ಜಿ20 ಸದಸ್ಯ ರಾಷ್ಟ್ರಗಳು ಸೇರಿ ವಿಶ್ವದ 40 ದೇಶಗಳಿಂದ ಇಸಿಸ್ ಗೆ ಆರ್ಥಿಕ ಬೆಂಬಲ..!
ಉಗ್ರಗಾಮಿ ಸಂಘಟನೆ ಇಸಿಸ್ ಗೆ ಜಿ20 ಸದಸ್ಯ ರಾಷ್ಟ್ರಗಳು ಸೇರಿದಂತೆ ವಿಶ್ವದ 40 ದೇಶಗಳಿಂದ ಆರ್ಥಿಕ ನೆರವು ಹರಿದು ಬರುತ್ತಿದೆ ಎಂಬ ಸ್ಫೋಟಕ ಮಾಹಿತಿಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ...

ಅಂಕಾರ: ವಿಶ್ವವನ್ನು ಭಯೋತ್ಪಾದನೆ ಮೂಲಕ ಪೀಡಿಸುತ್ತಿರುವ ಉಗ್ರಗಾಮಿ ಸಂಘಟನೆ ಇಸಿಸ್ ಗೆ ಜಿ20 ಸದಸ್ಯ ರಾಷ್ಟ್ರಗಳು ಸೇರಿದಂತೆ ವಿಶ್ವದ 40 ರಾಷ್ಟ್ರಗಳಿಂದ ಆರ್ಥಿಕ ನೆರವು ಹರಿದು ಬರುತ್ತಿದೆ ಎಂಬ ಮಾಹಿತಿಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೀಡಿದ್ದಾರೆ.
ಟರ್ಕಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪುಟಿನ್ ಈ ಮಾಹಿತಿಯನ್ನು ಹೊರಹಾಕಿದ್ದು, ಇಸಿಸ್ ಗೆ ದೊರೆಯುತ್ತಿರುವ ಆರ್ಥಿಕ ನೆರವನ್ನು ನಿಲ್ಲಿಸದ ಹೊರತು ಅದರ ನಾಶ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. "ನನ್ನ ಗುಪ್ತಚರ ಇಲಾಖೆಯಿಂದ ದೊರೆತಿರುವ ಮಾಹಿತಿಗಳನ್ವಯ ಇಸ್ಲಾಮಿಕ್ ಸ್ಟೇಟ್ ಇನ್ ಸಿರಿಯಾ ಅಂಡ್ ಇರಾಕ್ ಉಗ್ರ ಸಂಘಟನೆಗೆ ವಿಶ್ವದ 40 ರಾಷ್ಟ್ರಗಳಿಂದ ಧನ ಸಹಾಯ ಹರಿದುಬರುತ್ತಿದೆ. ಆತಂಕಕಾರಿ ವಿಚಾರವೆಂದರೆ ಈ 40 ರಾಷ್ಟ್ರಗಳ ಪಟ್ಟಿಯಲ್ಲಿ ಜಿ-20 ಸದಸ್ಯ ರಾಷ್ಟ್ರಗಳೂ ಕೂಡ ಸೇರಿವೆ. ಈ ಬಗ್ಗೆ ನಾನು ಈಗಾಗಲೇ ಜಿ-20 ಶೃಂಗ ಸಭೆಯಲ್ಲಿ ಚರ್ಚಿಸಿದ್ದೇನೆ" ಎಂದು ಪುಟಿನ್ ಹೇಳಿದರು.
ಇದೇ ವೇಳೆ ಇಸಿಸ್ ಆರ್ಥಿಕ ಮೂಲಗಳ ಕುರಿತು ಮಾತನಾಡಿದ ಪುಟಿನ್, ಉಗ್ರ ಸಂಘಟನೆಗೆ ಪ್ರಮುಖವಾಗ ಇಂಧನ ಉಧ್ಯಮವೇ ಹಣದ ಮೂಲವಾಗಿದ್ದು, ತನ್ನ ಹಿಡಿತದಲ್ಲಿರುವ ಪ್ರದೇಶಗಳಲ್ಲಿನ ಪೆಟ್ರೋಲಿಯಂ ಕಾರ್ಖಾನೆಗಳಿಂದ ಪೆಟ್ರೋಲ್ ಉತ್ಪನ್ನಗಳನ್ನು ವಿದೇಶಗಳಿಗೆ ಮಾರಾಟ ಮಾಡುವ ಮೂಲಕ ಇಸಿಸ್ ಹಣ ಗಳಿಕೆ ಮಾಡುತ್ತಿದೆ. ಹೀಗಾಗಿ ಈ ಕೂಡಲೇ ಇಸಿಸ್ ನ ಈ ಆರ್ಥಿಕ ಮೂಲವನ್ನು ನಿಗ್ರಹಿಸಬೇಕು. ನಮ್ಮ ಗುಪ್ತಚರ ಯುದ್ಧ ವಿಮಾನಗಳು ಕೆಲವು ಚಿತ್ರಗಳನ್ನು ಸೆರೆಹಿಡಿದಿದ್ದು, ಇಸಿಸ್ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿರುವ ಕುರಿತು ಸ್ಪಷ್ಟ ಸಾಕ್ಷ್ಯಾಧಾರಗಳು ದೊರೆತಿವೆ.
ಉಗ್ರ ಸಂಘಟನೆಯಿಂದ ಯಾವ ದೇಶ ಹೆಚ್ಚು ಲಾಭ ಮತ್ತು ಯಾವ ದೇಶ ಕಡಿಮೆ ಲಾಭ ಪಡೆಯುತ್ತಿದೆ ಎಂಬ ಕುರಿತು ಚರ್ಚೆ ಮಾಡುವ ಸಮಯ ಇದಲ್ಲ. ಪ್ರಪಂಚಕ್ಕೆ ಪಿಡುಗಾಗಿರುವ ಉಗ್ರ ಸಂಘಟನೆ ವಿರುದ್ಧ ವಿಶ್ವಸಮುದಾಯ ಒಗ್ಗೂಡಿ ಹೋರಾಡಬೇಕಿದೆ. ಇಸಿಸ್ ವಿರುದ್ಧದ ಹೋರಾಟದಲ್ಲಿ ರಷ್ಯಾದೊಂದಿಗೆ ಕೈಜೋಡಿಸಲು ಮುಂದಾಗುವ ಯಾವುದೇ ರಾಷ್ಟ್ರದೊಂದಿಗೆ ಸೇರಿ ಹೋರಾಡಲು ರಷ್ಯಾ ಸೇನೆ ಸಿದ್ಧವಾಗಿದ್ದು, ವಾಯುದಾಳಿಯಲ್ಲಿ ಆ ದೇಶಗಳಿಗೆ ಬೆಂಬಲ ನೀಡುತ್ತೇವೆ. ಈ ವಿಚಾರದಲ್ಲಿ ನಮಗೆ ಅಮೆರಿಕ, ಯೂರೋಪಿಯನ್ ರಾಷ್ಟ್ರಗಳು, ಸೌದಿ ಅರೇಬಿಯಾ, ಟರ್ಕಿ ಮತ್ತು ಇರಾನ್ ದೇಶಗಳ ಬೆಂಬಲ ಅತ್ಯಗತ್ಯ ಎಂದು ಪುಟಿನ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


