ಕ್ರೀಡೆ

ಕರ್ನಾಟಕಕ್ಕೆ ದೀಪಾವಳಿ ಬೋನಸ್

ಮಧ್ಯಮ ವೇಗಿ ಸ್ಟುವರ್ಟ್ ಬಿನ್ನಿ ಮತ್ತು ಲೆಗ್‍ಸ್ಪಿನ್ನರ್ ಶ್ರೇಯಸ್ ಗೋಪಾಲ್ ತೋರಿದ ಚುರುಕಿನ ಬೌಲಿಂಗ್ ದಾಳಿಯ ನೆರವಿನೊಂದಿಗೆ ಗಂಗೋತ್ರಿ ಗ್ಲೇಡ್ಸ್‍ನಲ್ಲಿ...

ಕರ್ನಾಟಕಕ್ಕೆ ದೀಪಾವಳಿ ಬೋನಸ್
ಕರ್ನಾಟಕ ತಂಡ
Published On :
ಮೈಸೂರು: ಮಧ್ಯಮ ವೇಗಿ ಸ್ಟುವರ್ಟ್ ಬಿನ್ನಿ ಮತ್ತು ಲೆಗ್‍ಸ್ಪಿನ್ನರ್ ಶ್ರೇಯಸ್ ಗೋಪಾಲ್ ತೋರಿದ ಚುರುಕಿನ ಬೌಲಿಂಗ್ ದಾಳಿಯ ನೆರವಿನೊಂದಿಗೆ ಗಂಗೋತ್ರಿ ಗ್ಲೇಡ್ಸ್‍ನಲ್ಲಿ ಮಂಗಳವಾರ ಮುಕ್ತಾಯ ಕಂಡ ರಣಜಿ `ಎ' ಗುಂಪಿನ 6ನೇ ಲೀಗ್ ಪಂದ್ಯದಲ್ಲಿ ಪ್ರವಾಸಿ ಒಡಿಶಾ ತಂಡದ ವಿರುದ್ಧ ಆತಿಥೇಯ ಕರ್ನಾಟಕ ಇನ್ನಿಂಗ್ಸ್ ಹಾಗೂ 64 ರನ್ ಗೆಲುವು ಸಾಧಿಸಿತು. 
ಮೊದಲ ಇನ್ನಿಂಗ್ಸ್‍ನಲ್ಲಿ 168 ರನ್ ಹಿನ್ನಡೆ ಅನುಭವಿಸಿದ್ದ ಒಡಿಶಾ, ಕರ್ನಾಟಕವನ್ನು ಮತ್ತೆ ಬ್ಯಾಟಿಂಗ್‍ಗೆ ಇಳಿಸುವ ಗೋಜಿಗೆ ಹೋಗದೆ ತನ್ನ ಎರಡನೇ ಇನ್ನಿಂಗ್ಸ್‍ನಲ್ಲಿ 36.1 ಓವರ್ ಗಳಲ್ಲಿ 104 ರನ್‍ಗಳಿಗೆ ಆಲೌಟ್ ಆಯಿತು. ಪರಿಣಾಮ ವಿನಯ್ ಪಡೆ ಬೋನಸ್ ಗೆಲುವಿನೊಂದಿಗೆ 7 ಅಂಕ ಕಲೆಹಾಕಿ ನಾಕೌಟ್ ಹಂತದ ಹಾದಿ-ಯನ್ನು ಇನ್ನಷ್ಟು ಸುಗಮ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‍ನಲ್ಲಿ ಅಪೂರ್ವ ಬ್ಯಾಟಿಂಗ್ ಪ್ರದರ್ಶನ ನೀಡಿ ಅಮೋಘ ಶತಕ ದಾಖಲಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾದ ರಾಬಿನ್ ಉತ್ತಪ್ಪ ಮತ್ತೊಮ್ಮೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 
ಒಡಿಶಾ ವಿರುದ್ಧದ ಈ ಅಭೂತಪೂರ್ವ ಗೆಲುವಿನಿಂದಾಗಿ ಕರ್ನಾಟಕ `ಎ' ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಒಟ್ಟು 6 ಪಂದ್ಯಗಳನ್ನಾಡಿರುವ ಅದು 2ರಲ್ಲಿ ಗೆಲುವು ಹಾಗೂ 4 ಪಂದ್ಯಗಳಲ್ಲಿ ಡ್ರಾ ಸಾಧಿಸುವ ಮುಖೇನ ಒಟ್ಟು 21 ಅಂಕಗಳನ್ನು ಗಳಿಸಿದ್ದರೆ, ಇಷ್ಟೇ ಪಂದ್ಯಗಳಿಂದ 3ರಲ್ಲಿ ಗೆಲುವು ಮತ್ತು ಇನ್ನು ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ದೆಹಲಿ 24 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದೆ. ಅಂದಹಾಗೆ ಲೀಗ್ ಹಂತದ ತನ್ನ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ, ಅಂಕಪಟ್ಟಿಯ ಟಾಪರ್ ದೆಹಲಿ ತಂಡವನ್ನು ಎದುರಿಸಲಿದ್ದು, ಇದೇ 23ರಿಂದ ಶುರುವಾಗಲಿರುವ ಈ ಪಂದ್ಯವು ಹುಬ್ಬಳ್ಳಿಯ ರಾಜನಗರದ ಕೆಎಸ್‍ಸಿಎ ಮೈದಾನದಲ್ಲಿ ನಡೆಯಲಿದೆ. 
ಬಿನ್ನಿ ಮೊನಚಿನ ದಾಳಿ: ಇತ್ತ ಪಂದ್ಯದ ಮೂರನೇ ದಿನದಂದು 9 ವಿಕೆಟ್ ನಷ್ಟಕ್ಕೆ 400 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದ ಕರ್ನಾಟಕದ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ದಿನಾಂತ್ಯಕ್ಕೆ ಯಾವುದೇ ರನ್ ಗಳಿಸದೆ 1 ವಿಕೆಟ್ ಕಳೆದುಕೊಂಡಿದ್ದ ಒಡಿಶಾ, ಪಂದ್ಯದ ಕೊನೇ ದಿನವಾದ ಬುಧವಾರದಂದು ಬಿನ್ನಿ (34ಕ್ಕೆ 4) ಮತ್ತು ಶ್ರೇಯಸ್ ಗೋಪಾಲ್ (43ಕ್ಕೆ 3) ತೋರಿದ ಮೊನಚಿನ ದಾಳಿಗೆ ಸಿಲುಕಿ ತ್ವರಿತಗತಿಯಲ್ಲಿಯೇ ಎರಡನೇ ಇನ್ನಿಂಗ್ಸ್ ಗೆ ಇತಿಶ್ರೀ ಹಾಡಿತು. 
ಮೊದಲಿಗೆ ಆರಂಭಿಕ ನಟರಾಜ್ ಬೆಹೇರಾ (19) ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬಿನ್ನಿ ಒಡಿಶಾಗೆ ಮೊದಲ ಹೊಡೆತ ನೀಡಿದರು. ಇದರ ಬೆನ್ನಿಗೇ ಮೊದಲ ಇನ್ನಿಂಗ್ಸ್‍ನಲ್ಲಿ ಭರ್ಜರಿ ಶತಕ ದಾಖಲಿಸಿದ್ದ ಗೋಂದ ಫೋದ್ದರ್ (7) ವಿನಯ್ ಬೌಲಿಂಗ್‍ನಲ್ಲಿ ಅಭಿಷೇಕ್ ರೆಡ್ಡಿಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಒಂದರ ಹಿಂದೊಂದರಂತೆ ಬಿದ್ದ ಈ ಎರಡು ವಿಕೆಟ್‍ಗಳಿಂದ ಒಡಿಶಾ ಒತ್ತಡಕ್ಕೆ ಸಿಲುಕಿಕೊಂಡಿತು. ಮೊನಚಿನ ದಾಳಿ ನಡೆಸಿದ ಕರ್ನಾಟಕ ಪರ ವಿನಯ್ ಕುಮಾರ್ 2 ಹಾಗೂ ಉದಿತ್ ಪಟೇಲ್ 1 ವಿಕೆಟ್ ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.