ಕಣ್ಣ ಮುಂದಿನ ದೃಶ್ಯ ಹಳೆಯ ನೆನಪಿನಂತೆ ಭಾಸವಾಗುವುದ್ಯಾಕೆ? ದೇಜಾವು ಹಿಂದಿರುವ ನಿಗೂಢ ಸತ್ಯ ಇಲ್ಲಿದೆ ನೋಡಿ
ನಿಮಗೆ ಎಂದಾದರೂ ಹೀಗೆ ಅನಿಸಿದೆಯಾ: ನೀವು ಮೊದಲ ಬಾರಿಗೆ ಒಂದು ಹೊಸ ಸ್ಥಳಕ್ಕೆ ಹೋಗಿದ್ದೀರಿ, ಆದರೆ ಅಲ್ಲಿಗೆ ಈ ಹಿಂದೆಯೇ ಬಂದಿದ್ದೇನೆ ಎಂಬ ವಿಚಿತ್ರ ಅನುಭವವಾಗುತ್ತದೆ. ಅಥವಾ ಯಾರೊಂದಿಗೋ ಮಾತನಾಡುವಾಗ ಈ ಮಾತುಕತೆ ಈ ಮೊದಲೇ ನಡೆದಿದೆ ಎನಿಸುತ್ತದೆ. ಅದಕ್ಕೆ, ಕಾರಣ ಇಲ್ಲಿದೆ...

DejaVu: ಹೊಸ ಜಾಗಕ್ಕೆ ಹೋದಾಗ ಅಥವಾ ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವಾಗ, ಈ ಕ್ಷಣ ನನ್ನ ಜೀವನದಲ್ಲಿ ಈ ಹಿಂದೆಯೇ ಘಟಿಸಿ ಹೋಗಿದೆ ಎಂಬ ವಿಚಿತ್ರ ಅನುಭವ ನಿಮಗೂ ಆಗಿದೆಯಾ? ಆ ಕ್ಷಣದಲ್ಲಿ ನಾವು ಕೇಳುವ ಮಾತುಗಳು, ನೋಡುವ ದೃಶ್ಯಗಳು ಎಲ್ಲವೂ ಪರಿಚಿತ ಅನಿಸಿ ಮೈ ಜುಂ ಎನ್ನುವಂತೆ ಮಾಡುತ್ತದೆ. ಇದನ್ನೇ, ವಿಜ್ಞಾನ ಲೋಕದಲ್ಲಿ 'ದೇಜಾವು' (Déjàvu) ಎಂದು ಕರೆಯಲಾಗುತ್ತದೆ. ಕೆಲವರು ಇದನ್ನು ಹಿಂದಿನ ಜನ್ಮದ ನಂಟು ಅಥವಾ ಭವಿಷ್ಯದ ಮುನ್ಸೂಚನೆ ಎಂದು ನಂಬಿದರೆ, ವಿಜ್ಞಾನ ಮತ್ತು ಮೆದುಳಿನ ತಜ್ಞರು ಇದಕ್ಕೆ ನೀಡುವ ವಿವರಣೆಯೇ ಬೇರೆ. ಆ ಕುರಿತ ವರದಿ ಇಲ್ಲಿದೆ:
ದೇಜಾವು ಯಾಕೆ ಬರುತ್ತದೆ?
ದೇಜಾವು ಒಂದು ಮಾನಸಿಕ ಕಾಯಿಲೆಯಲ್ಲ. ಪ್ರಪಂಚದ ಸುಮಾರು 70 ರಷ್ಟು ಜನರು ಜೀವನದಲ್ಲಿ ಒಮ್ಮೆಯಾದರೂ ಈ ಅನುಭವವನ್ನು ಪಡೆದಿರುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ. ಇದಕ್ಕೆ ಮುಖ್ಯವಾಗಿ ನಮ್ಮ ಮೆದುಳಿನ ಕೆಲಸವೇ ಕಾರಣ. ಅದರಂತೆ, ನಮ್ಮ ಮೆದುಳು ಕಣ್ಣು ಮತ್ತು ಕಿವಿಗಳ ಮೂಲಕ ಬರುವ ದೃಶ್ಯ ಹಾಗೂ ಶಬ್ದಗಳನ್ನು ಏಕಕಾಲದಲ್ಲಿ ಸಂಸ್ಕರಿಸಿ ನಮಗೆ ಪ್ರಸ್ತುತ ಕ್ಷಣದ ಅನುಭವ ನೀಡುತ್ತದೆ. ಆದರೆ, ಅಪರೂಪಕ್ಕೆ ಮೆದುಳಿನ ಒಂದು ಭಾಗವು ದೃಶ್ಯವನ್ನು ಮತ್ತೊಂದು ಭಾಗಕ್ಕಿಂತ ಕೇವಲ ಸೆಕೆಂಡಿನ ನೂರನೇ ಒಂದು ಭಾಗದಷ್ಟು ವೇಗವಾಗಿ ಪಡೆದುಕೊಳ್ಳುತ್ತದೆ. ಈ ಸಣ್ಣ ಸಮಯದ ವ್ಯತ್ಯಾಸದಿಂದಾಗಿ, ಮೆದುಳು ಪ್ರಸ್ತುತ ನಡೆಯುತ್ತಿರುವ ದೃಶ್ಯವನ್ನೇ "ಹಳೆಯ ನೆನಪು" ಎಂದು ತಪ್ಪಾಗಿ ಗ್ರಹಿಸಿಬಿಡುತ್ತದೆ. ಆಗ ನಿಮಗೆ ಈ ಸ್ಥಳವನ್ನು ಈ ಮೊದಲೇ ನೋಡಿದ್ದೇನೆ ಎಂಬ ಭಾವನೆ ಬರುತ್ತದೆ.
ಇನ್ನೊಂದು ಕಾರಣವೆಂದರೆ ಮೆದುಳಿನ ಸಣ್ಣ ಗೊಂದಲ. ನಮ್ಮ ಮೆದುಳು ಮಾಹಿತಿಯನ್ನು ಸಂಗ್ರಹಿಸುವಾಗ ಕೆಲವೊಮ್ಮೆ ಹೊಸ ಮಾಹಿತಿಯನ್ನು ನೇರವಾಗಿ ದೀರ್ಘಕಾಲದ ನೆನಪಿನ ಭಾಗಕ್ಕೆ ಕಳುಹಿಸುತ್ತದೆ. ಆಗ ಈಗ ನಡೆದಿರುವ ಘಟನೆಯೇ ಹಳೆಯ ನೆನಪಿನಂತೆ ಭಾಸವಾಗುತ್ತದೆ.
ಹಾಗಾದ್ರೆ, ಈ ದೇಜಾವು ಯಾರಿಗೆ ಹೆಚ್ಚು ಬರುತ್ತದೆ?
ಸಂಶೋಧನೆಗಳ ಪ್ರಕಾರ 15 ರಿಂದ 25 ವರ್ಷದ ಯುವಕರಲ್ಲಿ ದೇಜಾವು ಹೆಚ್ಚು ಕಂಡುಬರುತ್ತದೆ. ಹೆಚ್ಚು ಪ್ರಯಾಣ ಮಾಡುವವರು, ಹೆಚ್ಚು ಕನಸು ಕಾಣುವವರು ಮತ್ತು ಒತ್ತಡದಲ್ಲಿರುವವರಿಗೆ ಇದು ಸ್ವಲ್ಪ ಜಾಸ್ತಿ ಬರುತ್ತದೆ. ಇದು ಸಾಮಾನ್ಯವಾಗಿ ಕೆಲವೇ ಸೆಕೆಂಡುಗಳ ಕಾಲ ಮಾತ್ರ ಇರುತ್ತದೆ ಮತ್ತು ತಾನಾಗಿಯೇ ಮಾಯವಾಗುತ್ತದೆ.
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
ಎಂದೋ ಒಮ್ಮೊಮ್ಮೆ ದೇಜಾವು ಬರುವುದು ಸಾಮಾನ್ಯ. ಆದರೆ ಅದು ಪದೇ ಪದೇ ಬಂದು ಜೊತೆಗೆ ತಲೆಸುತ್ತು, ಮೂರ್ಛೆ ಹೋಗುವಂತಹ ಅನುಭವ ಬಂದರೆ ಆಗ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಕೆಲವೊಮ್ಮೆ ಅಪಸ್ಮಾರದ ಲಕ್ಷಣವಾಗಿಯೂ ದೇಜಾವು ಕಾಣಿಸಿಕೊಳ್ಳಬಹುದು. ಆದರೆ ಸಾಮಾನ್ಯ ಜನರಲ್ಲಿ ಕಂಡುಬರುವ ದೇಜಾವು ಯಾವುದೇ ಅಪಾಯಕಾರಿಯಲ್ಲ, ಇದು ಮೆದುಳಿನ ಒಂದು ಕುತೂಹಲಕಾರಿ ಆಟ ಅಷ್ಟೇ.

12ನೇ ವಯಸ್ಸಿಗೆ ಹುಡುಗಿಯರು ಹುಡುಗರಾಗುವ ನಿಗೂಢ ಊರು; ಇಡೀ ಜಗತ್ತನ್ನೇ ಬೆರಗುಗೊಳಿಸಿದ ಅಪರೂಪದ ರಹಸ್ಯ ಇಲ್ಲಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



