ವಿದೇಶ

ನಾವು ನೋಡುತ್ತಿರುವ World Map ತಪ್ಪಾ?ವಿಶ್ವಸಂಸ್ಥೆಯಿಂದ ಬಂತು ಹೊಸ Equal Earth ಮ್ಯಾಪ್; 164 ದೇಶ ಒಪ್ಪಿದ ಭೂಪಟವನ್ನ ಅಮೆರಿಕ ಮಾತ್ರ ವಿರೋಧಿಸಿದ್ದು ಯಾಕೆ?

ನಾವು ಶಾಲೆಯಲ್ಲಿ ನೋಡಿದ ವಿಶ್ವ ನಕ್ಷೆ ತಪ್ಪಾಗಿತ್ತೇ? 450 ವರ್ಷಗಳ ಹಳೆಯ ವಿಶ್ವ ಭೂಪಟ ಇನ್ಮುಂದೆ ಬದಲಾವಣೆ: ಆಫ್ರಿಕಾದ ನೈಜ ಗಾತ್ರ ಬಿಂಬಿಸುವ ಹೊಸ ನಕ್ಷೆಗೆ ವಿಶ್ವಸಂಸ್ಥೆ ಗ್ರೀನ್ ಸಿಗ್ನಲ್. ಯುಎನ್ ತಂದ ಹೊಸ ಮ್ಯಾಪ್ ಬಗ್ಗೆ ಅಮೆರಿಕ ಗರಂ ಆಗಿದ್ದೇಕೆ? ಆ ಕುರಿತ ವರದಿ ಇಲ್ಲಿದೆ:

ನಾವು ನೋಡುತ್ತಿರುವ World Map ತಪ್ಪಾ?ವಿಶ್ವಸಂಸ್ಥೆಯಿಂದ ಬಂತು ಹೊಸ Equal Earth ಮ್ಯಾಪ್; 164 ದೇಶ ಒಪ್ಪಿದ ಭೂಪಟವನ್ನ ಅಮೆರಿಕ ಮಾತ್ರ ವಿರೋಧಿಸಿದ್ದು ಯಾಕೆ?
ನಾವು ನೋಡುತ್ತಿರುವ World Map ತಪ್ಪಾ? — Online Desk
Published On :

ನ್ಯೂಯಾರ್ಕ್ (ಅಮೆರಿಕ): ಕಳೆದ 450 ವರ್ಷಗಳಿಂದ ಶಾಲೆಗಳಲ್ಲಿ ಮತ್ತು ಕಚೇರಿಗಳಲ್ಲಿ ನೋಡುತ್ತಿರುವ ಜಾಗತಿಕ ಭೂಪಟವೇ ಸಂಪೂರ್ಣ ತಪ್ಪು ಅಂದರೆ ನಂಬುತ್ತಿರ? ಹೌದು, 1569 ರಲ್ಲಿ ಗೆರಾರ್ಡಸ್ ಮರ್ಕೇಟರ್ ಎಂಬುವ, ಸಮುದ್ರ ಯಾನದ ಹಡಗುಗಳಿಗೆ ದಾರಿ ಹುಡುಕಲು ಸುಲಭವಾಗುವಂತೆ ವಿನ್ಯಾಸಗೊಳಿಸಿದ್ದ ಮರ್ಕೇಟರ್ ಪ್ರೊಜೆಕ್ಷನ್ ಎನ್ನಲಾಗುವ, ನಾವು ದಿನವೂ ನೋಡುವ ಈ ಭೂಪಟದಲ್ಲಿ ಭೂಖಂಡಗಳ ಗಾತ್ರ ಭಾರಿ ಪ್ರಮಾಣದಲ್ಲಿ ತಪ್ಪಾಗಿ ಮೂಡಿಬಂದಿದೆ! ಹಾಗಾಗಿ, ಸುಮಾರು 450 ವರ್ಷಗಳ ನಂತರ, ಈ ಭೂಪಟವನ್ನ ಬದಲಾಯಿಸಲು ಇಡೀ ವಿಶ್ವವೇ ಒಂದಾಗಿದೆ. ಅದರಂತೆ, ವಿಶ್ವಸಂಸ್ಥೆಯು ಭೌಗೋಳಿಕವಾಗಿ ಅತ್ಯಂತ ನಿಖರವಾದ ಈಕ್ವಲ್ ಅರ್ಥ್ (Equal Earth) ಎಂಬ ಜಾಗತಿಕ ಭೂಪಟವನ್ನು ಅಧಿಕೃತವಾಗಿ ಅಂಗೀಕರಿಸಿದೆ. ಆ ಕುರಿತ ವರದಿ ಇಲ್ಲಿದೆ:

ಶುಕ್ರವಾರ, ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಆಫ್ರಿಕನ್ ಒಕ್ಕೂಟದ ಬೆಂಬಲದೊಂದಿಗೆ ಟೋಗೋ ದೇಶವು ಮಂಡಿಸಿದ ಭೂಪಟವನ್ನು ಸರಿಪಡಿಸಿ ಎಂಬ ಐತಿಹಾಸಿಕ ನಿರ್ಣಯಕ್ಕೆ ಭಾರಿ ಬಹುಮತ ದೊರೆಯಿತು. ಅದರಂತೆ, 164 ದೇಶಗಳು ಈ ಹೊಸ ಭೂಪಟದ ಪರವಾಗಿ ಮತ ಹಾಕಿದವು. ಆದರೆ, ಇಡೀ ವಿಶ್ವದಲ್ಲೇ ಅಮೆರಿಕ ಮಾತ್ರ ಈ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿತು. ಜೊತೆಗೆ, ಉಕ್ರೇನ್ ಸೇರಿದಂತೆ ಆರು ದೇಶಗಳು ಮತದಾನದಿಂದ ದೂರ ಉಳಿದವು.

ಯಾಕೆ ಈ ಬದಲಾವಣೆ?

ಶತಮಾನಗಳಿಂದ ಬಳಕೆಯಾಗುತ್ತಿರುವ ಸಾಂಪ್ರದಾಯಿಕ ಮರ್ಕೇಟರ್ ನಕ್ಷೆಯು ಧ್ರುವ ಪ್ರದೇಶಗಳ ಬಳಿಯಿರುವ ದೇಶಗಳನ್ನು (ಯುರೋಪ್, ಉತ್ತರ ಅಮೆರಿಕ) ದೊಡ್ಡದಾಗಿ ತೋರಿಸಿದೆ. ಇದೇ ವೇಳೆ, ಸಮಭಾಜಕ ವೃತ್ತದ ಬಳಿಯಿರುವ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳನ್ನು ಅತ್ಯಂತ ಸಣ್ಣದಾಗಿ ಬಿಂಬಿಸುತ್ತಿತ್ತು. ಉದಾಹರಣೆಗೆ, ಮರ್ಕೇಟರ್ ನಕ್ಷೆಯಲ್ಲಿ ಆಫ್ರಿಕಾ ಮತ್ತು ಗ್ರೀನ್‌ಲ್ಯಾಂಡ್ ಒಂದೇ ಗಾತ್ರದಲ್ಲಿ ಕಾಣಿಸುತ್ತವೆ, ಆದರೆ ನೈಜವಾಗಿ ಆಫ್ರಿಕಾ ಖಂಡವು ಗ್ರೀನ್‌ಲ್ಯಾಂಡ್‌ಗಿಂತ 14 ಪಟ್ಟು ದೊಡ್ಡದಾಗಿದೆ.

ಹಾಗಾದ್ರೆ, ಅಮೆರಿಕ ವಿರೋಧಿಸುತ್ತಿರುವುದು ಏಕೆ?

ವಿಶ್ವಸಂಸ್ಥೆಯ ಈ ಮತದಾನವನ್ನು ಖಂಡಿಸಿರುವ ಅಮೆರಿಕ, ಇದರಿಂದ ವಿಶ್ವಸಂಸ್ಥೆಯ ಜಾಗತಿಕ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ವಾದಿಸಿದೆ. ಅದರಂತೆ, ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ವಿಶ್ವಸಂಸ್ಥೆಯ ಮುಖ್ಯ ಕೆಲಸ. ಅದನ್ನು ಬಿಟ್ಟು 16ನೇ ಶತಮಾನದ ಭೂಪಟದ ವಿನ್ಯಾಸದ ಬಗ್ಗೆ ಚರ್ಚೆ ನಡೆಸುವುದು ಅನಗತ್ಯ. ಇಂತಹ ವಿಷಯಗಳಿಂದಾಗಿಯೇ ವಿಶ್ವಸಂಸ್ಥೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಆದರೆ, ಭೂಪಟಗಳು ಕೇವಲ ಚಿತ್ರಗಳಲ್ಲ, ಅವು ಜನರ ಆಲೋಚನಾ ಶಕ್ತಿಯನ್ನು ರೂಪಿಸುತ್ತವೆ. ಹಳೆಯ ಮರ್ಕೇಟರ್ ಭೂಪಟವು ಪಾಶ್ಚಿಮಾತ್ಯ ದೇಶಗಳೇ ಜಗತ್ತಿನಲ್ಲಿ ದೊಡ್ಡವರು ಎಂಬ ಸುಳ್ಳು ಕಲ್ಪನೆಯನ್ನು ಬಿತ್ತುತ್ತಿದೆ ಎಂದು ಆಫ್ರಿಕಾ ಮತ್ತು ಏಷ್ಯಾದ ಅನೇಕ ದೇಶಗಳು ಅಮೆರಿಕದ ನಿಲುವನ್ನು ತೀವ್ರವಾಗಿ ಟೀಕಿಸಿವೆ. ಮತ್ತೊಂದೆಡೆ, ಹೊಸ ಭೂಪಟದ ಮೂಲಕ ಜಾಗತಿಕ ದಕ್ಷಿಣದ ದೇಶಗಳ ನೈಜ ಆರ್ಥಿಕ ಮತ್ತು ಭೌಗೋಳಿಕ ವ್ಯಾಪ್ತಿಯನ್ನು ಜಗತ್ತಿಗೆ ಪರಿಚಯಿಸಿದಂತಾಗುತ್ತದೆ ಎಂದು ಫ್ರಾನ್ಸ್ ಕೂಡ ಒಪ್ಪಿಕೊಂಡಿದೆ.

ಮರ್ಕೇಟರ್ ಪ್ರೊಜೆಕ್ಷನ್ ಮತ್ತು ಈಕ್ವಲ್ ಅರ್ಥ್ ನಕ್ಷೆ
ಮರ್ಕೇಟರ್ ಪ್ರೊಜೆಕ್ಷನ್ ಮತ್ತು ಈಕ್ವಲ್ ಅರ್ಥ್ ನಕ್ಷೆ — Online Desk

ಇದರ ನಡುವೆ, ಭೂಪಟಗಳನ್ನು ಬದಲಾಯಿಸುವಾಗ ಗಡಿ ರೇಖೆಗಳ ವಿವಾದಗಳು ತಲೆದೂರುತ್ತವೆ. ಉದಾಹರಣೆಗೆ, ಈ ಹೊಸ ಭೂಪಟದಲ್ಲಿ ರಷ್ಯಾ ಆಕ್ರಮಿತ ಉಕ್ರೇನ್‌ನ ಕೆಲವು ಭಾಗಗಳನ್ನು (ಕ್ರಿಮಿಯಾ ಇತ್ಯಾದಿ) ತೋರಿಸಿರುವ ವಿಧಾನವು ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಉಕ್ರೇನ್ ಈ ಮತದಾನದಿಂದ ದೂರ ಉಳಿಯಿತು.

ಮುಂದೇನಾಗುತ್ತದೆ?

ವಿಶ್ವಸಂಸ್ಥೆಯ ಮಹಾಸಭೆಯ ನಿರ್ಣಯಗಳು ಯಾವುದೇ ದೇಶದ ಮೇಲೆ ಕಾನೂನುಬದ್ಧವಾಗಿ ಬದ್ಧವಾಗಿರುವುದಿಲ್ಲ. ಅಂದರೆ, ಅಮೆರಿಕ ಅಥವಾ ಯಾವುದೇ ದೇಶ ಹಳೆಯ ಭೂಪಟವನ್ನೇ ಬಳಸಲು ಸ್ವತಂತ್ರವಾಗಿವೆ. ವಿಮಾನ ಮತ್ತು ಹಡಗುಗಳ ಯಾನಕ್ಕೆ ಹಳೆಯ ಮರ್ಕೇಟರ್ ನಕ್ಷೆಯೇ ಮುಂದುವರಿಯಲಿದೆ. ಆದರೆ, ವಿಶ್ವಸಂಸ್ಥೆಯ ಈ ಅಧಿಕೃತ ಅಂಗೀಕಾರದಿಂದಾಗಿ ಮುಂಬರುವ ದಿನಗಳಲ್ಲಿ ಜಾಗತಿಕ ಶಾಲೆಗಳ ಪಠ್ಯಪುಸ್ತಕಗಳು ಮತ್ತು ಗೂಗಲ್ ಮ್ಯಾಪ್ಸ್‌ನಂತಹ ಪ್ರಮುಖ ಡಿಜಿಟಲ್ ತಂತ್ರಜ್ಞಾನ ಸಂಸ್ಥೆಗಳು ಈ ಹೊಸ ಈಕ್ವಲ್ ಅರ್ಥ್ ಮಾದರಿಯನ್ನು ಅಳವಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.