ಅಬ್ಬರದ ವಿಜಯದಲಿ ಕರಗಿದ ಕನಸು
ಕಳೆದೆರಡು ವರ್ಷಗಳಿಂದ ದೇಶೀ ಕ್ರಿಕೆಟ್‍ನಲ್ಲಿ ಪ್ರಭುತ್ವ ಮೆರೆದು ಹ್ಯಾಟ್ರಿಕ್ ಪ್ರಶಸ್ತಿ ಗಳಿಸುವ ತವಕದಲ್ಲಿದ್ದ ಕರ್ನಾಟಕಕ್ಕೆ ಭಾರೀ ಭ್ರಮನಿರಸನವಾಗಿದೆ...

ಬೆಂಗಳೂರು: ಕಳೆದೆರಡು ವರ್ಷಗಳಿಂದ ದೇಶೀ ಕ್ರಿಕೆಟ್‍ನಲ್ಲಿ ಪ್ರಭುತ್ವ ಮೆರೆದು ಹ್ಯಾಟ್ರಿಕ್ ಪ್ರಶಸ್ತಿ ಗಳಿಸುವ ತವಕದಲ್ಲಿದ್ದ ಕರ್ನಾಟಕಕ್ಕೆ ಭಾರೀ ಭ್ರಮನಿರಸನವಾಗಿದೆ.
ಮೊದಲಿಗೆ, ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ನಾಕೌಟ್ ಪ್ರವೇಶಿಸಲು ವಿಫಲವಾದ ಕರ್ನಾಟಕ, ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಲೀಗ್ ಹಂತಕ್ಕೇ ಹೋರಾಟ ಮುಗಿಸಿದೆ.ಆದರೆ ಒಂದು ವ್ಯತ್ಯಾಸ. ರಣಜಿ ಟ್ರೋಫಿ ಟೂರ್ನಿಯನ್ನು ಸೋಲಿನೊಂದಿಗೆ ಮುಕ್ತಾಯಗೊಳಿಸಿದ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಗೆ ಬೃಹತ್ ಗೆಲುವಿನೊಂದಿಗೆ ವಿದಾಯ ಹೇಳಿದೆ. ಆದರೆ ಪರಿಣಾಮ ಮಾತ್ರ ಶೂನ್ಯ. ಅಂದಹಾಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು 207 ರನ್‍ಗಳಿಂದ ಮಣಿಸಿದ ಕರ್ನಾಟಕಕ್ಕೆ ಅದೃಷ್ಟ ಕೈಕೊಟ್ಟಿತು.
`ಬಿ' ಗುಂಪಿನಲ್ಲಿ ಕರ್ನಾಟಕದ ಜತೆಗೆ ನಾಕೌಟ್ ಪ್ರವೇಶಿಸಲು ಪ್ರಬಲ ಸವಾಲೊಡ್ಡಿದ್ದ ಗುಜರಾತ್ ತನ್ನ ಕೊನೆಯ ಪಂದ್ಯದಲ್ಲಿ ಕೇರಳ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿ ವಿನಯ್ ಪಡೆಯನ್ನು ಟೂರ್ನಿಯಿಂದ ಹೊರದಬ್ಬಿತು. ರನ್ ರೇಟ್ ಆಧಾರದಲ್ಲಿ ಗುಜರಾತ್‍ಗಿಂತ ಹಾಲಿ ಚಾಂಪಿಯನ್ ಕರ್ನಾಟಕ ಮೇಲುಗೈ ಸಾಧಿಸಿದರೂ, ಕೇವಲ 4 ಅಂಕಗಳ ಅಂತರದಿಂದ ಗುಜರಾತ್ (6 ಪಂದ್ಯಗಳಿಂದ 20 ಅಂಕ) ನಾಕೌಟ್ ಹಂತಕ್ಕೇರಿತು. ಗೆಲ್ಲಲು 350 ರನ್ ಗುರಿ ಪಡೆದಿದ್ದ ಜಮ್ಮು ಮತ್ತು ಕಾಶ್ಮೀರ ತಂಡ 27.3 ಓವರ್‍ಗಳಲ್ಲಿ 142 ರನ್‍ಗಳಿಗೆ ಸರ್ವಪತನ ಕಂಡು ಭಾರೀ ಅಂತರದಿಂದ ಸೋಲಪ್ಪಿತು.
ಬೃಹತ್ ಗುರಿ ಮುಟ್ಟುವ ಹೋರಾಟದಲ್ಲಿ ಬನ್‍ದೀಪ್ ಸಿಂಗ್ (42) ಹಾಗೂ ಇಯಾನ್ ದೇವ್ ಸಿಂಗ್ (35) ರನ್ನು ಹೊರತುಪಡಿಸಿದರೆ ಮಿಕ್ಕವರಿಂದ ದಿಟ್ಟ ಬ್ಯಾಟಿಂಗ್ ಹೊರಹೊಮ್ಮಲಿಲ್ಲ. ಕರ್ನಾಟಕದ ಸಂಘಟಿತ ದಾಳಿಗೆ ನಲುಗಿದ ಜಮ್ಮು ಮತ್ತು ಕಾಶ್ಮೀರ ತಂಡ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸದೆ ಸುಲಭವಾಗಿಯೇ ಮಣಿಯಿತು. ಸ್ಪಿನ್ನರ್ ಜೆ. ಸುಚಿತ್ 3 ವಿಕೆಟ್ ಪಡೆದರೆ, ವಿನಯ್ ಕುಮಾರ್, ಎಸ್. ಅರವಿಂದ್ ಹಾಗೂ ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಗಳಿಸಿದರೆ, ಅಭಿಮನ್ಯು ಮಿಥುನ್ 1 ವಿಕೆಟ್ ಪಡೆದು ಪ್ರವಾಸಿ ತಂಡಕ್ಕೆ ಸೋಲುಣಿಸಿದರು.
ಮತ್ತೆ ಎಡವಿದ ರಾಹುಲ್: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಧಾನಗತಿಯ ಆರಂಭದ ಹೊರತಾಗಿಯೂ 50 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 349 ರನ್ ಕಲೆಹಾಕಿ ಪ್ರವಾಸಿ ತಂಡಕ್ಕೆ ಭಾರೀ ರನ್‍ಗಳ ಭಾರೀ ಗುರಿ ನೀಡಿತು. ವಿಕೆಟ್ ಕೀಪರ್ ಸಿ.ಎಂ. ಗೌತಮ್ (ಅಜೇಯ 109: 102 ಎಸೆತ, 10 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ವಿನಯ್ ಕುಮಾರ್ (ಅಜೇಯ 51: 20 ಎಸೆತ, 3 ಬೌಂಡರಿ, 5 ಸಿಕ್ಸರ್) ತೋರಿದ ಮಿಂಚಿನ ಬ್ಯಾಟಿಂಗ್ ಹಾಗೂ 6ನೇ ವಿಕೆಟ್‍ಗೆ ಕಲೆಹಾಕಿದ 91 ರನ್‍ಗಳು ಕರ್ನಾಟಕದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ರಾಜ್ಯ ತಂಡದ ಪರ ಮಯಾಂಕ್ ಅಗರ್ವಾಲ್ ಜತೆಗೆ ಇನ್ನಿಂಗ್ಸ್‍ಗೆ ಹೆಗಲುಕೊಟ್ಟ ಕೆ.ಎಲ್. ರಾಹುಲ್ ಮತ್ತೆ ಬ್ಯಾಟಿಂಗ್‍ನಲ್ಲಿ ಎಡದರು. ಟೂರ್ನಿಯದ್ದಕ್ಕೂ ಅಸ್ಥಿರ ಪ್ರದರ್ಶನ ನೀಡುತ್ತಾ ಸಾಗಿದ ಅವರು, ಕ್ರೀಸ್ ನಲ್ಲಿ ಕಚ್ಚಿ ನಿಲ್ಲಲು ವಿಫಲವಾದರು. 22 ಎಸೆತಗಳನ್ನು ಎದುರಿಸಿದ ಅವರು 4 ಆಕರ್ಷಕ ಬೌಂಡರಿಗಳೊಂದಿಗೆ ಅಷ್ಟೇ ರನ್‍ಗೆ ಜಹೂರ್ ಸೋಫಿ ಬೌಲಿಂಗ್‍ನಲ್ಲಿ ಎಲ್‍ಬಿ ಸುಳಿಗೆ ಸಿಲುಕಿ ಕ್ರೀಸ್ ತೊರೆದರು. ಬಳಿಕ ಬಂದ ಕರುಣ್ ನಾಯರ್ (18) ಇದೇ ಜಹೂರ್ ಸೋಫಿಗೆ ಬೌಲ್ಡ್ ಆಗಿ ಪೆಲಿಯನ್‍ನತ್ತ ಹೆಜ್ಜೆ ಹಾಕಿದರು. 2ನೇ ವಿಕೆಟ್ ಪತನ ಕಂಡಾಗ ತಂಡದ ಮೊತ್ತ 85 ರನ್.
ಮನೀಶ್ ಬಿರುಸು: ಕರುಣ್ ನಾಯರ್ ನಿರ್ಗಮನದ ನಂತರ ಆಡಲಿಳಿದ ಮನೀಶ್ ಪಾಂಡೆ ಇನ್ನಿಂಗ್ಸ್‍ಗೆ ಬಿರುಸು ತಂದುಕೊಟ್ಟರು. ಆದರೆ, ಮತ್ತೊಂದು ಬದಿಯಲ್ಲಿ ಕ್ರೀಸ್‍ನಲ್ಲಿ ಅರ್ಧಶತಕದ ಅಂಚಿನಲ್ಲಿದ್ದ ಮಯಾಂಕ್ (47: 56 ಎಸೆತ, 7 ಬೌಂಡರಿ) ಅವರಿಗೆ ಸೂಕ್ತ ಸಾಥ್ ನೀಡದೆ ಕೈಚೆಲ್ಲಿದರು. ಬಳಿಕ ಬಂದ ಆರ್. ಸಮರ್ಥ್ (8) ವಾಸೀಂ ರಾಜಾಗೆ ಕಾಟ್ ಅಂಡ್ ಬೌಲ್ಡ್ ಆಗಿ ಹೊರಬಿದ್ದರು. ಈ ಹಂತದಲ್ಲಿ ಆಡಲಿಳಿದ ವಿಕೆಟ್ ಕೀಪರ್ ಸಿ.ಎಂ. ಗೌತಮ್, ಮನೀಶ್ ಜತೆಗೆ ಜಮ್ಮು ಮತ್ತು ಕಾಶ್ಮೀರ ತಂಡದ ಬೌಲರ್‍ಗಳನ್ನು ಕಾಡಲು ಮುಂದಾದರು. ಆದರೆ, ಅರ್ಧಶತಕದ ನಂತರ ಮನೀಶ್ ಪಾಂಡೆ 70 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಗಳುಳ್ಳ 79 ರನ್‍ಗಳ ಕಾಣಿಕೆ ನೀಡಿ ಕ್ರೀಸ್ ತೊರೆದರು.
ವಿನಯ್ ಮಿಂಚಾಟ: ಮನೀಶ್ ಬಳಿಕ ಕ್ರೀಸ್‍ಗಿಳಿದ ನಾಯಕ ವಿನಯ್ ಕುಮಾರ್ ಮತ್ತೊಮ್ಮೆ ತಮ್ಮ ಪ್ರತಾಪ ತೋರಿದರು. ಬಿಡುಬೀಸಿನ ಬ್ಯಾಟಿಂಗ್ ನಡೆಸಿದ ವಿನಯ್, ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ 20 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಗಳ ನೆರವಿನೊಂದಿಗೆ ಅರ್ಧಶತಕ ಗಳಿಸಿದ ವಿನಯ್ ಮತ್ತೊಮ್ಮೆ ತಂಡವನ್ನು ಮೇಲೆತ್ತಿದರು. ಮೊದಮೊದಲು ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ ಜಮ್ಮು ಮತ್ತು ಕಾಶ್ಮೀರ ತಂಡ ಕ್ರಮೇಣ ಮೊನಚು ಕಳೆದುಕೊಂಡಿದ್ದರಿಂದ ಕೊನೆಯ ಹಂತದಲ್ಲಿ ಭಾರೀ ಪ್ರಮಾಣದಲ್ಲಿ ರನ್ ಹರಿದುಬಂದವು. ಜಹೂರ್ ಸೋಫಿ ಮತ್ತು ವಾಸೀಮ್ ರಾಜ ತಲಾ 2 ವಿಕೆಟ್ ಪಡೆದರೆ, ಪರ್ವೇಜ್ ರಸೂಲ್ 1 ವಿಕೆಟ್ ಗಳಿಸಿದರು.
ಸ್ಕೋರ್ ವಿವರ
ಕರ್ನಾಟಕ: 50 ಓವರ್‍ಗಳಲ್ಲಿ 5 ವಿಕೆಟ್‍ಗೆ 349
ಮಯಾಂಕ್ ಸಿ ಸಂದೀಪ್ ಬಿ ವಾಸೀಂ ರಾಜಾ 47
ಕೆ.ಎಲ್. ರಾಹುಲ್ ಎಲ್‍ಬಿ ಬಿ ಜಹೂರ್ ಸೋಫಿ 22
ಕರುಣ್ ನಾಯರ್ ಬಿ ಜಹೂರ್ ಸೋಫಿ 18
ಮನೀಶ್ ಪಾಂಡೆ ಸಿಂಗ್ ಬಿ ಪರ್ವೇಜ್ ರಸೂಲ್ 79
ಆರ್. ಸಮರ್ಥ್ ಸಿ/ಬಿ ವಾಸೀಂ ರಾಜಾ 08
ಸಿ.ಎಂ. ಗೌತಮ್ ಅಜೇಯ 109
ವಿನಯ್ ಕುಮಾರ್ ಅಜೇಯ 51
ಇತರೆ: (ಬೈ-2, ಲೆಬೈ-9, ವೈಡ್-3, ನೋಬಾಲ್-1) 15
ವಿಕೆಟ್ ಪತನ : 1-47 (ರಾಹುಲ್), 2-85 (ಕರುಣ್), 3-103
(ಮಯಾಂಕ್), 4-113 (ಸಮರ್ಥ್), 5-258 (ಮನೀಶ್)
ಬೌಲಿಂಗ್ ವಿವರ : ರೋಹಿತ್ ಶರ್ಮಾ 6-0-36-0, ಆಸೀಫ್ ರಸೂಲ್ 7-1-57-0, ಓಮರ್ ಆಲಂ 6-0-51-0, ಜಹೂ ರ್
ಸೋಫಿ 10-0-58-2, ವಾಸೀಂ ರಾಜಾ 10-0-66-2, ಪರ್ವೇಜ್ ರಸೂಲ್ 10-0-61-1, ಸಂದೀಪ್ ಸಿಂಗ್ 1-0-9-0
ಜಮ್ಮು ಮತ್ತು ಕಾಶ್ಮೀರ: 27.3 ಓವರ್‍ಗಳಲ್ಲಿ 142ಕ್ಕೆ ಆಲೌಟ್
ಆಸೀಫ್ ರಸೂಲ್ ಸಿ ನಾಯರ್ ಬಿ ವಿನಯ್ 13
ಶುಭಂ ಖಜೂರಿಯಾ ಸಿ ಗೌತಮ್ ಬಿ ಮಿಥುನ್ 01
ಬನ್‍ದೀಪ್ ಸಿಂಗ್ ಸಿ ಸುಚಿತ್ ಬಿ ಅರವಿಂದ್ 42
ಇಯಾನ್ ದೇವ್ ಸಿಂಗ್ ಸಿ ಗೌತಮ್ ಬಿ ಅರವಿಂದ್ 35
ಪರ್ವೇಜ್ ರಸೂಲ್ ಸಿ ನಾಯರ್ ಬಿ ವಿನಯ್ 14
ನದೀಮ್ ಅಹಮದ್ ದರ್ ಸಿ ಗೌತಮ್ ಬಿ ಸುಚಿತ್ 01
ಸಂದೀಪ್ ಸಿಂಗ್ ಎಲ್‍ಬಿ ಬಿ ಸುಚಿತ್ 20
ವಾಸೀಂ ರಾಜಾ ಸ್ಟಂಪ್ಡ್ ಗೌತಮ್ ಬಿ ಶ್ರೇಯಸ್ 11
ಜಹೂರ್ ಸೋಫಿ ಮನೀಶ್ ಬಿ ಶ್ರೇಯಸ್ 00
ಓಮರ್ ಆಲಂ ಅಜೇಯ 03
ರೋಹಿತ್ ಶರ್ಮಾ ಎಲ್‍ಬಿ ಬಿ ಸುಚಿತ್ 00
ಇತರೆ: (ವೈಡ್-1, ನೋಬಾಲ್-1) 02
ವಿಕೆಟ್ ಪತ ನ : 1-14 (ಆಸೀಫ್), 2-14 (ಶುಭಂ ), 3-92 (ಬನ್‍ದೀಪ್), 4-93 (ಇಯಾನ್), 5-94 (ನದೀಮ್), 6-115 (ಪರ್ವೇಜ್), 7-130 (ವಾಸೀಂ), 8-130 (ಜಹೂರ್), 9-142 (ಸಂದೀಪ್), 10-142 (ರೋಹಿತ್)
ಬೌಲಿಂಗ್ ವಿವರ : ವಿನಯ್ ಕುಮಾರ್ 6-0-27-2, ಅಭಿಮನ್ಯು ಮಿಥುನ್ 5-0-37-1, ಶ್ರೀನಾಥ್ ಅರವಿಂದ್ 5-0-23-2, ಶ್ರೇಯಸ್ ಗೋಪಾಲ್ 4-1-29-2, ಸುಚಿತ್ 7.3-1-26-3
ಫಲಿತಾಂಶ: ಕರ್ನಾಟಕಕ್ಕೆ 207 ರನ್ ಜಯ, 4 ಅಂಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


