ಚುನಾವಣೆಯಲ್ಲಿ ಅಕ್ರಮ ಎಂದ ಡೊನಾಲ್ಡ್ ಟ್ರಂಪ್: ಭಾಷಣದ ಪ್ರಸಾರ ಅರ್ಧಕ್ಕೆ ನಿಲ್ಲಿಸಿದ ನ್ಯೂಸ್ ಚಾನೆಲ್ ಗಳು!
ತಮಗೆ ಬಂದ ಮತಗಳನ್ನು ಕದಿಯಲಾಗಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸುತ್ತಿದ್ದಂತೆ ಅಮೆರಿಕದ ಎಬಿಸಿ, ಸಿಬಿಎಸ್ ಮತ್ತು ಎನ್ ಬಿಸಿ ಸುದ್ದಿ ವಾಹಿನಿಗಳು ಅಧ್ಯಕ್ಷರ ಭಾಷಣ ಪ್ರಸಾರವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಪ್ರಸಂಗ ನಡೆದಿದೆ.

ವಾಷಿಂಗ್ಟನ್: ತಮಗೆ ಬಂದ ಮತಗಳನ್ನು ಕದಿಯಲಾಗಿದೆ ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸುತ್ತಿದ್ದಂತೆ ಅಮೆರಿಕದ ಎಬಿಸಿ, ಸಿಬಿಎಸ್ ಮತ್ತು ಎನ್ ಬಿಸಿ ಸುದ್ದಿ ವಾಹಿನಿಗಳು ಅಧ್ಯಕ್ಷರ ಭಾಷಣ ಪ್ರಸಾರವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಪ್ರಸಂಗ ನಡೆದಿದೆ.
ಶ್ವೇತಭವನದಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಾ ಡೊನಾಲ್ಡ್ ಟ್ರಂಪ್, ಮತದಾನದಲ್ಲಿ ಅಕ್ರಮ ನಡೆದಿದೆ, ತಮಗೆ ಬಂದಿರುವ ಮತಗಳನ್ನು ಡೆಮಾಕ್ರಟ್ ಅಭ್ಯರ್ಥಿ ಜೊ ಬೈಡನ್ ಅವರಿಗೆ ಹಾಕಲಾಗಿದೆ ಎಂದು ಆರೋಪಿಸಿ ಭಾಷಣ ಮಾಡುತ್ತಿದ್ದರು. ಆಗ ಎಂಎಸ್ ಎನ್ ಬಿಸಿ ನ್ಯೂಸ್ ಚಾನೆಲ್ ನ ಬ್ರೈನ್ ವಿಲಿಯಮ್ ಮದ್ಯದಲ್ಲಿಯೇ ಪ್ರಸಾರವನ್ನು ತಡೆದರು. ಫಾಕ್ಸ್ ನ್ಯೂಸ್ ಚಾನೆಲ್ ಮತ್ತು ಸಿಎನ್ ಎನ್ ಮಾತ್ರ ಅಧ್ಯಕ್ಷರ ಸಂಪೂರ್ಣ ಭಾಷಣವನ್ನು ಪ್ರಸಾರ ಮಾಡಿದವು. ನಂತರ ಮಾತನಾಡಿದ ಸಿಎನ್ ಎನ್ ಚಾನೆಲ್ ನ ಆಂಡೆರ್ಸನ್ ಕೂಪರ್ , ಟ್ರಂಪ್ ಅವರು ಸೋಮಾರಿ ಆಮೆಯಂತೆ,ತಮ್ಮ ಅಧ್ಯಕ್ಷ ಅವಧಿ ಮುಗಿಯುತ್ತಿದೆ ಎಂದು ಗೊತ್ತಾದ ಕೂಡಲೇ ಬಿಸಿಲಿನಲ್ಲಿ ಹೊಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅನೇಕ ನ್ಯೂಸ್ ಚಾನೆಲ್ ಗಳು ಟ್ರಂಪ್ ಅವರನ್ನು ತೀವ್ರವಾಗಿ ಟೀಕಿಸಿವೆ. ಎನ್ ಬಿಸಿಯ ಲೆಸ್ಟರ್ ಹೊಲ್ಟ್, ಅಧ್ಯಕ್ಷರು ಅನೇಕ ಸುಳ್ಳು ಆರೋಪಗಳನ್ನು ಮಾಡಿರುವುದರಿಂದ ನಾವಿಲ್ಲಿ ಅವರ ಭಾಷಣ ಪ್ರಸಾರಕ್ಕೆ ತಡೆಹಿಡಿಯಲೇ ಬೇಕಾಗುತ್ತದೆ. ಮತಗಳಲ್ಲಿ ಮೋಸವಾಗಿದೆ ಎಂಬುದು ಸಹ ತಪ್ಪು. ಅದಕ್ಕೆ ಟ್ರಂಪ್ ಬಳಿ ಏನು ಸಾಕ್ಷಿಯಿದೆ ಎಂದು ಕೇಳಿದ್ದಾರೆ.
ಟ್ರಂಪ್ ಅವರು ಮಾಡುತ್ತಿರುವ ಭಾಷಣಗಳ, ಆರೋಪಗಳ ಕುರಿತು ನಿಖರತೆ ತಿಳಿಯಿರಿ ಎಂದು ಎಂಎಸ್ಎನ್ ಬಿಸಿ ಮಾಧ್ಯಮದ ಆಂಕರ್ ತಮ್ಮ ವರದಿಗಾರರಿಗೆ ಹೇಳಿದರು. ಕಾನೂನಿನ ಮೂಲಕ ಮತಗಳನ್ನು ಸರಿಯಾಗಿ ಎಣಿಕೆ ಮಾಡಿದರೆ ತಾವು ಸುಲಭವಾಗಿ ಗೆಲ್ಲುತ್ತೇನೆ ಎಂಬುದು ಟ್ರಂಪ್ ವಾದವಾಗಿದೆ. ಆದರೆ ಅಕ್ರಮ ಮತದಾನವಾದ ಬಗ್ಗೆ ಸಾಕ್ಷಿಗಳಿಲ್ಲ ಎಂಬುದು ಸಿಬಿಎಸ್ ಮಾಧ್ಯಮದ ವರದಿಗಾರ ನಾನ್ಸಿ ಕೋರ್ಡ್ಸ್ ಅವರ ಹೇಳಿಕೆ. ಮತಗಳು ತಡವಾಗಿ ಮತ ಎಣಿಕೆಗೆ ಬಂದಿವೆ ಎಂಬ ಟ್ರಂಪ್ ಆರೋಪ ಮತ್ತೊಂದು ಸುಳ್ಳು ಎಂದು ಅವರು ಹೇಳುತ್ತಾರೆ.
ದೇಶದ ಅಧ್ಯಕ್ಷರು ಈ ರೀತಿ ಮತದಾನದಲ್ಲಿ ಅಕ್ರಮವಾಗಿ, ಮತಗಳನ್ನು ಕದಿಯಲಾಗಿದೆ ಎಂದು ಹೇಳುವುದು ದೇಶದ ಪ್ರಜಾಪ್ರಭುತ್ವಕ್ಕೆ, ದೇಶಕ್ಕೆ ದುಃಖಕರ ವಿಷಯವಾಗಿದೆ. ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿರುವುದು ನಿಜಕ್ಕೂ ಖೇದಕರ ಎಂದು ಸಿಎನ್ಎನ್ ನ ಜೇಕ್ ಟ್ಯಾಪ್ಪರ್ ಹೇಳುತ್ತಾರೆ.
ಟ್ರಂಪ್ ಅವರ ಮಾಧ್ಯಮ ಸಹವರ್ತಿಯಾದ ನ್ಯೂಯಾರ್ಕ್ ಪೋಸ್ಟ್, ಶ್ವೇತಭವನ ಭಾಷಣದಲ್ಲಿ ಅಧ್ಯಕ್ಷ ಟ್ರಂಪ್ ಆಧಾರರಹಿತ ಚುನಾವಣಾ ಅಕ್ರಮ ಎಂದು ಆರೋಪಿಸುತ್ತಿದ್ದಾರೆ ಎಂದು ಹೇಳಿದೆ.
15 ನಿಮಿಷಗಳ ಕಾಲ ಶ್ವೇತಭವನದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಡೊನಾಲ್ಜ್ ಟ್ರಂಪ್ ವರದಿಗಾರರ ಪ್ರಶ್ನೆಗಳಿಗೆ ನಿಲ್ಲದೆ ಹೊರಟುಹೋದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


