕ್ಕೆ ವಿಮಾನವನ್ನು ಅಪ್ಪಳಿಸುವುದು ಆತನ ಉದ್ದೇಶವಾಗಿತ್ತು ಎನ್ನಲಾಗಿದೆ.
ಆದರೆ, ಆರಂಭಿಕ ದಾಳಿಯ ಹೊರತಾಗಿಯೂ ಕ್ಯಾಪ್ಟನ್ ಮಚ್ಚಾರ್ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದ ಕಾರಣ ದಾಳಿ ವಿಫಲವಾಯಿತು ಎಂದು ಹೇಳಿದ್ದಾನೆಂದು ತಿಳಿದುಬಂದಿದೆ.
ಈ ನಡುವೆ ದಾಳಿಯ ಪರಿಣಾಮವನ್ನು ವಿವರಿಸಿದ್ದ ಕ್ಯಾಪ್ಟನ್ ಮಚ್ಚಾರ್, ದಾಳಿಕೋರನನ್ನು ತಡೆಯಲು ಪ್ರಯತ್ನಿಸಿದ ಬಳಿಕ ತಮ್ಮ ದೃಷ್ಟಿ ತೀವ್ರವಾಗಿ ಮಸುಕಾಗಿತ್ತು ಎಂದು ಹೇಳಿದ್ದರು.
ಘಟನೆಯ ಬಳಿಕ ಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಚೇತರಿಸಿಕೊಳ್ಳುತ್ತಿದ್ದ ಪೈಲಟ್ ಜೊತೆ ನಡೆದ ವಿಡಿಯೊ ಸಂವಾದದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಚ್ಚಾರ್ ಅವರನ್ನು ರಿಯಲ್ ಹೀರೋ ಎಂದು ಕೊಂಡಾಡಿದ್ದರು.
ಏತನ್ಮಧ್ಯೆ ನೆತನ್ಯಾಹು ಮತ್ತು ಕ್ಯಾಪ್ಟನ್ ಮಚ್ಚಾರ್ ನಡುವೆ ನೇರ ದೂರವಾಣಿ ಮಾತುಕತೆ ನಡೆದ ಬಳಿಕ, 2027ರ ಮೇನಲ್ಲಿ ನಡೆಯಲಿರುವ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಭಾರತೀಯ ಪೈಲಟ್ ಹಾಗೂ ಅವರ ಕುಟುಂಬವನ್ನು ಅಧಿಕೃತವಾಗಿ ಆಹ್ವಾನಿಸಲು ಇಸ್ರೇಲ್ ಸರ್ಕಾರ ನಿರ್ಧರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



