ಕಂಬಳದ ಇತಿಹಾಸ; ಜಲ್ಲಿಕಟ್ಟು, ಕಂಬಳಕ್ಕೂ ಇರುವ ವ್ಯತ್ಯಾಸ
ಕೋಣಗಳಿಗೆ ತಿನ್ನಲು ಬಹುವಿಧದ ಪುಷ್ಟಿದಾಯಕ ಆಹಾರವನ್ನು ನೀಡಲಾಗುತ್ತದೆ. ಕಂಬಳದ ಸೀಸನ್‌ನಲ್ಲಿ ದಿನಕ್ಕೆ 4 ಕೇಜಿ ಹುರುಳಿಯನ್ನು ಬೇಯಿಸಿ ಕೊಡಲಾಗುತ್ತದೆ!

Published On :
ತಮಿಳುನಾಡಿನ ಜಲ್ಲಿಕಟ್ಟು ಆಚರಣೆಗೆ ಕೋರ್ಟ್ ನಿರ್ಬಂಧ ವಿಧಿಸಿದ್ದು ನಂತರದ ಬೆಳವಣಿಗೆಗಳಲ್ಲಿ ಅಲ್ಲಿನ ಜನರ ಪಟ್ಟಿಗೆ ಮಣಿದ ಸರ್ಕಾರ ಜಲ್ಲಿಕಟ್ಟು ನಡೆಸುವುದಕ್ಕೆ ಉಂಟಾಗಿದ್ದ ಕಾನೂನು ತೊಡಕನ್ನು ನಿವಾರಿಸಿತ್ತು. ಈಗ ಕರ್ನಾಟಕದ ಸರದಿ. ಶತಮಾನಗಳ ಇತಿಹಾಸ ಹೊಂದಿರುವ ಕರ್ನಾತಕದ ಕರಾವಳಿಯಲ್ಲಿನ ಕಂಬಳ ಕ್ರೀಡೆಗೆ ಜಲ್ಲಿಕಟ್ಟು ಮಾದರಿಯಲ್ಲೇ ನಿರ್ಬಂಧ ಎದುರಾಗುವ ಆತಂಕ ಎದುರಾಗಿದೆ. ಕಂಬಳದ ಆಚರಣೆ, ಕಂಬಳ ಕ್ರೀಡೆಗೆ ಇರುವ ಹಿನ್ನೆಲೆಯ ಬಗ್ಗೆ ಮಾಹಿತಿ ಇಲ್ಲಿದೆ.
ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗ. ‘ಕಂಬಳ’, ಬೇಸಾಯಗಾರರು ಭತ್ತದ ಗದ್ದೆಗಳಲ್ಲಿ ಕೊಯ್ಲಿನ ಬಳಿಕ ಕೋಣಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟವಷ್ಟೇ ಆಗದೇ ಅದರೊಂದಿಗೆ ಇಂತಹಾ ಆಚರಣೆಯ ಜತೆಗೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಯೂ ಮಿಳಿತಗೊಂಡಿದೆ.
ಕಂಬಳ ಪದದ ನಿಷ್ಪತ್ತಿ ಹೇಗೆ?: ಕಂಪ ಎಂಬುದಕ್ಕೆ ಕೆಸರು ಎಂಬ ಅರ್ಥವಿದೆ. ಆದ್ದರಿಂದ ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳಲಾಗುತ್ತದೆ. ಕಳ ಎಂಬುದಕ್ಕೆ ಸ್ಪ್ರರ್ಧೆಯ ವೇದಿಕೆ, ಕಣ ಎಂಬ ಅರ್ಥವಿರುವುದರಿಂದ ಕಂಪದ ಕಳ> ಕಂಬಳ ಆಗಿರಬಹುದು ಎಂದೂ ಹೇಳಲಾಗುತ್ತದೆ. ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಹೀಗಾಗಿ ಇದಕ್ಕೆ ಕಂಬಳ ಆಗಿರಬಹುದು. ಕಂಬಳದ ಇತಿಹಾಸ: ಕರಾವಳಿಯಲ್ಲಿ ಕಂಬಳದ ಆಚರಣೆಗೆ ಸುಮಾರು 800-900 ವರ್ಷಗಳ ಹಿನ್ನೆಲೆ ಇದೆ. ಉಡುಪಿ ತಾಲೂಕಿನ ಕೆಂಜೂರಿನ ಸಮೀಪ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂದಿಸಿದ ಶಾಸನದಲ್ಲಿ ಕಂಬಳದ ಬಗ್ಗೆ ಹೇಳಲಾಗಿದೆ. ಇದರ ಕಾಲ ಕ್ರಿ. ಶ.1200 ಆಗಿದ್ದು ಕಂಬಳ ಕನಿಷ್ಠ 800 ವರ್ಷಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಂಬಳಕ್ಕೆ ಸುದೀರ್ಘ ಶ್ರೀಮಂತ ಇತಿಹಾಸವಿರುವುದು ವೇದ್ಯವಾಗುತ್ತದೆ.
ಕಂಬಳದ ಆಚರಣೆ ಹಾಗೂ ವಿಧಾನ: ಮೊದಲ ಭತ್ತದ ಬೆಳೆಯ ಕೊಯ್ಲು ಮುಗಿದು ಎರಡನೆಯ ಸುಗ್ಗಿ ಬೆಳೆಗೆ ಭೂಮಿ ಹದಮಾಡುವ ಸಮಯದಲ್ಲಿ ದೊರೆಯುವ ಬಿಡುವಿನ ವೇಳೆಯಲ್ಲಿ ನಡೆಯುವ ಆಚರಣೆಯೇ ಕಂಬಳ. ಕಾರ್ತಿಕ ಮಾಸದ ದೀಪಾವಳಿ ಹಬ್ಬದ ನಂತರ ಚಳಿಗಾಲದಲ್ಲಿ (ನವೆಂಬರ್ ಆಸುಪಾಸು) ಆರಂಭವಾಗುವ ಈ ಜಾನಪದ ಕ್ರೀಡೆಯನ್ನು, ಮಾರ್ಚ್ ತಿಂಗಳವರೆಗೂ ಅವಳಿ ಜಿಲ್ಲೆಯ ವಿವಿಧ ಭಾಗದಲ್ಲಿ ಆಯೋಜಿಸಲಾಗುತ್ತದೆ. ಈ ಕಂಬಳದಲ್ಲಿ ಒಟ್ಟು ಎರಡು ವಿಧವಿದೆ, ಒಂಟಿ ಗೆದ್ದೆಯ ಕಂಬಳ ಮತ್ತು ಜೋಡುಕರೆ ಕಂಬಳ. ಅಂದಾಜು 100-200 ಮೀಟರ್ ಉದ್ದದ ಓಟದ ಕಣಗಳಲ್ಲಿ ಕಂಬಳ ಸಾಮಾನ್ಯವಾಗಿ ನಡೆಯುತ್ತದೆ. ಗದ್ದೆಯ ಮಣ್ಣಿಗೆ ಮರಳು ಸೇರಿಸಿ ಅದರ ಮೇಲೆ ನೀರು ನಿಲ್ಲಿಸಲಾಗುತ್ತದೆ. ಕಂಬಳದ ಅಂಕಣವು ನೆಲ ಮಟ್ಟಕ್ಕಿಂತ ಕೆಲವು ಅಡಿಗಳಷ್ಟು ಆಳದಲ್ಲಿರುತ್ತದೆ. ನೀರುತುಂಬಿದ ಕೆಸರುಗದ್ದೆ ಅಥವಾ ನದಿಯ ದಡದ ಮರಳುದಂಡೆಗಳ ಬದಿಯಲ್ಲಿ ಕೃತಕವಾಗಿ ನಿರ್ಮಿಸಿರುವ ಕೊಳದಲ್ಲಿ, ಕೋಣಗಳ ನಡುವೆ ಓಟದ ಪಂದ್ಯವನ್ನು ನಡೆಸಲಾಗುತ್ತದೆ. ಇನ್ನು ಕಂಬಳದಲ್ಲಿ ‘ಬಾರೆ ಕಂಬಳ’, ‘ಪೂಕರೆ ಕಂಬಳ’, ‘ಅರಸು ಕಂಬಳ’ ಮತ್ತು ಈಗ ನಡೆಯುತ್ತಿರುವ ‘ಆಧುನಿಕ ಕಂಬಳ’ ಎಂಬ ನಾಲ್ಕು ಬಗೆಗಳನ್ನು ಗುರುತಿಸಬಹುದು. ಬಾರೆ ಕಂಬಳ ಮತ್ತು ಪೂಕರೆ ಕಂಬಳಗಳಲ್ಲಿ ಕೋಣಗಳ ಪಂದ್ಯಕ್ಕಿಂತ, ಇತರ ಆಚರಣೆಗಳಿಗೆ ಹೆಚ್ಚಿನ ಮಹತ್ವವಿದೆ. ಬಾರೆ ಕಂಬಳದಲ್ಲಿ, ಗದ್ದೆಯ ನಡುವೆ ಒಂದು ಬಾಳೆಯ ಗಿಡವನ್ನು ನೆಡುವುದೇ ಬಹಳ ಮುಖ್ಯ. ಕೋಣಗಳ ಓಟ ಕೇವಲ ಸಾಂಕೇತಿಕವಾದುದು. ಅರಸು ಕಂಬಳದಲ್ಲಿ ಆಚರಣೆಗಳು ಮತ್ತು ಪಂದ್ಯ ಎರಡಕ್ಕೂ ಸಮಾನ ಮಹತ್ವವಿದೆ.
ಕೋಣಗಳ ಓಟದ ಪಂದ್ಯವನ್ನು ನಡೆಸುವ ವಿಧಾನವನ್ನು ಅವಲಂಬಿಸಿ ಕಂಬಳದಲ್ಲಿ ಮತ್ತೆ ನಾಲ್ಕು ಬಗೆಗಳಿವೆ. ಹಗ್ಗದ ಓಟ, ಅಡ್ಡಹಲಗೆ ಓಟ, ನೇಗಿಲ ಓಟ ಮತ್ತು ಕಣೆ ಹಲಗೆ ಓಟ ಎಂಬ ಹೆಸರುಗಳಿಂದ ಅವುಗಳನ್ನು ಕರೆಯುತ್ತಾರೆ. ಹಗ್ಗದ ಓಟದಲ್ಲಿ, ಕೋಣಗಳು ಒಂದು ನೊಗವನ್ನು ಕಟ್ಟಿಕೊಂಡು ಓಡುತ್ತವೆ. ಆ ನೊಗದ ಮಧ್ಯಕ್ಕೆ ಕಟ್ಟಿದ ಹಗ್ಗಗಳನ್ನು ಹಿಡಿದುಕೊಂಡಿರುವ ಮನುಷ್ಯನು ಕೋಣಗಳ ಜೊತೆ ತಾನೂ ಓಡುತ್ತಾನೆ. ಅಡ್ಡ ಹಲಗೆ ಓಟದಲ್ಲಿ ಆ ಮನುಷ್ಯನು, ನೊಗಕ್ಕೆ ಸೇರಿಸಿರುವ ಹಲಗೆಯ ಮೇಲೆ ನಿಂತುಕೊಂಡು ಕೋಣಗಳ ಓಟವನ್ನು ನಿಯಂತ್ರಿಸುತ್ತಾನೆ. ನೇಗಿಲ ಓಟದಲ್ಲಿ ನೊಗದ ಜಾಗದಲ್ಲಿ ನೇಗಿಲು ಇರುತ್ತದೆ. ಇಲ್ಲಿ ಸಾರಥಿಯು ನೇಗಿಲನ್ನು ಹಿಡಿದಿರುತ್ತಾನೆ. ಆ ನೇಗಿಲಿಗೆ ಕೋಣಗಳನ್ನು ಕಟ್ಟಿರುತ್ತಾರೆ. ಈ ಮೂರು ಪ್ರಭೇದಗಳಲ್ಲಿ, ‘ಮಂಜೊಟ್ಟಿ’ಯನ್ನು (ಪಂದ್ಯದ ಹಾದಿಯ ಕೊನೆ ಬಿಂದು), ಮೊದಲು ತಲುಪುವ ಕೋಣಗಳ ಜೋಡಿಯನ್ನು ವಿಜಯಿಯೆಂದು ಘೋಷಿಸಲಾಗುವುದು. ಆದರೆ, ‘ಕಣೆ ಹಲಗೆ ಓಟ’ದಲ್ಲಿ ಪಂದ್ಯದಲ್ಲಿ ಗೆಲ್ಲುವ ಜೋಡಿಯನ್ನು ನಿರ್ಧರಿಸುವ ವಿಧಾನ ಬೇರೆ. ಕಂಬಳದ ಗದ್ದೆಯ ಎರಡೂ ಬದಿಗಳಲ್ಲಿ, ನೆಲಮಟ್ಟದಿಂದ ಸುಮಾರು ಎರಡು ಮೀಟರುಗಳ ಎತ್ತರದಲ್ಲಿ, ಅಗಲವಾದ ಬಟ್ಟೆ ಅಥವಾ ಮರದ ಹಲಗೆಗಳನ್ನು ಕಟ್ಟಿರುತ್ತಾರೆ. ಇವುಗಳನ್ನು ‘ನಿಶಾನೆ’ ಎಂದು ಕರೆಯುತ್ತಾರೆ. ಕೋಣಗಳು ಓಡುವಾಗ, ನೀರು ಮತ್ತು ಕೆಸರುಗಳ ಮಿಶ್ರಣವು ಎಗರುವ ಎತ್ತರವನ್ನು ಪರಿಗಣಿಸಿ, ಗೆಲ್ಲುವ ಜೋಡಿಯನ್ನು ತೀರ್ಮಾನಿಸುತ್ತಾರೆ. ಪಂದ್ಯದಲ್ಲಿ ಗೆದ್ದ ಜೋಡಿಯ ಒಡೆಯರಿಗೆ ಬಂಗಾರದ ಪದಕ ಮತ್ತು ಷೀಲ್ಡುಗಳನ್ನು ಬಹುಮಾಣವಾಗಿ ಕೊಡುತ್ತಾರೆ. ಗೆಲುವನ್ನು ತಂದಿಕೊಟ್ಟ ಕೋಣಗಳಿಗೆ ಬಾಳೇಹಣ್ಣು, ಎಳನೀರು ಮುಂತಾದ ರುಚಿಯಾದ ಆಹಾರ ದೊರೆಯುತ್ತದೆ.
ಕೋಣಗಳಿಗೆ ರಾಜ ಮರ್ಯಾದೆ, ಜಲ್ಲಿಕಟ್ಟು, ಕಂಬಳಕ್ಕೂ ಇರುವ ವ್ಯತ್ಯಾಸ:
ಕಂಬಳದಲ್ಲಿ ಬಳಸುವ ಕೋಣಗಳನ್ನು ಬೇರೆ ಯಾವ ಕೆಲಸಕ್ಕೂ ಬಳಸುವುದಿಲ್ಲ. ಒಂದು ಜೋಡಿ ಕಂಬಳದ ಕೋಣಗಳ ವಾರ್ಷಿಕ ಸಾಕಣೆ ವೆಚ್ಚ 3 ಲಕ್ಷದಷ್ಟು ಇರುತ್ತದೆ. ವರ್ಷವಿಡೀ ಜತನದಿಂದ ಸಾಕಲ್ಪಡುವ ಈ ಕೋಣಗಳಿಗೆ ರಾಜ ಮರ್ಯಾದೆ ಹಾಗೂ ಕಂಬಳದಲ್ಲಿ ಓಡುವ ನಿರಂತರ ತರಬೇತಿ ಯನ್ನು ನೀಡಲಾಗಿರುತ್ತದೆ. ಕೋಣಗಳಿಗೆ ತಿನ್ನಲು ಬಹುವಿಧದ ಪುಷ್ಟಿದಾಯಕ ಆಹಾರವನ್ನು ನೀಡಲಾಗುತ್ತದೆ. ಕಂಬಳದ ಸೀಸನ್‌ನಲ್ಲಿ ದಿನಕ್ಕೆ 4 ಕೇಜಿ ಹುರುಳಿಯನ್ನು ಬೇಯಿಸಿ ಕೊಡಲಾಗುತ್ತದೆ! ಈ ಅವಧಿಯಲ್ಲಿ ಅಪ್ಪಟ ಬೈಹುಲ್ಲಿನ ಮೇವನ್ನು ನೀಡಲಾಗುತ್ತದೆ. ಕಂಬಳ ಸೀಸನ್ ಮುಗಿದು ಬೇಸಗೆ ಬಂದಾಗ ಕೋಣಗಳ ಮೈ ತಂಪಾಗಿರಲು ಕುಂಬಳ ಕಾಯಿ ಕೊಡುತ್ತಾರೆ. ಕಂಬಳದ ಕೋಣಗಳಿಗೆ ಪ್ರತಿ ದಿನ ಎಣ್ಣೆ ಸ್ನಾನ ಕಡ್ಡಾಯ. ಒಂದು ಕೋಣವನ್ನು ನೋಡಿಕೊಳ್ಳಲು ನಿತ್ಯ ಮೂವರಾದರೂ ಬೇಕು. ವರ್ಷದ ಆರು ತಿಂಗಳ ಪ್ರತಿ ಶನಿವಾರ-ಭಾನುವಾರಗಳಲ್ಲಿ ನಡೆಯುವ ಕಂಬಳಕ್ಕೆ ಕೋಣ ಒಯ್ಯುವಾಗ 15 ಜನರಾದರೂ ಬೇಕು. ಎರಡು ದಿನಗಳ ಅವರ ವೇತನವೊಂದೇ 15 ಸಾವಿರ ರೂ. ದಾಟುತ್ತದೆ. ಕಂಬಳದ ಕೋಣ ಸಾಕುವುದು ಒಂದು ಪ್ರತಿಷ್ಠೆಯಾಗಿದ್ದು ಅವುಗಳಿಗೆ ತೋರುವ ಪ್ರೀತಿಯೂ ಸಹ ಯಾವು ನಿಲುಕಿಗೂ ಸಿಗದಷ್ಟಾಗಿರುತ್ತದೆ. ಅವುಗಳಿಗೆ ಹೊಟ್ಟೆ ತುಂಬಾ ಪೌಷ್ಟಿಕ ಆಹಾರ, ಪ್ರತಿ ದಿನದ ಎಣ್ಣೆ ಸ್ನಾನ, ಕೆಲ ಸಮಯದ ಹೊರಗಿನ ವಾಕಿಂಗ್, ಹೀಗೆ ಅವುಗಳನ್ನು ರಾಜ ವೈಭೋಗಗಳಿಂದ ನೋಡಿಕೊಳ್ಳಲಾಗುತ್ತದೆ.
ವಾಸ್ತವದಲ್ಲಿ ಜಲ್ಲಿ ಕಟ್ಟು ಕ್ರೀಡೆಯ ರೀತಿಗೂ, ಕಂಬಳದ ರೀತಿ ನೀತಿಗೂ ಸಾಕಷ್ಟು ವ್ಯತ್ಯಾಸವಿದ್ದು ಇಲ್ಲಿ ಕೋಣಗಳೆಗೆ ಯಾವುದೇ ಬಗೆಯ ಹಿಂಸೆಯಾಗದಂತೆ ಸಾಕಷ್ಟು ಮುತುವರ್ಜಿಯನ್ನು ವಹಿಸಲಾಗುತ್ತದೆ. ಜಲ್ಲಿಕಟ್ಟು ನಿಷೇಧಕ್ಕೆ ಪ್ರಮುಖ ಹಿನ್ನೆಲೆ ಇದ್ದಿದ್ದು ಸಾವು-ನೋವು. ಆದರೆ, ಕಂಬಳದ ಇಷ್ಟೂ ಇತಿಹಾಸದಲ್ಲಿ ಒಂದೇ ಒಂದು ಸಾವು ಸಂಭವಿಸಿದ ಉಲ್ಲೆಖವಿಲ್ಲ. ಪ್ರಾಣಿಗಳಾಗಲೀ, ನೋಡಿಕೊಳ್ಳುವವರಾಗಲೀ, ಪ್ರೇಕ್ಷಕರಿಗಾಗಲೀ ಗಾಯಗಳಾದದ್ದೂ ಕಡಿಮೆ ಕೋಣಗಳ ಸಾಕುವಿಕೆ, ಅದರ ಪಾಲನೆ, ಕಂಬಳದ ಗದ್ದೆಯಲ್ಲಿನ ವಸತಿ, ಆಹಾರ ವ್ಯವಸ್ಥೆಗಳಲ್ಲಿ ಯಾವುದೇ ನಕಾರಾತ್ಮಕ ಅಂಶಗಳಿಲ್ಲ. ಇನ್ನೂ ಹೇಳಬೇಕೆಂದರೆ ಹಿಂದೆಲ್ಲಾ ಕಂಬಳದ ಜತೆಗೆ ನಡೆಯುತ್ತಿದ್ದ ಕೊರಗರ ಡೋಲು, ಪನಿ ಕುಲ್ಲುನು ಮೊದಲಾದ ಆಚರಣೆಗಳನ್ನು ಅದಾಗಲೇ ಕೈಬಿಡಲಾಗಿದೆ. ಆಧುನಿಕ ಕಂಬಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಕೋಣಗಳನ್ನು ಓಡಿಸಲು ಶಿಸ್ತುಬದ್ಧವಾದ ತರಬೇತಿ ನೀಡಲು ಅಕಾಡೆಮಿಕ್ ಶಾಲೆಯನ್ನೇ ಸ್ಥಾಪಿಸಲಾಗಿದೆ. ಇದರಲ್ಲಿ ಕ್ರೀಡಾಳು, ದೈಹಿಕ ಶಿಕ್ಷಕರು ಮತ್ತು ಸಮಾಜದ ಎಲ್ಲ ವರ್ಗದವರು ತರಬೇತಿ ಪಡೆದವರಾಗಿರುತ್ತಾರೆ. ಕಂಬಳ ಗದ್ದೆಗಳಲ್ಲಿ ಓಡುತಿರುವ ಕೋಣಗಳ ಮೇಲೆ ಕ್ಯಾಮರಾ ಅಳವಡಿಸಲಾಗಿರುತ್ತದೆ. ಕಂಬಳದ ವೇಳೆ ಕೋಣಗಳಿಗೆ ಒಂದೇ ಒಂದು ಪೆಟ್ಟು ನೀಡದೆ ಓಡಿಸುವ ಬಗ್ಗೆ ತರಬೇತಿ ನೀಡಲಾಗಿರುತ್ತದೆ. ಕೆಲವು ಮಾಲೀಕರೇ ತಮ್ಮ ಮನೆಗಳಲ್ಲಿ ಕೋಣಗಳಿಗಾಗಿ ಈಜುಕೊಳ ನಿರ್ಮಿಸಿದ್ದಾರೆ. ಸ್ಥಳದಲ್ಲಿಯೇ ಪಶುವೈದ್ಯರ ಉಪಸ್ಥಿತಿ ಇದ್ದು ಅಗತ್ಯ ಸಮಯದಲ್ಲಿ ಉಚಿತ ವೈದ್ಯಕೀಯ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಈ ಕಾರಣಗಳಿಂದಾಗಿ ಕಂಬಳವನ್ನು ನಿಷೇಧಿಸುವುದು ಯಾವ ಕಾರಣಕ್ಕೂ ಸಾಧುವಲ್ಲ. ದೇಶ-ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದಲೂ ಕಂಬಳವನ್ನು ನಿಷೇಧಿಸುವುದರ ಬದಲಾಗಿ ಕಂಬಳವನ್ನು ಒಂದು ಕ್ರೀಡೆಯಾಗಿ ಅಭಿವೃದ್ದಿ ಪಡಿಸಬೇಕಾಗಿದೆ.
-ರಾಘವೇಂದ್ರ ಅಡಿಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


