ವಿದೇಶ

ಉಗ್ರ ದಾಳಿ ಕಾರ್ಯಾಚರಣೆ ನೇರಪ್ರಸಾರ ಮಾಡಿದ ವಾಹಿನಿಗಳ ಪರವಾನಗಿ ರದ್ದು?

ಉಗ್ರರ ದಾಳಿ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡಿದ ಬಾಂಗ್ಲಾದೇಶ ಸುದ್ದಿವಾಹಿನಿಗಳು ಇದೀಗ ಪ್ರಸಾರ ಸ್ಥಗಿತ ಭೀತಿ ಎದುರಿಸುತ್ತಿದ್ದು, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವಾಹಿನಗಳ ವಿರುದ್ಧ ಕಠಿಣಕ್ರಮಕ್ಕೆ ಮುಂದಾಗಿದ್ದಾರೆ.

ಉಗ್ರ ದಾಳಿ ಕಾರ್ಯಾಚರಣೆ ನೇರಪ್ರಸಾರ ಮಾಡಿದ ವಾಹಿನಿಗಳ ಪರವಾನಗಿ ರದ್ದು?
ಶೇಖ್ ಹಸೀನಾ ಮತ್ತು ಢಾಕಾ ಉಗ್ರ ದಾಳಿ (ಸಂಗ್ರಹ ಚಿತ್ರ)
Published On :

ಢಾಕಾ: ಮುಂಬೈ ಮಾದರಿ ಉಗ್ರ ದಾಳಿಗೆ ತುತ್ತಾದ ಢಾಕಾ ರೆಸ್ಟೋರೆಂಟ್ ಮೇಲಿನ ಉಗ್ರರ ದಾಳಿ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡಿದ ಬಾಂಗ್ಲಾದೇಶ ಸುದ್ದಿವಾಹಿನಿಗಳು ಇದೀಗ  ಪ್ರಸಾರ ಸ್ಥಗಿತ ಭೀತಿ ಎದುರಿಸುತ್ತಿದ್ದು, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವಾಹಿನಗಳ ವಿರುದ್ಧ ಕಠಿಣಕ್ರಮಕ್ಕೆ ಮುಂದಾಗಿದ್ದಾರೆ.

ಇಸಿಸ್ ಉಗ್ರರಿಂದ ಒತ್ತೆಯಾಳುಗಳನ್ನು ಬಂಧರಕ್ತನ್ನಾಗಿಸುವ ನಿಟ್ಟಿನಲ್ಲಿ ಆಪರೇಷನ್ ಥಂಡರ್ ಬೋಲ್ಟ್ ಹೆಸರಿನಲ್ಲಿ ಬಾಂಗ್ಲಾ ಸೇನೆ ಕಾರ್ಯತಂತ್ರ ರೂಪಿಸುತ್ತಿದ್ದರೆ, ಇತ್ತ ಬಾಂಗ್ಲಾದೇಶ  ಸುದ್ದಿವಾಹಿನಿಗಳು ಕಾರ್ಯಾಚಾರಣೆಯ ಅಷ್ಟೂ ದೃಶ್ಯಾವಳಿಗಳನ್ನು ಮತ್ತು ಕಾರ್ಯಾಚರಣೆಯ ಮಾಹಿತಿಯನ್ನು ನೇರ ಪ್ರಸಾರ ಮಾಡುತ್ತಿದ್ದವು. ಇದರಿಂದ ಉಗ್ರರಿಗೆ ಈ ಮಾಹಿತಿ ತಿಳಿದು  ಅವರು ಅದಕ್ಕೆ ತದ್ವಿರುದ್ಧ ರಣತಂತ್ರದೊಂದಿಗೆ ದಾಳಿ ನಡೆಸುವ ಸಾಧ್ಯತೆಗಳಿದ್ದವು. ಹೀಗಾಗಿ ಸುದ್ದಿ ವಾಹಿನಗಳ ವಿರುದ್ಧ  ಬಾಂಗ್ಲಾದೇಶ ಸರ್ಕಾರ ಕಿಡಿಕಾರಿದ್ದು, ನೇರ ಪ್ರಸಾರ ಮಾಡಿದ  ವಾಹಿನಿಗಳ ಪರವಾನಗಿ ರದ್ದು ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಸ್ವತಃ ಪ್ರಧಾನಿ ಶೇಖ್ ಹಸೀನಾ ಅವರು ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ‘ನಾವು ಉಗ್ರರನ್ನು ಸದೆಬಡೆಯುವ ಕುರಿತು ಸಿದ್ಧತೆ ನಡೆಸುತ್ತಿದ್ದರೆ, ಅತ್ತ ವಾಹಿನಿಗಳು ಅದನ್ನು  ನೇರ ಪ್ರಸಾರ ಮಾಡುತ್ತಿದ್ದವು. ಉಗ್ರರು ಅದನ್ನು ವೀಕ್ಷಿಸಿ ಅದಕ್ಕನುಗುಣವಾಗಿ ತಮ್ಮ ಯೋಜನೆ ಬದಲಿಸಿಕೊಳ್ಳುತ್ತಾರೆ ಎಂಬ ಕನಿಷ್ಠ ಪ್ರಜ್ಞೆ ಕೂಡ ಅವರಿಗಿಲ್ಲವೇ? ದಯವಿಟ್ಟು ಈ ರೀತಿ  ಮಾಡಬೇಡಿ ಎಂದು ವಾಹಿನಿಗಳ ಮಾಲೀಕರಿಗೆ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಅಮೆರಿಕ ದಾಳಿಯಲ್ಲಿ ಬಿಬಿಸಿ ಮತ್ತು ಸಿಎನ್ ಎನ್ ವಾಹಿನಿಗಳು ನಡೆದುಕೊಂಡ ರೀತಿಯನ್ನು ಉದಾಹರಿಸಿದ ಪ್ರಧಾನಿ ಶೇಖ್ ಹಸೀನಾ, "ಅಮೆರಿಕದಲ್ಲಿ ದಾಳಿ ನಡೆದಾಗ  ಸಿಎನ್‌ಎನ್‌ ಅಥವಾ ಬಿಬಿಸಿ, ಉಗ್ರರ ವಿರುದ್ಧದ ಯಾವುದೇ ಕಾರ್ಯಾಚರಣೆಯನ್ನು  ತೋರಿಸಿರಲಿಲ್ಲ. ಆದರೆ, ನಮ್ಮ ದೇಶದಲ್ಲಿ ಟೆಲಿವಿಷನ್ ವಾಹಿನಿಗಳ ನಡುವೆ ಪೈಪೋಟಿಯೇ ನಡೆಯುತ್ತದೆ.  ಕೆಲವು ವಾಹಿನಿಗಳು ನಮ್ಮ ಮಾತನ್ನು ಕೇಳಿಸಿಕೊಳ್ಳಲೂ ಬಯಸುವುದಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರವಾನಗಿ ವಾಪಸ್ ಎಚ್ಚರಿಕೆ
ಅಂತೆಯೇ ಢಾಕಾ ಉಗ್ರ ದಾಳಿ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡಿದ ವಾಹಿನಗಳ ಪರವಾನಗಿಯನ್ನು ರದ್ದು ಮಾಡುವ ಕುರಿತು ಪ್ರಧಾನಿ ಶೇಖ್ ಹಸೀನಾ ಎಚ್ಚರಿಕೆ ನೀಡಿದ್ದು, "‘ನಾವು  ಪರವಾನಗಿಗಳನ್ನು ನೀಡಬಹುದು. ಹಾಗೆಯೇ ಅವುಗಳನ್ನು ವಾಪಸ್‌ ಕೂಡ ಪಡೆಯಬಹುದು. ಇದು ಮಕ್ಕಳಾಟವಲ್ಲ’ ಎಂದು ಹಸೀನಾ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.