ಕ್ರೀಡೆ

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ದಾಳಿಗೆ ಗುಜರಾತ್ ಪರದಾಟ

ಆರಂಭಿಕ ಆಟಗಾರ ಮಯಾಂಕ್ ಅಗರ್ ವಾಲ್ ಮತ್ತು ಮನೀಶ್ ಪಾಂಡೆ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಹಾಲಿ ಚ್ಯಾಂಪಿಯನ್ ಕರ್ನಾಟಕ ತಂಡ ವಿಜಯ್ ..

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ದಾಳಿಗೆ ಗುಜರಾತ್ ಪರದಾಟ
ಮನೀಶ್ ಪಾಂಡೆ
Published On :

ಆಲೂರು: ಆರಂಭಿಕ ಆಟಗಾರ ಮಯಾಂಕ್ ಅಗರ್ ವಾಲ್  ಮತ್ತು ಮನೀಶ್ ಪಾಂಡೆ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಹಾಲಿ ಚ್ಯಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ, ಟ್ರೋಫಿ ಟೂರ್ನಿಯಲ್ಲಿ ಸತತ ಎರಡನೇ ಜಯ ಸಂಪಾದಿಸಿದೆ.

ಈ ಮೂಲಕ ಸತತ 2ನೇ ಗೆಲುವಿನೊಂದಿಗೆ ಒಟ್ಟು 8 ಅಂಕ ಸಂಪಾದಿಸಿದ ಕರ್ನಾಟಕ ಕ್ವಾರ್ಟರ್ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿತು. ಇಲ್ಲಿನ ಆಲೂರು (1) ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬಿ ಗುಂಪಿನ ತನ್ನ 3ನೇ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 233 ರನ್ ಕಲೆ ಹಾಕಿತು.

ಗುರಿ ಬೆನ್ನತ್ತಿದ ಗುಜರಾತ್ 40 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದ್ದ ವೇಳೆ ಮಳೆ ಮತ್ತು ಮಂದ ಬೆಳಕು ಪಂದ್ಯಕ್ಕೆ ಅಡ್ಡಿ ಪಡಿಸಿತು. ಈ ವೇಳೆ ಪ್ರವಾಸಿ ತಂಡ ಗೆಲುವಿಗಾಗಿ ಉಳಿದ 10 ಓವರ್‌ಗಳಲ್ಲಿ 5 ವಿಕೆಟ್‌ಗಳ ನೆರವಿನಿಂದ 74 ರನ್ ಗಳಿಸಬೇಕಿತ್ತು. ಈ ಹಂತದಲ್ಲಿ ಎರಡೂ ತಂಡಗಳಿಗೂ ಗೆಲುವಿನ ಸಮಾನ ಅವಕಾಶವಿತ್ತು. ರಾಜ್ಯಕ್ಕೆ ವರವಾದ ವಿಜೆಡಿ ನಿಯಮ

ಹವಾಮಾನ ವೈಪರಿತ್ಯದಿಂದ 15 ನಿಮಿಷಕ್ಕೂ ಹೆಚ್ಚಿನ ಅವಧಿಯ ಆಟ ನಷ್ಟವಾದ ಕಾರಣ, ವಿ.ಜಯದೇವನ್ (ವಿಜೆಡಿ) ನಿಯಮದ ಪ್ರಕಾರ ಗುಜರಾತ್‌ಗೆ 44 ಓವರ್‌ಗಳಲ್ಲಿ 205 ರನ್‌ಗಳ ಪರಿಷ್ಕೃತ ಗುರಿ ನಿಗದಿ ಪಡಿಸಲಾಯಿತು. ಕೊನೆಯ 4 ಓವರ್‌ಗಳಲ್ಲಿ ಗೆಲ್ಲಲು 45 ರನ್‌ಗಳ ಕಠಿಣ ಗುರಿ ಪಡೆದ ಗುಜರಾತ್, ರಾಜ್ಯದ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿ ಸೋಲೊಪ್ಪಿಕೊಂಡಿತು. ಅಂತಿಮವಾಗಿ 44 ಓವರ್‌ಗಳಲ್ಲಿ 8 ವಿಕೆಟ್‌ಗೆ 189 ರನ್ ಗಳಿಸಲಷ್ಟೇ ಶಕ್ತವಾದ ಗುಜರಾತ್, ಪ್ರಸಕ್ತ ಸಾಲಿನಲ್ಲಿ ಮೊದಲ ಸೋಲುಂಡಿತು.

ಇದಕ್ಕೂ ಮೊದಲು ಟೂರ್ನಿಯಲ್ಲಿ ಸತತ ಮೂರನೇ ಬಾರಿ ಟಾಸ್ ಸೋತ ಕರ್ನಾಟಕ ಮೊದಲು ಬ್ಯಾಟಿಂಗ್‌ಗಿಳಿಯಿತು. ಕೆ.ಎಲ್.ರಾಹುಲ್, ಸಾದಿಕ್ ಕಿರ್ಮಾನಿ ಮತ್ತು ಸ್ಟುವರ್ಟ್ ಬಿನ್ನಿ ಅವರ ವೈಫಲ್ಯದ ಮಧ್ಯೆ ಮಯಾಂಕ್ ಅಗರ್ವಾಲ್ (58) ಮತ್ತು ಮನೀಶ್ ಪಾಂಡೆ (ಔಟಾಗದೆ 94) ತಂಡಕ್ಕೆ ಆಸರೆಯಾದರು. ಆಕರ್ಷಕ ಆಟವಾಡಿದ ಪಾಂಡೆ, ಕೊನೆಯವರೆಗೂ ಅಜೇಯರಾಗುಳಿದರೂ, ಕೇವಲ ಆರು ರನ್‌ಗಳಿಂದ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 3ನೇ ಶತಕದಿಂದ ವಂಚಿತರಾದರು. ಜವಾಬ್ದಾರಿಯುತ ಆಟದ ಮೂಲಕ ತಂಡವನ್ನು ಆಧರಿಸಿದ ಪಾಂಡೆ, ಅಂಪೈರ್ ನೀಡಿದ ಎಚ್ಚರಿಕೆಯ ನಡುವೆಯೂ ಪಿಚ್ ಮೇಲೆ ಓಡಿದ ಕಾರಣ ಅವರ ಖಾತೆಯಿಂದ 2 ರನ್‌ಗಳನ್ನು ಕಡಿತಗೊಳಿಸಲಾಯಿತು.

ರನ್ ಬೆನ್ನಟ್ಟುವ ವೇಳೆ ಗುಜರಾತ್ ತಂಡಕ್ಕೆ ಕಡಿವಾಣ ಹಾಕಿದ್ದು ರಾಜ್ಯದ ಸ್ಪಿನ್ನರ್‌ಗಳು. 44 ಓವರ್‌ಗಳಲ್ಲಿ 29 ಓವರ್‌ಗಳನ್ನು ಹಂಚಿಕೊಂಡ ನಾಲ್ವರು ಸ್ಪಿನ್ನರ್‌ಗಳಾದ ಜೆ.ಸುಚಿತ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್ ಹಾಗೂ ಪ್ರವೀಣ್ ದುಬೆ ಕೇವಲ 114 ರನ್ ನೀಡಿ ಐದು ವಿಕೆಟ್ ಪಡೆದದ್ದು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಮಧ್ಯಮ ವೇಗಿಗಳಾದ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಹಾಗೂ ಸ್ಟುವರ್ಟ್ ಬಿನ್ನಿ ಒಟ್ಟು 15 ಓವರ್‌ಗಳನ್ನು ಹಂಚಿಕೊಂಡ 67 ರನ್ ನೀಡಿ ಮೂರು ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.