'ನೋಡುವುದನ್ನು ಕಲಿತ ಮೇಲೆ ಜಗತ್ತೇ ಬದಲಾದಾಗ': ಜಾನ್ ದೇವರಾಜ್ ನಿರ್ದೇಶನದ 'Earth Angels' ಚಿತ್ರದ ಸಂದೇಶವೇನು?
ಅಮನ್ ಮತ್ತು ಶಾಂತಿ ಎಂಬ ಇಬ್ಬರು ದೃಷ್ಟಿ ವಿಶೇಷಚೇತನ ಮಕ್ಕಳು ವಸತಿ ಶಾಲೆಯಲ್ಲಿ ಒಟ್ಟಿಗೆ ಬೆಳೆದುಬರುವುದನ್ನು ಚಿತ್ರ ಕಥೆಯಾಗಿ ಹೊಂದಿದೆ. ಅವರ ಜಗತ್ತು ದೃಷ್ಟಿಗಿಂತಲೂ ಧ್ವನಿ, ಸ್ಪರ್ಶ, ಸಂಗೀತ ಮತ್ತು ಕಲ್ಪನೆಯಿಂದ ರೂಪುಗೊಂಡಿರುತ್ತದೆ.

ಬೆಂಗಳೂರು: ಜಗತ್ತನ್ನು ನೋಡುವುದು ಎಂದರೆ ನಿಜವಾಗಿಯೂ ಏನು? ದೃಷ್ಟಿ ಎಂದರೆ ಕಣ್ಣುಗಳು ಗ್ರಹಿಸುವುದಕ್ಕಷ್ಟೇ ಸೀಮಿತವೇ? ಅಥವಾ ದೈಹಿಕವಾಗಿ ದೃಷ್ಟಿವಿಶೇಷಚೇತನರು ಕೆಲವೊಮ್ಮೆ ಮಾನವೀಯತೆಯನ್ನು ಇನ್ನಷ್ಟು ಸ್ಪಷ್ಟವಾಗಿ ಕಾಣಬಹುದೇ? ಈ ಪ್ರಶ್ನೆಗಳೇ ಚಿತ್ರ ನಿರ್ದೇಶಕ ಜಾನ್ ದೇವರಾಜ್ ಅವರ Earth Angels ಚಲನಚಿತ್ರದ ಕೇಂದ್ರಬಿಂದು. ಪ್ರೀತಿ, ಶಾಂತಿ, ಮುಗ್ಧತೆ, ಸಂಘರ್ಷ ಮತ್ತು ಮಾನವೀಯ ಕರುಣೆಯ ಕುರಿತಾದ ಈ ಚಿತ್ರದಲ್ಲಿ ಸುಮಾರು 60 ಮಂದಿ ದೃಷ್ಟಿ ವಿಶೇಷಚೇತನ ನಟರು ಅಭಿನಯಿಸಿದ್ದಾರೆ.
ಅಮನ್ ಮತ್ತು ಶಾಂತಿ ಎಂಬ ಇಬ್ಬರು ದೃಷ್ಟಿ ವಿಶೇಷಚೇತನ ಮಕ್ಕಳು ವಸತಿ ಶಾಲೆಯಲ್ಲಿ ಒಟ್ಟಿಗೆ ಬೆಳೆದುಬರುವುದನ್ನು ಚಿತ್ರ ಕಥೆಯಾಗಿ ಹೊಂದಿದೆ. ಅವರ ಜಗತ್ತು ದೃಷ್ಟಿಗಿಂತಲೂ ಧ್ವನಿ, ಸ್ಪರ್ಶ, ಸಂಗೀತ ಮತ್ತು ಕಲ್ಪನೆಯಿಂದ ರೂಪುಗೊಂಡಿರುತ್ತದೆ. ಅವರು ಬೆಳೆದಂತೆ ಅವರ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ. ಬಳಿಕ ಅವರಿಗೆ ದೃಷ್ಟಿ ಲಭಿಸಿದಾಗ ಅವರ ಬದುಕೇ ಬದಲಾಗುತ್ತದೆ.
ಧ್ವನಿ ಮತ್ತು ಸ್ಪರ್ಶದ ಮೂಲಕ ಅವರು ಕಲ್ಪಿಸಿಕೊಂಡಿದ್ದ ಜಗತ್ತು ಇದ್ದಕ್ಕಿದ್ದಂತೆ ಕಣ್ಣಮುಂದೆ ಸಾಕಾರಗೊಳ್ಳುತ್ತದೆ. ಆದರೆ ಅದರ ಬಣ್ಣಗಳು ಮತ್ತು ಸೌಂದರ್ಯದ ಜೊತೆಗೆ ಹಿಂಸೆ ಹಾಗೂ ಸಂಘರ್ಷವನ್ನೂ ಎದುರಿಸಬೇಕಾಗುತ್ತದೆ. ತಾವು ಇಷ್ಟು ದಿನ ನೋಡಲು ಹಂಬಲಿಸಿದ್ದ ಜಗತ್ತಿನ ಬಗ್ಗೆ ಅವರು ಪ್ರಶ್ನೆಗಳನ್ನು ಕೇಳುವಂತಾಗುತ್ತದೆ.
ನಾನು ಜಗತ್ತನ್ನು ನೋಡುತ್ತಾ, ಈ ಜಗತ್ತಿನಲ್ಲಿ ಏನು ತಪ್ಪಾಗಿದೆ ಎಂದು ನನ್ನನ್ನೇ ಕೇಳಿಕೊಳ್ಳುತ್ತಿದ್ದೆ. ಎಲ್ಲೆಡೆ ಯುದ್ಧ ನಡೆಯುತ್ತಿದೆ ಎಂದು ಚಿತ್ರವನ್ನು ನಿರ್ದೇಶಿಸಿ, ಕಥೆ ಬರೆದು, ಸಂಗೀತ ಹಾಗೂ ಹಾಡುಗಳಲ್ಲಿ ಕೆಲಸ ಮಾಡಿರುವ ದೇವರಾಜ್ ಹೇಳಿದ್ದಾರೆ.
ದೃಷ್ಟಿ ವಿಶೇಷಚೇತನರು ತಮ್ಮ ಅಂಗವೈಕಲ್ಯವನ್ನು ತಮ್ಮ ಬದುಕಿನ ಗುರುತಾಗಿ ಮಾಡಿಕೊಳ್ಳದೆ ಅದನ್ನು ಸಹಜವಾಗಿ ಸ್ವೀಕರಿಸುತ್ತಾರೆ ಎಂಬುದನ್ನು ತಾವು ಗಮನಿಸಿದ್ದಾಗಿ ದೇವರಾಜ್ ಹೇಳಿದ್ದಾರೆ. ಅದರಿಂದ ಅವರು ಸೋಲುವುದಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ಅವರು ಹಾಸ್ಯಪ್ರಜ್ಞೆ ಹೊಂದಿದ್ದಾರೆ, ಪ್ರಾಮಾಣಿಕರು ಮತ್ತು ಯಾರ ಕರುಣೆಯನ್ನೂ ಬಯಸುವುದಿಲ್ಲ ಎಂದು ಹೇಳಿದರು.
ಚಿತ್ರದಲ್ಲಿ ವರುಣ್, ಲಿಶಾನ್, ದರ್ಶನ್, ವೆಂಕಿತೇಶ್ ಮತ್ತು ಪೂರ್ಣಿಮಾ ಸೇರಿದಂತೆ ಸುಮಾರು 60 ಮಂದಿ ದೃಷ್ಟಿವಿಶೇಷಚೇತನರು ಅಭಿನಯಿಸಿದ್ದಾರೆ. ಅವರಲ್ಲಿ ಅನೇಕರಿಗೆ ನಟನೆಯ ಅನುಭವ ಇದೇ ಮೊದಲನೆಯದು. ತಮ್ಮ ಪಾತ್ರಗಳಿಗಾಗಿ ಅವರು ಎಂಟು ತಿಂಗಳ ತರಬೇತಿ ಪಡೆದಿದ್ದು, ಪ್ರತಿದಿನ ಸುಮಾರು ನಾಲ್ಕು ಗಂಟೆಗಳನ್ನು ಸಿದ್ಧತೆಗೆ ಮೀಸಲಿಟ್ಟಿದ್ದರು.
ಈ ಕಥೆಯು ದೃಷ್ಟಿವಿಶೇಷಚೇತನರ ಆಶಯಗಳು ಮತ್ತು ಕನಸುಗಳನ್ನು ಪ್ರತಿಬಿಂಬಿಸುತ್ತದೆ. ಈ ಸಿನಿಮಾ ಕೇವಲ ಶಾಂತಿಯ ಬಗ್ಗೆ ಮಾತ್ರವಲ್ಲ; ದೃಷ್ಟಿ ವಿಶೇಷಚೇತನರ ಆಶಯಗಳು ಮತ್ತು ಕನಸುಗಳ ಬಗ್ಗೆಯೂ ಹೇಳುತ್ತದೆ. ನಾವು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಇದು ತಿಳಿಸುತ್ತದೆ ಎಂದು ವರುಣ್ ಹೇಳುತ್ತಾರೆ.
ಚಿತ್ರವು ಅಮನ್ ಮತ್ತು ಶಾಂತಿಯ ಪ್ರೀತಿ ಹಾಗೂ ಒಡನಾಟದ ಜಗತ್ತಿನಿಂದ ಅವರನ್ನು ಸಂಘರ್ಷದ ಭೂಮಿಗೆ ಕರೆದೊಯ್ಯುತ್ತದೆ. ಯುದ್ಧದ ಸನ್ನಿವೇಶಗಳನ್ನು ಸೃಷ್ಟಿಸಲು ದೇವರಾಜ್ ಅವರು ಗ್ರೀನ್ ಸ್ಕ್ರೀನ್ ಮತ್ತು ದೃಶ್ಯ ನಿರೂಪಣಾ ತಂತ್ರಗಳನ್ನು ಬಳಸಿದ್ದಾರೆ. ಈ ಸಂದರ್ಭದಲ್ಲಿ ಗಾಜಾ ಕೂಡ ಚಿತ್ರಕ್ಕೆ ಉಲ್ಲೇಖವಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ.
ಚಿತ್ರದಲ್ಲಿ ಭೀಕರ ಹಿಂಸೆಯನ್ನು ನೇರವಾಗಿ ತೋರಿಸುವ ಬದಲು, ಮಕ್ಕಳು ತಾವು ಎದುರಿಸುವ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಗಮನಹರಿಸಲಾಗಿದೆ. ಅವರು ಅನುಭವಿಸುವ ಗೊಂದಲವೇ ಚಿತ್ರದ ಪ್ರಮುಖ ಪ್ರಶ್ನೆಯೊಂದಕ್ಕೆ ದಾರಿ ಮಾಡಿಕೊಡುತ್ತದೆ: ಕೊನೆಗೆ ಕಣ್ಣಿಗೆ ಕಾಣುವ ಜಗತ್ತು ಸಂಘರ್ಷದಿಂದ ತುಂಬಿದ್ದರೆ, ನೋಡುವುದರ ಮೌಲ್ಯವೇನು ಎಂದು ಕೇಳುತ್ತದೆ.
ಈ ಪ್ರಶ್ನೆಗೆ ದೇವರಾಜ್, ನಾನು ಯಾವುದೇ ಪರಿಹಾರ ನೀಡಲು ಪ್ರಯತ್ನಿಸುತ್ತಿಲ್ಲ. ಜನರು ಯೋಚಿಸಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.
ಚಿತ್ರದಲ್ಲಿ ಸಂಗೀತವೂ ಪ್ರಮುಖ ಪಾತ್ರ ವಹಿಸಿದೆ. ಹಾಡುಗಳು, ಲಯ, ಧ್ವನಿ ಮತ್ತು ಚಲನವಲನಗಳನ್ನು ಕಥೆಯೊಂದಿಗೆ ಹೆಣೆದು ಬಳಸಲಾಗಿದೆ. ದೇವರಾಜ್ ಅವರು ಹಾಡುಗಳನ್ನು ಬರೆದು ಸಂಗೀತದ ಮೇಲೂ ಕೆಲಸ ಮಾಡಿದ್ದಾರೆ. ದೃಷ್ಟಿವಿಶೇಷಚೇತನ ನಟರೂ ಸಂಭಾಷಣೆಗಳ ರಚನೆಯಲ್ಲಿ ಕೊಡುಗೆ ನೀಡಿದ್ದಾರೆ.
Earth Angels ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿರ್ಮಿಸಲಾಗಿದ್ದು, ಎರಡೂ ಆವೃತ್ತಿಗಳನ್ನು ಪ್ರತ್ಯೇಕವಾಗಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಮರುಕಳಿಸುವ ಕತ್ತೆಯ ಪ್ರತಿಮೆ ವಿಮೋಚನೆಯ ಸಂಕೇತವಾಗಿದೆ. ಇದು ಮೇರಿ, ಜೋಸೆಫ್ ಮತ್ತು ಯೇಸು ಈಜಿಪ್ಟ್‌ಗೆ ಪಲಾಯನ ಮಾಡಿದ ಬೈಬಲ್ ಕಥೆಯಿಂದ ಪ್ರೇರಿತವಾಗಿದೆ.
ಆರ್ಟಿಸ್ಟ್ಸ್ ಯುನೈಟೆಡ್ ನಿರ್ಮಿಸಿರುವ ಈ ಚಿತ್ರವನ್ನು ಜನರಿಂದ ಸಂಗ್ರಹಿಸಲಾದ ಹಣದ ಮೂಲಕ ನಿರ್ಮಿಸಲಾಗಿದೆ. ಪ್ರದರ್ಶನಗಳಿಂದ ಸಂಗ್ರಹವಾಗುವ ಹಣವನ್ನು ದೃಷ್ಟಿವಿಶೇಷಚೇತನರ ಆರೋಗ್ಯ ಮತ್ತು ಶಿಕ್ಷಣಕ್ಕೆ ಬಳಸಲು ಚಿತ್ರತಂಡ ಉದ್ದೇಶಿಸಿದೆ. ಸಾಮಾಜಿಕ ಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿ ಚಿತ್ರವನ್ನು ಶಾಲಾ- ಕಾಲೇಜುಗಳಿಗೂ ಕೊಂಡೊಯ್ಯಲಾಗುತ್ತಿದೆ. ಈ ಸಂದೇಶವನ್ನು ಯುವ ಪೀಳಿಗೆಗೆ ತಲುಪಿಸುವ ಆಶಯವನ್ನು ದೇವರಾಜ್ ಹೊಂದಿದ್ದಾರೆ.
Earth Angels ಚಿತ್ರವು ದೃಷ್ಟಿಯ ಪರಿಕಲ್ಪನೆಯನ್ನು ಮಾನವೀಯತೆಯ ಕುರಿತಾದ ವಿಶಾಲ ಪ್ರಶ್ನೆಯಾಗಿ ಪರಿವರ್ತಿಸುತ್ತದೆ. ದೈಹಿಕ ದೃಷ್ಟಿಯಿಲ್ಲದೆ ಜಗತ್ತನ್ನು ಅನುಭವಿಸುವ ಪಾತ್ರಗಳು, ಜಗತ್ತನ್ನು ನೋಡುವ ಸಾಮರ್ಥ್ಯ ದೊರೆತರೂ ಅದನ್ನು ಅರ್ಥಮಾಡಿಕೊಳ್ಳುವುದು ಅಷ್ಟೇನೂ ಸುಲಭವಲ್ಲ ಎಂಬುದನ್ನು ಕಂಡುಕೊಳ್ಳುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



