ಕ್ರೀಡೆ

ಮಯಾಂಕ್, ರಾಬಿನ್ ಮಿಂಚು

ಮಧ್ಯಮ ಕ್ರಮಾಂಕದ ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಜೋಡಿಯ ಶತಕದ ಜತೆಯಾಟದಿಂದ, ಕರ್ನಾಟಕ ತಂಡ, ಒಡಿಶಾ ವಿರುದ್ಧ ನಡೆಯುತ್ತಿರುವ ರಣಜಿ...

ಮಯಾಂಕ್, ರಾಬಿನ್ ಮಿಂಚು
ರಾಬಿನ್ ಉತ್ತಪ್ಪ
Published On :
ಮೈಸೂರು: ಮಧ್ಯಮ ಕ್ರಮಾಂಕದ ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಜೋಡಿಯ ಶತಕದ ಜತೆಯಾಟದಿಂದ, ಕರ್ನಾಟಕ ತಂಡ, ಒಡಿಶಾ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದ ತನ್ನ ಮೊದಲ ಇನಿಂಗ್ಸ್‍ನಲ್ಲಿ 23 ರನ್ ಮುನ್ನಡೆ ಪಡೆದಿದೆ. 
ಶ್ರೀಕಂಠದತ್ತ ನರಸಿಂಹದತ್ತ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಾದ ಶನಿವಾರ, ತನ್ನ ಮೊದಲ ಇನಿಂಗ್ಸ್‍ನಲ್ಲಿ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದ್ದ ಕರ್ನಾಟಕ, ಭಾನುವಾರ ತನ್ನ ಇನಿಂಗ್ಸ್ ಮುಂದುವರಿಸಿ, ದಿನಾಂತ್ಯದ ಹೊತ್ತಿಗೆ, 3 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿದೆ. ರಾಬಿನ್ ಹಾಗೂ ಕರುಣ್ ನಾಯರ್, ಸೋಮವಾರ ಇನಿಂಗ್ಸ್ ಮುಂದುವರಿ ಸಲಿದ್ದಾರೆ. 
ಭಾನುವಾರದ ದಿನದಾಟದಲ್ಲಿ ಮಯಾಂಕ್ ಅಗರ್ವಾಲ್ ಹಾಗೂ ರವಿಕುಮಾರ್ ಸಮರ್ಥ್ ಇನಿಂಗ್ಸ್ ಮುಂದುವರಿಸಿದರು. ಆದರೆ, ಈ ಜೋಡಿ ದಿನದ ಮೊದಲ ಓವರ್‍ನಲ್ಲೇ ಬೇರ್ಪಟ್ಟಿತು. ಪ್ರಧಾನ್ ಮಾಡಿದ ಆ ಓವರ್‍ನ 2ನೇ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದ ರವಿಕುಮಾರ್, ಕ್ರೀಸ್ ನಿಂದ ಹೊರನಡೆದರು. ಆಗ, ಕ್ರೀಸ್‍ಗೆ ಕಾಲಿಟ್ಟಿದ್ದು ಅಭಿಷೇಕ್ ರೆಡ್ಡಿ. ಮಯಾಂಕ್ ಹಾಗೂ ರೆಡ್ಡಿ ಜೋಡಿ, 2ನೇ ವಿಕೆಟ್‍ಗೆ 77 ರನ್ ಸೇರಿಸಿತು. ಇನಿಂಗ್ಸ್‍ನ 41ನೇ ಓವರ್ ನಲ್ಲಿ ಬಸಂತ್ ಮೊಹಾಂತಿ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಆದ ರೆಡ್ಡಿ ಪೆವಿಲಿಯನ್‍ನತ್ತ ಮರಳಿದರು. ಆಗ, ಮಯಾಂಕ್‍ಗೆ ಜತೆಯಾಗಿದ್ದು ರಾಬಿನ್ ಉತ್ತಪ್ಪ. ಮಯಾಂಕ್ ಹಾಗೂ ರಾಬಿನ್ ಜೋಡಿ 3ನೇ ವಿಕೆಟ್‍ಗೆ ನೀಡಿದ ಜತೆಯಾಟ ಸೊಗಸಾಗಿತ್ತು. ಎದುರಾಳಿ ಬೌಲರ್ ಗಳನ್ನು ಕಾಡಿದ ಈ ಇಬ್ಬರೂ, ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟಿದರು. 
ಏತನ್ಮಧ್ಯೆ, ಅರ್ಧಶತಕ ಗಳಿಸಿ ಆಡುತ್ತಿದ್ದ ಮಯಾಂಕ್ ಆಟಕ್ಕೆ ತೆರೆ ಎಳೆದಿದ್ದು ಮೊಹಾಂತಿ. ಕ್ರೀಸ್ ನಲ್ಲಿ ಗಟ್ಟಿಯಾಗಿ ಬೇರೂರಿದ್ದ ಮಯಾಂಕ್ (78 ರನ್, 149 ಎಸೆತ, 8 ಬೌಂಡರಿ) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ ಅವರು, ತಮ್ಮ ತಂಡಕ್ಕೆ ಸಂಭ್ರಮ ತಂದಿತ್ತರು. ಆದರೆ, ಈ ಸಂಭ್ರಮ ಹೆಚ್ಚು ಕಾಲ ಇರಲಿಲ್ಲ. ಆನಂತರ ಜತೆಯಾದ ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಮಿಂಚಿನ ಆಟ ಪ್ರದರ್ಶಿಸಿ, ಪ್ರವಾಸಿಗರ ತಾಳ್ಮೆ ಪರೀಕ್ಷಿಸಿದರು. ಅದರಲ್ಲೂ ಭರ್ಜರಿ ಆಟವಾಡಿದ ರಾಬಿನ್, ಬೌಂಡರಿಗಳ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಮುರಿಯದ 4ನೇ ವಿಕೆಟ್‍ಗೆ ಈ ಜೋಡಿ ನೀಡಿದ ಅಮೋಘ ಜತೆಯಾಟ ಇನಿಂಗ್ಸ್‍ಗೆ ಶಕ್ತಿ ತುಂಬಿಸಿತು. ದಿನಾಂತ್ಯದ ಹೊತ್ತಿಗೆ, ಮೊದಲ ಇನಿಂಗ್ಸ್‍ನಲ್ಲಿ ರಾಜ್ಯ ತಂಡ, 3 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.