ರಾಜಕೀಯ

'ಗುಂಡಿಗೆ' ಇದ್ದರೆ ಚರ್ಚೆಗೆ ವಿಧಾನಸೌಧಕ್ಕೆ ಬನ್ನಿ; ನಾನು ಹೇಳೋಕೆ ಶುರು ಮಾಡಿದ್ರೆ ನಿಮಗೆ ತಡ್ಕೋಳ್ಳೋಕೆ ಆಗೋಲ್ಲ: ಚಲುವರಾಯಸ್ವಾಮಿ; Video

ಆ ಸಂದರ್ಭದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು, ಏಕೆ ಕಾಣೆಯಾಗಿದ್ದರು ಹಾಗೂ ತಾವು ಯಾರ ಮನೆಯ ಬಾಗಿಲು ತಟ್ಟಲು ಹೋಗಿದ್ದೆ ಎಂಬುದು ಕುಮಾರಸ್ವಾಮಿಗೆ ಗೊತ್ತಿದೆ. ಈ ವಿಚಾರದ ಬಗ್ಗೆ ಕುಮಾರಸ್ವಾಮಿಯವರನ್ನೇ ಕೇಳಬೇಕು

'ಗುಂಡಿಗೆ' ಇದ್ದರೆ ಚರ್ಚೆಗೆ ವಿಧಾನಸೌಧಕ್ಕೆ ಬನ್ನಿ; ನಾನು ಹೇಳೋಕೆ ಶುರು ಮಾಡಿದ್ರೆ ನಿಮಗೆ ತಡ್ಕೋಳ್ಳೋಕೆ ಆಗೋಲ್ಲ: ಚಲುವರಾಯಸ್ವಾಮಿ; Video
ಚಲುವರಾಯಸ್ವಾಮಿ
Published On :

ಬೆಂಗಳೂರು: ರಾಜ್ಯರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ಸಚಿವ ಎನ್. ಚಲುವರಾಯಸ್ವಾಮಿ ನಡುವಿನ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಕೆಪಿಎಸ್ ಸಿ ಹಗರಣ ಸಂಬಂಧ ವಯಕ್ತಿಕ ಕೆಸರೆರಾಚಾಟ ಆರಂಭವಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು ಕುಮಾರಸ್ವಾಮಿಯವರಿಗೆ ಮುಖಾಮುಖಿ ಚರ್ಚೆಗೆ ಬಹಿರಂಗ ಸವಾಲು ಹಾಕಿದ್ದಾರೆ: ಅವರಿಗೆ ಧೈರ್ಯವಿದ್ದರೆ ವಿಧಾನಸೌಧದ ಯಾವುದಾದರೂ ಒಂದು ರೂಮಿಗೆ (ರೂಮ್ ನಂಬರ್ 313 ಅಥವಾ 334) ಬರಲಿ. ಅಲ್ಲಿ ಮಾಧ್ಯಮಗಳ ಸಮ್ಮುಖದಲ್ಲಿ ನೇರ ಚರ್ಚೆಗೆ ನಾನು ಸಿದ್ಧನಿದ್ದೇನೆ" ಎಂದು ಸವಾಲು ಹಾಕಿದ್ದಾರೆ.

2006ರ ರಾಜಕೀಯ ವಿದ್ಯಮಾನಗಳನ್ನು ನೆನಪಿಸಿಕೊಂಡ ಚಲುವರಾಯಸ್ವಾಮಿ, ಅಂದು ಕುಮಾರಸ್ವಾಮಿ ಅವರು ನಾಪತ್ತೆಯಾಗಿದ್ದಾಗ ಅವರ ತಂದೆ ದೇವೇಗೌಡರೇ ನನಗೆ ಫೋನ್ ಮಾಡಿ ಹುಡುಕಲು ಟಾಸ್ಕ್ ಕೊಟ್ಟಿದ್ದರು. ನಿಮ್ಮ ಮುಖ್ಯಮಂತ್ರಿ 2 ದಿನಗಳಿಂದ ನಾಪತ್ತೆಯಾಗಿದ್ದಾರೆ. ಹೇಗಾದರೂ ಮಾಡಿ ಬೆಳಗ್ಗೆ 10 ಗಂಟೆ ವೇಳೆಗೆ ಅವರನ್ನು ಪತ್ತೆ ಹಚ್ಚಿ ವಿಧಾನಸೌಧಕ್ಕೆ ಕರೆದುಕೊಂಡು ಬರುವಂತೆ ಹೇಳಿದ್ದರು. ನಾನು ಬೆಳಗ್ಗೆ 5 ಗಂಟೆಗೆ ಹೋಗಿ ನಾನು ಬಾಗಿಲು ತಟ್ಟಿದ್ದೆ" ಎಂದು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಟಾಂಗ್ ನೀಡಿದ್ದಾರೆ.

ಆ ಸಂದರ್ಭದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು, ಏಕೆ ಕಾಣೆಯಾಗಿದ್ದರು ಹಾಗೂ ತಾವು ಯಾರ ಮನೆಯ ಬಾಗಿಲು ತಟ್ಟಲು ಹೋಗಿದ್ದೆ ಎಂಬುದು ಕುಮಾರಸ್ವಾಮಿಗೆ ಗೊತ್ತಿದೆ. ಈ ವಿಚಾರದ ಬಗ್ಗೆ ಕುಮಾರಸ್ವಾಮಿಯವರನ್ನೇ ಕೇಳಬೇಕು ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಇನ್ನೂ ನಿನ್ನೆ ಮಾತನಾಡಿದ್ದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ರಾತ್ರೋ ರಾತ್ರಿ ಕದ್ದು ನೀರು ಬಿಡುವ ವ್ಯಕ್ತಿಯೊಬ್ಬರು ರಾತ್ರಿ 9 ಗಂಟೆ ಸಮಯದಲ್ಲಿ ಕೋಲು ಹಿಡಿದುಕೊಂಡು ಯಾರ ಮನೆಯ ಗೇಟ್ ತಟ್ಟುತ್ತಿದ್ದರು ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ನಾನು ಹೇಳೋಕೆ ಶುರು ಮಾಡಿದರೆ ಅವರಿಗೆ ತಡ್ಕೊಳ್ಳೋಕೆ ಆಗುತ್ತಾ ಕೇಳಿ. ಗುಂಡಿಗೆ ಇದ್ರೆ ನನ್ನ ಜೊತೆ ಚರ್ಚೆಗೆ ಬರಲಿ ಎಂದು ಹೇಳಿದ್ದರು.

ಕುಮಾರಸ್ವಾಮಿಗೆ ನಿದ್ದೆ ಬರ್ತಿಲ್ಲ, ಅದಕ್ಕಾಗಿ ಸುಮ್ಮನೆ ಕೆಣಕುತ್ತಿದ್ದಾರೆ. ಈ ಕಡೆ ಹೊರಳಿದರೆ ಸಿಎಂ ಡಿಕೆ ಶಿವಕುಮಾರ್ ಕಾಣಿಸ್ತಾರೆ, ಆ ಕಡೆ ಹೊರಳಿದರೆ ನಾನು ಮತ್ತು ಬಾಲಕೃಷ್ಣ ಕಾಣಿಸುತ್ತೇವೆ. ನಮ್ಮ ಪಕ್ಷ ನನಗೆ ನೀರಾವರಿ ಖಾತೆ ಕೊಟ್ಟಿದೆ. ಅವರಿಗೆ ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ.. ಒಮ್ಮೊಮ್ಮೆ ಅವರ ಮಾತಿಗೆ ಉತ್ತರ ಕೊಡಬಾರದು ಅನ್ನಿಸುತ್ತೆ, ಆದರೆ ಕೆಲವೊಮ್ಮೆ ಪ್ರತಿಕ್ರಿಯಿಸುವುದು ಅನಿವಾರ್ಯ ಎಂದಿದ್ದಾರೆ.

ಕುಮಾರಸ್ವಾಮಿ ವಿರುದ್ಧ ನೇರ ವಾಗ್ದಾಳಿ ನಡೆಸಿದ ಸಚಿವರು, ನನ್ನ ಬಗ್ಗೆ ಹೇಳಲು ಕುಮಾರಸ್ವಾಮಿ ಅವರ ಬಳಿ ಏನೂ ಇಲ್ಲ. ಕುಮಾರಸ್ವಾಮಿ ಬಗ್ಗೆ ಹೇಳಲು ನನ್ನ ಬಳಿ ಸಾವಿರ ವಿಚಾರಗಳಿವೆ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಕುಮಾರಸ್ವಾಮಿಗೆ ಉತ್ತಮ ಅವಕಾಶವಿದ್ದು, ತಮಗೆ ನೀಡಿರುವ ಪ್ರಮುಖ ಖಾತೆಯನ್ನು ಗೌರವದಿಂದ ನಿರ್ವಹಿಸುವ ಬದಲು ಇತರರನ್ನು ಟೀಕಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಯಾಗಿರುವುದರಿಂದ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿರಬೇಕು. ಬಾಯಿಗೆ ಬಂದಂತೆ ಮಾತನಾಡಿದರೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಉತ್ತರ ನೀಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.