ಕೃಷ್ಣ ಲೀಲೆಗೆ ಮಂಕಾದ ಪ್ರವಾಸಿ ಬಾಂಗ್ಲಾ
ಯುವ ಪ್ರತಿಭೆ ಪ್ರಸಿಧ್ ಎಂ. ಕೃಷ್ಣ (5 ವಿಕೆಟ್) ನಡೆಸಿದ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ರಣಜಿ ಚಾಂಪಿಯನ್ ಕರ್ನಾಟಕ ತಂಡ ಪ್ರವಾಸಿ...

ಮೈಸೂರು:ಯುವ ಪ್ರತಿಭೆ ಪ್ರಸಿಧ್ ಎಂ. ಕೃಷ್ಣ (5 ವಿಕೆಟ್) ನಡೆಸಿದ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ರಣಜಿ ಚಾಂಪಿಯನ್ ಕರ್ನಾಟಕ ತಂಡ ಪ್ರವಾಸಿ ಬಾಂಗ್ಲಾದೇಶ `ಎ' ತಂಡದ ವಿರುದ್ಧದ ಮೂರು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸುವ ಮೂಲಕ ಪ್ರಾಬಲ್ಯ ಮೆರೆದಿದೆ.
ಮಂಗಳವಾರ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಆರಂಭವಾದ ಪಂದ್ಯದಲ್ಲಿ ಕರ್ನಾಟಕ ತಂಡ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ತೋರಿದೆ. ಟಾಸ್ ಗೆದ್ದ ಬಾಂಗ್ಲಾದೇಶ `ಎ' ತಂಡ
ಮೊದಲು ಬ್ಯಾಟಿಂಗ್ ಮಾಡಿತು. ನಂತರ ಕೇವಲ 38.4 ಓವರ್‍ಗಳಲ್ಲಿ 158 ರನ್‍ಗಳಿಗೆ ಆಲೌಟ್ ಆಗುವ ಮೂಲಕ ಕುಸಿತ ಕಂಡಿತು. ನಂತರ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ ದಿನದಾಟದ ಮುಕ್ತಾಯಕ್ಕೆ 49 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್ ದಾಖಲಿಸುವ ಮೂಲಕ 5 ರನ್‍ಗಳ ಮುನ್ನಡೆ ಸಾಧಿಸಿದೆ.
ಕೃಷ್ಣಲೀಲೆ ಮುಂದೆ ಬಾಂಗ್ಲಾ ಮಂಕು: ಉತ್ತಮ ವೇಗ ಹಾಗೂ ಪುಟಿತದ ಪಿಚ್ ಅನ್ನು ಸರಿಯಾಗಿ ಅರಿಯದೇ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತಳೆದ ಬಾಂಗ್ಲಾ ಸಂಪೂರ್ಣವಾಗಿ ಎಡವಿತು.ಕರ್ನಾಟಕ ತಂಡದ ಯುವ ಆಟಗಾರ ಪ್ರಸಿಧ್ ಎಂ ಕೃಷ್ಣ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ,ಅಲ್ಪ ಮೊತ್ತಕ್ಕೆ ಕುಸಿಯಿತು. ತಮ್ಮ ಮೊದಲ
ಎಸೆತದಲ್ಲೇ ಆರಂಭಿಕ ಬ್ಯಾಟ್ಸ್‍ಮನ್ ರೋನಿ ತಾಲೂಕ್ದಾರ್‍ರನ್ನು ಪೆವಿಲಿಯನ್‍ಗೆ ಕಳುಹಿಸಿದ ಪ್ರಸಿಧ್, ನಂತರ ಮತ್ತೊಬ್ಬ ಆರಂಭಿಕ ಅನಾಮುಲ್ ಹಕ್ (5) ಅವರ ವಿಕೆಟ್ ಪಡೆದು ಬಾಂಗ್ಲಾ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಮುರಿದರು.
ನಂತರ ಬಂದ ಮೊಮಿನುಲ್ ಹಕ್ (1), ಸೌಮ್ಯ ಸರ್ಕಾರ್ (0), ನಾಸಿರ್ ಹುಸೇನ್ (8) ಕ್ರೀಸ್‍ನಲ್ಲಿ ನೆಲೆ ಕಾಣುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಕರ್ನಾಟಕ ದಾಳಿಗೆ ಪ್ರತಿರೋಧ ನೀಡುವ ಪ್ರಯತ್ನ ನಡೆಸಿದ ಲಿಂಟನ್ ದಾಸ್ (50), ಶುವಗಟ ಹೋಮ್ (55) ಅರ್ಧಶತಕ ದಾಖಲಿಸಿ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಈ ಇಬ್ಬರ ಹೊರತಾಗಿ ಉಳಿದ ಬ್ಯಾಟ್ಸ್ ಮನ್‍ಗಳು ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಅಲ್ಪ ಮೊತ್ತಕ್ಕೆ ಇನಿಂಗ್ಸ್ ಗೆ ತೆರೆ ಎಳೆದುಕೊಂಡಿತು. ಕರ್ನಾಟಕದ ಪರ ಪ್ರಸಿಧ್ 5,ಉದಿತ್ 2, ಶರತ್, ಶ್ರೇಯಸ್ ಮತ್ತು ಸುಚಿತ್ ತಲಾ 1 ವಿಕೆಟ್ ಪಡೆದರು.
ಶಿಶಿರ್ ಶ್ರೀರಕ್ಷೆ: ಬಳಿಕ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ, ಆರಂಭದಲ್ಲಿ ಎಡವಿತಾದರೂ
ನಿಯಂತ್ರಣ ಕಳೆದುಕೊಳ್ಳುವ ಮುನ್ನ ಮತ್ತೆ ತನ್ನ ಹಾದಿಗೆ ಮರಳಿತು.ಆರಂಭಿಕರಾದ ಆರ್.ಸಮರ್ಥ್ (25), ಮಯಾಂಕ್ ಅಗರ್‍ವಾಲ್ (16) ಹಾಗೂ ಅಭಿಷೇಕ್ ರೆಡ್ಡಿ (28) ತಂಡಕ್ಕೆ ಸಾಧಾರಣ ಆರಂಭ ನೀಡಿದರು. ಇನ್ನು ತಂಡದ ಹಿರಿಯರಾದ ರಾಬಿನ್ ಉತ್ತಪ್ಪ (1),ಸಿ.ಎಂ ಗೌತಮ್ (3) ಮತ್ತು ಶ್ರೇಯಸ್ (17) ಬೇಗನೆ ವಿಕೆಟ್ ಒಪ್ಪಿಸಿದ್ದು ಕೂಡ ಕರ್ನಾಟಕ ಪಾಳಯದಲ್ಲಿ ಆತಂಕ ಮೂಡಿಸಿತು.
ಈ ವೇಳೆ ಕ್ರೀಸ್‍ಗೆ ಬಂದ ಶಿಶಿರ್ ಭವಾನೆ (ಅಜೇಯ 55) ಮತ್ತು ಜೆ.ಸುಚಿತ್ (ಅಜೇಯ 14) ಮುರಿಯದ 7ನೇ ವಿಕೆಟ್‍ಗೆ (63) ಅರ್ಧಶತಕದ ಜತೆಯಾಟವಾಡಿ ತಂಡವನ್ನು ಮುನ್ನಡೆಯತ್ತ ಕರೆದೊಯ್ದರು. ಬಾಂಗ್ಲಾ ಪರ ಸಕ್ಲೈನ್ ಸಜೀಬ್ ಮತ್ತು ಶುವಗಟ ಹೋಮ್ ತಲಾ 3 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ 38.4 ಓವರ್ ಗಳಲ್ಲಿ 158 (ಶುವಗಟ ಹೊಮ್ 55, ಲಿಂಟನ್ ದಾಸ್ 50, ಪ್ರಸಿಧ್ 49ಕ್ಕೆ 5, ಉದಿತ್ 11ಕ್ಕೆ 2) ಕರ್ನಾಟಕ 49 ಓವರ್‍ಗಳಲ್ಲಿ 6 ವಿಕೆಟ್‍ಗೆ 163 (ಶಿಶಿರ್ ಭವಾನೆ ಅಜೇಯ 55, ಅಭಿಷೇಕ್ ರೆಡ್ಡಿ 28, ಶುವಗಟ 29ಕ್ಕೆ 3, ಸಕ್ಲೈನ್ 48ಕ್ಕೆ 3)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


