ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್; 23 ಭಾರತೀಯ ಸಿಬ್ಬಂದಿ ಪಾರು..! Video
‘ಅಫ್ರಾಮ್ಯಾಕ್ಸ್ ರಿಯೊ’ ಹೆಸರಿನ ತೈಲ ಟ್ಯಾಂಕರ್ ಮೇಲೆ ಮಂಗಳವಾರ ‘ನೌಕಾ ಡ್ರೋನ್’ಗಳಿಂದ ದಾಳಿ ನಡೆದಿದ್ದು, ರಷ್ಯಾದ ಪ್ರವಾಸಿ ನಗರ ಸೋಚಿ ಸಮೀಪ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಷ್ಯಾ ತಿಳಿಸಿದೆ.

ರಷ್ಯಾದ ಕಪ್ಪು ಸಮುದ್ರ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ಪರಿಣಾಮ ಲೈಬೀರಿಯಾ ಧ್ವಜ ಹೊಂದಿದ್ದ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯ ವೇಳೆ ಟ್ಯಾಂಕರ್‌ನಲ್ಲಿದ್ದ ಎಲ್ಲಾ 23 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
‘ಅಫ್ರಾಮ್ಯಾಕ್ಸ್ ರಿಯೊ’ ಹೆಸರಿನ ತೈಲ ಟ್ಯಾಂಕರ್ ಮೇಲೆ ಮಂಗಳವಾರ ‘ನೌಕಾ ಡ್ರೋನ್’ಗಳಿಂದ ದಾಳಿ ನಡೆದಿದ್ದು, ರಷ್ಯಾದ ಪ್ರವಾಸಿ ನಗರ ಸೋಚಿ ಸಮೀಪ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಷ್ಯಾ ತಿಳಿಸಿದೆ.
ಟ್ಯಾಂಕರ್‌ನಲ್ಲಿದ್ದ ಎಲ್ಲಾ 23 ಸಿಬ್ಬಂದಿಯೂ ಭಾರತೀಯರಾಗಿದ್ದು, ದಾಳಿಯ ಬಳಿಕ ಅವರನ್ನು ರಕ್ಷಿಸಲಾಗಿದೆ. ಸಿಬ್ಬಂದಿಯಲ್ಲಿ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಆರಂಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಟ್ಯಾಂಕರ್ ಸಮೀಪ ತೆರಳಿ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ. ಬೆಂಕಿಯ ತೀವ್ರತೆ ಕಡಿಮೆಯಾದ ಬಳಿಕ ಮತ್ತೊಮ್ಮೆ ಬೆಂಕಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಅಗ್ನಿಶಾಮಕ ಸಿಬ್ಬಂದಿ ಮುಂದಾಗಲಿದ್ದಾರೆ. ದಾಳಿಯ ಬಳಿಕ ಟ್ಯಾಂಕರ್‌ನಲ್ಲಿದ್ದ ಕಚ್ಚಾ ತೈಲ ಹೊತ್ತಿ ಉರಿಯುತ್ತಿದೆ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಸಮುದ್ರದ ಮಧ್ಯೆ ಬೆಂಕಿಯ ಜ್ವಾಲೆ ಹಾಗೂ ಆಕಾಶಕ್ಕೆ ಏರುತ್ತಿರುವ ದಟ್ಟ ಕಪ್ಪು ಹೊಗೆ ಕಾಣಿಸಿಕೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಘಟನೆಯ ಬಳಿಕ ಸೋಚಿ ಕರಾವಳಿ ಹಾಗೂ ಕಡಲತೀರಗಳಿಗೆ ಸಾರ್ವಜನಿಕರ ಪ್ರವೇಶವನ್ನು ಅಧಿಕಾರಿಗಳು ನಿರ್ಬಂಧಿಸಿದ್ದಾರೆ.
ದಾಳಿಗೆ ಯಾರು ಹೊಣೆ ಎಂಬುದನ್ನು ರಷ್ಯಾ ತಕ್ಷಣ ಸ್ಪಷ್ಟಪಡಿಸಿಲ್ಲ. ಟ್ಯಾಂಕರ್ ಮೇಲೆ ಮಾನವರಹಿತ ನೌಕೆಯಿಂದ ದಾಳಿ ನಡೆದಿದೆ ಎಂದು ರಷ್ಯಾದ ತಿಳಿಸಿದೆ.
ಈ ಘಟನೆಯ ಹಿಂದೆ ಉಕ್ರೇನ್ ಕೈವಾಡವಿದೆ ಎಂಬುದಕ್ಕೆ ತಕ್ಷಣ ಯಾವುದೇ ಸ್ವತಂತ್ರ ದೃಢೀಕರಣ ದೊರೆತಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
ರಷ್ಯಾ-ಉಕ್ರೇನ್ ಯುದ್ಧ ಮುಂದುವರಿದಿರುವ ನಡುವೆಯೇ ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳಿಗೆ ಸಂಬಂಧಿಸಿದ ಹಲವು ಘಟನೆಗಳು ನಡೆದಿವೆ.
ಇದಕ್ಕೂ ಒಂದು ದಿನ ಮೊದಲು ಟರ್ಕಿ ಮಾಲೀಕತ್ವದ ‘ಎಂವಿ ರೊಯಾದ್ ಮಮ್ಮಡೋವ್’ ಎಂಬ ಸರಕು ಹಡಗು ರೊಮೇನಿಯಾದ ಪ್ರಾದೇಶಿಕ ಜಲಗಡಿಯ ಹೊರಗಿನ ಕಪ್ಪು ಸಮುದ್ರದಲ್ಲಿ ಬೆಂಕಿಗೆ ಆಹುತಿಯಾಗಿ ಮುಳುಗಿತ್ತು. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 11 ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು ಎಂದು ರೊಮೇನಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಹಡಗಿನ ಸಿಬ್ಬಂದಿಯಲ್ಲಿ ಮೂವರು ಭಾರತೀಯರೂ ಇದ್ದರು. ಅವರಲ್ಲಿ ಓರ್ವ ಭಾರತೀಯ ಸಿಬ್ಬಂದಿ ಗಾಯಗೊಂಡಿದ್ದರು ಎಂದು ವರದಿಯಾಗಿದೆ.
ಘಟನೆಗಳ ಬೆನ್ನಲ್ಲೇ ಭಾರತ ದಾಳಿಯನ್ನು ಖಂಡಿಸಿ, ನಡೆಯುತ್ತಿರುವ ಸಂಘರ್ಷಗಳಿಗೆ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಅಂತ್ಯ ಕಾಣಿಸುವಂತೆ ಪುನರುಚ್ಚರಿಸಿದೆ.
ಗಾಯಗೊಂಡ ಸಿಬ್ಬಂದಿಯನ್ನು ರೊಮೇನಿಯಾ ಅಧಿಕಾರಿಗಳು ರಕ್ಷಿಸಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ತ್ವರಿತವಾಗಿ ಕಾರ್ಯಾಚರಣೆ ನಡೆಸಿದ ಬುಕಾರೆಸ್ಟ್ ಅಧಿಕಾರಿಗಳಿಗೆ ಸಚಿವಾಲಯ ಕೃತಜ್ಞತೆ ಸಲ್ಲಿಸಿದೆ.
ರೊಮೇನಿಯಾದಲ್ಲಿನ ಭಾರತೀಯ ರಾಯಭಾರಿ ಮನೋಜ್ ಮೊಹಾಪಾತ್ರ ಅವರು ಕಾನ್ಸ್ಟಾಂಟಾ ಕೌಂಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಭಾರತೀಯರನ್ನು ಭೇಟಿ ಮಾಡಿ, ಅವರಿಗೆ ಅಗತ್ಯ ನೆರವು ಮುಂದುವರಿಸುವ ಭರವಸೆ ನೀಡಿದ್ದಾರೆ.

ಉಕ್ರೇನ್ ನಲ್ಲಿ ರಷ್ಯಾ ಡ್ರೋನ್ ದಾಳಿ: ಭಾರತೀಯರ ಒಡೆತನದ ಔಷಧ ಘಟಕ ಧ್ವಂಸ; ಓರ್ವ ಸಾವು, ಹಲವರಿಗೆ ಗಾಯ! Video
ಈ ನಡುವೆ ವಾಣಿಜ್ಯ ಹಡಗುಗಳ ಮೇಲೆ ಮುಂದುವರಿದಿರುವ ಬೆದರಿಕೆಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ.
ಇಂತಹ ದಾಳಿಗಳು ಜಾಗತಿಕ ವಾಣಿಜ್ಯ ಹಾಗೂ ವಿಶ್ವದ ಜನರ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಗಂಭೀರ ಹೊಡೆತ ನೀಡುತ್ತವೆ ಎಂದು ಸಚಿವಾಲಯ ಹೇಳಿದೆ.
ವಿಶ್ವಸಂಸ್ಥೆಯಲ್ಲಿ ‘ಹಡಗುಗಳು ಮತ್ತು ನಾವಿಕರ ಸುರಕ್ಷತೆ ಹಾಗೂ ಭದ್ರತೆ ಕುರಿತ ಸ್ನೇಹಿತರ ಗುಂಪು’ ಸ್ಥಾಪನೆಗೆ ಭಾರತ ಸಹ-ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿರುವುದನ್ನೂ ಸಚಿವಾಲಯ ಉಲ್ಲೇಖಿಸಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುವ ವೇಳೆ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಟ್ಯಾಂಕರ್ ಮೇಲೆ ರಷ್ಯಾದ ಡ್ರೋನ್ ದಾಳಿ ನಡೆದಿದೆ ಎಂದು ಹೇಳಿದ್ದಾರೆ.
ಮಂಗಳವಾರ ಕಪ್ಪು ಸಮುದ್ರದಲ್ಲಿನ ಬಲ್ಗೇರಿಯಾದ ವಿಶೇಷ ಆರ್ಥಿಕ ವಲಯದಲ್ಲೂ ಎರಡು ವಾಣಿಜ್ಯ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆದಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಟೋಗೊ ಧ್ವಜ ಹೊಂದಿದ್ದ ‘ಅಲ್ಫಾ ವಾಟನ್’ ಹಡಗು ಮುಳುಗಿದ್ದು, ಪಲಾವ್ ಧ್ವಜ ಹೊಂದಿದ್ದ ‘ಏಬಲ್’ ಹಡಗಿಗೆ ಬೆಂಕಿ ಹೊತ್ತಿಕೊಂಡಿದೆ. ಏಬಲ್ ಹಡಗಿನಲ್ಲಿದ್ದ ಎಲ್ಲಾ 18 ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಬಲ್ಗೇರಿಯಾ ಕರಾವಳಿಯಲ್ಲಿನ ಈ ದಾಳಿಗಳಿಗೆ ಸಂಬಂಧಿಸಿದ ಡ್ರೋನ್‌ಗಳ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ದಾಳಿಗಳ ಹಿಂದೆ ರಷ್ಯಾ ಇದೆ ಎಂದು ಝೆಲೆನ್‌ಸ್ಕಿ ಆರೋಪಿಸಿದ್ದಾರೆ.
2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದ ಬಳಿಕ ಕಪ್ಪು ಸಮುದ್ರದಲ್ಲಿನ ವಾಣಿಜ್ಯ ಸಾಗಣೆಯ ಅಪಾಯಗಳು ಹೆಚ್ಚಾಗಿವೆ. ರಷ್ಯಾ ಮತ್ತು ಉಕ್ರೇನ್ ಎರಡೂ ಈ ಪ್ರದೇಶದಲ್ಲಿ ಮೂಲಸೌಕರ್ಯ ಹಾಗೂ ಸೇನಾ ಸಂಬಂಧಿತ ತಾಣಗಳನ್ನು ಗುರಿಯಾಗಿಸಿಕೊಂಡಿವೆ. ಪರಿಣಾಮವಾಗಿ ಕಪ್ಪು ಸಮುದ್ರ ಹಾಗೂ ಸುತ್ತಮುತ್ತ ಸಂಚರಿಸುವ ವಾಣಿಜ್ಯ ಹಡಗುಗಳೂ ಸಂಘರ್ಷದ ಪರಿಣಾಮ ಎದುರಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


